ಪಿ.ಸಿ.ಡಿ 2 ಫಿಲಂ ಫ್ಯಾಕ್ಟರಿ ಲಾಂಛನದಲ್ಲಿ ಗಾಯತ್ರಿ ಎಂ ನಿರ್ಮಿಸಿರುವ "ಠಾಣೆ" ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಚಿತ್ರಕ್ಕೆ ಈಗ ರೀರೆಕಾರ್ಡಿಂಗ್ ನಡೆಯುತ್ತಿದೆ.
"ಠಾಣೆ" 1968 ರಿಂದ 2000 ನೇ ಇಸವಿಯ ಕಾಲಘಟ್ಟದ ಕಥೆ. ಹಾಗಾಗಿ ಚಿತ್ರೀಕರಣವನ್ನು ಜಾಗರೂಕತೆಯಿಂದ ಮಾಡಬೇಕಾಯಿತು. ಮೊಬೈಲ್, ಡಿಶ್ ಇಲ್ಲದ ಕಾಲವದು. ಆಗಿನ ಪೊಲೀಸ್ ಠಾಣೆ, ರಸ್ತೆಗಳು ಹಾಗೂ ಸ್ಲಂ ಹೀಗೆ ಆ ಕಾಲಕ್ಕೆ ಸರಿಹೊಂದುವ ಸ್ಥಳಗಳನ್ನು ಹುಡುಕಿ ಚಿತ್ರೀಕರಣ ಮಾಡಲಾಗಿದೆ. ಬಹುತೇಕ ಚಿತ್ರೀಕರಣ ಬೆಂಗಳೂರಿನ ಹಳೆಯ ಬಡಾವಣೆಗಳಲ್ಲಿ ನಡೆದಿದೆ. ಪೋಸ್ಟ್ ಪ್ರೊಡಕ್ಷನ್ ವರ್ಕ್ ಬಿರುಸಿನಿಂದ ಸಾಗಿದೆ. ಆದಷ್ಟು ಬೇಗ ಚಿತ್ರವನ್ನು ತೆರೆಗೆ ತರುತ್ತೇವೆ. ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಸಂಕಲನಕಾರ ಸುರೇಶ್ ಅರಸ್ ಈ ಚಿತ್ರದ ಸಂಕಲನಕಾರರು. ಸುರೇಶ್ ಅರಸ್ ಅವರು ಚಿತ್ರದ ಬಗ್ಗೆ ಮೆಚ್ಚುಗೆ ಮಾತುಗಳು ಆಡಿದ್ದು ತುಂಬಾ ಸಂತೋಷವಾಗಿದೆ
ಎಂದು ನಿರ್ದೇಶಕ ಎಸ್ ಭಗತ್ ರಾಜ್ ತಿಳಿಸಿದ್ದಾರೆ.
ರಂಗಭೂಮಿ ಕಲಾವಿದನಾಗಿ ಗುರುತಿಸಿಕೊಂಡಿರುವ, ಪ್ರಕಸಂ ತಂಡದ ಪ್ರವೀಣ್ "ಠಾಣೆ" ಚಿತ್ರದ ನಾಯಕ. ಮೈಸೂರಿನ ಹರಿಣಾಕ್ಷಿ ನಾಯಕಿ. ಪಿ.ಡಿ.ಸತೀಶ್, ಬಾಲರಾಜ್ ವಾಡಿ. ನಾಗೇಶ್ ಬಿ.ವಿ ರಾಜಾರಾಮ್ ಸೇರಿದಂತೆ ಅನೇಕ ರಂಗಭೂಮಿ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಕಾಶಿನಾಥ್, ಗುರುಪ್ರಸಾದ್. ಪ್ರೇಮ್ ಮುಂತಾದವರ ಬಳಿ ಕಾರ್ಯ ನಿರ್ವಹಿಸಿರುವ ಎಸ್ ಭಗತ್ ರಾಜ್ "ಠಾಣೆ" ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರದು ನಿರ್ದೇಶನ ಮಾಡಿದ್ದಾರೆ.
ಎರಡು ಸುಮಧುರ ಹಾಡುಗಳಿಗೆ ಮಾನಸ ಹೊಳ್ಳ ಸಂಗೀತ ನೀಡಿದ್ದಾರೆ. ಸಾಗರದ ಪ್ರಶಾಂತ್ ಸಾಗರ್ ಛಾಯಾಗ್ರಹಣ, ಪ್ರವೀಣ್ ಜಾನ್ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ಕೌರವ ವೆಂಕಟೇಶ್ ಹಾಗೂ ಟೈಗರ್ ಶಿವ ಸಾಹಸ ಸಂಯೋಜನೆಯಲ್ಲಿ ಐದು ಸಾಹಸ ಸನ್ನಿವೇಶಗಳು ಮೂಡಿಬಂದಿದೆ. "ಠಾಣೆ" ಚಿತ್ರಕ್ಕೆ C/O ಶ್ರೀರಾಮಪುರ ಎಂಬ ಅಡಿಬರಹವಿದೆ.