ಕಲಾವಿದನಾಗೋ ಹೆಬ್ಬಯಕೆಯಲ್ಲಿ ಸಂಬಳ ಕೊಡೋ ಕೆಲಸ ಬಿಟ್ಟು ಬಣ್ಣದ ಲೋಕಕ್ಕೆ ಹೆಜ್ಜೆ ಇಡುವ ಅದೆಷ್ಟೋ ಮಂದಿ ನಮ್ಮ ಮುಂದಿದ್ದಾರೆ. ಹಾಗೆ ಬಂದು ಬಣ್ಣದ ಲೋಕದಲ್ಲಿ ಕಳೆದು ಹೋಗುವವರಿಗೂ ಲೆಕ್ಕವಿಲ್ಲ. ಅಂತವರ ಪಟ್ಟಿಯಲ್ಲಿ ಬಹಳ ವಿಭಿನ್ನವಾಗಿ ನಿಲ್ಲುವವರು ರಂಗಭೂಮಿ ಕಲಾವಿದ, ಚಿತ್ರರಂಗದಲ್ಲಿ ತನ್ನದೇ ಛಾಪು ಮೂಡಿಸುತ್ತಿರುವ ಅಶ್ವಿನ್ ಹಾಸನ್. ಬೆಳ್ಳಿತೆರೆ ಮೇಲೆ ಮುಂದೊಂದು ದಿನ ದೊಡ್ಡ ಮಟ್ಟದಲ್ಲಿ ರಾರಾಜಿಸುವ ಕನಸಿನಲ್ಲೇ ಅದಕ್ಕೆ ತಕ್ಕುದಾದ ಎಲ್ಲಾ ತಯಾರಿಯೊಂದಿಗೆ ಹೆಜ್ಜೆ ಇಡುತ್ತಾ ಭರವಸೆ ಮೂಡಿಸುತ್ತಿದ್ದಾರೆ.
ಆರಂಭಿಕ ದಿನಗಳಲ್ಲಿ ಸಿಕ್ಕ ಚಿಕ್ಕ ಪುಟ್ಟ ಪಾತ್ರಗಳಿಗೆ ರಂಗಭೂಮಿ ಅನುಭವವನ್ನೆಲ್ಲ ಧಾರೆ ಎರೆದು ಪಾತ್ರದಿಂದ ಪಾತ್ರಕ್ಕೆ, ಸಿನಿಮಾದಿಂದ ಸಿನಿಮಾಗೆ ತಾವೊಬ್ಬ ಭರವಸೆಯ ನಟನಾಗಬಲ್ಲೇ ಎಂಬುದನ್ನು ನಿರೂಪಿಸುತ್ತಲೇ ಬರುತ್ತಿದ್ದಾರೆ. ಈಗಾಗಲೇ ‘ಜಗ್ಗುದಾದ’, ‘ಹೆಬ್ಬುಲಿ’, ‘ಅವನೇ ಶ್ರೀಮನ್ನಾರಾಯಣ’, ‘ರಾಜಕುಮಾರ’, ‘ಹೆಡ್ ಬುಶ್’, ‘ಥಗ್ಸ್ ಆಫ್ ರಾಮಘಡ’ ಸಿನಿಮಾಗಳಲ್ಲಿ ಇವರ ಅಭಿನಯದ ಸಾಮರ್ಥ್ಯ ಸಾಭೀತಾಗಿದೆ ಕೂಡ. ಸಹಜ, ನೈಜ ಅಭಿನಯದ ಸಾಮರ್ಥ್ಯದ ಫಲವೇ ಸುಮಾರು ಎಪ್ಪತ್ತಕ್ಕೂ ಹೆಚ್ಚಿನ ಸಿನಿಮಾಗಳು ಇವರನ್ನರಸಿ ಬಂದಿರೋದು.