ಕನ್ನಡ ಚಿತ್ರರಂಗದ ಕಳೆದ ನಾಲ್ಕು ದಶಕಗಳನ್ನು ಆಳಿದ ನಾಲ್ಕು ಹಿನ್ನೆಲೆ ಗಾಯಕಿಯರ ಮಹಾ ಸಮ್ಮಿಲನಕ್ಕೆ ಸುವರ್ಣ ವಾಹಿನಿಯ ’ಓಲ್ಡ್ ಈಸ್ ಗೋಲ್ಡ್’ ಕಾರ್ಯಕ್ರಮ ವೇದಿಕೆ ಹಾಕಿಸಿಕೊಟ್ಟಿತ್ತು. ನಗರದ ಜ್ಞಾನಜ್ಯಾತಿ ಸಭಾಂಗಣದಲ್ಲಿ ಕಿಕ್ಕಿರಿದು ತುಂಬಿದ್ದ ಚಿತ್ರರಂಗದ ಅಂದಿನ ಮತ್ತು ಇಂದಿನ ತಾರೆಯರ ನಡುವೆ ಈ ನಾಲ್ವರ ಗಾನಧಾರೆ ಝರಿಯಾಗಿ ಹರಿಯಿತು.
ಇದು ಕನ್ನಡ ಕಿರುತೆರೆಯ ಇತಿಹಾಸದಲ್ಲೇ ಹಿಂದೆಂದೂ ನಡೆಯದ ಮಹಾಸಮ್ಮಿಲನವಾಗಿತ್ತು. ಪದ್ಮಭೂಷಣ ಡಾ ಪಿ ಸುಶೀಲ, ಎಲ್ ಆರ್ ಈಶ್ವರಿ, ಮಂಜುಳಾ ಗುರುರಾಜ್ ಮತ್ತು ರತ್ನಮಾಲಾ ಪ್ರಕಾಶ್ ನಾಲ್ವರೂ ಒಂದೇ ವೇದಿಕೆಯ ಮೇಲೆ ಹಾಡುವುದನ್ನು ನೋಡುವುದೇ ಒಂದು ಮಹಾ ಅನುಭವವಾಗಿತ್ತು. ಎಪ್ಪತ್ತು ಮತ್ತು ಎಂಬತ್ತರ ದಶಕಗಳಲ್ಲಿ ಕನ್ನಡ ಚಿತ್ರಗಳಿಗೆ ರಂಗೇರಿಸಿದ್ದ ಈ ಗಾಯಕಿಯರು ಅವೇ ಹಾಡುಗಳಿಗೆ ಮತ್ತೆ ದನಿ ಕೊಟ್ಟಿದ್ದು ಅದ್ಭುತ ಕ್ಷಣವೆನಿಸಿಕೊಂಡಿತ್ತು. ಕೆಲ ಪ್ರೇಕ್ಷಕರ ಕಣ್ಣುಗಳಲ್ಲಿ ನೆನಪಿನ ಬುತ್ತಿ ತೆರೆದ ಕ್ಷಣದ ಆನಂದ ಭಾಷ್ಪ ಹನಿದಿದ್ದು ಕೂಡ ಕಂಡುಬಂತು.
ಪದ್ಮಭೂಷಣ ಪಿ ಸುಶೀಲ ಅವರು ಹಾಡಿದ ಬಂಗಾರದ ಮನುಷ್ಯ ಚಿತ್ರದ ಬಾಳಾ ಬಂಗಾರ ನೀನು’, ನಾಗರಹಾವು ಚಿತ್ರದ ಕರ್ಪೂರದಾ ಗೊಂಬೆ ನಾನು’. ಕಸ್ತೂರಿ ನಿವಾಸ ಚಿತ್ರದ ಎಲ್ಲೇ ಇರು ಹೇಗೇ ಇರು’ ಹಾಡುಗಳು, ಏಲ್ ಆರ್ ಈಶ್ವರಿ ಹಾಡಿರುವ ಸಂಶಯ ಫಲ ಚಿತ್ರದ ಜೋಕೆ ನಾನು ಬಳ್ಳಿಯ ಮಿಂಚು, ಭಲೇ ಭಾಸ್ಕರ್ ಚಿತ್ರದ ರಸಿಕಾ, ರಸಿಕಾ’, ರತ್ನಮಾಲಾ ಪ್ರಕಾಶ್ ಹಾಡಿರುವ ನಾಗಮಂಡಲ ಚಿತ್ರದ ಜಡಿಯಬೇಕು ಮಗಳಾ’, ಏಳು ಸುತ್ತಿನ ಕೋಟೆ ಚಿತ್ರದ ಸಂತಸ ಅರಳುವ ಸಮಯ’, ಮಂಜುಳಾ ಗುರುರಾಜ್ ಹಾಡಿರುವ ನಂಜುಂಡಿ ಕಲ್ಯಾಣ ಚಿತ್ರದ ಒಳಗೆ ಸೇರಿದರೆ ಗುಂಡು’, ಅಂಜದ ಗಂಡು ಚಿತ್ರದ ಪ್ರೀತಿಯಲ್ಲಿ ಇರೋ ಸುಖ’ ಹಾಡುಗಳು ಸುವರ್ಣ ವೇದಿಕೆಯ ಈ ಚಿನ್ನದಂಥ ಕಾರ್ಯಕ್ರಮದಲ್ಲಿ ಮತ್ತೆ ಜೀವ ಪಡೆದ ಹಾಡುಗಳ ಪೈಕಿ ಕೆಲವು.
ಈ ಕಾರ್ಯಕ್ರಮ ಒಂದು ಸಂಗೀತ ರಸಸಂಜೆಯಾಗದೆ ಕನ್ನಡ ಚಿತ್ರರಂಗದ ಹೊಸ ಮತ್ತು ಹಳೆಯ ದಿನಗಳನ್ನು ಮೆಲುಕು ಹಾಕುವ ಸುಸಂದರ್ಭವಾಗಿ ಮಾರ್ಪಟ್ಟಿತ್ತು. ಅಂದಿನ ಕಾಲದ ಮಹಾನ್ ತಾರೆಗಳ ಜೊತೆಗೆ ಇಂದಿನ ದೊಡ್ಡ ಸ್ಟಾರ್ಗಳು ಜೊತೆ ಸೇರಿದ್ದು ಈ ಒಂದು ಅಪರೂಪದ ಸಂಗಮ ನೋಡುವ ಅವಕಾಶ ಎಲ್ಲರದಾಗಿತ್ತು. ನಿರೂಪಕಿಯಾಗಿ ವಿನಯಾಪ್ರಸಾದ್ ಈ ಲೆಜೆಂಡ್ ಗಾಯಕಿಯರು ಮತ್ತು ಕಾರ್ಯಕ್ರಮಕ್ಕೆ ಆಗಮಿಸಿದ ತಾರೆಯರ ನಡುವಿನ ಕೊಂಡಿಯಾಗಿದ್ದರು.
ಇದುವರೆಗೆ ಕನ್ನಡದ ಈ ನಾಲ್ಕು ಮುತ್ತುಗಳನ್ನು ಒಂದೆಡೆ ಸೇರಿಸುವ ಪ್ರಯತ್ನ ಯಾರಿಂದಲೂ ನಡೆದಿರಲಿಲ್ಲ. ಸುವರ್ಣ ವಾಹಿನಿಯ ಈ ಸಾಹಸಕ್ಕೆ ಬೆಂಬಲವಾಗಿ ನಿಂತು ಕಾರ್ಯಕ್ರಮಕ್ಕೆ ಹಾಡಿನ ರಂಗೋಲಿ ಹಾಕಿ ಸುಂದರ ಸಂಜೆಯ ಮಧುರ ಕ್ಷಣಗಳಿಗೆ ಕಾರಣರಾಗಿದ್ದು ಈ ಗಾಯಕಿಯರು. ಈ ಶನಿವಾರ ನಡೆದ ಈ ಕಾರ್ಯಕ್ರಮವನ್ನು ಸುವರ್ಣ ವಾಹಿನಿ ಇದೇ ಏಪ್ರಿಲ್ ೩ ಮತ್ತು ೪ರಂದು ರಾತ್ರಿ ೮ ಗಂಟೆಯಿಂದ ಪ್ರಸಾರ ಮಾಡಲಿದೆ.