Chief Editor
Manohar. R (Manu)
Photo Journalist
chitrataramanu@gmail.com
+91 9845549026
ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ``ಭಗೀರಥ``ಚಿತ್ರಕ್ಕೆ ಚಾಲನೆ
Posted date: 09 Sat, Sep 2023 06:10:04 PM
ಸಾಯಿ ರಮೇಶ್ ಪ್ರೊಡಕ್ಷನ್ ಲಾಂಛನದಲ್ಲಿ ಕೆ.ರಮೇಶ್ ಹಾಗೂ ಬಿ.ಭೈರಪ್ಪ ಮೈಸೂರು ನಿರ್ಮಿಸುತ್ತಿರುವ ಹಾಗೂ ರಾಮ್ ಜನಾರ್ದನ್ ನಿರ್ದೇಶನದ "ಭಗೀರಥ" ಚಿತ್ರದ ಮುಹೂರ್ತ ಸಮಾರಂಭ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ನೆರವೇರಿತು. ‌ಮೊದಲ ಸನ್ನಿವೇಶಕ್ಕೆ ಹೆಸರಾಂತ ನಿರ್ದೇಶಕ ಸಾಯಿಪ್ರಕಾಶ್ ಆರಂಭ ಫಲಕ ತೋರಿದರು. ಸಿರಿ ಕನ್ನಡ ವಾಹಿನಿ ಮುಖ್ಯಸ್ಥರಾದ ರಾಜೇಶ್ ರಾಜಘಟ್ಟ ಕ್ಯಾಮೆರಾ ಚಾಲನೆ ಮಾಡಿದರು. ನಂತರ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾಹಿತಿ ನೀಡಿದರು.

ನಾನು 2005 ರಲ್ಲಿ "ಬಾಯ್ ಫ್ರೆಂಡ್" ಮೂಲಕ ನನ್ನ ಚಿತ್ರರಂಗದ ಜರ್ನಿ ಆರಂಭವಾಯಿತು. ನಂತರ ಕೆಲವು ಚಿತ್ರಗಳಲ್ಲಿ ನಟಿಸಿದ್ದೇನೆ ಹಾಗೂ ನಿರ್ದೇಶಿಸಿದ್ದೇನೆ. ಈಗ "ಭಗೀರಥ" ಚಿತ್ರವನ್ನು ನಿರ್ದೇಶಿಸುತ್ತಿದ್ದೇನೆ. ಯಾವುದಾದರೂ ಒಂದು ಕೆಲಸವನ್ನು ಬಿಡದೆ ಸಾಧಿಸುವುದನ್ನು "ಭಗೀರಥ" ಪ್ರಯತ್ನ ಎನ್ನುತ್ತಾರೆ. ಈ ಪದಕ್ಕೂ ನಮ್ಮ ಚಿತ್ರಕ್ಕೂ ಸಂಬಂಧವಿದೆ‌. ಇಂದು ಮುಹೂರ್ತ ಸಮಾರಂಭ ನೆರವೇರಿದೆ. ಹತ್ತನೇ ತಾರೀಖಿನಿಂದ ಮೈಸೂರಿನಲ್ಲಿ ಚಿತ್ರೀಕರಣ ಒಂದೇ ಹಂತದಲ್ಲಿ ನಡೆಯಲಿದೆ.  ಜಯಪ್ರಕಾಶ್, ಚಂದನ ರಾಘವೇಂದ್ರ, ಸುಧಾ ಬೆಳವಾಡಿ, ಶಿವರಾಜ್ ಕೆ.ಆರ್ ಪೇಟೆ, ರವಿ ಕಾಳೆ, ಬಾಲ ರಾಜವಾಡಿ, ಸುರಭಿ ರವಿ, ನಯನ, ನಿಖಿತ ಮುಂತಾದವರು ತಾರಾಬಳಗದಲ್ಲಿದ್ದಾರೆ. ಹಿರಿಯ ನಿರ್ದೇಶಕ ಸಾಯಿಪ್ರಕಾಶ್ ಅವರು ಮಠಾಧಿಪತಿಗಳ ಪಾತ್ರ ನಿರ್ವಹಿಸುತ್ತಿದ್ದಾರೆ. ಕಥೆ ಮೆಚ್ಚಿ, ರಮೇಶ್ ಹಾಗೂ ಭೈರಪ್ಪ ಮೈಸೂರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ ಎಂದು ನಿರ್ದೇಶಕ ರಾಮ್ ಜನಾರ್ದನ್ ತಿಳಿಸಿದರು‌.

"ಜಮಾನ" ಚಿತ್ರದಲ್ಲಿ ನಟಿಸಿದ್ದೆ ಎಂದು ಮಾತು ಆರಂಭಿಸಿದ ಜಯಪ್ರಕಾಶ್, ಈಗ ಈ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದೇನೆ. ನಿರ್ದೇಶಕರು ಕಥೆ ಚೆನ್ನಾಗಿ ಮಾಡಿಕೊಂಡಿದ್ದಾರೆ. ನನ್ನ ಪಾತ್ರ ಕೂಡ ಚೆನ್ನಾಗಿದೆ ಎಂದರು.

ಈ ಚಿತ್ರದಲ್ಲಿ ಪತ್ರಕರ್ತೆಯಾಗಿ ಕಾಣಿಸಿಕೊಳ್ಳುತ್ತಿರುವುದಾಗಿ ನಾಯಕಿ ಚಂದನ ರಾಘವೇಂದ್ರ ತಿಳಿಸಿದರು‌. 

ನಾನು ನಿರ್ದೇಶನ ಮಾಡಿರುವುದು ಹೆಚ್ಚು. ಅಭಿನಯಿಸಿರುವುದು ಕಡಿಮೆ. ನಿರ್ದೇಶಕರು ಮಠಾಧಿಪತಿ ಪಾತ್ರವನ್ನು ನೀವೇ ಮಾಡಬೇಕೆಂದರು ಮಾಡುತ್ತಿದ್ದೇನೆ ಎಂದು ಸಾಯಿಪ್ರಕಾಶ್ ಹೇಳಿದರು.

ನಿರ್ಮಾಪಕರಾದ ರಮೇಶ್ ಹಾಗೂ ಭೈರಪ್ಪ ಮೈಸೂರು ನಮ್ಮ ಚಿತ್ರಕ್ಕೆ ನಿಮ್ಮ ಬೆಂಬಲವಿರಲಿ ಎಂದರು.‌ ಚಿತ್ರದಲ್ಲಿ ನಟಿಸುತ್ತಿರುವ ನಯನ ಹಾಗೂ ಚೇತನ್ ತಮ್ಮ ಪಾತ್ರದ ಕುರಿತು ಮಾತನಾಡಿದರು.

ನಾನು ಸಾಕಷ್ಟು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿದ್ದೇನೆ. ಜನಾರ್ದನ್ ಅವರ ಜೊತೆ ಇದು ಮೊದಲ ಚಿತ್ರ. ಮಾಧ್ಯಮ ಹಾಗೂ ಉದ್ಯಮದ ನಡುವೆ "ಭಗೀರಥ" ಚಿತ್ರದ ಕಥೆ ಸಾಗುತ್ತದೆ ಎನ್ನುತ್ತಾರೆ  ಸಂಭಾಷಣೆಕಾರ ಜೆ.ಎಂ.ಪ್ರಹ್ಲಾದ್.

ಪ್ರದೀಪ್ ವರ್ಮ ಅವರ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಸೂರಿ ಚಿತ್ತೂರು ಅವರ ಛಾಯಾಗ್ರಹಣವಿದೆ. ರವಿಚಂದ್ರನ್ ಸಂಕಲನ ಹಾಗೂ ಥ್ರಿಲ್ಲರ್ ಮಂಜು ಅವರ ಸಾಹಸ ನಿರ್ದೇಶನ "ಭಗೀರಥ" ಚಿತ್ರಕ್ಕಿದೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ``ಭಗೀರಥ``ಚಿತ್ರಕ್ಕೆ ಚಾಲನೆ - Chitratara.com
Copyright 2009 chitratara.com Reproduction is forbidden unless authorized. All rights reserved.