ರೈತರು ಎದುರಿಸುತ್ತಿರುವ ಸಂಕಷ್ಟಗಳು ಹಾಗೂ ಅದಕ್ಕೆ ಪರಿಹಾರ ಹುಡುಕುವ ಪ್ರಯತ್ನವನ್ನು ನಿರ್ದೇಶಕ ದುರ್ಗಾ ಪಿ.ಎಸ್. ಅವರು ತಮ್ಮ ನಿರ್ದೇಶನದ ದಿಗ್ವಿಜಯ ಚಿತ್ರದ ಮೂಲಕ ಮಾಡಿದ್ದಾರೆ. ಇತ್ತೀಚೆಗೆ ಈ ಚಿತ್ರದ ಟ್ರೈಲರ್ ಹಾಗೂ ಆಡಿಯೋ ಬಿಡುಗಡೆ ಸಮಾರಂಭ ಎಸ್ ಆರ್ ವಿ ಥಿಯೇಟರಿನಲ್ಲಿ ನೆರವೇರಿತು. ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ದುರ್ಗಾ ಪಿ.ಎಸ್. ಕಳೆದ 18 ವರ್ಷಗಳಿಂದ ಇಂಡಸ್ಟ್ರಿಯಲ್ಲಿದ್ದೇನೆ. 65ಕ್ಕೂ ಹೆಚ್ಚು ಚಿತ್ರಗಳಿಗೆ ಸಂಕಲನಮಾಡಿದ್ದು, ಸೀಯು, ಕರ್ತ ನಂತರ ಇದು ನನ್ನ ನಿರ್ದೇಶನದ 5 ನೇ ಚಿತ್ರ. ಇತ್ತೀಚೆಗೆ ರೈತರು ಆತ್ಮಹತ್ಯೆ ಮಾಡಿಕೊಂಡ ಸಂದರ್ಭದಲ್ಲಿ ಪರಿಹಾರದ ಹಣಕ್ಕಾಗಿ ಸೂಸೈಡ್ ಮಾಡಿಕೊಳ್ತಿದ್ದಾರೆ ಅನ್ನೋ ರಾಜಕಾರಣಿಗಳ ಹೇಳಿಕೆ ಕೇಳಿ ನನ್ನ ಮನಸಿಗೆ ತುಂಬಾ ನೋವಾಯಿತು. ರೈತರು ಸೂಸೈಡ್ ಮಾಡಿಕೊಳ್ಳಲು ವ್ಯವಸ್ಥೆಯಲ್ಲಿನ ಲೋಪವೇ ಕಾರಣ. ಅದನ್ನು ಯಾವರೀತಿ ಪರಿಹರಿಸಬಹುದು ಎಂದು ಯೋಚಿಸಿ ಈ ಕಾನ್ಸೆಪ್ಟ್ ಮಾಡಿದ್ದೇನೆ. ರೈತರು ಸಾಲ ಮಾಡಿಕೊಳ್ಳದ ಹಾಗಿರಲು ಏನು ಅನುಕೂಲ ಮಾಡಿಕೊಡಬಹುದು ಎಂದೂ ಹೇಳಿದ್ದೇನೆ. ಮಾಧ್ಯಮ ಮನಸ್ಸು ಮಾಡಿದರೆ ಎಂಥ ಸಮಸ್ಯೆಯೇ ಆದರೂ ಬಗೆಹರಿಸಬಹುದು ಎನ್ನುವುದು ಚಿತ್ರದಲ್ಲಿದೆ. ಶ್ರೀಕಾಂತ್ ನನ್ನ ಸ್ನೇಹಿತ, ಇಬ್ಬರೂ ಸೇರಿ ಸಿನಿಮಾ ನಿರ್ದೇಶನ ಮಾಡಿದ್ದೇವೆ. ಈ ಸಿನಿಮಾ ಆಗಲು ರಫೀಕ್ ಕಾರಣ. ಅವರೇ ಜಯಪ್ರಭು ಅವರನ್ನು ಪರಿಚಯಿಸಿದ್ದು, 30 ಜನ ನಿಜವಾದ ರೈತರು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ನೈಜತೆಗೆ ಒತ್ತುಕೊಟ್ಟು ಸಿನಿಮಾ ಮಾಡಿದ್ದೇವೆ. ನಾಯಕ ಹಳ್ಳಿಯಿಂದ ಸಿಟಿಗೆ ಬಂದು ಪತ್ರಿಕೆಯಲ್ಲಿ ವರ್ಕ್ ಮಾಡುತ್ತಿರುತ್ತಾನೆ ಎಂದು ವಿವರಿಸಿದರು.
ಮತ್ತೊಬ್ಬ ನಿರ್ದೇಶಕ ಹಾಗೂ ನಟ ಶ್ರೀಕಾಂತ್ ಹೊನ್ನವಳ್ಳಿ ಮಾತನಾಡಿ ನಾನೂ ಒಬ್ಬ ರೈತನಾಗೇ ಚಿತ್ರದಲ್ಲಿ ಅಭಿನಯಿಸಿದ್ದೇನೆ. ನನ್ನ ತಂದೆಯವರು ರೈತನಾಗಿ ಅಪ್ಪನ ಪಾತ್ರ ಮಾಡಿದ್ದಾರೆ ಎಂದರು.
ಚಿತ್ರದ ನಾಯಕ ಕಂ ನಿರ್ಮಾಪಕ ಜಯಪ್ರಭು ಮಾತನಾಡಿ ಈ ಹಿಂದೆ ಸ್ಕೇರಿ ಫಾರೆಸ್ಟ್ ಎಂಬ ಚಿತ್ರ ಮಾಡಿದ್ದೆ. ನಾನೂ ಸಹ ರೈತಕುಟುಂಬದಿಂದಲೇ ಬಂದವನು. ಕಂಟೆಂಟ್ ಜೊತೆ ಕಮರ್ಷಿಯಲ್ ಎಲಿಮೆಂಟ್ ಇರುವ ಚಿತ್ರ. ಸಿನಿಮಾ ಮೂಲಕ ಜನರಿಗೆ ಏನಾದರೂ ಹೇಳಬೇಕೆಂದು ಈ ಸಿನಿಮಾ ಮಾಡಿದ್ದೇವೆ. ಚಿತ್ರದಲ್ಲಿ ನಾನೊಬ್ಬ ಪತ್ರಕರ್ತ, ಆತ ಐಡಿಯಾ ಮಾಡಿ 48 ಗಂಟೆಗಳಲ್ಲಿ ಹೇಗೆ ರೈತರ ಸಾಲ ಮನ್ನಾ ಮಾಡಿಸಿದ ಎಂದು ಚಿತ್ರದಲ್ಲಿ ತೋರಿಸಿದ್ದೇವೆ ಎಂದರು.
ಈ ಚಿತ್ರವನ್ನು ಜೆ.ಪಿ. ಎಂಟರ್ ಟೈನ್ ಮೆಂಟ್ ಅಡಿ ಜಯಪ್ರಭು ಆರ್. ಲಿಂಗಾಯತ್, ಅರುಣ್ ಸುಕದರ್ ಹಾಗೂ ಹರೀಶ್ ಆರ್.ಸಿ. ನಿರ್ಮಿಸಿದ್ದಾರೆ. ದುರ್ಗಾ ಪಿ. ಎಸ್. ಹಾಗೂ ಹೊನ್ನವಳ್ಳಿ ಶ್ರೀಕಾಂತ್ ಸೇರಿ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು, ಸಂಕಲನದ ಜೊತೆ ನಿರ್ದೇಶನ ಮಾಡಿದ್ದಾರೆ.
ಜಯಪ್ರಭು, ಸ್ನೇಹ, ಸುಚೇಂದ್ರ ಪ್ರಸಾದ್, ದುಬೈ ರಫೀಕ್, ಪಟ್ರೆ ನಾಗರಾಜ್, ಕಿಲ್ಲರ್ ವೆಂಕಟೇಶ್, ಶಿವಕುಮಾರ್ ಆರಾಧ್ಯ, ರಾಹುಲ್, ಆಕಾಶ್ ಎಂ ಪಿ, ಉಳಿದ ಪಾತ್ರಗಳಲ್ಲಿದ್ದಾರೆ. ಚಿತ್ರದ 5 ಹಾಡುಗಳಿಗೆ ಹರ್ಷ ಸಂಗೀತ ನೀಡಿದ್ದು, ವೀನಸ್ ಮೂರ್ತಿ ಅವರ ಛಾಯಾಗ್ರಹಣವಿದೆ.