ಎಸ್.ಟಿ.ಸೋಮಶೇಖರ್ ನಿರ್ಮಿಸಿ ಗೊರವಾಲೆ ಮಹೇಶ್ ನಿರ್ದೇಶನ ಮಾಡಿರುವ ಗ್ರಾಮೀಣ ಭಾಗದ ಸೊಗಡಿನ ಕಥೆ ಹೇಳುವ `ನಾ ಕೋಳಿಕೆ ರಂಗ` ಇದೇ 10 ರಂದು ಬಿಡುಗಡೆ ಕಾಣುತ್ತಿದೆ.
ಮಾಸ್ಟರ್ ಆನಂದ್ ಖ್ಯಾತಿಯ ಆನಂದ್ ಹಾಗೂ ರಾಜೇಶ್ವರಿ ಮುಖ್ಯ ಪಾತ್ರದಲ್ಲಿರುವ ಈ ಚಿತ್ರದಲ್ಲಿ ಹೆಚ್ಚಿನ ಸಂಖ್ಯೆಯ ಕಾಮಿಡಿ ಕಿಲಾಡಿ ಕಲಾವಿದರು ನಟಿಸಿರುವುದು ವಿಶೇಷ ಸೋಮವಾರ ನಡೆದ ಚಿತ್ರದ ಬಿಡುಗಡೆ ಪೂರ್ವ ಸುದ್ದಿಗೋಷ್ಠಿಯಲ್ಲಿ ಚಿತ್ರತಂಡ ಅತ್ಯುತ್ಸಾಹದಿಂದ ಪಾಲ್ಗೊಂಡು ವಿವರಗಳನ್ನು ನೀಡಿತು.
ಇದು ಕೊರೊನಾ ಸಂಕಷ್ಟಗಳನ್ನು ಎದುರಿಸಿ ನಿಂತಿರುವ ಚಿತ್ರ. ಹಾಗಾಗಿ ಬಿಡುಗಡೆ ಕಾಣುವುದು ತಡವಾಗಿದೆ. ಆದರೂ ಚಿತ್ರ ಗೆಲುವು ಕಾಣುವ ಬಗ್ಗೆ ನಮಗೆ ಯಾವುದೇ ಸಂಶಯವಿಲ್ಲ. ಏಕೆಂದರೆ ಚಿತ್ರ ಎಲ್ಲಿಯೂ ಕೂಡ ಬೋರ್ ಎನಿಸುವುದಿಲ್ಲ ಎಂದರು ನಿರ್ಮಾಪಕ ಎಸ್.ಟಿ.ಸೋಮಶೇಖರ್.
ನನಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಬಗ್ಗೆ ಅತೀವವಾದ ಗೌರವವಿತ್ತು. ಹಾಗಾಗಿ ಅವರ ಬಗ್ಗೆ ಹಠ ತೊಟ್ಟು ಹಾಡು ಮಾಡಿದೆವು. ಕೈಲಾಸ್ ಖೇರ್ ಹಾಡಿರುವ ಆ ಹಾಡು ಅತ್ಯುತ್ತಮ ವಾಗಿ ಮೂಡಿ ಬಂದಿದೆ ಮಾತ್ರವಲ್ಲ; ಈಗಾಗಲೇ ಜನಮನ ಗೆದ್ದಿದೆ ಎಂದರು.
ಇನ್ನು ವರನಟ ಡಾ.ರಾಜ್ ಕುಮಾರ್ ಅವರ ಮೇಲೆ ಅತೀವವಾದ ಅಭಿಮಾನ ಹಾಗಾಗಿ ಪುನೀತ್ ಸರ್ ಅವರಿಂದ ಒಂದು ಹಾಡು ಹಾಡಿಸಬೇಕೆಂದು ಮಾಡಿದ ಪ್ರಯತ್ನ ಕೂಡ ಯಶಸ್ಸು ಕಂಡಿತು. ದೇವರ ಮಗ ಅವರು ಮಾಸ್ಟರ್ ಆನಂದ್ ಅವರಿಗೆ ನೀವು ಹಾಡಬೇಕು ಎಂದ ತಕ್ಷಣವೇ ಒಪ್ಪಿ ಹಾಡಿದರು. ಅದು ನನ್ನ ಪುಣ್ಯ ಎಂದರು ನಿರ್ಮಾಪಕ ಸೋಮಶೇಖರ್ .
ಚಿತ್ರವನ್ನು ಕಷ್ಟಪಟ್ಟು ಮಾಡಿದ್ದೇವೆ ಈಗ ಪ್ರೇಕ್ಷಕರಿಂದ ಅತ್ಯುತ್ತಮ ಪ್ರತಿಕ್ರಿಯೆ ಬರಬೇಕಾಗಿದೆ ಈಗ ಅದನ್ನು ಎದುರು ನೋಡುತ್ತಿದ್ದೇವೆ ಎಂದರು ನಿರ್ದೇಶಕ ಗೊರವಾಲೆ ಮಹೇಶ್.
ಮುಖ್ಯ ಪಾತ್ರದಲ್ಲಿ ನಟಿಸಿರುವ ರಿಯಾಲಿಟಿ ಶೋನ ಡಾರ್ಲಿಂಗ್ ಮಾಸ್ಟರ್ ಆನಂದ್, ಇದು ತಮಗೆ ದಕ್ಕಿದ ಅಪೂರ್ವ ಅವಕಾಶವಾಗಿದೆ ಎಂದರು.
ಈ ಚಿತ್ರ ಮಾಡಿದ್ದು ಆಕಸ್ಮಿಕ. ಕೊರೊನಾ ಸಮಯದಲ್ಲಿ ಆರಂಭವಾದ ಸಿನಿಮಾ ಈಗ ಬಿಡುಗಡೆ ಕಾಣುತ್ತಿದೆ. ನಿರ್ಮಾಪಕರು ಸೇರಿದಂತೆ ತಂಡದ ಎಲ್ಲರೂ ಶ್ರಮಪಟ್ಟಿದ್ದಾರೆ. ನನ್ನ ಜೊತೆ ಕಾಮಿಡಿ ಕಿಲಾಡಿ ತಂಡವು ಪರಿಶ್ರಮ ಪಟ್ಟಿದೆ. ಹಾಗಾಗಿ ನಾನು ಎಲ್ಲರಿಗೂ ಕೃತಜ್ಞತೆ ಹೇಳುವೆ ಎಂದರು.
ಹಿರಿಯ ನಟಿ ಭವ್ಯ ತಾಯಿ ಪಾತ್ರವನ್ನು ನಿರ್ವಹಿಸಿದ್ದು, ಅವರು ಚಿತ್ರತಂಡದ ಜೊತೆಗಿನ ಅನುಭವಗಳನ್ನು ಹೇಳಿಕೊಂಡರು.
ಈ ಚಿತ್ರ ನನ್ನ ವೃತ್ತಿ ಬದುಕಿನ ಮೊದಲ ಚಿತ್ರವಾಗಿರುವುದು ನನ್ನ ಪುಣ್ಯ ಎಂದರು ಸಂಗೀತ ನಿರ್ದೇಶಕ ರಾಜು ಎಮ್ಮಿಗನೂರು.
ನಿರ್ಮಾಪಕ ಸೋಮಶೇಖರ್ ಅವರ ಪುತ್ರಿ ರಾಜೇಶ್ವರಿ ಹಾಗೂ ಅವರ ಹಿರಿಯ ಸಹೋದರ ಮಾತನಾಡಿದಾಗ ಇಡೀ ವಾತಾವರಣ ಭಾವುಕತೆಗೆ ಒಳಪಟ್ಟಿತು.