ಈ ಹಿಂದೆ `ಗಂಟುಮೂಟೆ` ಎಂಬ ಚಿತ್ರದ ಮೂಲಕ ನಿರ್ದೇಶಕಿಯಾಗಿ ಗಮನ ಸೆಳೆದಿದ್ದವರು ರೂಪಾ ರಾವ್. ಕನ್ನಡದಲ್ಲಿ ನಿರ್ದೇಶಕಿಯರ ಕೊರತೆ ಎದ್ದು ಕಾಣುತ್ತಿರುವ ಈ ಹೊತ್ತಿನಲ್ಲಿ, ಅದನ್ನು ರೂಪಾ ರಾವ್ ಸಮರ್ಥವಾಗಿ ತುಂಬುತ್ತಾರೆಂಬ ಭರವಸೆಯೂ ಮೂಡಿಕೊಂಡಿತ್ತು. ಅವರ ಮುಂದಿನ ಸಿನಿಮಾ ಯಾವುದೆಂಬ ಕುತೂಹಲ ಮೂಡಿಕೊಂಡಿರುವಾಗಲೇ, ರೂಪಾ ರಾವ್ `ಕೆಂಡ` ಚಿತ್ರದ ಮೂಲಕ ನಿರ್ಮಾಪಕಿಯಾಗಿ ಅವತರಿಸಿದ್ದಾರೆ ಈಗಾಗಲೇ ನಾನಾ ದಿಕ್ಕುಗಳಲ್ಲಿ ಕುತೂಹಲ ಮೂಡಿಸಿರುವ ಈ ಚಿತ್ರದ ಮೂಲಕ ಒಂದು ಅಭೂತಪೂರ್ವವಾದ ದಾಖಲೆಯನ್ನೂ ಕೂಡಾ ತಮ್ಮ ಹೆಸರಿಗೆ ಜಮೆಯಾಗಿಸಿಕೊಂಡಿದ್ದಾರೆ.
ಇತ್ತೀಚೆಗಷ್ಟೇ ಕೆಂಡ ಚಿತ್ರದ ಒಂದಷ್ಟು ಪಾತ್ರಗಳನ್ನು ಚಿತ್ರತಂಡ ಪರಿಚಯಿಸಿತ್ತು. ಆ ಪಾತ್ರಗಳು ಮೂಡಿ ಬಂದಿದ್ದ ಪರಿಯನ್ನು ಕಂಡಿದ್ದ ಪ್ರೇಕ್ಷಕರೆಲ್ಲರೊಳಗೂ ಕೆಂಡದ ಬಗೆಗೊಂದು ಕೌತುಕ ನಿಗಿನಿಗಿಸಲಾರಂಭಿಸಿದೆ. ಅಷ್ಟರಮಟ್ಟಿಗೆ ನಿರ್ದೇಶಕ ಸಹದೇವ್ ಕೆಲವಡಿ ಮತ್ತು ತಂಡ ಆರಂಭಿಕ ಹಂತದ ಗೆಲುವು ದಾಖಲಿಸಿದೆ. ಅಷ್ಟಕ್ಕೂ ಈ ಹಿಂದೆ ಗಂಟುಮೂಟೆ ಚಿತ್ರವನ್ನು ರೂಪಾ ರಾವ್ ಮತ್ತು ಸಹದೇವ್ ಕೆಲವಡಿ ಒಲಟ್ಟುಗೂಡಿ ನಿರ್ಮಾಣ ಮಾಡಿದ್ದರು. ನಿರ್ದೇಶಕರಾಗಬೇಕೆಂಬ ಬಯಕೆ ಹೊಂದಿದ್ದ ಸಹದೇವ್ ಮಾಡಿಕೊಂಡಿದ್ದ ಕಥೆ ಆರಂಭಿಕವಾಗಿಯೇ ರೂಪಾರನ್ನು ಸೆಳೆದಿತ್ತಂತೆ. ಒಂದಷ್ಟು ವರ್ಷಗಳ ಕಾಲ ಒಟ್ಟಿಗೆ ಕಾರ್ಯ ನಿರ್ವಹಿಸಿದ್ದರಿಂದಾಗಿ, ಸಹದೇವ್ ಆ ಕಥೆಗೆ ಯಾವ ಸ್ವರೂಪದಲ್ಲಿ ದೃಷ್ಯರೂಪ ಕೊಡಬಹುದೆಂಬ ಸ್ಪಷ್ಟ ಅಂದಾಜೂ ಕೂಡಾ ರೂಪಾ ಅವರಿಗಿತ್ತು. ಆ ಕಾರಣದಿಂದಲೇ ಕೆಂಡ ನಿರ್ಮಾಣ ಕಾರ್ಯದಲ್ಲಿ ಅವರು ಭಾಗಿಯಾಗಿದ್ದಾರೆ.
ಚಿತ್ರರಂಗವೆಂಬುದು ಪುರುಷರ ಪಾರುಪಥ್ಯವೇ ಅಧಿಕವಾಗಿರುವ ಕ್ಷೇತ್ರ. ಅದರಲ್ಲಿ ನಿರ್ದೇಶಕಿಯಾಗಿ ನೆಲೆ ಕಂಡುಕೊಳ್ಳುವುದೇ ಸವಾಲು. ಅಂಥಾದ್ದರಲ್ಲೀಗ ರೂಪಾ ರಾವ್ ನಿರ್ಮಾಪಕಿಯಾಗಿಯೂ ಅವತರಿಸಿದ್ದಾರೆ. ಅದೂ ಕೂಡಾ ಒಂದು ಪಕ್ಕಾ ಗ್ಯಾಂಗ್ ಸ್ಟರ್ ಕಥೆಯ ಕೆಂಡವನ್ನು ನಿರ್ಮಾಣ ಮಾಡಿದ್ದಾರೆ. ಈ ಮೂಲಕ ಈ ಬಗೆಯ ಚಿತ್ರವನ್ನು ನಿರ್ಮಾಣ ಮಾಡಿದ ಮೊದಲ ನಿರ್ಮಾಪಕಿ ಎಂಬ ದಾಖಲೆ ರೂಪಾ ರಾವ್ ಅವರ ಮುಡಿಗೇರಿಕೊಂಡಿದೆ. ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲ; ಭಾರತೀಯ ಚಿತ್ರರಂಗದಲ್ಲಿಯೇ ಇಂಥಾದ್ದೊಂದು ಪಲ್ಲಟದ ಮೊದಲ ರೂವಾರಿಯಾಗಿ ರೂಪಾ ರಾವ್ ಗುರುತಿಸಿಕೊಳ್ಳುತ್ತಾರೆ.
ಇಂಥಾ ಹಲವಾರು ವಿಶೇಷತೆಗಳನ್ನು ಹೊಂದಿರುವ ಕೆಂಡ ಚಿತ್ರದ ಕೆಲಸ ಕಾರ್ಯಗಳೀಗ ಭರದಿಂದ ಸಾಗುತ್ತಿವೆ. ಸದ್ಯದಲ್ಲಿಯೇ ಟೀಸರ್ ಲಾಂಚ್ ಮಾಡಲು ಚಿತ್ರತಂಡ ತಯಾರಾಗುತ್ತಿದೆ. ಈಗಾಗಲೇ ಕೆಂಡ ಹಲವಾರು ಅಂತಾರಾಷ್ಟ್ರೀಯ ಫಿಲಂ ಫೆಸ್ಟಿವಲ್‍ಗಳಲ್ಲಿ ಮಿಂಚಲು ಅಣಿಗೊಳ್ಳುತ್ತಿದೆ. ಇದೇ ಹೊತ್ತಿನಲ್ಲಿ ನಿರ್ದೇಶಕಿಯಾಗಿಯೂ ಕ್ರಿಯಾಶೀಲರಾಗಿರುವ ರೂಪಾ ರಾವ್, ಸಣ್ಣ ಗ್ಯಾಪಿನಲ್ಲಿ `ಆಸ್ಮಿನ್’ ಎಂಬ ಚಿತ್ರವೊಂದನ್ನು ನಿರ್ದೇಶನ ಮಾಡಿದ್ದಾರೆ. ಅದು ಇಷ್ಟರಲ್ಲಿಯೇ ಓಟಿಟಿಯಲ್ಲಿ ಬಿಡುಗಡೆಗೊಳ್ಳಲಿದೆ. ಕೆಂಡ ಬಿಡುಗಡೆಯಾದ ಬೆನ್ನಲ್ಲಿಯೇ ರೂಪಾ ರಾವ್ ನಿರ್ದೇಶನದ ಬಿಗ್ ಬಜೆಟ್ಟಿನ ಚಿತ್ರ ಚಾಲೂ ಆಗಲಿದೆಯಂತೆ.