Chief Editor
Manohar. R (Manu)
Photo Journalist
chitrataramanu@gmail.com
+91 9845549026
ತಾಯ ಹರಕೆ ತೀರಿಸಿದ ಕೋಳಿಕ್ಕೆ ರಂಗ ... ರೇಟಿಂಗ್ : 3/5 ***
Posted date: 12 Sun, Nov 2023 10:47:46 AM
ದೇವರಿಗೆ ಹರಕೆ ತೀರಿಸುವ  ನೆಪದಲ್ಲಿ ಮೂಕ ಪ್ರಾಣಿಗಳ ಜೀವ ತೆಗೆಯುವುದು ಎಷ್ಟು ಸರಿ, ಆವುಗಳಿಗೂ ನಮ್ಮಂತೆ ಜೀವ ಉಳಿಸಿಕೊಳ್ಳಬೇಕೆಂಬ ಆಸೆಯಿರುವುದಿಲ್ಲವೇ,  ಮೂಢನಂಬಿಕೆ ಇರಬಾರದು ಎಂಬುದನ್ನು  ಒಂದು ಚಲನಚಿತ್ರದ  ಮೂಲಕ ಹೇಳುವ  ಪ್ರಯತ್ನ ಮಾಡಿದ್ದಾರೆ  ನಿರ್ದೇಶಕ ಗೊರವಾಲೆ ಮಹೇಶ್.  ನಾಕೋಳಿಕೆ ರಂಗ ಚಿತ್ರದಲ್ಲಿ ಮಂಡ್ಯ ಭಾಗದ  ಹಳ್ಳಿಯೊಂದರ ತಾಯಿ, ಮಗ ಹಾಗೂ ಮೂಕ ಪ್ರಾಣಿಯೊಂದರ ಸುತ್ತ ನಡೆಯುವ ಭಾವನಾತ್ಮಕ ಕಥೆಯನ್ನು ಗ್ರಾಮೀಣ ಸಂಪ್ರದಾಯ, ಆಚರಣೆಗಳನ್ನು ಕಣ್ಣಿಗೆ ಕಟ್ಟುವ ಹಾಗೆ ತೆರೆದಿಟ್ಟಿದ್ದಾರೆ. ಊರಲ್ಲಿ ಯಾವುದೇ ಶುಭ ಕಾರ್ಯ ನಡೆದರೂ ಅಲ್ಲಿ ಸೋಬಾನೆ ಸಣ್ಣಕ್ಕ(ಭವ್ಯ)ನ ಸೋಬಾನೆ ಹಾಡು ಇರಲೇಬೇಕು. ಆಕೆಯ ಹಾಡೆಂದರೆ ಅಷ್ಟು ಫೇಮಸ್, ಆಕೆಯ ಮಗ ರಂಗ(ಮಾಸ್ಟರ್ ಆನಂದ್) ಮುಗ್ಧ, ಆದರೆ ಅಷ್ಟೇ ತುಂಟ. ಆತನಿಗೆ ತನ್ನ ಕೋಳಿ  ಸುಕ್ಕುರಾಜನೆಂದರೆ ಪ್ರಾಣ. ಅದನ್ನು ಬಿಟ್ಟು ಒಂದು ಕ್ಷಣವೂ  ಇರಲಾರದಷ್ಟು ಹಚ್ಚಿಕೊಂಡಿರುತ್ತಾನೆ. ತನ್ನ ತುಂಟಾಟದಿಂದ ಕೆಲವೊಮ್ಮೆ ಊರ ಮುಖಂಡರ ಕೆಂಗಣ್ಣಿಗೂ ಗುರಿಯಾಗುತ್ತಾನೆ. ಈನಡುವೆ ಊರದೇವತೆ ಮಾರಮ್ಮನ  ಪೂಜಾರಿ ಗುಡ್ಡಪ್ಪ(ರಾಕ್‌ಲೈನ್ ಸುಧಾಕರ್)ನ ಮಗಳು(ರಾಜೇಶ್ವರಿ) ರಂಗನ ಜೊತೆ ರಗಳೆ ಮಾಡಿಕೊಂಡರೂ  ನಂತರ ಆತನ ಮುಗ್ಧತೆಗೆ  ಮನಸೋತಿರುತ್ತಾಳೆ,    
 
ಒಮ್ಮೆ ಸ್ನೇಹಿತನ ಲವ್ ಮ್ಯಾಟರಿಗೆ  ಸಹಾಯ ಮಾಡಲು ಹೋಗಿ ಶ್ರೀಮಂತನ ಕೈಗೆ ಸಿಕ್ಕಿ‌ಹಾಕಿಕೊಂಡು, ತಪ್ಪಿಸಿಕೊಂಡು ಬರುತ್ತಾನೆ.   ಸರ್ವಶಿಕ್ಷಣ ಅಭಿಯಾನದಡಿ ಹಳ್ಳಿಗೆ ಬಂದ ಟೀಚರ್(ಶಕೀಲಾ) ಬಳಿ ನಾಲ್ಕಕ್ಷರ ಕಲಿಯುತ್ತಾನೆ. ಒಮ್ಮೆ ರಂಗನಿಗೆ ಹುಶಾರಿಲ್ಲದ ಸಮಯದಲ್ಲಿ ಊರದೇವತೆ ಮಾರಮ್ಮನಿಗೆ ಸಣ್ಣಕ್ಕ ಹರಕೆ ಕಟ್ಟಿಕೊಳ್ಳುತ್ತಾಳೆ, ನಿನ್ನಮಗ ಸರಿಯಾಗಬೇಕಾದ್ರೆ ಆತನ ಜೀವಕ್ಕೆ ಜೀವವಾಗಿರುವ ಸುಕ್ಕುರಾಜನ್ನು ಬಲಿ ಕೊಡಬೇಕು ಎಂದು ದೇವಿಯ ಅಪ್ಪಣೆಯಾಗುತ್ತದೆ. ಮಗ ಉಳಿದರೆ ಸಾಕೆಂದು ಸಣ್ಣಕ್ಕ  ಒಪ್ಪಿಕೊಳ್ಳುತ್ತಾಳೆ, ಊರಹಬ್ಬದ ಸಂದರ್ಭದಲ್ಲಿ  ಹರಕೆ ಕಟ್ಟಿಕೊಡವರೆಲ್ಲ ತಮ್ಮ   ಹರಕೆ ತೀರಿಸಬೇಕಾಗುತ್ತದೆ. ಆಗ ಸಣ್ಣಕ್ಕ ರಂಗನಿಗೆ ತನ್ನ ಹರಕೆಯ ಬಗ್ಗೆ ಹೇಳಿ ಕೋಳಿ ಬಲಿ ಕೊಡಬೇಕೆಂದಾಗ, ರಂಗ ಊರನ್ನೇ ಬಿಟ್ಟು ಬೆಂಗಳೂರು ಸೇರುತ್ತಾನೆ. ಇತ್ತ ರಂಗನ ನೆನಪಲ್ಲೇ ಸಣ್ಣಕ್ಕ ಹಾಸಿಗೆ ಹಿಡಿಯುತ್ತಾಳೆ, ನಗರಕ್ಕೆ ಹೋದ ರಂಗ ತಿರುಗಿ ಊರಿಗೆ ಬರುತ್ತಾನಾ, ತನ್ನ ತಾಯಿಯನ್ನು ಉಳಿಸಿಕೊಳ್ತಾನಾ, ಆಕೆಯ ಹರಕೆ ತೀರುತ್ತಾ, ಇಲ್ವಾ ಎನ್ನುವುದೇ  ಚಿತ್ರದ ಕ್ಲೈಮ್ಯಾಕ್ಸ್.
 
ತಾಯಿಯ ಪ್ರೀತಿ, ಸಂಬಧಗಳ ಮೌಲ್ಯಗಳನ್ನು ಎತ್ತಿ ಹಿಡಿಯುವ ಕಥೆಯನ್ನು ನಿರ್ದೇಶಕರು ಪ್ರೇಕ್ಷಕರ ಮನಮುಟ್ಟುವ ಹಾಗೆ ತೆರೆಮೇಲೆ ಮೂಡಿಸಿದ್ದಾರೆ. ಬದುಕಿನ ಜೊತೆಗೆ ಮಾನವೀಯತೆಯ ಮೌಲ್ಯಗಳನ್ನು ಎತ್ತಿ ಹಿಡಿದಿದ್ದಾರೆ.  ಮಾಸ್ಟರ್ ಆನಂದ್ ಇಡೀ ಚಿತ್ರವನ್ಬು ಆವರಿಸಿದ್ದು, ತಾಯಿಯ ಮುದ್ದಿನ ಮಗನಾಗಿ, ಮೂಕ ಪ್ರಾಣಿಯ ಗೆಳೆಯನಾಗಿ ನೋಡುಗರ  ಗಮನ ಸೆಳೆಯುತ್ತಾರೆ, ತಾಯಿಯಾಗಿ ಭವ್ಯ ಸಿಕ್ಕಂತ ಅವಕಾಶದಲ್ಲೇ ಅತ್ಯುತ್ತಮ ಅಭಿನಯ ನೀಡಿದ್ದಾರೆ. ಇನ್ನು ನಾಯಕಿ, ನಿರ್ಮಾಪಕರ ಪುತ್ರಿ ರಾಜೇಶ್ವರಿ ಕೂಡ ಸಿಕ್ಕ ಅವಕಾಶವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಸರ್ವಶಿಕ್ಷಣ ಅಭಿಯಾನದಡಿ  ಶಿಕ್ಷಕಿಯಾಗಿ ಊರಿಗೆ ಬರುವ ಶಕೀಲಾ ಅವರ ಪಾತ್ರ ಕೂಡ ಉತ್ತಮವಾಗಿದೆ. ಇನ್ನುಳಿದಂತೆ  ಶೋಭರಾಜ್, ಹೊನ್ನವಳ್ಳಿ ಕೃಷ್ಣ, ಬಿರಾದಾರ್, ಕಾಮಿಡಿ ಕಿಲಾಡಿಗಳ ಗೆಳೆಯರು ಸೇರಿದಂತೆ ಎಲ್ಲಾ ಪಾತ್ರಧಾರಿಗಳು ಚಿತ್ರದ ಓಟಕ್ಕೆ ಪೂರಕವಾಗಿ ಅಭಿನಯಿಸಿದ್ದಾರೆ. ಸಂಗೀತವೇ ಚಿತ್ರದ ಹೈಲೈಟ್.  ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್  ಹಾಡು ಹಾಗೂ ಪುನೀತ್ ರಾಜಕುಮಾರ್ ದನಿಯಾಗಿರುವ ಹಾಡು ಇಷ್ಟವಾಗುತ್ತವೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ತಾಯ ಹರಕೆ ತೀರಿಸಿದ ಕೋಳಿಕ್ಕೆ ರಂಗ ... ರೇಟಿಂಗ್ : 3/5 *** - Chitratara.com
Copyright 2009 chitratara.com Reproduction is forbidden unless authorized. All rights reserved.