ಲೂಸ್ ಮಾದ ಯೋಗಿ ಅಭಿನಯದ 50ನೇ ಚಿತ್ರ ರೋಜಿ. ಈ ಚಿತ್ರ ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ. ಈಗ "ರೋಜಿ" ಚಿತ್ರದ ಪ್ರಮುಖಪಾತ್ರದಲ್ಲಿ ಖ್ಯಾತ ನೃತ್ಯ ನಿರ್ದೇಶಕ ಹಾಗೂ ಇಳಯದಳಪತಿ ವಿಜಯ್ ಅಭಿನಯದ "ಲಿಯೊ" ಚಿತ್ರದಲ್ಲಿ ಚಾಕೊಲೇಟ್ ಕಾಫಿ ಎಂಬ ಪಾತ್ರದ ಮೂಲಕ ಎಲ್ಲರ ಗಮನ ಸೆಳೆದಿರುವ ಸ್ಯಾಂಡಿ ಮಾಸ್ಟರ್ ನಟಿಸುತ್ತಿದ್ದಾರೆ. ಈ ವಿಷಯ ತಿಳಿಸಲು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಸ್ಯಾಂಡಿ ಮಾಸ್ಟರ್ ಸೇರಿದಂತೆ ಚಿತ್ರತಂಡದ ಸದಸ್ಯರು ಉಪಸ್ಥಿತರಿದ್ದರು. ಸ್ಯಾಂಡಿ ಮಾಸ್ಟರ್ ಅವರ ಪಾತ್ರ ಪರಿಚಯಿಸುವ ಪೋಸ್ಟರ್ ಸಹ ಬಿಡುಗಡೆ ಮಾಡಲಾಯಿತು.
ನಾನು ನೃತ್ಯ ನಿರ್ದೇಶಕನಾಗಿ ಹಲವು ಚಿತ್ರಗಳಿಗೆ ಕೆಲಸ ಮಾಡಿದ್ದೇನೆ. "ಲಿಯೊ" ಚಿತ್ರದ ನನ್ನ ಪಾತ್ರಕ್ಕೆ ಈಗ ಎಲ್ಲ ಕಡೆ ಮೆಚ್ಚುಗೆ ವ್ಯಕ್ತವಾಗಿದೆ. ನಿರ್ದೇಶಕ ಶೂನ್ಯ ಅವರು ಈ ಚಿತ್ರದ ಕಥೆ ಹಾಗೂ ನನ್ನ ಪಾತ್ರದ ಬಗ್ಗೆ ಹೇಳಿದರು. ಇಷ್ಟವಾಯಿತು. ಆಂಡಾಳ್ ಎಂಬುದು ನನ್ನ ಪಾತ್ರದ ಹೆಸರು ಎಂದು ಸ್ಯಾಂಡಿ ಮಾಸ್ಟರ್ ತಿಳಿಸಿದರು.
ನನ್ನ ಪಾತ್ರದ ಹೆಸರು "ರೋಜಿ". ನಮ್ಮ ಚಿತ್ರಕ್ಕೆ ಈಗಾಗಲೇ ಹದಿನೈದು ದಿನಗಳ ಕಾಲ ಚಿತ್ರೀಕರಣ ನಡೆದಿದೆ ಎಂದು ಮಾತನಾಡಿದ ನಾಯಕ ಲೂಸ್ ಮಾದ ಯೋಗಿ, ಸದ್ಯದಲ್ಲೇ ವಿಭಿನ್ನವಾದ ಟೀಸರ್ ಸಹ ಬರಲಿದೆ. ಇದು ಮೂರು ನಿಮಿಷಗಳ ಅವಧಿಯಿದ್ದು ಟೀಸರ್ ಎನ್ನಬೇಕೊ ಅಥವಾ ಟ್ರೇಲರ್ ಎನ್ನಬೇಕೊ ಗೊತ್ತಾಗುತ್ತಿಲ್ಲ ಎಂದರು.
ಚಿತ್ರಕ್ಕೆ ಮೊದಲ ಹಂತದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆದಿದೆ. ಮೊದಲ ಹಂತದ ಚಿತ್ರೀಕರಣದ ಕೆಲವು ಭಾಗಗಳನ್ನು ಆಯ್ಕೆ ಮಾಡಿ ಟೀಸರ್ ಸಹ ಸಿದ್ದವಾಗುತ್ತಿದೆ. ಸದ್ಯದಲ್ಲೇ ಟೀಸರ್ ಬಿಡುಗಡೆಯಾಗಲಿದೆ. ಈಗ ಸ್ಯಾಂಡಿ ಮಾಸ್ಟರ್ ಚಿತ್ರತಂಡ ಸೇರ್ಪಡೆಯಾಗಿದ್ದಾರೆ. ವಿಭಿನ್ನಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿ ಕನ್ನಡದ ಹೆಸರಾಂತ ನಟರಿಬ್ಬರು ಹಾಗೂ ತೆಲುಗಿನ ಖ್ಯಾತ ನಟರೊಬ್ಬರು ನಟಿಸಲಿದ್ದಾರೆ. ಮುಂದಿನ ದಿನಗಳಲ್ಲಿ ಆ ಕುರಿತು ಮಾಹಿತಿ ನೀಡುವುದಾಗಿ "ಹೆಡ್ ಬುಷ್" ಚಿತ್ರದ ಖ್ಯಾತಿಯ ನಿರ್ದೇಶಕ ಶೂನ್ಯ.
ಟೀಸರ್ ಗೆ ಹಿನ್ನೆಲೆ ಸಂಗೀತ ನೀಡಲು ಶೂನ್ಯ ನನ್ನ ಸಂಪರ್ಕಿಸಿದರು. ಟೀಸರ್ ಚೆನ್ನಾಗಿ ಬಂದಿದೆ. ನಾಲ್ಕು ಹಾಡುಗಳು ಚಿತ್ರದಲ್ಲಿದೆ. ಯೋಗಿ ಅವರ ಜೊತೆ ಇದು ನನ್ನ ಮೊದಲ ಚಿತ್ರ ಎಂದರು ಸಂಗೀತ ನಿರ್ದೇಶಕ ಗುರುಕಿರಣ್.
ಚಿತ್ರ ಚೆನ್ನಾಗಿ ಮೂಡಿಬರಲು ಸಹಕಾರ ನೀಡುತ್ತಿರುವ ಚಿತ್ರತಂಡಕ್ಕೆ ನಿರ್ಮಾಪಕ ಡಿ.ವೈ.ರಾಜೇಶ್ ಧನ್ಯವಾದ ತಿಳಿಸಿದರು. ಸಹ ನಿರ್ಮಾಪಕ ಡಿ.ವೈ ವಿನೋದ್ ಹಾಗೂ ಸಂಕಲನಕಾರ ಹರೀಶ್ ಕೊಮ್ಮೆ ಪತ್ರಿಕಾಗೋಷ್ಠಿಯಲ್ಲಿದ್ದರು.a