ಜಾತಕ, ಭವಿಷ್ಯವನ್ನು ಅತಿಯಾಗಿ ನಂಬುವವರಿಗೆ ಒಮ್ಮೊಮ್ಮೆ ಅವರ ನಂಬಿಕೆಯೇ ಮುಳುವಾಗಿಬಿಡುತ್ತದೆ. ನಂಬಿಕೆ ಇರಬೇಕು, ಆದರೆ ಮೂಢನಂಬಿಕೆ ಇರಬಾರದು ಎಂಬುದನ್ನು ರಾಜುಯೋಗ ಚಿತ್ರದ ಮೂಲಕ ನಿರ್ದೇಶಕ ಲಿಂಗರಾಜ ಉಚ್ಚಂಗಿದುರ್ಗ ಅವರು ಹೇಳಲು ಪ್ರಯತ್ನಿಸಿದ್ದಾರೆ.
ಜೋತಿಷಿ(ಕೃಷ್ಣಮೂರ್ತಿ ಕವುತಾರ್) ಹೇಳಿದ ಮಾತೇ ವೇದವಾಕ್ಯ ಎಂದು ನಂಬಿದ್ದ ಸಿದ್ರಾಮಣ್ಣ (ನಾಗೇಂದ್ರ ಶಾ)ನಿಗೆ ಮೂಲಾನಕ್ಷತ್ರದಲ್ಲೇ ಗಂಡು ಮಗುವೊಂದು ಹುಟ್ಟುತ್ತದೆ. ಅದು ಹುಟ್ಟಿದ ಕೂಡಲೇ ತಾಯಿಯ ಪ್ರಾಣಪಕ್ಷಿ ಹಾರಿಹೋಗಿದ್ದು, ಸಿದ್ರಾಮಣ್ಣನ ನಂಬಿಕೆಯನ್ನು ಬಲವಾಗಿಸುತ್ತದೆ. ಈತ ಹುಟ್ಟಿದ್ದೇ ತನ್ನ ದುರಾದೃಷ್ಟ ಎಂದುಕೊಂಡ ಸಿದ್ರಾಮಣ್ಣ ಮಗ ಪ್ರಾಣೇಶನನ್ನು ನಿಂದಿಸುತ್ತಲೇ ಬೆಳೆಸುತ್ತಾನೆ. ಕೊನೆಗೆ ತಾನು ಹೆತ್ತ ಮಗನೇ ಪ್ರಾಣ ಉಳಿಸಿದಾಗ ಸಿದ್ರಾಮಣ್ಣನಿಗೆ ಜ್ಞಾನೋದಯವಾಗುವ ಕಥೆಯನ್ನು ಗ್ರಾಮೀಣ ಸೊಗಡಿನ ಹಿನ್ನೆಲೆ ಇಟ್ಟುಕೊಂಡು ನಿರ್ದೇಶಕರು ಈ ಚಿತ್ರವನ್ನು ತೆರೆಯಮೇಲೆ ನಿರೂಪಿಸಿದ್ದಾರೆ. ಇಡೀ ಚಿತ್ರದಲ್ಲಿ ಗ್ರಾಮೀಣ ಪರಿಸರದ ಫ್ಲೇವರ್ ಎದ್ದು ಕಾಣುತ್ತಿದ್ದು, ಪ್ರೇಕ್ಷಕರ ಕಣ್ಣಿಗೆ ತಂಪನ್ನೆರೆಯುತ್ತದೆ.
ಹುಟ್ತಾನೇ ತನ್ನ ತಾಯಿಯನ್ನು ಕಳೆದುಕೊಂಡ ಪ್ರಾಣೇಶ(ಧರ್ಮಣ್ಣ ಕಡೂರು) ಬೆಳೆದಂತೆಲ್ಲ ಊರ ಜನರ ಪಾಲಿಗೆ ಅಪಶಕುನದ ಸಂಕೇತವಾಗುತ್ತಾನೆ. ಈತ ಕಾಲಿಟ್ಟ ಕಡೆಯಲ್ಲೆಲ್ಲ ಏನಾದರೊಂದು ಅನಾಹುತ ನಡೆದೇ ಇರುತ್ತದೆ, ಅದು ಕಾಕತಾಳೀಯವೇ ಆದರೂ ಜನ ಮಾತ್ರ ಇದನ್ನೆಲ್ಲ ನಂಬೋ ಸ್ಥಿತಿಯಲ್ಲಿರಲ್ಲ. ಆದರೂ ಪ್ರಾಣೇಶ ಮಹಾ ಜ್ಞಾನಿ, ಕೈಲಿ ಪುಸ್ತಕ ಹಿಡಿದುಕೊಂಡು ಬುದ್ದ ಬಸವರ ಸಂದೇಶಗಳನ್ನು ಜನರಿಗೆ ಹೇಳುತ್ತಲೇ ಹೋಗುತ್ತಾನೆ. ಆತ ಜನರಿಗೆ ಒಳ್ಳೇದನ್ನೇ ಹೇಳಿದರೂ ಅವರಿಗದು ಅರ್ಥವಾಗ್ತಿರಲ್ಲ ಕೆಎಎಸ್ ಪರೀಕ್ಷೆ ಬರೆದು ತಹಶೀಲ್ದಾರ್ ಆಗೋ ಕನಸು ಕಂಡಿದ್ದ ಪ್ರಾಣೇಶ, ಐದುಬಾರು ಎಕ್ಸಾಂ ಅಟೆಂಡ್ ಮಾಡಿದ್ದರೂ ಒಮ್ಮೆಯೂ ಪಾಸಾಗುವುದಿಲ್ಲ, ಆದರೂ ಆತ ತನ್ನ ಪ್ರಯತ್ನದಿಂದ ಹಿಂದೆ ಸರಿಯುವುದಿಲ್ಲ, ಮದುವೆ ಮಾಡಿದರೆ ಸೊಸೆಯ ಕಾಲ್ಗುಣದಿಂದ ಆತ ಸರಿಹೋಗಬಹುದೇನೋ ಎಂಬ ಸಲಹೆ ಪಡೆದ ತಂದೆ, ಪ್ರಾಣೇಶನಿಗೆ ಗಿರಿಜಾ(ನಿರೀಕ್ಷಾರಾವ್) ಜೊತೆ ಮದುವೆ ಸಹ ಮಾಡುತ್ತಾನೆ. ಸೊಸೆ ಬಂದ ಮೇಲೆ ಆಕೆಯೇ ಬಟ್ಟೆ ಹೊಲಿದು ಮನೆಯ ಜವಾಬ್ದಾರಿ ಹೊರಬೇಕಾಗುತ್ತದೆ, ಊರಲ್ಲಿ ಸಿದ್ರಾಮನದು ದೊಡ್ಡ ಕುಟುಂಬ. ಆತನ ಸಹೋದರರಿಬ್ಬರ ಕುಟುಂಬವೂ ಅಲ್ಲೇ ನೆಲೆಸಿರುತ್ತದೆ, ಹೀಗೇ ಸಾಗುವ ಕಥೆಯಲ್ಲಿ ಒಂದಷ್ಟು ಹಾಸ್ಯ ಪ್ರಸಂಗಗಳೂ ನಡೆಯುತ್ತವೆ, ಜೊತೆಗೆ ಈಗಲೂ ಉಳಿದುಕೊಂಡಿರುವ ಗ್ರಾಮೀಣ ಭಾಗದ ಆಚರಣೆ, ಸಂಪ್ರದಾಯಗಳನ್ನು ನಿರ್ದೇಶಕರು ತುಂಬಾ ಚೆನ್ನಾಗಿ ತೆರೆಯ ಮೇಲೆ ತಂದಿದ್ದಾರೆ, ಮುಂದೆ ಪ್ರಾಣೇಶನ ತಂದೆಗೆ ದೊಡ್ಡ ಗಂಡಾಂತರ ಎದುರಾಗಿ ಆತನ ಪ್ರಾಣವೇ ಹೋಗುವಂಥ ಸಂದರ್ಭ ಬರುತ್ತದೆ, ಹತ್ತು ಲಕ್ಷ ಖರ್ಚು ಮಾಡಿದರೆ ನಿ,ಪ್ರಾಣ ಉಳಿಸಬಹುದೆಂದು ಡಾಕ್ಟರ್ ಪ್ರಾಣೇಶನಿಗೆ ಹೇಳುತ್ತಾರೆ, ಹಣದ ವಿಚಾರ ಬಂದಕೂಡಲೇ ಬಂಧು ಕಮಲಬಳಗ ಎಲ್ಲರೂ ದೂರ ಸರಿಯುತ್ತಾರೆ, ಅದೇ ಸಮಯಕ್ಕೆ ಧರ್ಮಣ್ಣ ತಹಶೀಲ್ದಾರ್ ಹುದ್ದೆಗೆ ಆಯ್ಕೆಯಾದ ಸುದ್ದಿಯೂ ಬರುತ್ತದೆ. ತಹಶೀಲ್ದಾರ್ ಹುದ್ದೆಯನ್ನು ತಿರಸ್ಕರಿಸಿದರೆ, ತಂದೆಯ ಚಿಕಿತ್ಸೆಗೆ ಹಣ ನೀಡುವ ಆಫರ್ ಪ್ರಾಣೇಶನಿಗೆ ಬರುತ್ತದೆ, ಹೀಗೆ ಸಾಗುವ ಕಥೆಯಲ್ಲಿ ಪ್ರಾಣೇಶ, ತಂದೆಯ ಪ್ರಾಣ, ತಹಶೀಲ್ದಾರ್ ಆಗೋ ಕನಸು, ಈ ಎಡರಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತಾನೆ ಎನ್ನುವುದೇ ಚಿತ್ರದ ಕ್ಲೈಮ್ಯಾಕ್ಸ್. ಕೊನೆಗೂ ಆತ ತಹಶೀಲ್ದಾರ್ ಆದನೇ, ಆತನ ತಂದೆಯ ಆರೋಗ್ಯ ಸರಿಯಾಯ್ತೇ ಎಂಬುದನ್ನು ಥೇಟರಿನಲ್ಲಿ ನೋಡಿದರೇ ಚೆನ್ನಾಗಿರತ್ತೆ, ಇಡೀ ಚಿತ್ರವನ್ನು ಆವರಿಸಿರುವ ನಾಯಕ ಧರ್ಮಣ್ಣ ಕಡೂರು ತನ್ನ ಅಭಿನಯದ ಮೂಲಕವೇ ಪ್ರೇಕ್ಷಕರಿಗೆ ಇಷ್ಟವಾಗುತ್ತಾರೆ, ನಾಯಕಿ ನಿರೀಕ್ಷಾರಾವ್ ತನ್ನ ಮೊದಲ ಚಿತ್ರದಲ್ಲೇ ಗಮನ ಸೆಳೆಯುತ್ತಾರೆ. ಜೋತಿಷ್ಯ ಸುಳ್ಳಲ್ಲ, ಆದರೆ ಅದನ್ನು ಕೆಲವರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂಬುದನ್ನು ಕಪಟ ಜೋತಿಷಿಯೊಬ್ಬನ ಪಾತ್ರದ ಮೂಲಕ ಹೇಳಿರವುದು ಚೆನ್ನಾಗಿದೆ, ಸೀರಿಯಸ್ ಕಂಟೆಂಟನ್ನು ಹಾಸ್ಯದ ಹಿನ್ನೆಲೆಯಲ್ಲಿ ಹೇಳಲು ನಿರ್ದೇಶಕರು ಪ್ರಯತ್ನಿಸಿದ್ದಾರೆ. ಪ್ರಮುಖವಾಗಿ ಈ ಚಿತ್ರದಲ್ಲಿ ಬರುವ ಪ್ರತಿ ಪಾತ್ರಕ್ಕೂ ಸಮಾನ ಅವಕಾಶವಿದೆ. ಅಕ್ಷಯ್ ಅವರ ಹಾಡುಗಳು ಕಥೆಗೆ ಪೂರಕವಾಗಿದ್ದು, ವಿಷ್ಣುಪ್ರಸಾದ್ ಅವರ ಕ್ಯಾಮೆರಾದಲ್ಲಿ ಹಳ್ಳಿಯ ಪರಿಸರದ ನೈಜ ಚಿತ್ರಣ ಸೆರೆಯಾಗಿದೆ.