ವೆಂಕಟ್ ಭಾರದ್ವಾಜ್ ನಿರ್ದೇಶನದ `ನಗುವಿನ ಹೂಗಳ ಮೇಲೆ’ ಚಿತ್ರ ನಾಳೆ ಬಿಡುಗಡೆಗೊಳ್ಳಲಿದೆ. ತೆರೆಗಾಣುವ ಕಡೇ ಘಳಿಗೆಯವರೆಗೂ ಪ್ರೇಕ್ಷಕರನ್ನು ಬೆರಗಾಗಿಸುವ ಸಲುವಾಗಿ ಇದೀಗ ಮುದ್ದಾದ ಹಾಡೊಂದನ್ನು ಚಿತ್ರತಂಡ ಬಿಡುಗಡೆಗೊಳಿಸಿದೆ. ಈಗಾಗಲೇ ನಗುವಿನ ಹೂಗಳ ಮೇಲೆ ಗಾಢ ನಿರೀಕ್ಷೆಗಳ ಇಬ್ಬನಿ ಮೂಡಿಕೊಂಡಿದೆ. ಅದನ್ನು ಮತ್ತಷ್ಟು ತೀವ್ರವಾಗಿಸುವ ನಿಟ್ಟಿನಲ್ಲಿ ಈ ಹಾಡು ಪರಿಣಾಮಕಾರಿಯಾಗಿ ಮೂಡಿಕೊಂಡಿದೆ. ಸದರಿ ಸನಿಮಾದಲ್ಲಿ ಪ್ರೇಮದ ನಾನಾ ಮಜಲುಗಳಿದ್ದಾವೆ. ಅದರಲ್ಲೊಂದು ಭಾವದ ಅಭಿವ್ಯಕ್ತಿಯೆಂಬಂತೆ ಸದರಿ ಹಾಡನ್ನು ರೂಪಿಸಿದಂತಿದೆ.
ಮುದ್ದು ಬೇಬಿ ಲವ್ ಯು ಬೇಬಿ ಅಂತ ಶುರುವಾಗುವ ಈ ಗೀತೆ ಲವ್ ಫ್ರಾನ್ ಮೆಹತಾ ಸಂಗೀತ ಸ್ಪರ್ಶದೊಂದಿಗೆ ಮೂಡಿ ಬಂದಿದೆ. ಕಿರಣ್ ನಾಗರಾಜ್ ಸಾಹಿತ್ಯ ಮತ್ತು ರೋನಿ, ಮೇಘನಾ ಕಠಸಿರಿಯಲ್ಲಿ ಮುದ್ದಾಗಿ ರೂಪುಗೊಂಡಿರುವ ಈ ಹಾಡು ಫಲಿಸಿದ ಪ್ರೇಮದ ಎಲ್ಲ ಭಾವಗಳನ್ನೂ ಸಶಕ್ತವಾಗಿ ಹಿಡಿದಿಟ್ಟಂತೆ ಭಾಸವಾಗುತ್ತದೆ. ಜೀ ಮ್ಯೂಸಿಕ್ ಮೂಲಕ ಬಿಡುಗಡೆಗೊಂಡಿರುವ ಮುದ್ದು ಬೇಬಿ ಹಾಡು ಬಹು ಬೇಗನೆ ಸಂಗೀತ ಪ್ರಿಯರನ್ನು ಸೆಳೆಯುತ್ತಿದೆ. ಇನ್ನೇನು ಪ್ರೇಮಿಗಳ ದಿನ ಹತ್ತಿರದಲ್ಲಿದೆ. ಆ ಹೊತ್ತಿಗೆಲ್ಲ ಈ ಹಾಡು ಸಮಸ್ತ ಪ್ರೇಮಿಗಳ ಫೇವರಿಟ್ ಆಗಿ ಬದಲಾಗುವ ಲಕ್ಷಣಗಳಿವೆ.
ನಿರ್ದೇಶಕ ವೆಂಕಟ್ ಭಾರದ್ವಾಜ್ ಸಣ್ಣ ಸಣ್ಣ ವಿಚಾರಗಳನ್ನೂ ಗಮನದಲ್ಲಿಟ್ಟುಕೊಂಡು ಈ ಸಿನಿಮಾವನ್ನು ರೂಪಸಿದ್ದಾರೆ. ಅದರಲ್ಲಿಯೂ ಕಥೆಯ ಓಘಕ್ಕೆ ತಕ್ಕುದಾಗಿ ಹಾಡುಗಳನ್ನು ರೂಪಿಸಲು ಒಂದು ಅನವೇಷಣೆಯನ್ನೇ ನಡೆಸಿದ್ದರಂತೆ. ಅದರ ಭಾಗವಾಗಿ ಪಂಜಾಬ್ ಮೂಲದ ಪ್ರಸಿದ್ಧ ಸಂಗೀತ ನಿರ್ದೇಶಕ ಲವ್ ಫ್ರಾನ್ ಮೆಹತ ಮಾತ್ರವಲ್ಲದೇ, ಬೇರೆ ಬೇರೆ ರಾಜ್ಯಗಳ ಗಾಯಕರನ್ನೂ ಒಂದೆಡೆ ಕಲೆಹಾಕಿದ್ದಾರೆ. ಇಂಥಾದ್ದೊಂದು ಪರಿಶ್ರಮ, ಕನಸಿನ ಪ್ರತಿಫಲವಾಗಿಯೇ ನಗುವಿನ ಹೂಗಳ ಮೇಲೆ ಚಿತ್ರದ ಒಂದೊಂದು ಹಾಡುಗಳೂ ಒಂದೊಂದು ಬೆರಗು ಹೊತ್ತು ಬಂದಿವೆ. ಇದೀಗ ಬಿಡುಗಡೆಗೊಂಡಿರುವ ಹಾಡಿನಲ್ಲಿಯೂ ಅಂಥಾ ಛಾಯೆಯಿದೆ.
ಇದು ಪರಿಶುದ್ಧ ಪ್ರೇಮ ಕಥನದ ಭೂಮಿಕೆಯಲ್ಲಿ ತೆರೆದುಕೊಳ್ಳುವ ಬದುಕಿಗೆ ಹತ್ತಿರವಾದ ಕಥನ. ಈ ಚಿತ್ರವನ್ನು ತೆಲುಗಿನ ಖ್ಯಾತ ನಿರ್ಮಾಪಕ ಕೆ.ಕೆ ರಾಧಾ ಮೋಹನ್ ಶ್ರೀ ಸತ್ಯಸಾಯಿ ಆಟ್ರ್ಸ್ ಬ್ಯಾನರಿನಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ಅಭಿ ದಾಸ್ ಹಾಗೂ ಶರಣ್ಯಾ ಶೆಟ್ಟಿ ನಾಯಕ ನಾಯಕಿಯರಾಗಿ ನಟಿಸಿದ್ದಾರೆ. ಬಲ ರಾಜವಾಡಿ, ಆಶಾ ಸುಜಯ್, ಗಿರೀಶ್ ನಂಜಪ್ಪ, ಹರ್ಷಿತ್ ಗೌಡ, ಅಭಿಷೇಕ್ ಐಯಂಗಾರ್, ಹರೀಶ್ ಚೌಹಾಣ್, ಹರ್ಷ ಗೋ ಭಟ್ ಮುಂತಾದವರ ತಾರಾಗಣ ಈ ಚಿತ್ರದಲ್ಲಿದೆ. ಪ್ರಮೋದ್ ಭಾರತೀಯ ಛಾಯಾಗ್ರಹಣ, ಅಭಿಷೇಕ್ ಐಯಂಗಾರ್ ಸಂಭಾಷಣೆ, ಲವ್ ಫ್ರಾನ್ ಮೆಹತಾ ಸಂಗೀತ ನಿರ್ದೇಶನ, ಚಂದನ್ ಪಿ ಸಂಕಲನ, ಟೈಗರ್ ಶಿವು ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.