ಜಸ್ಟ್ ಪಾಸಾದ ವಿದ್ಯಾರ್ಥಿಗಳಿಗಾಗೇ ಪ್ರಾರಂಭವಾದ ಒಂದು ಕಾಲೇಜು, ಅಲ್ಲಿ ದಾಖಲಾದ ವಿದ್ಯಾರ್ಥಿಗಳು ಅವರ ಸುತ್ತ ನಡೆಯುವ ಫ್ಯಾಮಿಲಿ ಸೆಂಟಿಮೆಂಟ್, ಗುರು ಶಿಶ್ಯರ ನಡುವಿನ ಸಂಬಂಧ, ಸಾಧನೆಯ ಕಥೆ ಹೇಳುವ ಚಿತ್ರ ಜಸ್ಟ್ ಪಾಸ್ ಈವಾರ ತೆರೆಕಂಡಿದೆ. ಚಿತ್ರದ ಕೊನೆಯಲ್ಲಿ ಡ್ರಗ್ ಸ್ಮಗ್ಲಿಂಗ್ ಎಳೆ ಕೂಡ ಎಂಟ್ರಿಯಾಗುತ್ತದೆ, ಪರೀಕ್ಷೆಯಲ್ಲಿ ಜಸ್ಟ್ಪಾಸ್ ಆದಾಗ ಆ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಬಗ್ಗೆ ಮುಂದೇನು ಅಂತ ಚಿಂತಿಸೋದು ಸಾಮಾನ್ಯ. ಅಂಥ ವಿದ್ಯಾರ್ಥಿಗಳ ಬದುಕಿಗೆ ದಾರಿದೀಪವಾಗಲೆಂದೇ ನಿವೃತ್ತ ಪ್ರಿನ್ಸಿಪಾಲ್ ದಳವಾಯಿ(ರಂಗಾಯಣ ರಘು) ಅವರು ತಮ್ಮ ಜೀವಮಾನದ ಸಂಪಾದನೆಯನ್ನೆಲ್ಲ ಹಾಕಿ ಕೆ.ವಿ,ಡಿಗ್ರೀ ಕಾಲೇಜನ್ನು ಆರಂಭಿಸುತ್ತಾರೆ, ಜೊತೆಗೆ ಹಾಸ್ಟೆಲ್ ವ್ಯವಸ್ಥೆಯನ್ನೂ ಒದಗಿಸುತ್ತಾರೆ, ಅಲ್ಲಿ ಕೇವಲ ಜಸ್ಟ್ ಪಾಸ್ ಆದವರಿಗಷ್ಟೇ ಪ್ರವೇಶ. ಆ ಕಾಲೇಜಿಗೆ ಸೇರುವ ಒಂದಷ್ಟು ಗೆಳೆಯರ ಕಥೆಯೇ ಈ ಚಿತ್ರದ ಕಥಾವಸ್ತು. ರ್ಯಾಂಕ್ ಸ್ಟೂಡೆಂಟ್ಗಳಿಗಷ್ಟೇ ಸೀಮಿತವಾದ ಕಾಲೇಜುಗಳ ನಡುವೆ ದಳವಾಯಿ ಅವರು ಮುಖ್ಯ ಮಂತ್ರಿಗಳಿಂದ ವಿಶೇಷ ಅನುಮತಿ ಪಡೆದು ಈ ಡಿಗ್ರೀ ಕಾಲೇಜನ್ನು ಪ್ರಾರಂಭಿಸುತ್ತಾರೆ. ಜಸ್ಟ್ ಪಾಸಾದ ವಿದ್ಯಾರ್ಥಿಗಳಿಗೂ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಅವಕಾಶ ನೀಡುವ ನಿಟ್ಟಿನಲ್ಲಿ ತೆರೆದುಕೊಳ್ಳುವ ಕಾಲೇಜಿನಲ್ಲಿ ಆ ಹುಡುಗರ ಆಟ, ಪಾಟ, ತುಂಟಾಟದ ಸುತ್ತ ಮೊದಲಾರ್ಧದ ಕಥೆ ಸಾಗಿದರೆ, ದ್ವಿತೀಯಾರ್ಧದಲ್ಲಿ ಹೊಸ ತಿರುವು ಪಡೆದುಕೊಳ್ಳುತ್ತದೆ, ನಾಲ್ವರು ವಿದ್ಯಾರ್ಥಿಗಳ ಬೇಜವಾಬ್ದಾರಿತನದಿಂದ ಹಲವಾರು ಎಡವಟ್ಟುಗಳು ನಡೆಯುತ್ತದೆ. ಒಮ್ಮೆ ಅವರು ಹುಡುಗಾಟಕ್ಕೆಂದು ದಳವಾಯಿ ಅವರ ಜೀಪನ್ನು ಹೊರಗೆ ತೆಗೆದುಕೊಂಡು ಹೋದಾಗ ಅಲ್ಲೊಂದು ಘಟನೆ ನಡೆಯುತ್ತದೆ. ಅದರಿಂದ ದಳವಾಯಿ ಅವರು ಜೈಲು ಸೇರಬೇಕಾಗುತ್ತದೆ. ತಾವು ಮಾಡಿದ ತಪ್ಪಿನಿಂದಾಗ ತಮ್ಮ ಪ್ರಿನ್ಸಿಪಾಲರು ಶಿಕ್ಷೆ ಅನುಭವಿಸುವಂತಾದಾಗ ಆ ಹುಡುಗರೆಲ್ಲ ಸೇರಿ ತಾವು ರಾಜ್ಯಕ್ಕೇ ಫಸ್ಟ್ ಬರುವ ಮೂಲಕ ದಳವಾಯಿ ಅವರ ಕನಸನ್ನು ನನಸು ಮಾಡಲು ಪಣತೊಟ್ಟು ಹಗಲೂರಾತ್ರಿ ಕಷ್ಟಪಟ್ಟು ಓದುತ್ತಾರೆ, ಅಂದುಕೊಂಡ ಹಾಗೆ ಕೆವಿ ಕಾಲೇಜಿಗೆ ರಾಜ್ಯಕ್ಕೇ ಪ್ರಥಮ ಸ್ಥಾನ ತಂದುಕೊಡುತ್ತಾರೆ. ಆ ಕಾಲೇಜಲ್ಲೇ ಓದುತ್ತಿರುವ ಅನಾಥ ಹುಡುಗ ನಾಯಕ ಅರ್ಜುನ್ (ಶ್ರೀ), ಚಿಕ್ಕ ವಯಸಿನಲ್ಲೇ ತಂದೆ, ತಾಯಿ ಕಳೆದುಕೊಂಡು ಅಜ್ಜ ಅಜ್ಜಿಯ ಆಶ್ರಯದಲ್ಲೇ ಬೆಳೆದ ನಾಯಕಿ ಅಕ್ಷರ(ಪ್ರಣತಿ) ಇವರಿಬ್ಬರ ಪ್ರೇಮಕಥೆಯೂ ಚಿತ್ರದ ಒಂದು ಭಾಗವಾಗಿದೆ. ನಾಯಕ ಶ್ರೀ ತಮ್ಮ ಲವಲವಿಕೆಯ ಅಭಿನಯದ ಮೂಲಕವೇ ಅರ್ಜುನನ ಪಾತ್ರಕ್ಕೆ ಜೀವ ತುಂಬಿ ಅಭಿನಯಿಸಿದ್ದಾರೆ, ಇನ್ನು ನಾಯಕಿ ಪ್ರಣತಿ ಕೂಡ ಅಕ್ಷರಳ ಪಾತ್ರವನ್ನು ಉತ್ಸಾಹದಿಂದಲೇ ನಿರ್ವಹಿಸಿದ್ದಾರೆ, ಇವರಿಬ್ಬರ ಜೋಡಿ ಚಿತ್ರದ ಹೈಲೈಟ್, ಪಾಲೇಜು ಪ್ರಾಂಶುಪಾಲರಾಗಿ ರಂಗಾಯಣ ರಘು ಅವರದು ಮಾಗಿದ ಅಭಿನಯ, ಇನ್ನು ಜಿಜಿ, ಸಾಧು ತಮ್ಮ ಹಾವ ಭಾವದಿಂದಲೇ ಪ್ರೇಕ್ಷಕರಲ್ಲಿ ನಗು ಹುಟ್ಟಿಸುತ್ತಾರೆ, ಉಳಿದಂತೆ ವಿದ್ಯಾರ್ಥಿಗಳಾದ ಚಂದುಶ್ರೀ, ವಿಶ್ವಾಸ್, ಅಭಿಷೇಕ್, ಅರ್ಪಿತ, ಗಗನ್ ಸೇರಿದಂತೆ ಉಳಿದೆಲ್ಲ ಕಲಾವಿದರು ಚಿತ್ರದ ಓಟಕ್ಕೆ ಉತ್ತಮ ಸಾತ್ ನೀಡಿದ್ದಾರೆ. ಶರಣ್ ಕಂಠಸಿರಿಯಲ್ಲಿ ಮೂಡಿಬಂದಿರುವ ಎಕ್ಸ್ಕ್ಯೂಸ್ಮಿ ಕೇಳಿ ನನ್ನ ಲೆಕ್ಚರ್ರು ಹಾಡು ಸಖತ್ ಇಂಟರೆಸ್ಟಿಂಗ್ ಆಗಿದೆ, ಜೊತೆಗೆ ಹರ್ಷವರ್ಧನರಾಜ್ ಅವರ ಸಂಗೀತ ಕಥೆಗೆ ಪೂರಕವಾಗಿದೆ, ಅದೇ ರೀತಿ ಛಾಯಾಗ್ರಾಹಕ ಸುಜಯ್ಕುಮಾರ್ ಅವರ ಕ್ಯಾಮೆರಾವರ್ಕ್ ಕೂಡ ಉತ್ತಮವಾಗಿದೆ. ಒಟ್ಟಾರೆ ಯಾವುದೇ ಮುಜುಗರವಿಲ್ಲದೆ ಎಲ್ಲರೂ ನೋಡುವಂತ ಚಿತ್ರ ಇದಾಗಿದೆ.