ನಾಯಕ ಅತಿಶಯ್ (ವಿನಯ್ ರಾಜ್‌ಕುಮಾರ್), ರಿಪೋರ್ಟರ್ ಅನುರಾಗ (ಸ್ವಾತಿಷ್ಠ ಕೃಷ್ಣನ್) ಹಾಗೂ ಯುವ ಗಾಯಕಿ ಮಧುರ (ಮಲ್ಲಿಕಾಸಿಂಗ್) ಈ ಮೂರು ಪಾತ್ರಗಳ ಮಧ್ಯೆ ಪ್ರೀತಿ, ಪ್ರೇಮದ ಸುತ್ತ ನಡೆಯೋ ಲವ್ ಸ್ಟೋರಿಯನ್ನು ನಿರ್ದೇಶಕ ಸಿಂಪಲ್ ಸುನಿ ಹೇಳಲು ಪ್ರಯತ್ನಿಸಿದ್ದಾರೆ. ನಾಯಕ ಅತಿಶಯ್‌ಗೆ ಸಂಗೀತವೇ ಜೀವನ. ತನಿಷ್ಟದಂತೆ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಸೌಂಡ್ ಇಂಜಿನಿಯರ್ ಆಗಿರುತ್ತಾನೆ. ಮನೆಯಲ್ಲಿ ತಂದೆ, ತಾಯಿ, ಅಜ್ಜಿ, ಅಣ್ಣ, ಅತ್ತಿಗೆ ಎಲ್ಲ ಒಟ್ಟಾಗಿರುವ ಕೂಡು ಕುಟುಂಬ, ಇವರ ಜೊತೆಗೆ ಅತಿಶಯ್ ತಂದೆಯ ಸ್ನೇಹಿತನ ಪತ್ನಿ ಹಾಗೂ ಮಗಳದೂ(ಅನುರಾಗ) ಅಲ್ಲೇ ವಾಸ, ಆಕೆಗೊಂದು ಮದುವೆ ಮಾಡುವ ಜವಾಬ್ದಾರಿ ಅತಿಶಯ್ ತಂದೆಯ ಮೇಲಿರುತ್ತದೆ, ಇನ್ನು ಅತಿಶಯಗೆ ಸಂಗೀತದಲ್ಲಿ ದೊಡ್ಡ ಹೆಸರು ಮಾಡಬೇಕು ಎನ್ನುವ ಮಹದಾಸೆ.
ಅನುರಾಗ ದಿಟ್ಟ ಪತ್ರಕರ್ತೆ, ರಾಜಕಾರಣಿಗಳ ರೆಸಾರ್ಟ್ ರಾಜಕೀಯ, ಅದರ ಹಿಂದಿರುವ ಸತ್ಯವನ್ನು ದಾಖಲೆ ಸಮೇತ ಹೊರಹಾಕಲು ಮುಂದಾಗಿ ರಾಜಕಾರಣಿಗಳ ಕೆಂಗಣ್ಣಿಗೂ ಗುರಿಯಾಗಿರುತ್ತಾಳೆ. ಒಮ್ಮೆ ಸ್ಟ್ರಿಂಗ್ ಆಪರೇಶನ್ ಅಂತ ಮುಂಬೈಗೆ ಹೋಗಿ ಅಲ್ಲಿ ಅಪಘಾತಕ್ಕೀಡಾಗುತ್ತಾಳೆ, ಆಗ ರಾಜಸ್ಥಾನ ಮೂಲದ ವ್ಯಕ್ತಿಯೊಬ್ಬರು, ಆಕೆಯನ್ನು ಆಸ್ಪತ್ರೆಗೆ ಸೇರಿಸಿ, ಲಕ್ಷಾಂತರ ರೂ.ಗಳ ಚಿಕಿತ್ಸಾ ವೆಚ್ಚವನ್ನೂ ಭರಿಸಿ, ಆಕೆಗೆ ಪ್ರಜ್ಞೆ ಬರುವ ಮುಂಚೆಯೇ ಹೊರಟು ಹೋಗಿರುತ್ತಾರೆ. ಗುರುತು ಪರಿಚಯವಿಲ್ಲದ ಊರಲ್ಲಿ, ತನ್ನನ್ನು ರಕ್ಷಿಸಿ, ಜೀವ ಉಳಿಸಿದ ಆ ವ್ಯಕ್ತಿಯನ್ನು ಹುಡುಕಿಕೊಂಡು ಅನುರಾಗ ರಾಜಸ್ಥಾನಕ್ಕೆ ಬರುತ್ತಾಳೆ. ಇನ್ನು ನಾಯಕ ಅತಿಶಯ್ ಮನಸಿನಲ್ಲಿ ಸದಾ ಕಾಡುವ ಹಾಡನ್ನು ಕೇಳಿ ಫಿದಾ ಆದ ಅತಿಶಯ್, ಅದನ್ನು ಹಾಡಿದ ಕಂಠ ಯಾವುದೆಂದು ಹುಡುಕಾಡುತ್ತಾನೆ. ಸಾಧು ತಂಡ ರಿಯಾಲಿಟಿ ಶೋಗಾಗಿ ನಡೆಸಿದ ಆಡಿಷನ್ ಸಂದರ್ಭದಲ್ಲಿ ಮಧುಳನ್ನು ನೋಡುತ್ತಾನೆ. ಆಕೆಯ ಸ್ನೇಹ ಗಳಿಸಲು ಗೆಳೆಯರ ಜತೆಗೂಡಿ ಪ್ಲಾನ್ ಮಾಡಿ, ಆಕೆಗೆ ಹಾಡೋ ಅವಕಾಶ ನೀಡುವ ಜೊತೆಗೆ ತನ್ನ ಮನದ ಪ್ರೀತಿಯನ್ನು ಹೇಳಿಕೊಳ್ಳಲು ಚಡಪಡಿಸುತ್ತಾನೆ. ಇದೇ ಸಂದರ್ಭದಲ್ಲಿ ನಾಯಕನ ಅಜ್ಜಿಗೆ ಆನಾರೋಗ್ಯದ ಕಾರಣ ಆಕೆಯ ಆಸೆಯಂತೆ ಅತಿಶಯ ಹಾಗೂ ಅನುರಾಗ ಇಬ್ಬರಿಗೂ ಹಾಸ್ಪಿಟಲ್‌ನಲ್ಲೇ ರಿಜಿಸ್ಟರ್ ಮದುವೆಯಾಗುತ್ತದೆ. ಆದರೆ ಈ ಮದುವೆ ಇವರಿಬ್ಬರಿಗೂ ಇಷ್ಟವಿಲ್ಲ. ಇಬ್ಬರೂ ಡೈವರ್ಸ್ ಪಡೆಯಲು ನಿರ್ಧರಿಸುತ್ತಾರೆ. ಮನೆಯಲ್ಲಿ ಹನಿಮೂನ್‌ಗೆ ಹೋಗುವುದಾಗಿ ಹೇಳಿ, ತಾವು ಪ್ರೀತಿಸುತ್ತಿರುವ, ಹೃದಯಗಳನ್ನು ಹುಡುಕಿಕೊಂಡು ಬರುತ್ತಾರೆ. ಅವರಿಬ್ಬರಿಗೂ ತಾವು ಹುಡುಕುತ್ತಿರುವವರು ಸಿಗುತ್ತಾರಾ ಇಲ್ವಾ ಅನ್ನೋ ಹೊತ್ತಿಗೆ ಚಿತ್ರಕಥೆ ಮತ್ತೊಂದು ತಿರುವು ಪಡೆದುಕೊಳ್ಳುತ್ತದೆ, ಅಲ್ಲಿ ಪ್ರೇಕ್ಷಕ ನಿರೀಕ್ಷಿಸಿದರ ಹಾಗೆ ಕಥೆ ಕಂಟಿನ್ಯೂ ಆಗುತ್ತದೆ, ವಿಶೇಷ ಎಂದರೆ ಒಂದು ಹಂತದಲ್ಲಿ ಪ್ರೇಕ್ಷಕ ಚಿತ್ರ ಮುಗಿದುಹೋಯ್ತು ಅಂದುಕೊಳ್ಳುತ್ತಿರುವಾಗಲೇ ಮತ್ತೊಂದು ಕ್ಲೈಮ್ಯಾಕ್ಸ್ ಬರುತ್ತದೆ, ಒಂದು ಸರಳ ಪ್ರೇಮಕಥೆ ಚಿತ್ರದ ಹೈಲೈಟ್ ಎಂದರೆ ಸಂಗೀತಕ್ಕಿರುವ ಶಕ್ತಿ, ಕುಟುಂಬದ ನಡುವಿನ ಬಾಂಧವ್ಯ, ಪ್ರೀತಿಗಿರುವ ಸೆಳೆತ ಹೀಗೆ ಒಂದಷ್ಟು ಅಂಶಗಳನ್ನು ಪಟ್ಟಿ ಮಾಡಬಹುದು. ವೀರ್ ಸಮರ್ಥ್ ಅವರ ಸಂಗೀತ ಈ ಚಿತ್ರದ ಪ್ಲಸ್ ಪಾಯಿಂಟ್. ಅದೇರೀತಿ ಛಾಯಾಗ್ರಾಹಕ ಕಾರ್ತಿಕ್ ಅವರ ಕೈಚಳಕದಲ್ಲಿ ರಾಜಸ್ಥಾನದ ನೇಚರ್ ಅದ್ಭುತವಾಗಿ ಮೂಡಿಬಂದಿದೆ. ಇನ್ನು ನಾಯಕ ವಿನಯ್ ರಾಜ್ ಕುಮಾರ್ ತಮ್ಮ ಪಾತ್ರಕ್ಕೆ ಜೀವತುಂಬಿ ಅಭಿನಯಿಸಿದ್ದಾರೆ. ಹಾಗ ನಾಯಕಿಯರಿಬ್ಬರೂ ಚೆನ್ನಾಗಿ ಅಭಿನಯಿಸಿದ್ದು, ಅಚ್ಚಕನ್ನಡ ಪ್ರತಿಭೆ ಸ್ವಾತಿಷ್ಠ ಕೃಷ್ಣನ್ ಅವರ ಪಾತ್ರಕ್ಕೆ ಹೆಚ್ಚು ಅವಕಾಶ ಸಿಕ್ಕಿದೆ, ಮಲ್ಲಿಕಾಸಿಂಗ್ ಪಾತ್ರ ಹೀಗೆ ಬಂದು ಹಾಗೆ ಹೋಗುತ್ತದೆ. ವಿಶೇಷ ಪಾತ್ರದಲ್ಲಿ ರಾಘವೇಂದ್ರ ರಾಜಕುಮಾರ್ ಕಾಣಿಸಿಕೊಂಡಿದ್ದಾರೆ,