ಮಗನನ್ನು ಹೀರೋ ಮಾಡಲು ತಂದೆ ಬಂಡವಾಳ ಹಾಕೋದು ಸಾಮಾನ್ಯ, ಆದರೆ ಮಗನ ಚಿತ್ರಕ್ಕಾಗಿ ತಂದೆಯೇ ನಿರ್ದೇಶನ ಮಾಡಿರುವುದು ವಿಶೇಷ. ಅಂಥಾದ್ದೊಂದು ಚಿತ್ರವೆ ಅಗ್ನಿಲೋಕ. ಇದೇ ಮಾರ್ಚ್ ನಲ್ಲಿ ಬಿಡುಗಡೆಗೆ ಸಿದ್ದವಾಗಿರುವ ಈ ಚಿತ್ರದ ಮೂಲಕ ಹಿರಿಯ ಛಾಯಾಗ್ರಾಹಕ, ನಿರ್ಮಾಪಕ, ನಿರ್ದೇಶಕ ಹಾಗೂ ನಿರ್ಮಾಪಕರ ಸಂಘದ ಪ್ರಥಮ ಅಧ್ಯಕ್ಷರೂ ಆಗಿದ್ದ ಹೆಚ್.ಎಂ.ಕೆ. ಮೂರ್ತಿ ಅವರ ಮೊಮ್ಮಗ ಯಶಸ್ವಾ ಪ್ರಥಮ ಬಾರಿಗೆ ನಾಯಕನಾಗಿ ಎಂಟ್ರಿಕೊಡುತ್ತಿದ್ದಾರೆ. ಈ ಚಿತ್ರಕ್ಕೆ ಅವರ ತಂದೆ ರಾಜೇಶ್ ಮೂರ್ತಿ ಅವರೇ ಆಕ್ಷನ್ ಕಟ್ ಹೇಳಿದ್ದಾರೆ.
ಎಮೋಷನಲ್ ಹಾಗೂ ಆಕ್ಷನ್ ಥ್ರಿಲ್ಕರ್ ಕಥಾಹಂದರ ಹೊಂದಿರುವ ಅಗ್ನಿಲೋಕ ಚಿತ್ರವನ್ನು ಇತ್ತೀಚೆಗಷ್ಟೇ ವೀಕ್ಷಿಸಿದ ಸೆನ್ಸಾರ್ ಮಂಡಳಿ ಯು/ಎ ಸರ್ಟಿಫಿಕೇಟ್ ನೀಡಿದೆ.
ಅಜ್ಜ ತಂದೆಯಂತೆಯೇ ಚಿತ್ರರಂಗದಲ್ಲಿ ಕಲಾವಿದ, ತಂತ್ರಜ್ಞನಾಗಿ ಮುಂದುವರಿಯಬೇಕೆಂಬ ಮಹದಾಸೆ ಹೊತ್ತಿರುವ ಯಶಸ್ವಾ ಈಗಾಗಲೇ ಅದಕ್ಕೆ ಬೇಕಾದ ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡಿದ್ದಾರೆ.
ಈ ಹಿಂದೆ ಲಿಪ್ ಸ್ಟಿಕ್ ಮರ್ಡರ್, ಜೋಕರ್ ಜೋಕರ್, ಸೈಕೋಮ್ಯಾಕ್ಸ್ ನಂಥ ಕ್ರೈಂ, ಥ್ರಿಲ್ಲರ್ ಚಿತ್ರಗಳನ್ನೇ ಮಾಡಿಕೊಂಡು ಬಂದಿದ್ದ ರಾಜೇಶ್ ಮೂರ್ತಿ ಅವರು ಇದೇ ಮೊದಲ ಬಾರಿಗೆ ಆಕ್ಷನ್ ಥ್ರಿಲ್ಲರ್ ಚಿತ್ರಕ್ಕೆ ಕೈ ಹಾಕಿದ್ದಾರೆ. ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿ ಸಂಕಲನದ ಕೆಲಸವನ್ನೂ ನಿರ್ವಹಿಸಿದ್ದಾರೆ.
ಬೆಂಗಳೂರು, ಕೆಜಿಎಫ್, ಮಂಡ್ಯ, ಚಿಕ್ಕಮಗಳೂರು ಸುತ್ತಮುತ್ತ ಸುಮಾರು 30 ದಿನಗಳ ಕಾಲ ಈ ಚಿತ್ರದ ಚಿತ್ರೀಕರಣ ನಡೆಸಲಾಗಿದೆ.
ವಿಷ್ಣು ಪುಷ್ಪ ಫಿಲಂಸ್ ಮೂಲಕ ಶ್ರೀಮತು ಪುಷ್ಪ ಮಂಜುನಾಥ್ ಅವರು ಈ ಚಿತ್ರವನ್ನು ಅದ್ದೂರಿ ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿದ್ದಾರೆ.
ಮಂಜುಶ್ರೀ ಈ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಬಹಳ ವರ್ಷಗಳ ನಂತರ ನೆಲ ನರೇಂದ್ರಬಾಬು ಅವರ ಸಹೋದರ ನೆಲ ಮಹೇಶ್, ನಾಯಕನ ತಂದೆಯಾಗಿ ನಟಿಸಿದ್ದಾರೆ. ಬಿ.ಎಸ್. ಮಂಜುನಾಥ್, ಅಜಿತ್ ಕುಮಾರ್, ಪ್ರಮೋದ್ ಹಿರೇಮಠ್ ಉಳಿದ ತಾರಾಗಣದಲ್ಲಿದ್ದಾರೆ. ವಿನೋದ್ ಅವರ ಛಾಯಾಗ್ರಹಣ, ನಿತೀಶ್ ಕುಮಾರ್ ಅವರ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ.