ಇಂದಿನಿಂದ "ಐ ಪಿ ಎಲ್" ಆರಂಭ ಮೊದಲ ಪಂದ್ಯದಲ್ಲೇ ಆರ್ ಸಿ ಬಿ ಆಡಲಿದೆ. ಇತ್ತೀಚೆಗಷ್ಟೇ ನಡೆದ WPL ನಲ್ಲಿ ಆರ್ ಸಿ ಬಿ ಮಹಿಳಾ ತಂಡದವರು ಕಪ್ ಗೆದ್ದಿದ್ದಾರೆ. ಈ ಬಾರಿಯ "ಐ ಪಿ ಎಲ್" ನಲ್ಲೂ ನಮ್ಮ ಆರ್ ಸಿ ಬಿ ಕಪ್ ಗೆದ್ದೆ ಗೆಲ್ಲುತ್ತದೆ ಎಂಬ ವಿಶ್ವಾಸದ ಮಾತು ಎಲ್ಲಾ ಕಡೆ ಕೇಳಿ ಬರುತ್ತಿದೆ.
ಆರ್ ಸಿ ಬಿ ತಂಡವನ್ನು ಹುರಿದುಂಬಿಸುವ "ಜಿಂಗಲ ಜೈ" ಎಂಬ ಹಾಡನ್ನು ಖ್ಯಾತ ಸಾಹಿತಿ ಹಾಗೂ ನಿರ್ದೇಶಕ ಯೋಗರಾಜ್ ಭಟ್ ಬರೆದಿದ್ದಾರೆ. "ಜಿಂಗಲ ಜೈ" ಎಂದು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಡಿದ್ದಾರೆ. ಇದು ಧ್ರುವ ಸರ್ಜಾ ಅವರು ಹಾಡಿರುವ ಮೊದಲ ಹಾಡು ಕೂಡ. ಧ್ರುವ ಸರ್ಜಾ ಅವರೊಟ್ಟಿಗೆ ಗಾಯನಕ್ಕೆ ಯೋಗರಾಜ್ ಭಟ್, ಉತ್ತರ ಕರ್ನಾಟಕದ ಪ್ರತಿಭೆ ಮಾಳು ನಿಪನಾಳ ಹಾಗೂ ಚೇತನ್ ಸೋಸ್ಕಾ ಅವರು ಜೊತೆಯಾಗಿದ್ದಾರೆ. ಚೇತನ್ ಸೋಸ್ಕಾ ಅವರೆ ಸಂಗೀತ ನೀಡಿದ್ದಾರೆ. ರೇಣುಕಾ ಯೋಗರಾಜ್ ಭಟ್ ಈ ಹಾಡನ್ನು ನಿರ್ಮಾಣ ಮಾಡಿದ್ದಾರೆ. ಯೋಗರಾಜ್ ಭಟ್ ನಿರ್ದೇಶಿಸಿದ್ದಾರೆ. ನಿರ್ದೇಶಕ ಎ.ಪಿ.ಅರ್ಜುನ್, ಡ್ಯಾನಿಶ್ ಸೇಠ್, ಮಣಿಕಂಠನ್ ಮುಂತಾದವರು ಈ ಹಾಡಿಗೆ ಸಹಕಾರ ನೀಡಿದ್ದಾರೆ. ಅಭಿರಾಜ್, ಶಿವ್ ಪಾಟೀಲ್ , ರಾಕೇಶ್ ರಾಮ್ ಅವರ ಛಾಯಾಗ್ರಹಣ, ಸಚಿನ್ ಕೆ ರಾಮು ಸಂಕಲನ, ಗುಡ್ಡು ರಾಜ್ ನೃತ್ಯ ನಿರ್ದೇಶನ ಹಾಗೂ ಗಡ್ಡ ವಿಜಿ ಅವರ ಕಲಾ ನಿರ್ದೇಶನವಿರುವ "ಜಿಂಗಲ ಜೈ" ಹಾಡು ಪಂಚರಂಗಿ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಧ್ರುವ ಸರ್ಜಾ, ಉತ್ತರ ಕರ್ನಾಟಕದ ಪ್ರತಿಭೆ ಮಾಳು ನಿಪನಾಳ, ಕನ್ನಡದ ಮಕ್ಕಳು ಹಾಗೂ ಆರ್ ಸಿ ಬಿ ಅಭಿಮಾನಿಗಳು ಈ ಹಾಡಿನಲ್ಲಿ ಅಭಿನಯಿಸಿದ್ದಾರೆ.