ರಾಜ್ ಪ್ರಿಯ ಪ್ರೊಡಕ್ಷನ್ಸ್ ಲಾಂಛನದಲ್ಲಿ ಹೆಚ್ ಸೋಮಶೇಖರ್ ನಿರ್ಮಿಸಿರುವ ಹಾಗೂ ಆರನ್ ಕಾರ್ತಿಕ್ ವೆಂಕಟೇಶ್ ನಿರ್ದೇಶನದ "ಪಂಚೇಂದ್ರಿಯಂ" ಚಿತ್ರದ ಹಾಡುಗಳು ಹಾಗೂ ಟೀಸರ್ ಇತ್ತೀಚಿಗೆ ಬಿಡುಗಡೆಯಾಯಿತು. ಕವಿರತ್ನ ಡಾ||ವಿ.ನಾಗೇಂದ್ರ ಪ್ರಸಾದ್ ಟೀಸರ್ ಹಾಗೂ ಹಾಡುಗಳನ್ನು ಲೋಕಾರ್ಪಣೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ನಂತರ ಚಿತ್ರತಂಡದ ಸದಸ್ಯರು ಚಿತ್ರಡ ಕುರಿತು ಮಾತನಾಡಿದರು.
ದೃಷ್ಟಿ, ಶ್ರವಣ, ವಾಸನೆ, ರುಚಿ ಹಾಗೂ ಸ್ಪರ್ಶ ಇವು ಮಾನವನ ದೇಹವನ್ನು ರೂಪಿಸುವ ಐದು ಅಂಗಗಳು. ಈ "ಪಂಚೇಂದ್ರಿಯ" ಗಳನ್ನು ದೇವರು ಸದ್ಬಳಿಕೆಗಾಗಿ ನೀಡಿದ್ದಾನೆ. ನಾವು ಅದನ್ನು ದುರ್ಬಳಿಕೆ ಮಾಡಿಕೊಂಡಾಗ ಏನಾಗುತ್ತದೆ ಎಂಬುದೆ ಈ ಚಿತ್ರದ ಪ್ರಮುಖ ಕಥಾಹಂದರ. ಚಿತ್ರದಲ್ಲಿ ಆರು ಹಾಡುಗಳಿದೆ. ನಾನೇ ಸಂಗೀತ ನೀಡಿದ್ದೇನೆ. ನಾಲ್ಕು ಸಾಹಸ ಸನ್ನಿವೇಶಗಳಿದೆ. ಹೆಚ್ ಸೋಮಶೇಖರ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಅಫ್ಜಲ್ ಅವರು ಈ ಚಿತ್ರದ ದ್ವಿತೀಯ ನಾಯಕನಾಗಿ ಅಭಿನಯಿಸಿರುವುದಲ್ಲದೆ ಕಾರ್ಯಕಾರಿ ನಿರ್ಮಾಪಕರಾಗೂ ಕಾರ್ಯ ನಿರ್ವಹಿಸಿದ್ದಾರೆ. ವಿನಯ್ ಸೂರ್ಯ ಈ ಚಿತ್ರದ ನಾಯಕರಾಗಿ ಹಾಗೂ ವಿದ್ಯಾಶ್ರೀ ಮತ್ತು ರಾಘವಿ ನಾಯಕಿಯರಾಗಿ ನಟಿಸಿದ್ದಾರೆ. ದೇವರಾಯನದುರ್ಗ, ದಾಬಸ್ ಪೇಟೆ ಮುಂತಾದ ಕಡೆ ಚಿತ್ರೀಕರಣವಾಗಿದೆ. ಅಂದುಕೊಂಡ ಹಾಗೆ ಆದರೆ ಏಪ್ರಿಲ್ ನಲ್ಲಿ ಚಿತ್ರ ತೆರೆಗೆ ಬರಲಿದೆ ಎಂದು ನಿರ್ದೇಶಕ ಆರನ್ ಕಾರ್ತಿಕ್ ವೆಂಕಟೇಶ್ ತಿಳಿಸಿದರು.
ಇದು ನಮ್ಮ ಸಂಸ್ಥೆಯ ನಿರ್ಮಾಣದ ಎರಡನೇ ಚಿತ್ರ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕ ಹೆಚ್ ಸೋಮಶೇಖರ್ .
ಈ ಚಿತ್ರದಲ್ಲಿ ಪ್ರಮುಖ ಪಾತ್ರದೊಂದಿಗೆ ಕಾರ್ಯಕಾರಿ ನಿರ್ಮಾಪಕನಾಗಿಯೂ ಕೆಲಸ ಮಾಡಿರುವುದಾಗಿ ಅಫ್ಜಲ್ ಹೇಳಿದರು.
"ಜಕ್ಕಣಾಚಾರಿ ಅವನ ತಮ್ಮ ಶುಕ್ಲಾಚಾರಿ" ಚಿತ್ರದಲ್ಲಿ ಬಾಲನಟನಾಗಿ ಅಭಿಯಿಸಿದ್ದ ನಾನು, ಈ ಚಿತ್ರದ ಮೂಲಕ ನಾಯಕನಾಗಿದ್ದೇನೆ ಎಂದರು ವಿನಯ್ ಸೂರ್ಯ. ಚಿತ್ರದಲ್ಲಿ ಅಭಿನಯಿಸಿರುವ ಯತಿರಾಜ್, ವಿಕ್ಟರಿ ವಾಸು, ಗಣೇಶ್ ರಾವ್ ಹಾಗೂ ಪವನ್ ತಮ್ಮ ಪಾತ್ರದ ಬಗ್ಗೆ ಮಾಹಿತಿ ನೀಡಿದರು. ಸಿರಿಮ್ಯೂಸಿಕ್ ನ ಸುರೇಶ್ ಚಿಕ್ಕಣ್ಣ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.