Chief Editor
Manohar. R (Manu)
Photo Journalist
chitrataramanu@gmail.com
+91 9845549026
ಹಳ್ಳಿಗೆ ಸಿಎಂ ಕರೆಸಿದ ಕೃಷ್ಣಪ್ಪನ ಕಥೆ.....ರೇಟಿಂಗ್: 3.5/5 ****
Posted date: 25 Sat, May 2024 09:03:45 AM
ಚಿತ್ರ : ಮೂರನೇ ಕೃಷ್ಣಪ್ಪ
ನಿರ್ದೇಶನ : ನವೀನ್ ರೆಡ್ಡಿ 
ನಿರ್ಮಾಣ : ಮೋಹನ್ ರೆಡ್ಡಿ , ಜಿ.ರವಿಶಂಕರ್
ಸಂಗೀತ : ಆನಂದ್ ರಾಜಾ ವಿಕ್ರಮ್
ಛಾಯಾಗ್ರಹಣ : ಯೋಗಿ
ತಾರಾಗಣ : ರಂಗಾಯಣ ರಘು , ಸಂಪತ್ ಮೈತ್ರಿಯಾ, ಆನಂದ್, ತುಕಾಲಿ ಸಂತು, ಶ್ರೀಪ್ರಿಯಾ , ಮುನಿಯಪ್ಪ ಆನೇಕಲ್, ಉಗ್ರಂ ಮಂಜು ಇತರರು.
    
ಈ ಹಿಂದೆ ತಿಥಿ ಎಂಬ ಸಿನಿಮಾ ಮೂಲಕ ಮಂಡ್ಯ ಭಾಗದ ಭಾಷೆಯ ಸೊಗಡಿನ ಕಥೆ ಬಂದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಈವಾರ ಕೂಡ ಅಂಥದೇ ಮತ್ತೊಂದು ಚಿತ್ರ ತೆರೆಕಂಡು ಪ್ರೇಕ್ಷಕರನ್ನು ರಂಜಿಸುತ್ತಿದೆ. ನವೀನ್ ರೆಡ್ಡಿ ಅವರ ನಿರ್ದೇಶನದ ಮೂರನೇ ಕೃಷ್ಣಪ್ಪ ಅಪ್ಪಟ ಬೆಂಗಳೂರು ಗ್ರಾಮೀಣ ಭಾಗದ  ಭಾಷೆಯ ಸೊಗಡಿನ ಜೊತೆಗೆ ಹಳ್ಳಿಗಳಲ್ಲಿ ನಡೆಯುವ ರಾಜಕೀಯ ದೊಂಬರಾಟ, ಗ್ರಾಮ ಪಂಚಾಯ್ತಿ ಚುನಾವಣೆಗಳಲ್ಲಿ ಜನರನ್ನು ಆಕರ್ಷಿಸಲು ಅಭ್ಯರ್ಥಿಗಳು ಏನೆಲ್ಲ ಮಾಡುತ್ತಾರೆ ಎಂಬುದನ್ನು ಸಂಪೂರ್ಣ ಹಾಸ್ಯಮಯವಾಗಿ ಹೇಳುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ನವೀನ್ ರೆಡ್ಡಿ. ಕೋಲಾರ, ಆನೇಕಲ್ ಭಾಗದ ಹಳ್ಳಿಗಳ ಜನರ ನಡೆ-ನುಡಿಗಳನ್ನು ಚಿತ್ರದಲ್ಲಿ ತುಂಬಾ ನೈಜವಾಗಿ ತಂದಿದ್ದಾರೆ. ಗ್ರಾಮದ ಮುಖಂಡನ ಚುನಾವಣಾ ತಂತ್ರಗಾರಿಕೆ , ಹಿಂಬಾಲಕರು ಮಾಡುವ  ಎಡವಟ್ಟು ಇದನ್ನೆಲ್ಲ ಕಾಮಿಡಿಯಾಗೇ ನಿರೂಪಿಸಿದ್ದಾರೆ‌. ಹಳ್ಳಿಗಳಲ್ಲಿ ಸ್ವಲ್ಪ ಬುದ್ದಿವಂತರೆಂದರೆ ಶಿಕ್ಷಕರು. ಗ್ರಾಮದ ಮುಖಂಡ ವೀರಣ್ಣ (ರಂಗಾಯಣ ರಘು) ಮುಂದೆ ನಡೆಯಲಿರುವ ಗ್ರಾ.ಪಂ. ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನ ಗೆಲ್ಲಲು ಜನರ ಮನಗೆಲ್ಲಲು  ಊರಲ್ಲಿ ಗಣಪನ ಪ್ರತಿಷ್ಠಾಪನೆ  ಮಾಡಲು ಮುಂದಾಗುತ್ತಾನೆ. ದೇವಸ್ಥಾನದ ಉದ್ಘಾಟನೆಗೆ ಖ್ಯಾತ ಹಾಸ್ಯ ನಟ ಮೈಕಲ್ ಮಧು ಅವರನ್ನು ಕರೆಸಿ, ದೊಡ್ಡ ಮನುಷ್ಯನೆನಿಸಿಕೊಳ್ಳಲು ಮುಂದಾಗುತ್ತಾನೆ. ಆದರೆ ಅದು ಕೈಗೂಡುವುದಿಲ್ಲ.
 ಮುಂದೇನು ಮಾಡಬೇಕೆಂಬ ಚಿಂತೆಯಲ್ಲಿದ್ದಾಗ ಆತನ ಹಿಂಬಾಲಕರು ಶಿಕ್ಷಕ ಕೃಷ್ಣಪ್ಪ (ಸಂಪತ್ ಮೈತ್ರೀಯಾ)ನಿಗೆ ಸಿಟಿಯಲ್ಲಿ ಸಾಕಷ್ಟು ಜನರ ಕಾಂಟ್ಯಾಕ್ಟ್ ಇದೆ ಎಂದು ಹೇಳುತ್ತಾರೆ.
 
ಅದರಂತೆ  ಕೃಷ್ಣಪ್ಪನನ್ನು ಕರೆಸಿ ಕೇಳಿದಾಗ ಬೆಂಗಳೂರಿನಲ್ಲಿರುವ ತನ್ನ ಗೆಳೆಯ(ಆನಂದ್)ನ ಮೂಲಕ ಸಿಎಂ.ರನ್ನೇ  ಗ್ರಾಮಕ್ಕೆ ಕರೆಸುವ ಭರವಸೆ ನೀಡುತ್ತಾನೆ.  ಆಗ ವೀರಣ್ಣ ತಾನು ಗೆದ್ದಷ್ಟೇ ಖುಷಿಪಡುತ್ತಾನೆ. ಇದರ ನಡುವೆ ವೀರಣ್ಣನ ಮಗಳು ಶಶಿ (ಸಿರಿಪ್ರಿಯಾ) ಹಾಗೂ ಕೃಷ್ಣಪ್ಪನ ಲವ್ ಟ್ರ್ಯಾಕ್ ಕೂಡ ಸಾಗುತ್ತದೆ. ಊರಿಗೆ ಸಿಎಂ ಬರುತ್ತಾರೆಂದಾಗ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲು ತಾಳ ಮೇಳಗಳ ವ್ಯವಸ್ಥೆಯನ್ನೂ ತಾನೇ ಮಾಡುವುದಾಗಿ ಹೇಳಿದ ಆನಂದ್ ವೀರಣ್ಣನಿಂದ ಮೂರು ಲಕ್ಷ ಹಣ  ಪಡೆಯುತ್ತಾನೆ. ಸಿ.ಎಂ. ಸ್ವಾಗತಿಸಲು ಇಡೀ ಊರೇ ಕಾಯುತ್ತಿದ್ದಾಗ ಆದಿನ ಬಂದ ಸುದ್ದಿ ವೀರಣ್ಣನ ಕನಸನ್ನು ಭಗ್ನವಾಗಿಸುತ್ತದೆ. ಸಿಎಂ ಬರೋದಿಲ್ಲ, ಆನಂದ್ ಹೇಳಿದ್ದೆಲ್ಲ ಬೋಗಸ್ ಅಂತ ಗೊತ್ತಾಗಿ, ವೀರಣ್ಣ ತನ್ನ ಸಹಚರರ ಮೂಲಕ ಕೃಷ್ಣಪ್ಪನನ್ನು ಥಳಿಸುತ್ತಾನೆ.  ಜನರೂ ನಮ್ಮನ್ನೆಲ್ಲ ಯಾಮಾರಿಸಿದ್ದಾನೆಂದು ಆತನಮೇಲೆ ಕೋಪಗೊಳ್ಳುತ್ತಾರೆ. ಆ ಎಡವಟ್ಟು ಕೃಷ್ಣಪ್ಪನ ಬದುಕಿಗೆ ದೊಡ್ಡ ತಿರುವು ನೀಡುತ್ತದೆ. ಊರಲ್ಲಿ ತನ್ನ ಬೆಲೆ ಕಳೆದುಕೊಂಡ ಕೃಷ್ಣಪ್ಪ, ಗೆಳತಿ ಶಶಿ ಹೇಳಿದಂತೆ ಕಳೆದುಕೊಂಡದ್ದನ್ನು ಅದೇ ಜಾಗದಲ್ಲಿ ಪಡೆಯಬೇಕೆಂದು ಬೆಂಗಳೂರಿಗೆ ಬರುತ್ತಾನೆ. ಮುಂದೆ ನಡೆಯುವ ಘಟನೆಗಳಲ್ಲಿ ರಾಜ್ಯದ ಮುಖ್ಯಮಂತ್ರಿಗಳೇ ಕೃಷ್ಣಪ್ಪನನ್ನು ಕಾಣಲು ಅವನಿದ್ದ ಹಳ್ಳಿಗೆ ಬರುತ್ತಾರೆ, ಅದು ಹೇಗೆ, ಏಕೆ ಎಂಬುದೇ ಚಿತ್ರದ ಕುತೂಹಲ. 
 
ನಿರ್ದೇಶಕ ನವೀನ್ ರೆಡ್ಡಿ ಅವರು  ಭಾಷೆಯ ಸೊಗಡಿನ ಕಥೆಯನ್ನು ಕಟ್ಟಿಕೊಟ್ಟಿರುವ ಶೈಲಿಯೇ ವಿಭಿನ್ನವಾಗಿದೆ. ಎಲೆಕ್ಷನ್ ತಂತ್ರಗಾರಿಕೆ, ಪ್ರೇಮಿಗಳ ತಾಕಲಾಟ ಸೇರಿದಂತೆ ಒಂದಷ್ಟು ವಿಚಾರಗಳನ್ನು ಅರ್ಥಪೂರ್ಣವಾಗಿ ತೆರೆಮೇಲೆ ಮೂಡಿಸಿದ್ದಾರೆ. ಚಿತ್ರದ  ಸಂಗೀತ , ಕ್ಯಾಮೆರಾ ಕೈಚಳಕ ಗಮನ ಸೆಳೆಯುತ್ತದೆ.
 
ಇಡೀ ಚಿತ್ರವನ್ನು ಆವರಿಸಿಕೊಂಡಿರುವುದೇ ರಂಗಾಯಣ ರಘು ಹಾಗೂ ಸಂಪತ್ ಮೈತ್ರೇಯ ಅವರ ಪಾತ್ರಗಳು. ವಿಶೇಷವಾಗಿ ರಂಗಾಯಣ ರಘು ಅವರ ವೀರಣ್ಣನ ಪಾತ್ರದ ಮೂಲಕ ಗ್ರಾಮದ ಅಧ್ಯಕ್ಷನಾಗಲು ಯಾವೆಲ್ಲ‌ ತಂತ್ರಗಾರಿಕೆ ಹೂಡುತ್ತಾನೆ ಎಂಬುದನ್ನು ತೋರಿಸಿದ್ದಾರೆ.
 
ನಟ  ಸಂಪತ್  ಶಾಲಾ ಶಿಕ್ಷಕನಾಗಿ , ಊರಿಗೆ ಉಪಕಾರ ಮಾಡುವ ವ್ಯಕ್ತಿಯಾಗಿ,  ಪ್ರಿಯಕರನಾಗಿ ಪಾತ್ರಕ್ಕೆ ಜೀವ ತುಂಬಿ ನಟಿಸಿದ್ದಾರೆ. ವೀರಣ್ಣನ ವಿರೋಧಿಯಾಗಿ  ಉಗ್ರಂ ಮಂಜು ನೆಗೆಟಿವ್ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. 
 
ಸಂಪತ್ ಗೆಳೆಯನಾಗಿ ತುಕಾಲಿ ಸಂತು, ಆನಂದ್,  ಸಿಎಂ ಪಾತ್ರಧಾರಿ ಅನಂತ್ ವೇಲ್ , ಕೆಜಿಎಫ್ ತಾತ ಸೇರಿದಂತೆ ಬಹಳಷ್ಟು ಕಲಾವಿದರು ಚಿತ್ರದ ಓಟಕ್ಕೆ ಉತ್ತಮ ಸಾತ್ ನೀಡಿದ್ದಾರೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಹಳ್ಳಿಗೆ ಸಿಎಂ ಕರೆಸಿದ ಕೃಷ್ಣಪ್ಪನ ಕಥೆ.....ರೇಟಿಂಗ್: 3.5/5 **** - Chitratara.com
Copyright 2009 chitratara.com Reproduction is forbidden unless authorized. All rights reserved.