Chief Editor
Manohar. R (Manu)
Photo Journalist
chitrataramanu@gmail.com
+91 9845549026
ಜಡ್ಜ್ ಮೆಂಟ್ ವ್ಯವಸ್ಥೆಯಲ್ಲಿನ ಲೋಪದೋಷಗಳ ಅನಾವರಣ...ರೇಟಿಂಗ್: 4/5 ****
Posted date: 25 Sat, May 2024 11:11:36 AM
ಒಬ್ಬ ನ್ಯಾಯವಾದಿ ನಿರಪರಾಧಿಯನ್ನೂ, ಫೂರಕ ಸಾಕ್ಷಾಧಾರಗಳಿದ್ದಾಗ  ಅಪರಾಧಿಯನ್ನಾಗಿ ಬಿಂಬಿಸಬಹುದು  ಎಂಬುದನ್ನು ಜಡ್ಜ್ ಮೆಂಟ್ ಚಿತ್ರದಲ್ಲಿ ನಿರ್ದೇಶಕ ಗುರುರಾಜ ಕುಲಕರ್ಣಿ (ನಾಡಗೌಡ) ಅವರು ನಿರೂಪಿಸಿದ್ದಾರೆ. ಕೆಲವು ಸಲ  ತಾವೇನೋ ಅಂದುಕೊಂಡರೆ, ಅದು ‌ಬೇರೇನೋ ಆಗಿರುತ್ತದೆ. ಆ ಘಟನೆಯ  ಹಿಂದಿರುವ ಸತ್ಯವೇ ಬೇರೆಯಾಗಿರುತ್ತದೆ, ಈ ಚಿತ್ರದ ನಾಯಕ, ಗೋವಿಂದ್ (ರವಿಚಂದ್ರನ್) ಕೂಡ ಅಂಥದ್ದೇ ಒಂದು ಪ್ರಕರಣದಲ್ಲಿ ಅಸತ್ಯವನ್ನೇ ಸತ್ಯವನ್ನಾಗಿಸಿ ನಿರಪರಾಧಿಯೊಬ್ಬನನ್ನು ಜೈಲಿಗೆ ಕಳಿಸಿರುತ್ತಾನೆ. ಈ ಕೇಸಿನಲ್ಲಿ ತಾನು ಏನನ್ನೋ ಮಿಸ್ ಮಾಡಿದ್ದೇನೆ ಎಂದು ಆತನಿಗೆ ಅನಿಸಿದಾಗ, ಆಗಿರೋ  ತಪ್ಪನ್ನು  ಮತ್ತೆ ಹೇಗೆ ಸರಿಪಡಿಸುತ್ತಾನೆ ಎನ್ನುವುದೇ ಈ ವಾರ ತೆರೆ ಕಂಡಿರುವ ದ ಜಡ್ಜ್ ಮೆಂಟ್ ಚಿತ್ರದ ಕಥಾಹಂದರ.   
 
ಪಬ್ಲಿಕ್ ಪ್ರಾಸಿಕ್ಯೂಟರ್ ಗೋವಿಂದ್ (ರವಿಚಂದ್ರನ್), ಸಾಮಾಜಿಕ ಹೋರಾಟಗಾರ್ತಿಯೊಬ್ಬಳ ಕೊಲೆ ನಡೆದಾಗ ಆ  ಪ್ರಕರಣದ ಹಿಂದಿನ ಸತ್ಯಾಸತ್ಯತೆಯನ್ನು  ಹೇಗೆ  ಅರಿಯದೆ ಹೋಗುತ್ತಾರೆ,  ತಾನೇ ವಾದಮಾಡಿ ಆರೋಪಿಯನ್ನು, ಅಪರಾಧಿ ಎಂದು ಬಿಂಬಿಸಿ ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾಗುತ್ತಾರೆ. ಆನಂತರ ಪಬ್ಲಿಕ್ ಪ್ರಾಸಿಕ್ಯೂಟರ್ ಗೋವಿಂದ್ ಗೆ  ತಾನೆಲ್ಲೋ ಎಡವಿದೆನೆಂಬ   ಸಣ್ಣ ಅನುಮಾನ ಕಾಡುತ್ತದೆ. ಈ ಪ್ರಕರಣದಲ್ಲಿ  ಏನೋ ಮಿಸ್ ಆಗಿದೆ ಅಂತ ಆತನಿಗೇ ಅನಿಸುತ್ತದೆ.  ತಾನಂದುಕೊಂಡಿದ್ದೇ ಸತ್ಯವಲ್ಲ ಅನ್ನೋದು   ಅರಿವಾಗುತ್ತದೆ. ಇದರ ಹಿಂದೆ ಎನೋ  ದೊಡ್ಡ ಕುತಂತ್ರ ಅಡಗಿದೆ  ಅನ್ನೋದನ್ನು ಅರಿತ ಪಿ.ಪಿ  ಗೋವಿಂದ್‌,  ನಂತರ ತಾನೇ ಮುಗಿಸಿದ ಆ ಕೇಸನ್ನು ರೀಓಪನ್ ಮಾಡಿಸುತ್ತಾನೆ. ಅಪರಾಧಿಯಾಗಿ  ಜೈಲಲ್ಲಿ  ಶಿಕ್ಷೆ ಅನುಭವಿಸುತ್ತಿದ್ದವನ  ಪರವಾಗಿ ನಿಲ್ಲುತ್ತಾನೆ. ಮುಂದೆ ಏನೆಲ್ಲ ನಡೆಯುತ್ತದೆ,  ಆ ನಿರಪರಾಧಿಗೆ  ಮತ್ತೆ ನ್ಯಾಯ ಕೊಡಿಸುವಲ್ಲಿ   ಪಿ.ಪಿ. ಗೋವಿಂದ್  ಯಶಸ್ವಿಯಾಗ್ತಾನಾ ಇಲ್ವಾ  ಎನ್ನುವುದೇ ದ ಜಡ್ಜ್ಮೆಂಟ್ ಚಿತ್ರದ ಫೈನಲ್ ಜಡ್ಜ್ ಮೆಂಟ್. ಈ ಹಿಂದೆ ನ್ಯಾಯಕ್ಕಾಗಿ ವಾದ ವಿವಾದ  ನಡೆಸುವ ಹಲವಾರು  ಕೋರ್ಟ್ ರೂಂ ಕಥೆಗಳು ಬಂದಿವೆ.  ಆದರೆ, ದಿ ಜಡ್ಜ್ಮೆಂಟ್ ಇದೆಲ್ಲಕ್ಕಿಂತ ಸ್ವಲ್ಪ ವಿಭಿನ್ನವೆನಿಸುತ್ತದೆ, ಇಲ್ಲಿ  ಒಂದು ಕೇಸಿನಲ್ಲಿ ಅಪರಾಧಿ ಎನಿಸಿಕೊಂಡವನು, ಇನ್ನೊಂದು ಕೇಸಿನಲ್ಲಿ ಸಾಕ್ಷಿಯಾಗಿ ಬಂದು ನಿಲ್ಲುತ್ತಾನೆ, ಇಂಥ ಪ್ರಕರಣಗಳಲ್ಲಿ  ನ್ಯಾಯಾಂಗ ಏನು ತೀರ್ಮಾನ ಕೈಗೊಳ್ಳುತ್ತದೆ ಎಂಬುದನ್ನು ನಿರ್ದೇಶಕರು  ಪರಿಣಾಮಕಾರಿಯಾಗಿ  ತೆರೆಯ ಮೇಲೆ ಮೂಡಿಸಿದ್ದಾರೆ. 
ಇದೊಂದು ಲೀಗಲ್ ಥ್ರಿಲ್ಲರ್ ಚಿತ್ರ.  ಇಲ್ಲಿ ನ್ಯಾಯಾಂಗಕ್ಕೆ ಸಂಬಂಧಿಸಿದ ಸಾಕಷ್ಟು ವಿಷಯಗಳಿವೆ,  ಚಿತ್ರಕಥೆ ಮಾಡುವಾಗ  ನಿರ್ದೇಶಕರು  ನ್ಯಾಯಾಂಗದ ವಿಚಾರವಾಗಿ  ಸಾಕಷ್ಟು ಸಂಶೋಧನೆ ಮಾಡಿರುವುದು ಅವರು  ಕಥೆಯನ್ನು ತೆಗೆದುಕೊಂಡು ಹೋಗಿರುವ ಶೈಲಿಯಲ್ಲೇ  ಗೊತ್ತಾಗುತ್ತದೆ. ಈ ಹಿಂದೆ ನಡೆದ  ಹಲವು ಪ್ರಕರಣಗಳನ್ನು  ಚಿತ್ರದಲ್ಲಿ  ಉಲ್ಲೇಖಿಸಲಾಗಿದೆ.  ಒಂದೂ ಮರ್ಡರ್ ನಿಂದ  ಶುರುವಾಗುವ ಚಿತ್ರ, ಕ್ರಮೇಣ ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ತೆರೆದಿಡುತ್ತದೆ.   
ಕ್ರೇಜಿಸ್ಟಾರ್ ರವಿಚಂದ್ರನ್  ಬಹಳ ದಿನಗಳ ನಂತರ  ಕಪ್ಪು ಕೋಟ್ ಧರಿಸಿ ಲಾಯರ್  ಆಗಿ ವಾದ ಮಾಡಿದ್ದಾರೆ, ತುಂಬಾ ಸಹಜವಾಗಿ, ಪಾತ್ರವೇ ತಾನಾಗಿ ಪರಕಾಯ ಪ್ರವೇಶಿಸಿದ್ದಾರೆ. ಇನ್ನು ದಿಗಂತ್ ಕೂಡ ಕೊಟ್ಟ ಪಾತ್ರದಲ್ಲಿ  ಉತ್ತಮ ಅಭಿನಯ ನೀಡುವ ಮೂಲಕ ಗಮನ ಸೆಳೆಯುತ್ತಾರೆ. ಧನ್ಯಾ ರಾಮಕುಮಾರ್, ಲಕ್ಷ್ಮೀ ಗೋಪಾಲಸ್ವಾಮಿ, ಮೇಘನಾ ಗಾಂವ್ಕರ್  ಇವರೆಲ್ಲರ ಪಾತ್ರಗಳು  ಚಿತ್ರಕಥೆಗೆ  ಪೂರಕವಾಗಿ ಮೂಡಿಬಂದಿದ್ದು ಕಥೆಯನ್ನು ಕ್ಯಾರಿ ಮಾಡುವಲ್ಲಿ ಸಹಕಾರಿಯಾಗಿವೆ. ಉಳಿದಂತೆ ರಂಗಾಯಣ ರಘು, ಪ್ರಕಾಶ್ ಬೆಳವಾಡಿ, ನಾಗಾಭರಣ, ರೇಖಾ ಕೂಡ್ಲಿಗಿ ತಮ್ಮ ಪಾತ್ರಗಳನ್ನು  ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಅನೂಪ್ ಸೀಳಿನ್ ಅವರ ಸಂಗೀತ  ಚಿತ್ರಕ್ಕೆ ಪೂರಕವಾಗಿದೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಜಡ್ಜ್ ಮೆಂಟ್ ವ್ಯವಸ್ಥೆಯಲ್ಲಿನ ಲೋಪದೋಷಗಳ ಅನಾವರಣ...ರೇಟಿಂಗ್: 4/5 **** - Chitratara.com
Copyright 2009 chitratara.com Reproduction is forbidden unless authorized. All rights reserved.