ಸ್ನೇಹಿತರಿಬ್ಬರ ಮಧ್ಯೆ ಸುಂದರ ಯುವತಿಯೊಬ್ಬಳು ಬಂದಾಗ ಏನೆಲ್ಲ ಘಟನೆಗಳು ಸಂಭವಿಸಬಹುದು ಎಂದು ನಿರ್ದೇಶಕ ಪ್ರವೀಣ್ ಸಿ.ಪಿ. ತಮ್ಮ ಕಲ್ಪನೆಯ ಕಥೆಯ ಮೂಲಕ ಎವಿಡೆನ್ಸ್ ಚಿತ್ರದಲ್ಲಿ ಹೇಳಿದ್ದಾರೆ. ಮರ್ಡರ್ ಹಿನ್ನೆಲೆಯಲ್ಲಿ ನಡೆಯುವ ಸಸ್ಪೆನ್ಸ್, ಥ್ರಿಲ್ಲರ್ ಕಥೆಯನ್ನು ಅಚ್ಚುಕಟ್ಟಾಗಿ ತೆರೆಮೇಲೆ ಮೂಡಿಸಿದ್ದಾರೆ, ಇದೊಂದು ತ್ರಿಕೋನ ಪ್ರೇಮಕಥಾನಕವೂ ಹೌದು. ಸ್ನೇಹ, ಪ್ರೀತಿ, ದ್ವೇಷದ ಹಿನ್ನೆಲೆ ಇಟ್ಟುಕೊಂಡು ಕಥೆ ಹೇಳಿಕೊಂಡು ಹೋಗಿದ್ದಾರೆ. ದಂಪತಿಗಳಿಬ್ಬರ ಸಾವು ಸಂಭವಿಸಿದಾಗ ಅದೊಂದು ಸೂಸೈಡ್ಕೇಸ್ ಎಂದು ಪೊಲೀಸರು ಕೇಸ್ ಕ್ಲೋಸ್ ಮಾಡುತ್ತಾರೆ. ಆನಂತರ ಅದು ಕೊಲೆಯೂ ಆಗಿರಬಹುದು ಎಂಬ ಅನುಮಾನ ಬಂದಾಗ, ಆ ಪ್ರಕರಣಕ್ಕೆ ಹೊಸ ತಿರುವು ಸಿಗುತ್ತದೆ. ಆರೋಪಿಯನ್ನು ಯಾವರೀತಿ ಇಂಟರಾಗೇಷನ್ ಮಾಡಿ, ಆತನಿಂದ ಪ್ರಕರಣಕ್ಕೆ ಪೂರಕವಾದ ಸಾಕ್ಷಾಧಾರಗಳನ್ನು ಹೇಗೆ ಹೊರ ತೆಗೆಯುತ್ತಾರೆ ಎಂಬುದನ್ನು ಕುತೂಹಲಕರವಾಗಿ ನಿರೂಪಿಸುವಲ್ಲಿ ನಿರ್ದೇಶಕ ಪ್ರವೀಣ್ ಸಾಕಷ್ಟು ಎಫರ್ಟ್ ಹಾಕಿದ್ದಾರೆ. ವ್ಯಕ್ತಿಯೊಬ್ಬನಿಗೆ ಸಿಗುವ ಬ್ಯಾಗ್, ಅದರಲ್ಲಿದ್ದ ಕ್ಯಾಮೆರಾ, ವಿಡಿಯೋ. ಅಲ್ಲಿಂದ ಕಥಾಹಂದರ ತೆರೆದುಕೊಳ್ಳುತ್ತದೆ.
ಸ್ಪೆಷಲ್ ಇನ್ವೆಸ್ಟಿಗೇಷನ್ ಆಫೀಸರ್ ಪ್ರಿಯಾ ರಾಮಕೃಷ್ಣನ್(ಮಾನಸ ಜೋಶಿ) ಸೂಸೈಡ್ ಎಂದು ಕ್ಲೋಸ್ ಆದ ದಂಪತಿಗಳ ಕೇಸನ್ನು ರೀಓಪನ್ ಮಾಡಿ, ಅದರ ವಿಚಾರಣೆ ನಡೆಸುವ ಹಂತದಲ್ಲಿ ಕೊಲೆಯಾದ ವ್ಯಕ್ತಿಯ ಸ್ನೇಹಿತ ಡಾ.ಕೆವಿನ್ರನ್ನು ಕರೆಸಿ ಎನ್ ಕ್ವೈರಿ ಆರಂಭಿಸುತ್ತಾರೆ. ಅಲ್ಲಿ ಡಾ.ಕೆವಿನ್ ಒಂದೊಂದೇ ವಿಷಯಗಳನ್ನು ಬಾಯ್ಬಿಡುತ್ತಾನೆ. ಬಾಲ್ಯದಿಂದಲೂ ಒಟ್ಟಿಗೆ ಬೆಳೆದ ಕೆವಿನ್ ಹಾಗೂ ಅನಾಥ ಹುಡುಗ ಸ್ವರೂಪ್(ಆಕರ್ಷ ಆದಿತ್ಯ) ಪ್ರಾಣಸ್ನೇಹಿತರು, ಓದುವ, ಆಟದ ವಿಚಾರದಲ್ಲಿ ಇಬ್ಬರ ನಡುವೆ ಯಾವಾಗಲೂ ಪೈಪೋಟಿ. ಮುಂದೆ ಕೆವಿನ್ ಮೆಡಿಕಲ್ ಓದಿ ಡಾಕ್ಟರಾಗುತ್ತಾನೆ. ಸ್ವರೂಪ್ ಬೇರೊಂದು ಕೆಲಸದಲ್ಲಿರುತ್ತಾನೆ. ಒಮ್ಮೆ ಅಚಾನಕ್ಕಾಗಿ ಕೆವಿನ್ ಸ್ವರೂಪ್ ಭೇಟಿಯಾಗುತ್ತಾನೆ. ಈ ನಡುವೆ ಸ್ವರೂಪ್ ತಾನು ಅನಾಥಾಶ್ರಮ ನಡೆಸುತ್ತಿರುವ ಯುವತಿಯನ್ನು ಪ್ರೀತಿಸುತ್ತಿರುವುದಾಗಿಯೂ, ಆಕೆಯ ಹೆಸರು ಸಾನ್ವಿ(ರಚಿತಾ) ಎಂದು ಕೆವಿನ್ಗೆ ಪರಿಚಯಿಸುತ್ತಾನೆ. ನಂತರ ಡಾ.ಕೆವಿನ್ನೇ ಮುಂದೆನಿಂತು ಅವರಿಬ್ಬರ ಮದುವೆ ಮಾಡಿಸುತ್ತಾನೆ. ನಂತರ ಹನಿಮೂನ್ಗೂ ತಾನೇ ಎಲ್ಲಾ ಅರೆಂಜ್ ಮಾಡಿ ಕಳಿಸಿಕೊಡುತ್ತಾನೆ. ಮುಂದೆ ನಡೆದ ಘಟನೆಗಳಲ್ಲಿ ಈ ಜೋಡಿಗಳ ಮೇಲೆ ಕೊಲೆಯ ಅಟ್ಯಾಕ್ ಆಗುತ್ತದೆ, ಮುಂದೆ ಸಾನ್ವಿ ಪ್ರೆಗ್ನೆಂಟ್ ಆಗ್ತಾಳೆ. ಕೆವಿನ್ನೇ ಚೆಕ್ಮಾಡಿ ಮಗುವಿನ ಬೆಳವಣಿಗೆಗೆ ಮಾತ್ರೆ ಬರೆದು ಕೊಡುತ್ತಾನೆ. ಆದರೆ ಮುಂದಿನ ದಿನಗಳಲ್ಲಿ ಸಾನ್ವಿಗೆ ಅಬಾರ್ಷನ್ ಆಗುತ್ತದೆ. ಹೀಗೆ ಅವರಿಗೆ ಒಂದೊಂದೇ ಸಮಸ್ಯೆಗಳು ಎದುರಾಗುತ್ತಾ, ಕೊನೆಗವರು ಆತ್ಮಹತ್ಯೆ ಮಾಡಿಕೊಳ್ಳುವಲ್ಲಿ ಅಂತ್ಯವಾಗುತ್ತದೆ. ಆದರೆ ಇದು ಕೊಲೆಯಿರಬಹುದು ಎಂಬ ಅನುಮಾನ ಬಂದಾಗ ಅದನ್ನು ಭೇದಿಸುವ ನಿಟ್ಟಿನಲ್ಲಿ ವಿಶೇಷ ಪೊಲೀಸ್ ತಂಡ ಮುಂದಾಗುತ್ತದೆ.
ಇದು ಕೊಲೆನಾ... ಸೂಸೈಡಾ ಎಂಬುದನ್ನು ತನಿಖೆ ಮಾಡುವ ಹಾದಿಯೇ ಸಖತ್ ಥ್ರಿಲ್ಲಿಂಗ್ ಆಗಿದೆ, ಅದು ಕೊಲೆಯೇ ಆದರೆ ಆ ಕೊಲೆಯನ್ನು ಮಾಡಿದವರು ಯಾರು? ಅದಕ್ಕೆ ಕಾರಣವಾದರೂ ಏನು ? ಎನ್ನುವುದು ಚಿತ್ರದ ಕೊನೆಯಲ್ಲಿ ಬಹಿರಂಗವಾಗುತ್ತದೆ, ಅಲ್ಲಿಯವರೆಗೆ ಕುತೂಹಲವನ್ನು ಕಾಯ್ದಿಟ್ಟುಕೊಳ್ಳುವಲ್ಲಿ ನಿರ್ದೇಶಕ ಪ್ರವೀಣ್ ಅವರ ಜಾಣ್ಮೆ ಇಲ್ಲಿ ಎದ್ದು ಕಾಣುತ್ತದೆ.
ಪ್ರೀತಿ, ಸ್ನೇಹ, ಗೆಳೆತನದಲ್ಲಿ ದ್ವೇಷ ಹುಟ್ಟಿದರೆ ಏನೆಲ್ಲ ಅವಾಂತರ ನಡೆಯುತ್ತದೆ ಎಂಬುದನ್ನು ಎವಿಡೆನ್ಸ್ ಮೂಲಕ ಹೇಳಿದ್ದಾರೆ. ಛಾಯಾಗ್ರಾಹಕರ ರವಿ ಸುವರ್ಣ ಅವರ ಕೆಲಸ ಇಲ್ಲಿ ಎದ್ದು ಕಾಣುತ್ತದೆ, ಆರೋನ್ ಕಾರ್ತಿಕ್ ವೆಂಕಟೇಶ್ ಸಂಗೀತದ ಅಯ್ಯಯ್ಯೋ ಅರೆಮನಕೆ ಮತ್ತೆ ಮತ್ತೆ ಕೇಳುವಂತಿದೆ. ಚಿತ್ರದ ಹಿನ್ನೆಲೆ ಸಂಗೀತ ಗಮನ ಸೆಳೆಯುತ್ತದೆ. ನಾಯಕ ರೋಬೋ ಗಣೇಶನ್ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡಿದ್ದಾರೆ. ವಿಶೇಷ ತನಿಖಾಕಾರಿಯಾಗಿ ಮಾನಸ ಜೋಶಿ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಯುವ ಜೋಡಿಗಳಾಗಿ ಆಕರ್ಷ್ ಆದಿತ್ಯ, ರಚಿತಾ ಸಿಕ್ಕ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಶಿವಕುಮಾರ್ ಆರಾಧ್ಯ, ಸೋನು ಶಿಕಾರಿ ಮನೆಯ ಕೆಲಸದವಳಾಗಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.