Chief Editor
Manohar. R (Manu)
Photo Journalist
chitrataramanu@gmail.com
+91 9845549026
3 ದೇವಿ ಕಾಡಿನಲ್ಲಿ ದೇವಿಯರ ಸಾಹಸ ...ರೇಟಿಂಗ್: 3/5 ***
Posted date: 27 Mon, May 2024 11:51:32 AM
ನಿರ್ದೇಶಕ : ಅಶ್ವಿನ್ ಮ್ಯಾಥ್ಯೂ 
ನಿರ್ಮಾಪಕ : ಅಶ್ವಿನ್ 
ಸಂಗೀತ : ಡಾಸ್ ಮೋಡ್ 
ಛಾಯಾಗ್ರಹಣ : ಕುಂಜುನ್ನಿ  
ಸಂಕಲನ: ಸುನ್ನೀ ಸೌರವ್
ತಾರಾಗಣ : ಶುಭಾ ಪೂಂಜಾ, ಜ್ಯೋತ್ಸ್ನಾ ರಾವ್ , ಸಂಧ್ಯಾ , ಅಶ್ವಿನ್ ಮ್ಯಾಥ್ಯೂ, ಜಯದೇವ್ , ಅಶ್ವಿನ್ ಕಕುಮಾನ್, ಅಶೋಕ್ ಮಂದಣ್ಣ, ಪಿ.ಡಿ. ಸತೀಶ್ ಹಾಗೂ ಮುಂತಾದವರು...
 
ಜೀವನದಲ್ಲಿ ಪ್ರತಿಯೊಬ್ಬರಿಗೂ ಕಾಲವೇ  ಸರಿಯಾದ  ಪಾಠ ಕಲಿಸುತ್ತದೆ.  ಆದರೆ  ಯಾವರೀತಿ, ಹೇಗೆ ಅನ್ನೋದು ಮಾತ್ರ  ನಿಗೂಢ. ಮಾಸ್ತವನ ದೇವಿ ನೆಲೆಯ ದಟ್ಟ ಅರಣ್ಯದ ನಡುವೆ  ಕಾಡಿನ ನಿವಾಸಿಯೊಬ್ಬ ಹೇಳುವ  ಹೆಣ್ಣು ಹುಲಿ ಬೇಟೆ ಆಡಲು ಬಂದವನ ಪರಿಸ್ಥಿತಿ , ಶಕ್ತಿ ದೇವಿಯು ತೋರುವ ದಾರಿ, ಕಾಡು, ಪ್ರಾಣಿ , ಪರಿಸರದ ಜೊತೆಗೆ ಮನುಷ್ಯನ ಮನಸ್ಥಿತಿಯ ಬಣ್ಣದ ಬದುಕಿನ  ಮುಖಗಳ ದರ್ಶನ ಮಾಡಿಸುತ್ತಾ  ಮೂರು ದಾರಿ ಒಂದೆಡೆ ಸೇರುವ ಕಥೆಯೇ  ಈ ವಾರ ತೆರೆಗೆ  ಬಂದಿರುವ  "3ದೇವಿ". 
ಚಿತ್ರದ ಕಥಾಹಂದರ.
 
ವಿಜಯಲಕ್ಷ್ಮಿ (ಶುಭಾ ಪೂಂಜಾ)ಒಬ್ಬ ನಟಿ.  ಚಲನಚಿತ್ರವೊಂದರ ಶೂಟಿಂಗ್ ಗಾಗಿ  ಶಕ್ತಿದೇವಿಯ ಗೆಟಪ್ ಹಾಕಿರುತ್ತಾಳೆ. ಅದೇ ಸಮಯದಲ್ಲಿ  ತನ್ನ ಗೆಳತಿ ಮರಿಯಾ ( ಸಂಧ್ಯಾ) ಮದುವೆಗೆ ಹೋಗಲು ನಿರ್ದೇಶಕರಲ್ಲಿ ಅನುಮತಿ ಕೇಳಿದಾಗ ಆತ ಕೊಡುವುದಿಲ್ಲ  ಕೊನೆಗೆ  ಸಹಾಯಕಿ ಶರಣ್ಯ (ಜ್ಯೋತ್ಸ್ನಾ)ಳ ಸಹಾಯ ಪಡೆದುಕೊಂಡು  ಕಾರಿನಲ್ಲಿ ಚರ್ಚ್ ಬಳಿ  ಬರುತ್ತಾಳೆ. ಆದರೆ ಅಲ್ಲಿ ಆ ಮದುವೆ ನಡೆಯುವುದಿಲ್ಲ. ಗೆಳತಿ ಮರಿಯಾ ಹಾಗೂ ಆಕೆಯ ಪ್ರೇಮಿಯ ನಡುವೆ ಮನಸ್ತಾಪ ಉಂಟಾಗಿ ಆತನನ್ನು ಬಿಟ್ಟುಬಂದು  ಗೆಳತಿಯರ ಜೊತೆ ಹೊರಡುತ್ತಾಳೆ. ಇನ್ನು ನಿರ್ಮಾಪಕ (ಜಯದೇವ್) ಹಾಗೂ ಅವನ ಬಂಟನಿಗೆ ಶೂಟಿಂಗ್ ಸ್ಪಾಟ್ ನಿಂದ ನಟಿ ಪರಾರಿಯಾಗಿರುವುದು ಗೊತ್ತಾಗಿ ಆಕೆಯನ್ನ ಹುಡುಕುತ್ತಾ ಹೊರಡುತ್ತಾನೆ. ಮತ್ತೊಂದೆಡೆ ತನ್ನದೇ ಗುರಿ ಇಟ್ಟುಕೊಂಡು ಹೆಂಡತಿಯ ಮಾತನ್ನು ಲೆಕ್ಕಿಸದೆ ಅರಣ್ಯದಲ್ಲಿ ಬೇಟೆಗಾಗಿ ಬರುವ ( ಅಶ್ವಿನ್ ಮ್ಯಾಥ್ಯೂ). ಈ ಮೂವರ ಪಯಣದ ಹಾದಿ ಬೇರೆ ಬೇರೆಯಾದರು ಸರಿದಾರಿ ಕಾಣುವ ಸತ್ಯ ರೋಚಕ ಹಂತಕ್ಕೆ ಚಿತ್ರ ಬಂದು ನಿಲ್ಲುತ್ತದೆ. 
 
ಇಂಥ ಕ್ಲಿಷ್ಟಕರ ಕಥಾವಸ್ತುವನ್ನು ಆಯ್ಕೆ ಮಾಡಿಕೊಂಡಿರುವ ನಿರ್ದೇಶಕ ಹಾಗೂ ನಿರ್ಮಾಪಕ ಅಶ್ವಿನ್ ಮ್ಯಾಥ್ಯೂ ಅವರ  ಆಲೋಚನೆಯೇ ವಿಭಿನ್ನವಾಗಿದೆ. ಚಿತ್ರರಂಗದ ಸ್ಥಿತಿಗತಿ , ನಟಿಯರು ಎದುರಿಸುವ ಸಮಸ್ಯೆ , ನಿರ್ಮಾಪಕರ ಆತಂಕ , ನಿರ್ದೇಶಕರ ಮನಸ್ಥಿತಿ  ಇದರ ಜೊತೆಗೆ ಕೆಲವು ಘಟನೆಗಳನ್ನು ಸೂಕ್ಷ್ಮವಾಗಿ ತೆರೆದಿಟ್ಟಂತಿದೆ. ನಮ್ಮ ಸ್ಥಳಕ್ಕೆ ಪ್ರಾಣಿಗಳು ಬರಬಾರದು‌, ಹಾಗೇ ಪ್ರಾಣಿಗಳಿರುವ  ಸ್ಥಳಕ್ಕೆ ನಾವೂ ಹೋಗಬಾರದೆಂಬ ವಿಚಾರದ ಜೊತೆಗೆ ಅರಣ್ಯ ಸಂರಕ್ಷಣೆಯ ಎಳೆಯೂ ಚಿತ್ರಕಥೆಯಲ್ಲಿದೆ. ಮನುಷ್ಯನ ದುರಾಸೆಗೆ ತಕ್ಕ ಉತ್ತರ ಸಿಕ್ಕಂತಿದೆ. ಚಿತ್ರದಲ್ಲಿ‌  ಹಲವು ಸೂಕ್ಷ್ಮಗಳು ಕಂಡರೂ   ಚಿತ್ರದ ಓಟವನ್ನು ಸ್ವಲ್ಪ ತೀವೃಗೊಳಿಸಿದ್ದರೆ  ಇನ್ನೂ ಉತ್ತವಾಗಿರುತ್ತಿತ್ತು. ಇನ್ನು ಚಿತ್ರದ ಕ್ಯಾಮೆರಾ ವರ್ಕ್, ಎಡಿಟಿಂಗ್  ಕೆಲಸ ಉತ್ತಮವಾಗಿದ್ದು, ಸುಮಧುರವಾದ ಹಾಡುಗಳು ನೆನಪಲ್ಲುಳಿಯುತ್ತವೆ, ಹಿನ್ನಲೆ ಸಂಗೀತವೂ ಚಿತ್ರಕಥೆಗೆ ಪೂರಕವಾಗಿದೆ. 
 
ಚಿತ್ರ ನಟಿಯ ಪಾತ್ರವನ್ನು  ಶುಭಾ ಪೂಂಜಾ   ಬಹಳ ನೈಜವಾಗಿ ಅಚ್ಚುಕಟ್ಟಾಗಿ  ನಿರ್ವಹಿಸಿದ್ದು, ಸಾಕ್ಷಾತ್  ದೇವಿಯಂತೆಯೇ ಕಾಣಿಸುತ್ತಾರೆ. ನೇರ ಮಾತುಗಳ ಮೂಲಕ ಗಮನ ಸೆಳೆದು, ತಾನು ಆಕ್ಷನ್ ಗೂ ಸೈ  ಎಂದು ತೋರಿಸಿಕೊಟ್ಟಿದ್ದಾರೆ. ಕಾರ್ಯಕಾರಿ ನಿರ್ಮಾಪಕಿಯಾಗಿ ಕೂಡ ಕೆಲಸ ಮಾಡಿರುವುದು ವಿಶೇಷ.
 
ಹಾಗೆ ನಟಿಯರಾದ ಸಂಧ್ಯಾ  ಹಾಗೂ ಜ್ಯೋತ್ಸ್ನಾ ಸಿಕ್ಕ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದರ ಜೊತೆಗೆ ಭರ್ಜರಿ ಆಕ್ಷನ್ ನಲ್ಲೂ  ಮಿಂಚಿದ್ದಾರೆ.  ನಿರ್ದೇಶಕ ಅಶ್ವಿನಿ ಮ್ಯಾಥ್ಯೂ  ಒಬ್ಬ ಬೇಟೆಗಾರನಾಗಿ ಸೈಲೆಂಟ್ ಲುಕ್ ನಲ್ಲಿ ಪಾತ್ರಕ್ಕೆ ಜೀವ ತುಂಬಿದ್ದಾರೆ.  ಇಡೀ ಚಿತ್ರದ ಹೈಲೈಟ್  ಎಂದರೆ ನಿರ್ಮಾಪಕನ  ಪಾತ್ರ.  ಜೈದೇವ್  ಅವರು ಪ್ರಸ್ತುತ ಕೆಲವು ನಿರ್ಮಾಪಕರು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಹೇಳಿರುವ ರೀತಿ ಅದ್ಭುತವಾಗಿದೆ. ಅದೇ ರೀತಿ ಹಿಂದಿ ಮಾತನಾಡುವ  ಬೆಡಗಿ ಫ್ರೇಯ ಕೊಠಾರಿ ಗಮನ ಸೆಳೆದಿದ್ದಾರೆ. ಉಳಿದಂತೆ  ನಂದಗೋಪಾಲ್ , ತಿಲಕ್ ರಾಜ್ , ನಿಖಿಲ್ , ಪಿ.ಡಿ. ಸತೀಶ್ ಸೇರಿದಂತೆ ಎಲ್ಲರ ಪಾತ್ರಗಳು ಚಿತ್ರಕ್ಕೆ ಪೂರಕವಾಗಿವೆ.  ಅಡ್ವೆಂಚರ್ , ಆಕ್ಷನ್ , ಥ್ರಿಲ್ಲರ್ ಪ್ರಿಯರಿಗೆ 3ದೇವಿ ಬಹುಬೇಗನೇ  ಇಷ್ಟವಾಗುತ್ತದೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - 3 ದೇವಿ ಕಾಡಿನಲ್ಲಿ ದೇವಿಯರ ಸಾಹಸ ...ರೇಟಿಂಗ್: 3/5 *** - Chitratara.com
Copyright 2009 chitratara.com Reproduction is forbidden unless authorized. All rights reserved.