ಕನ್ನಡದಲ್ಲಿ ಸಾಕಷ್ಟು ಪ್ರೇಮಕಥೆಗಳು ಬಂದಿದೆ. ಆದರೆ ಒಂದಕ್ಕಿಂತ ಒಂದು ಭಿನ್ನ. ಅಂತಹ ಮತ್ತೊಂದು ವಿಭಿನ್ನ ಪ್ರೇಮ ಕಥಾನಕ " ಕಾಗದ". ಅರುಣ್ ಕುಮಾರ್ ಆಂಜನೇಯ ಅವರ ನಿರ್ಮಾಣದಲ್ಲಿ ರಂಜಿತ್ ಅವರು ನಿರ್ದೇಶಿಸಿರುವ "ಕಾಗದ" ಚಿತ್ರದ ಟೀಸರ್ ಇತ್ತೀಚೆಗೆ ಜಂಕಾರ್ ಮ್ಯೂಸಿಕ್ ಮೂಲಕ ಬಿಡುಗಡೆಯಾಗಿದೆ. ಟೀಸರ್ ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.
"ಕಾಗದ" ಮೊಬೈಲ್ ಬರುವ ಮುಂಚೆ ನಡೆದ ಪ್ರೇಮಕಥೆ. ಹಳ್ಳಿಹಳ್ಳಿಗಳ ನಡುವಿನ ವೈಷಮ್ಯದ ನಡುವೆಯೂ ಅರಳಿದ ಪ್ರೇಮಕಥೆಯೂ ಹೌದು. ಪ್ರಸ್ತುತ ಈ ಚಿತ್ರದ ಚಿತ್ರೀಕರಣ ಹಾಗೂ ನಂತರದ ಚಟುವಟಿಕೆಗಳು ಮುಕ್ತಾಯವಾಗಿದೆ. ತೆರೆಗೆ ಬರಲು ಸಿದ್ದತೆ ನಡೆಯುತ್ತಿದೆ. ಇತ್ತೀಚಿಗೆ ಬಿಡುಗಡೆಯಾಗಿರುವ ಟೀಸರ್ ಗೆ ಮೆಚ್ಚುಗೆ ದೊರಕುತ್ತಿದೆ. ಈ ಹಿಂದೆ "ಆಪಲ್ ಕೇಕ್" ಎಂಬ ಚಿತ್ರ ನಿರ್ದೇಶಿಸಿದ್ದ ನನಗೆ ಇದು ಎರಡನೇ ಚಿತ್ರ ಎನ್ನುತ್ತಾರೆ ನಿರ್ದೇಶಕ ರಂಜಿತ್.
ಆದಿತ್ಯ ಎಂಬ ನೂತನ ಪ್ರತಿಭೆ ಈ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಬಾಲನಟಿಯಾಗಿ ಜನಪ್ರಿಯರಾಗಿರುವ ಅಂಕಿತ ಜಯರಾಂ "ಕಾಗದ" ದ ಮೂಲಕ ನಾಯಕಿಯಾಗಿದ್ದಾರೆ. ನೇಹಾ ಪಾಟೀಲ್ ವಿಶೇಷಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಲ ರಾಜ್ವಾಡಿ, ನೀನಾಸಂ ಅಶ್ವಥ್, ಮಠ ಕೊಪ್ಪಳ, ಶಿವಮಂಜು ಮುಂತಾದವರು ತಾರಾಬಳಗದಲ್ಲಿದ್ದಾರೆ.
ನಾಲ್ಕು ಹಾಡುಗಳಿರುವ ಚಿತ್ರಕ್ಕೆ ಪ್ರದೀಪ್ ವರ್ಮ ಸಂಗೀತ ನೀಡಿದ್ದಾರೆ. ವೀನಸ್ ನಾಗರಾಜ್ ಮೂರ್ತಿ ಛಾಯಾಗ್ರಹಣ ಹಾಗೂ ಪವನ್ ಗೌಡ ಸಂಕಲನ "ಕಾಗದ" ಚಿತ್ರಕ್ಕಿದೆ.