Chief Editor
Manohar. R (Manu)
Photo Journalist
chitrataramanu@gmail.com
+91 9845549026
`ರೂಪಾಂತರ` ಗೊಂಡ ರಾಜ್ ಬಿ ಶೆಟ್ಟಿ
Posted date: 29 Sat, Jun 2024 09:19:58 AM
ಇತ್ತೀಚೆಗಷ್ಟೆ ಟರ್ಬೋ ಎಂಬ ಮಳಯಾಳಂ ಚಿತ್ರದಲ್ಲಿ ವೆಟ್ರಿವೇಲ್ ಶನ್ಮುಗಸುಂದರಂ ಎಂಬ ಪಾತ್ರದಲ್ಲಿ ಮಮ್ಮೂಟ್ಟಿಯವರಿಗೆ ಟಕ್ಕರ್ ಕೊಡುವ ಖಳನಾಯಕನಾಗಿ ಮಿಂಚಿದ ರಾಜ್ ಬಿ ಶೆಟ್ಟಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ರೂಪಾಂತರ ಎಂಬ ಹೊಸ ಚಿತ್ರದ ಫರ್ಸ್ಟ್ ಲುಕ್ ಪೋಸ್ಟರ್ ಅನ್ನು ಹಂಚಿಕೊಳ್ಳುವ ಮೂಲಕ ಮತ್ತೊಮ್ಮೆ ಸಿನಿ ರಸಿಕರ ಗಮನವನ್ನು ಸೆಳೆದಿದ್ದಾರೆ.   ಕೆಲ ಸಿನೆಮಾಗಳು ಮನಸ್ಸಿಗೆ ಬಲು ಹತ್ತಿರ ಅಂತಹ ಒಂದು ಸುಂದರವಾದ ಚಿತ್ರ ರೂಪಾಂತರ, ಈ ಸಿನೆಮಾದ ಭಾಗವಾಗಿರುವುದು ಜೊತೆಗೆ ಈ ಚಿತ್ರವನ್ನು ನಿಮ್ಮ ಮುಂದೆ ಪ್ರಸ್ತುತ ಪಡಿಸುವ ಜವಾಬ್ದಾರಿ ನನಗೆ ಲಭಿಸಿರುವುದು ನನ್ನ ವೃತ್ತಿ ಜೀವನದ ಭಾಗ್ಯ  ಎಂದು ಬರೆದುಕೊಂಡಿರುವ ಆರ್.ಬಿ.ಎಸ್ ಸದಾ ಹೊಸ ಪ್ರಯೋಗಗಳಿಗೆ ತಮ್ಮನ್ನು ತೊಡಗಿಸಿಕೊಳ್ಳುವ ಗುಣವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

ಮತ್ತೆ ಒಂದಾದ ಮೊಟ್ಟೆ ತಂಡ
ಈ ಚಿತ್ರದ ಇನ್ನೊಂದು ವಿಷೇಶತೆಯೆಂದರೆ ಈ ಹಿಂದೆ ಒಂದು ಮೊಟ್ಟೆಯ ಕಥೆ ಎಂಬ ಚಿತ್ರವನ್ನು ನಿರ್ಮಿಸಿ ವಿಶ್ವದಾದ್ಯಂತ ಹೆಸರುವಾಸಿಯಾದ ಅದೇ ತಂಡ ಸೇರಿ ನಿರ್ಮಿಸಿದ ಚಿತ್ರ ಇದಾಗಿದೆ. ರಾಜ್ ಬಿ ಶೆಟ್ಟಿಯವರು ಈ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಅಲ್ಲದೆ, ಸಂಭಾಷಣೆಯನ್ನು ಬರೆದಿದ್ದಾರೆ. ಜೊತೆಗೆ ತಮ್ಮ ನಿರ್ಮಾಣ ಸಂಸ್ಥೆಯಾದ ಲೈಟರ್ ಬುದ್ಧ ಫಿಲಂಮ್ಸ್ ನ ಮೂಲಕ ತೆರೆಗೂ ತರುತ್ತಿದ್ದಾರೆ. ಒಂದು ಮೊಟ್ಟೆಯ ಕಥೆ ಯ ನಿರ್ಮಾಪಕರಾದ ಸುಹಾನ್ ಪ್ರಸಾದ್ ಈ ಚಿತ್ರದ ನಿರ್ಮಾಣವನ್ನು ಮಾಡಿದ್ದಾರೆ. ಪ್ರವೀಣ್ ಶ್ರೀಯಾನ್ ಛಾಯಗ್ರಹಣ, ಮಿಧುನ್ ಮುಕುಂದನ್ ಸಂಗೀತವನ್ನೂ ನೀಡುವ ಮೂಲಕ ಈ ಜೋಡಿ ಮತ್ತೊಮ್ಮೆ ಪ್ರೇಕ್ಷಕರನ್ನು ರಂಚಿಸಲು ಹೊರಟಿದೆ.

ಕನ್ನಡದಲ್ಲೊಂದು ವಿಭಿನ್ನ ಪ್ರಯತ್ನ
ಕನ್ನಡ ಚಿತ್ರರಂಗದಲ್ಲಿ ಹೊಸತನ ಬರಬೇಕು ಎನ್ನುವ ಕೂಗು ಹೆಚ್ಚಾಗುತ್ತಿರುವ ಈ ಸಂಧರ್ಭದಲ್ಲಿ ರೂಪಾಂತರ ಒಂದು ಪ್ರಮುಖ ಪಾತ್ರ ವಹಿಸಲಿದೆ ಎನ್ನುವುದು ಚಿತ್ರತಂಡದ ಅಭಿಪ್ರಾಯ. ಈ ಚಿತ್ರವು ಮಿಥಿಲೇಶ್ ಎಡವಲತ್ ಎನ್ನುವ ಪ್ರತಿಭಾವಂತ ಯುವಕನ ಪ್ರಥಮ ನಿರ್ದೇಶನದ ಚಿತ್ರವಾಗಿದೆ. ಉಳಿದಂತೆ ಸೋಮಶೇಖರ್ ಬೋಲೇಗಾಂವ್, ಲೇಖಾ ನಾಯ್ಡು, ಹನುಮ್ಮಕ್ಕ, ಭರತ್ ಜಿ.ಬಿ, ಅಂಜನ್ ಭಾರಧ್ವಾಜ್ ಮತ್ತಿರರ ತಾರಗಣ ಚಿತ್ರಕ್ಕಿದೆ. ಸಂಕಲನ ಭುವನೇಶ್ ಮಣಿವಣ್ಣನ್, ನಿರ್ಮಾಣ ವಿನ್ಯಾಸ ಪ್ರವೀಣ್ ಮತ್ತು ಅರ್ಷದ್ ನಾಕ್ಕೋತ್ ಅವರದ್ದಾಗಿದೆ. 

ಟರ್ಬೋ ಚಿತ್ರವನ್ನು ಕರ್ನಾಟಕದಾದ್ಯಂತ ಯಶಸ್ವಿಯಾಗಿ ಹಂಚಿಕೆ ಮಾಡಿದ ಲೈಟರ್ ಬುಧ್ಧ ಫಿಲಂಮ್ಸ್ ಈ ಚಿತ್ರವನ್ನೂ ಹಂಚಿಕೆ ಮಾಡುತ್ತಿದೆ. ಎಂದು ಸಂಸ್ಥೆಯ ಕಾರ್ಯಕಾರಿ ನಿರ್ದೇಶಕರಾದ ಬಾಲಕೃಷ್ಣ ಅರ್ವನಕರ್ ಅವರು ತಿಳಿಸಿದ್ದಾರೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - `ರೂಪಾಂತರ` ಗೊಂಡ ರಾಜ್ ಬಿ ಶೆಟ್ಟಿ - Chitratara.com
Copyright 2009 chitratara.com Reproduction is forbidden unless authorized. All rights reserved.