ಪ್ರೀತಿ ಕುರುಡು ಅಂತಾರೆ, ಅದು ಹುಟ್ಟುವಾಗ ಜಾತಿ, ಕುಲ ಯಾವುದನ್ನೂ ನೋಡಲ್ಲ. ಮುಸ್ಲಿಂ ಕುಟುಂಬದ ಆಯೇಶಾ (ಅಂಕಿತಾ ಜಯರಾಮ್) ಹಾಗೂ ಹಿಂದೂ ಯುವಕ ಶಿವು(ಆದಿತ್ಯ) ನಡುವೆ ಹುಟ್ಟಿದ ಮುಗ್ಧ ಪ್ರೀತಿ ಜಾತಿ, ಮತ ಪ್ರತಿಷ್ಠೆಯ ಮಧ್ಯೆ ಹೇಗೆ ನಲುಗಿಹೋಯಿತು ಎಂದು ಈ ವಾರ ತೆರೆಕಂಡಿರುವ ಕಾಗದ ಚಿತ್ರದ ಮೂಲಕ ನಿರ್ದೇಶಕ ರಂಜಿತ್ ಕುಮಾರ್ ಗೌಡ ಒಂದು ದುರಂತ ಪ್ರೇಮಕಥೆಯ ಮೂಲಕ ಹೇಳಿದ್ದಾರೆ.
ಭೈರವಕೋಟೆಯಲ್ಲಿ ಹಿಂದೂ ಮುಸ್ಲಿಂ ಎನ್ನುವ ಬೇಧ ಭಾವ ಇಲ್ಲದೆ ಊರ ಜನರೆಲ್ಲ ಅಣ್ಣ ತಮ್ಮಂದಿರ ಹಾಗಿರುತ್ತಾರೆ. ಆ ಊರಿನ ಯುವಕ ಶಿವು ಓದುತ್ತಿದ್ದ ಕಾಲೇಜಿಗೆ, ಊರಿಗೆ ಹೊಸದಾಗಿ ಬಂದಿದ್ದ ಮುಸ್ಲಿಂ ಕುಟುಂಬದ ಯುವತಿ ಆಯೇಶಾ ಸೇರುತ್ತಾಳೆ. ಕಾಲೇಜಲ್ಲೇ ಶಿವುನ ಪರಿಚಯವಾಗುತ್ತದೆ. ಅದೇಗೋ ಇಬ್ಬರ ನಡುವೆ ಅವರಿಗರಿವಿಲ್ಲದ ಹಾಗೆ ಪ್ರೀತಿ ಅರಳುತ್ತದೆ. ಪ್ರೇಮಿಗಳನ್ನಾಗಿಸುತ್ತದೆ.
ಸೌಹಾರ್ದತೆಗೆ ಇನ್ನೊಂದು ಹೆಸರೇ ಭೈರವಕೋಟೆ, ಇಲ್ಲಿ ಜಗಳ, ಹೊಡೆದಾಟ ಪ್ರಕರಣಗಳೇ ನಡೆಯುವುದಿಲ್ಲ. ಆಯೇಶಾಳ ತಂದೆ ಬಾಷಾ ಕೂಡ ಊರಜನರ ಜತೆ ಅನ್ಯೋನ್ಯವಾಗಿರುತ್ತಾನೆ. ಪಕ್ಕದ ಊರು ಕೆಂಪನಹಳ್ಳಿಯಲ್ಲಿರುವ ಆಯೇಶಾಳ ಚಿಕ್ಕಮ್ಮ ಕೂಡ ಟೀಚರ್. ಆಕೆಯದೂ ಪ್ರೇಮ ವಿವಾಹ, ಆದರೆ ವಿವಾಹದ ಬಳಿಕ ವಿಚ್ಛೇದಿತಳಾಗಿರುತ್ತಾಳೆ.
ಬಾಷಾಗೆ ತನ್ನ ಮಗಳನ್ನು ಪೈಲಟ್ ಮಾಡುವ ಕನಸು. ಶಿವು ಕೂಡ ತಾನು ಡಾಕ್ಟರ್ ಆಗಿ ಊರ ಜನರ ಸೇವೆ ಮಾಡುವ ಕನಸಿಟ್ಟುಕೊಂಡಿರುತ್ತಾನೆ.
ಇವರಿಬ್ಬರ ಪ್ರೇಮಕ್ಕೆ ಮುಖ್ಯವಾಗಿ ಅಡ್ಡಿಯಾಗುವುದೇ ಜಾತಿ. ಆಯೇಶಾಳ ತಂದೆಗಿಂತ ಆಕೆಯ ಚಿಕ್ಕಪ್ಪ ಇದಕ್ಕೆ ವಿರೋಧಿ. ಇದೆಲ್ಲದರ ನಡುವೆ ಇವರಿಬ್ಬರ ನಡುವಿನ ಪ್ರೀತಿಕಥೆ ಎಲ್ಲರಿಗೂ ಗೊತ್ತಾಗುತ್ತದೆ. ಅದೇ ಸಮಯದಕ್ಲಿ ಊರಹಬ್ಬ ಬಂದಿರುತ್ತದೆ. ಇಡೀ ಊರೇ ಜಾತ್ರೆಯ ಸಂಭ್ರಮದಲ್ಲಿರುವಾಗ ಒಂದು ಘೋರ ದುರಂತ ನಡೆದುಹೋಗುತ್ತದೆ. ಮನುಷ್ಯತ್ವ ಮರೆತ ಮತಾಂಧರ ಕೈಗೆ ಸಿಕ್ಕ ಪ್ರಣಯದ ಹಕ್ಕಿಗಳ ಕಥೆ ಏನಾಯಿತು ಎನ್ನುವುದೇ ಕಾಗದ ಚಿತ್ರದ ಕ್ಲೈಮ್ಯಾಕ್ಸ್.
ಚಿಗುರು ಮೀಸೆ ಹುಡುಗನಾಗಿ ಆದಿತ್ಯ ಭರವಸೆ ಮೂಡಿಸುತ್ತಾರೆ. ಮುಸ್ಲಿಂ ಹುಡುಗಿಯಾಗಿ ಅಂಕಿತಾ ಜಯರಾಮ್ ನಟನೆ ಉತ್ತಮವಾಗಿದೆ. ಚಿಕ್ಕಮ್ಮನ ಪಾತ್ರದಲ್ಲಿ ನೇಹಾ ಪಾಟೀಲ್ ನ್ಯಾಯ ಒದಗಿಸಿದ್ದಾರೆ.ಊರ ಗೌಡನಾಗಿ ಬಲ ರಾಜವಾಡಿ ಅವರದು ಉತ್ತಮ ಆಬಿನಯ.
ಒಂದೊಳ್ಳೆ ಕಾಲೇಜ್ ಲವ್ ಸ್ಟೋರಿ, ಜೊತೆಗೆ ಜಾತಿ-ಮತ ಅಂತ ಬಡಿದಾಡುವರಿಗೆ ಈ ಚಿತ್ರ ಒಂದು ಪಾಠವಾಗಬಹುದೇನೋ..