Chief Editor
Manohar. R (Manu)
Photo Journalist
chitrataramanu@gmail.com
+91 9845549026
ಅಂತರ್ಸಂಪರ್ಕಿತ ಜೀವನ ಮತ್ತು ಬಗೆಹರಿಯದ ಭಾವನೆಗಳ ಪರಿಶೋಧನೆ.... ರೇಟಿಂಗ್: 3.5/5 ****
Posted date: 20 Sat, Jul 2024 07:50:24 AM
ಅವಳಿ ಜವಳಿ ಅಂತ ಬಂದಾಗ ಒಬ್ಬರಿಗೆ ಏನಾದರೂ ಆದರೆ,  ಅದರ ಪರಿಣಾಮ  ಮತ್ತೊಬ್ಬರಿಗೂ ಆಗುತ್ತದೆ. ಇದು ಸಾಮಾನ್ಯ, ಆದರೆ ಮೂವತ್ತು ವರ್ಷಗಳ ಅಂತರದಲ್ಲಿ ನಡೆದ ಘಟನೆಗಳಲ್ಲಿ ಸಾಮ್ಯತೆ ಕಂಡುಬರುವುದು, ಅವರ ಜೀವನದಲ್ಲಿ ನಡೆದದ್ದು ಇವರ ಜೀವನದಲ್ಲೂ ನಡೆಯುವುದು ತುಂಬಾ ಅಪರೂಪ. 
 
ಹೀಗೆ ಒಬ್ಬರ ಜೀವನದಲ್ಲಿ ನಡೆದಂಥ ಬಹುತೇಕ ಘಟನೆಗಳು ಮತ್ತೊಬ್ಬರ  ಜೀವನದಲ್ಲೂ ಅದೇರೀತಿ ನಡೆಯುತ್ತೆ ಎಂಬ ಕಾನ್ಸೆಪ್ಟ್ ಇಟ್ಟುಕೊಂಡು ನಿರ್ಮಾಣವಾದ ಚಿತ್ರ ಹೆಜ್ಜಾರು.
 
ಹೆಜ್ಜಾರು ಎಂಬ ಊರಲ್ಲಿ  ರಾಜಾರಾಮ್ (ಗೋಪಾಲಕೃಷ್ಣ ದೇಶಪಾಂಡೆ) ಹಾಗೂ ಭಗತ್( ಭಗತ್ ಆಳ್ವ) ಇವರಿಬ್ಬರ ಜೀವನದಲ್ಲಿ  ನಡೆಯೋ  ಘಟನೆಗಳನ್ನು ಹೇಳುವ ಮೂಲಕ ಹೀಗೂ ಸಹ ನಡೆಯಬಹುದು ಎಂದು ನಿರ್ದೇಶಕ ಹರ್ಷಪ್ರಿಯ ಹೇಳಲು ಟ್ರೈ ಮಾಡಿದ್ದಾರೆ. 
 
1965ರಲ್ಲಿ  ಹೆಜ್ಜಾರು ಮೈಲಿಕಲ್ಲಿನ ಬಳಿ ಅಪಘಾತವೊಂದು ನಡೆಯುತ್ತದೆ,  ಪೊಲೀಸ್ ಠಾಣೆಯಿಂದ ತಪ್ಪಿಸಿಕೊಂಡು ಬಂದ ಕಳ್ಳನನ್ನು ಬೆನ್ನಟ್ಟಿದ ಇಬ್ಬರು ಪೊಲೀಸರಿಗೆ  ಲಾರಿಯೊಂದು ಢಿಕ್ಕಿ ಹೊಡೆದು ಕಳ್ಳನೂ ಸೇರಿ  ಮೂವರೂ ಸ್ಥಳದಲ್ಲೇ ಪ್ರಾಣ ಬಿಡುತ್ತಾರೆ. ಅದಾದ  30 ವರ್ಷಗಳ ನಂತರ  ಅಂದರೆ  1995ರಲ್ಲಿ  ಮತ್ತದೇ ಜಾಗದಲ್ಲಿ  ಅದೇ ರೀತಿ ಕಳ್ಳನನ್ನು ಅಟ್ಟಿಸಿಕೊಂಡು ಬಂದ ಪೊಲೀಸರು ಹಾಗೂ ಕಳ್ಳ ಮೂರೂಜನ ಸತ್ತು ಹೋಗುತ್ತಾರೆ. 1965ರ ಅಪಘಾತದಲ್ಲಿ ನಿಧನ ಹೊಂದಿದ  ಪೊಲೀಸ್ ಸತ್ಯಮೂರ್ತಿಯ ಮಗ ರಾಜಾರಾಮ್ ಹಾಗೂ 1995ರಲ್ಲಿ ಮರಣಿಸಿದ ಕೃಷ್ಣಮೂರ್ತಿಯ ಮಗ ಭಗತ್. ಈ ಇಬ್ಬರ ಕಥೆಯಿದು. ರಾಜಾರಾಮ್ ಜೀವನದಲ್ಲಿ ಆಗಲೇ ಒಂದೆರಡು ಅಹಿತಕರ ಘಟನೆಗಳು ನಡೆದು ಆತ ಮಾನಸಿಕ ಅಸ್ವಸ್ಥನಾಗಿ ತಿರುಗಾಡಿಕೊಂಡಿರುತ್ತಾನೆ, ಒಮ್ಮೆ ತನ್ನ ತಂದೆಯಂತೆಯೇ ಭಗತ್ ತಂದೆಯೂ ಅಪಘಾತದಲ್ಲಿ ಮರಣ ಹೊಂದಿರುವ ವಿಷಯ ತಿಳಿದ ರಾಜಾರಾಮ್, ಭಗತ್‌ನನ್ನು ಕಂಡು ಆತನಿಗೆ  ಎಚ್ಚರಿಸುತ್ತಾನೆ. ಅದಾಗಲೇ ರಾಜಾರಾಮ್ ಜೀವನದಲ್ಲಿ ಆತನ ಪ್ರೇಯಸಿಯ ಕೊಲೆಯಾಗಿರುತ್ತದೆ. ಜೊತೆಗೆ ಆತನ ತಾಯಿಯೂ ಸತ್ತು ಹೋಗಿರುತ್ತಾಳೆ. 
 
ಭಗತ್ ಅದೇ ಊರಿನ ಅನಾಥ ಹುಡುಗಿ  ಜಾನಕಿ (ಲಿಯೋನಿಲ್ಲಾ ಶ್ವೇತಾ ಡಿಸೋಜ)ಯನ್ನು ಪ್ರೀತಿಸಿರುತ್ತಾನೆ.  ಭಗತ್ ಗೊಂದು ವಿಚಿತ್ರ ಖಾಯಿಲೆ ಇರುತ್ತದೆ. ಅದು ಆತನ ತಾಯಿಗೆ ಮಾತ್ರವೇ ಗೊತ್ತಿರುತ್ತೆ, ಹೀಗೇ ಸಾಗುವ ಕಥೆ ಮಧ್ಯಂತರದ ವೇಳೆಗೆ ಕುತೂಹಲಕರ ತಿರುವು ಪಡೆಯುತ್ತದೆ. ಸೆಕೆಂಡ್ ಹಾಫ್ ನಲ್ಲಿ  ಅದರ ಮೇಲೇ ನಡೆಯುವ  ಕಥೆ  ಕುತೂಹಲ ಹುಟ್ಟು ಹಾಕುತ್ತದೆ, ರಾಜಾರಾಮ್  ತನ್ನ ಜೀವನದಲ್ಲಿ ನಡೆದ ಘಟನೆಯನ್ನು ಭಗತ್ ಗೆ  ತಿಳಿಸಿ  ನಿನ್ನ ಪ್ರೇಯಸಿಯೂ  ಕೊಲೆಯಾಗುತ್ತಾಳೆ, ಅಲ್ಲದೆ ನಿನ್ನ ತಾಯಿಯೂ ಮರಣ ಹೊಂದುತ್ತಾಳೆ,  ಪ್ರೇಯಸಿಯನ್ನು ಉಳಿಸಿಕೋ ಎಂದು ಹೇಳುತ್ತಾನೆ, ಇದನ್ನು ಭಗತ್ ನಂಬದಿದ್ದರೂ ಆತನಿಗೆ  ಒಳಗೊಳಗೇ ಆತಂಕ ಮನೆಮಾಡಿರುತ್ತದೆ. ಜಾನಕಿ ನಿಜವಾಗಿಯೂ ಕೊಲೆಯಾಗ್ತಾಳಾ ? ಭಗತ್ ತಾಯಿಯೂ ಮರಣ ಹೊಂದ್ತಾಳಾ, ರಾಜಾರಾಂ ಪ್ರೇಯಸಿಯ ಕೊಲೆಗಾರ ಯಾರಾಗಿರಬಹುದು ಇಂಥ ಹಲವಾರು ಪ್ರಶ್ನೆಗಳನ್ನು ಹುಟ್ಟು ಹಾಕುತ್ತಾ ಸಾಗುವ ಕಥೆಗೆ ಚಿತ್ರದ ಅಂತ್ಯದಲ್ಲಿ  ಊಹಿಸಲಾರದ ರಹಸ್ಯವೊಂದು ಬಯಲಾಗುತ್ತದೆ, ಅದೇನೆಂದು ಚಿತ್ರಮಂದಿರದಲ್ಲೇ ನೋಡಬೇಕು, ಎರಡು ಕಾಲಘಟ್ಟಗಳಲ್ಲಿ ನಡೆಯುವ ಕಥೆಯನ್ನು ಪ್ಯಾರಲಲ್ ಆಗಿ ಹೇಳಿರುವುದು  ಕನ್ನಡದಲ್ಲಿ ಇದೇ ಮೊದಲೆನ್ನಬಹುದು. ನಿರ್ದೇಶಕ ಹರ್ಷಪ್ರಿಯ ತನ್ನ ಮೊದಲ ಪ್ರಯತ್ನದಲ್ಲೇ  ನೋಡುಗರನ್ನು ಚಿಂತನೆಗೆ ಹಚ್ಚುವ ಕೆಲಸ  ಮಾಡಿದ್ದಾರೆ.  
 
ರಾಮ್‌ಜಿ ಅವರ ಗಗನ ಎಂಟರ್‌ ಪ್ರೈಸಸ್ ನ ಪ್ರಥಮ ಚಿತ್ರವಾಗಿ ಹೆಜ್ಜಾರು  ಮೂಡಿಬಂದಿದೆ.  ನಾಯಕ ಭಗತ್ ಆಳ್ವ ಲವಲವಿಕೆಯ ಅಭಿನಯ ನೀಡಿದ್ದು, ಅನಾಥ ಯುವತಿ ಜಾನಕಿಯಾಗಿ  ಲಿಯೋನಿಲ್ಲಾ ಶ್ವೇತಾ ಡಿಸೋಜ  ಅವರ ಸಹಜಾಭಿನಯ ಗಮನ ಸೆಳೆಯುತ್ತದೆ. ಹಿರಿಯನಟ ಗೋಪಾಲಕೃಷ್ಣ ದೇಶಪಾಂಡೆ  ತಮ್ಮ ತೂಕದ  ಪಾತ್ರಕ್ಕೆ  ಜೀವ ತುಂಬಿದ್ದಾರೆ.  ಮೊದಲಬಾರಿಗೆ ವಿಲನ್‌ಶೇಡ್‌ನಲ್ಲಿ ಕಾಣಿಸಿಕೊಂಡಿರುವ  ನಟ ನವೀನ್ ಕೃಷ್ಣ ಅವರ ರಾಲುಕ್ ಇಷ್ಟವಾಗುತ್ತದೆ.  ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತ,   ಅಮರ್‌ಗೌಡ ಅವರ ಕ್ಯಾಮರಾ ವರ್ಕ್ ಚಿತ್ರದ ಹೈಲೈಟ್‌ಗಳಲೊಂದು ಎನ್ನಬಹುದು.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಅಂತರ್ಸಂಪರ್ಕಿತ ಜೀವನ ಮತ್ತು ಬಗೆಹರಿಯದ ಭಾವನೆಗಳ ಪರಿಶೋಧನೆ.... ರೇಟಿಂಗ್: 3.5/5 **** - Chitratara.com
Copyright 2009 chitratara.com Reproduction is forbidden unless authorized. All rights reserved.