ಮಾಡೆಲಿಂಗ್ ಕ್ಷೇತ್ರದಿಂದ ಬಂದು ಸಿನಿಮಾ ನಿರ್ಮಾಣ ಮಾಡುವುದರ ಜೊತೆಗೆ ಹೀರೋ ಆಗಿ ಅಭಿನಯಿಸಿ ಸತ್ವ ಪರೀಕ್ಷೆಗೆ ನಿಂತಿರುವ ರೋಹಿತ್ ನಟನೆಯ `ರಕ್ತಾಕ್ಷ` ಇದೇ ವಾರ ಬಿಡುಗಡೆ ಕಾಣುತ್ತಿದೆ.
ನಟನೆ, ಡ್ಯಾನ್ಸ್ ಮತ್ತು ಸಾಹಸದ ತರಬೇತಿ ಜೊತೆಗೆ ಉತ್ತಮ ದೇಹ ವಿನ್ಯಾಸದ ಅತ್ಯುತ್ತಮ ಕಲ್ಪನೆ ಹೊಂದಿರುವ ರೋಹಿತ್ ನೋಡಲು ಥೇಟ್ ಸಲ್ಮಾನ್ ಖಾನ್.
ಇದೀಗ ಅವರು ಮಾಡಿ ಮುಗಿಸಿರುವ ರಕ್ತಾಕ್ಷ ಹೊಸ ನೆಲೆಯಲ್ಲಿರುವ ಆಧುನಿಕ ಸಂವೇದನೆಯ ಚಿತ್ರ. ಸಸ್ಪೆನ್ಸ್ ಥ್ರಿಲ್ಲರ್ ಕಥಾ ಹಂದರ ಅಭಿಮಾನಿಗಳಿಗೆ ರೋಚಕತೆ ಮುಟ್ಟಿಸುತ್ತದೆ ಎಂಬುದು ರೋಹಿತ್ ನಂಬಿಕೆ.
ಹಾಗಾಗಿ ಪ್ರಚಾರದ ಭರಟೆಯ ಜೊತೆಗೆ ಚಿತ್ರದ ಆಶಯಗಳನ್ನು ಹೋದ ಕಡೆಯಲ್ಲಿ ಹೇಳಲಾಗುತ್ತಿದೆ ಮತ್ತು ಜನರು ಅದರಲ್ಲೂ ಯುವ ಸಮೂಹ ಆಸಕ್ತಿಯಿಂದ ಸ್ಪಂದಿಸುತ್ತಿದೆ.
ಈಗಾಗಲೇ ರಾಯಚೂರು, ದೇವದುರ್ಗ, ದಾವಣಗೆರೆ, ಕಲ್ಬುರ್ಗಿ, ಬಾಲಗಕೋಟೆ, ಹೊಸಪೇಟೆ ಹೀಗೆ ಉತ್ತರ ಕರ್ನಾಟಕ ಬಳಿಕ ತುಮಕೂರು, ಬೆಂಗಳೂರು ಎಲ್ಲಾ ಕಡೆಗಳಲ್ಲಿ ಪ್ರಚಾರದ ಭರಾಟೆ ಮುಂದುವರೆದಿದೆ.
ಸಾಯಿ ಪ್ರೊಡಕ್ಷನ್ ಹೌಸ್ ನಿರ್ಮಾಣ ಸಂಸ್ಥೆಯ ಮೂಲಕ ‘ರಕ್ತಾಕ್ಷ’ ಸಿನಿಮಾವನ್ನು ರೋಹಿತ್ ನಿರ್ಮಾಣ ಮಾಡಿದ್ದಾರೆ. ವಾಸುದೇವ ಎಸ್.ಎನ್ ಇದರ ನಿರ್ದೇಶಕರು. ಧೀರೇಂದ್ರ ಡಾಸ್ ಸಂಗೀತ, ಸುಜಿತ್ ವೆಂಕಟರಾಮಯ್ಯ ಸಾಹಿತ್ಯ ಚಿತ್ರಕ್ಕಿದೆ.
ಪ್ರಮೋದ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ರೂಪಾ ರಾಯಪ್ಪ, ಅರ್ಚನಾ ಕೊಟ್ಟಿಗೆ, ರಚನಾ ದಶರತ್, ನಿವೀಕ್ಷಾ ನಾಯ್ಡು, ಗುರುದೇವ ನಾಗರಾಜ, ಪ್ರಭು, ವಿಶ್ವ, ಭದ್ರಿ ನಾರಾಯಣ,, ಬಸವರಾಜ ಆದಾಪುರ ಅವರ ತಾರಾಗಣವಿದೆ.