ನಿರ್ದೇಶನ: ವಾಸುದೇವ ಎಸ್.ಎನ್,
ನಿರ್ಮಾಣ: ರೋಹಿತ್ ಷಣ್ಮುಖಪ್ಪ,
ತಾರಾಗಣ: ರೋಹಿತ್, ರೂಪಾ ರಾಯಪ್ಪ, ಅರ್ಚನಾ ಕೊಟ್ಟಿಗೆ, ರಚನಾ ದಶರತ್, ಗುರುದೇವ್ ನಾಗರಾಜ್, ಪ್ರಮೋದ್ ಶೆಟ್ಟಿ ಇತರರು..
ಸೋಷಿಯಲ್ ಮೀಡಿಯಾ ಸಾಮಾನ್ಯ ಜನರ ಕೈಗೆ ಬಂದಾಗಿನಿಂದ, ಸಮಾಜದಲ್ಲಿ ಸ್ವಾಸ್ಥ್ಯವೇ ಹಾಳಾಗುತ್ತಿದೆ. ಅಂಥದೇ ವಂಚನೆಗೆ ಜಾಲಕ್ಕೆ ಬಲಿಯಾಗಿ ತನ್ನ ಜೀವವನ್ನೇ ಕಳಿದುಕೊಂಡ ಸಹೋದರ ಸ್ಯಾಂಡಿಯ ಹಂತಕರ ವಿರುದ್ದ ನಾಯಕ ರೋಹಿತ್ ಹೇಗೆ ಸೇಡು ತೀರಿಸಿಕೊಳ್ಳುತ್ತಾನೆ. ತನ್ನ ಚಾಣಾಕ್ಷತೆ ಉಪಯೋಗಿಸಿ ಕೊಲೆಗಳನ್ನು ಮಾಡೋ ಮೂಲಕ ಪೊಲೀಸರಿಗೇ ಹೇಗೆ ಚಳ್ಳೇ ಹಣ್ಣು ತಿನಿಸುತ್ತಾನೆ ಎಂಬುದನ್ನು ಮೈಂಡ್ ಗೇಮ್ ತರದ ಕಥೆಯ ಮೂಲಕ ನಿರೂಪಿಸಿರುವುದೇ ಈ ಚಿತ್ರದ ಹೈಲೈಟ್.
ರಿಯಾ, ಸೈದಾ, ಶೈನಿ ಈ ಮೂವರು ಯುವತಿಯರನ್ನು ನಾಯಕ ಯಾಕೆ ಕೊಲೆ ಮಾಡುತ್ತಾನೆ ? ಆತನಿಗೆ ಅವರ ಮೇಲಿರುವ ದ್ವೇಶವಾದರೂ ಏನು ಎಂಬುದರ ಮೇಲೇ ಇಡೀ ಚಿತ್ರದ ಕಥಾಹಂದರ ಸಾಗುತ್ತದೆ. ಚಿತ್ರದ ದ್ವಿತೀಯಾರ್ಧದಲ್ಲಿ ಕಥೆ ಬೇರೆಯದೇ ಟ್ವಿಸ್ಟ್ ಪಡೆದುಕೊಂಡು ಸಾಗುತ್ತದೆ.
ಹಾಗೆ `ರಕ್ತಾಕ್ಷ` ಒಂದು ಸೇಡಿನ ಕಥೆ. ಆದೇ ಅದನ್ನು ಹೇಳಿಕೊಂಡು ಹೋಗಿರುವ ಶೈಲಿ ಕುತೂಹಲ ಮೂಡಿಸುತ್ತದೆ. ಮೂವರು ಯುವತಿಯರು ಕಣ್ಮರೆಯಾಗುತ್ತಾರೆ. ಅದರಲ್ಲೊಬ್ಬಳು ಪೊಲೀಸ್ ಅಧಿಕಾರಿಯ ಗೆಳತಿ. ಅವರಿಬ್ಬರೂ ಜೊತೆಗಿರುವಾಗಲೇ ಅವಳು ಸಾಯುತ್ತಾಳೆ. ನಂತರ ಉಳಿದಿಬ್ಬರ ಕೊಲೆಯೂ ನಡೆದಿಹೋಗುತ್ತದೆ. ಆ ಕೊಲೆಗಳ ಜಾಡು ಹಿಡಿದು ಹೊರಟ ಪೊಲೀಸರಿಗೆ ಸಾಕಷ್ಟು ಹುಡುಕಾಟದ ನಂತರ ಕೊನೆಗೂ ಕೊಲೆ ಮಾಡಿದ್ದು ಯಾರು ಎಂದು ಗೊತ್ತಾಗುತ್ತದೆ.
`ಪ್ರತಿ ಮೋಸ ಶುರುವಾಗೋದು ನಂಬಿಕೆಯಿಂದಲೇ …` ಎನ್ನುವ ಮಾತಿನ ಸುತ್ತ ಚಿತ್ರಕಥೆ ಸುತ್ತುತ್ತದೆ. ಆಧುನಿಕ ತಂತ್ರಜ್ಞಾನ ಮತ್ತು ಸೋಷಿಯಲ್ ಮೀಡಿಯಾ ಬಳಸಿಕೊಂಡು,ಮುಗ್ಧರನ್ನು ನಂಬಿಸಿ ಹೇಗೆಲ್ಲಾ ಮೋಸ ಮಾಡುತ್ತಾರೆ ಮತ್ತು ಅದರಿಂದ ಏನೆಲ್ಲಾ ಆಗುತ್ತದೆ ಎಂಬುದನ್ನು ಹೇಳುವ ಪ್ರಯತ್ನ ಮಾಡಲಾಗಿದೆ. ಚಿತ್ರದ ನಾಯಕ ರೋಹಿತ್ ತೆರೆಮೇಲೆ ಬಾಲಿವುಡ್ ಹೀರೋ ಥರ ಕಾಣಿಸುತ್ತಾರೆ. ಮೊದಲ ಪ್ರಯತ್ನದಲ್ಲೇ ಗಮನ ಸೆಳೆಯುತ್ತಾರೆ. ಅದರಲ್ಲೂ ಹೊಡೆದಾಟದ ದೃಶ್ಯಗಳಲ್ಲಿ ಲೀಲಾಜಾಲವಾಗಿ ನಿಭಾಯಿಸಿದ್ದಾರೆ. ಅಭಿನಯದಲ್ಲಿ ಒಂದಷ್ಟು ಮಾಗಿದರೆ ಮುಂದೆ ಉತ್ತಮ ಭವಿಷ್ಯವಿದೆ.
ಶೆಟ್ಟಿ ಪಾತ್ರದಲ್ಲಿ ಪ್ರಮೋದ್ ಶೆಟ್ಟಿ ಹೀಗೆ ಬಂದು ಹಾಗೆ ಹೋಗುತ್ತಾರೆ. ಪೊಲೀಸ್ ಅಧಿಕಾರಿಯಾಗಿ ಗುರುದೇವ್ ನಾಗರಾಜ ತಮ್ಮ ಕೆಲಸವನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ದಾಸ್ ಮೋಡ್ ಅವರ ಹಿನ್ನೆಲೆ ಸಂಗೀತ ಚಿತ್ರದ ಸನ್ನಿವೇಶಗಳಿಗೆ ಪೂರಕವಾಗಿದೆ.