Chief Editor
Manohar. R (Manu)
Photo Journalist
chitrataramanu@gmail.com
+91 9845549026
ತಮಿಳಿನ ಖ್ಯಾತ ನಿರ್ದೇಶಕ ಪವಿತ್ರನ್ ಸಾರಥ್ಯದಲ್ಲಿ ಮೂಡಿಬಂದ `ಕರ್ಕಿ`ಹೀರೋ ಜಯಪ್ರಕಾಶ್ (ಜೆ.ಪಿ) ಮಾಸ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ
Posted date: 23 Fri, Aug 2024 05:23:23 PM
ಈಗಾಗಲೇ ತನ್ನ ಟೈಟಲ್ ಮತ್ತು ಫಸ್ಟ್ ಲುಕ್ ಮೂಲಕ ಸಿನಿಮಂದಿಯ ಗಮನ ಸೆಳೆದಿರುವ `ಕರ್ಕಿ` ಸಿನೆಮಾ ತೆರೆಗೆ ಬರಲು ಭರದ ಸಿದ್ದತೆ ನಡೆಸುತ್ತಿದೆ. ಸದ್ಯ ನಿಧಾನವಾಗಿ `ಕರ್ಕಿ` ಸಿನೆಮಾದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಇದೀಗ ಮೊದಲ ಹಂತದಲ್ಲಿ ಸಿನೆಮಾದ ಟೀಸರ್ ಮತ್ತು ಟ್ರೇಲರ್ ಅನ್ನು ಬಿಡುಗಡೆ ಮಾಡಿದೆ. ಇತ್ತೀಚೆಗೆ ನಡೆದ ಸಮಾರಂಭದಲ್ಲಿ ‘ಕರ್ಕಿ’ ಸಿನೆಮಾದ ಟೀಸರ್ ಮತ್ತು ಟ್ರೇಲರ್ ಅದ್ಧೂರಿಯಾಗಿ ಬಿಡುಗಡೆಯಾಗಿದ್ದು, ಈ ವೇಳೆ ‘ಕರ್ಕಿ’ ಸಿನೆಮಾದ ಕಲಾವಿದರು, ತಂತ್ರಜ್ಞರು ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು ಹಾಜರಿದ್ದರು. 

ಮೊದಲಿಗೆ `ಕರ್ಕಿ` ಸಿನೆಮಾದ ಹಾಡುಗಳಿಗೆ ಸಾಹಿತ್ಯ ರಚಿಸಿರುವ ಚಿತ್ರ ಸಾಹಿತಿ ಕವಿರಾಜ್ ಮಾತನಾಡಿ, ತಮಿಳಿನ ಹಿರಿಯ ಮತ್ತು ಅನುಭವಿ ನಿರ್ದೇಶಕ ಪವಿತ್ರನ್ `ಕರ್ಕಿ` ಸಿನೆಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. ಈ ಸಿನೆಮಾದಲ್ಲಿ ಆರು ಹಾಡುಗಳಿದ್ದು, ಎಲ್ಲಾ ಹಾಡುಗಳಿಗೆ ಸಾಹಿತ್ಯ ಬರೆಯಲು ಅವಕಾಶ ಸಿಕ್ಕಿದೆ. ಪವಿತ್ರನ್ ಅವರಂಥ ನಿರ್ದೇಶಕರ ಜೊತೆ ಕೆಲಸ ಮಾಡಲು `ಕರ್ಕಿ` ಸಿನೆಮಾದಲ್ಲಿ ಅವಕಾಶ ಸಿಕ್ಕಿದ್ದು, ನನಗೂ ಹೊಸ ಅನುಭವ ನೀಡಿದೆ. ಪ್ರತಿ ಹಾಡಿನ ಒಂದೊಂದು ಪದವನ್ನೂ ಅವರೂ ಅರ್ಥೈಸಿಕೊಂಡು, ಸ್ಪಂದಿಸುತ್ತಿದ್ದರು. ನಮ್ಮ ನಡುವಿನ ಕಥೆಯೊಂದು ಹೊಸ ರೀತಿಯಲ್ಲಿ ಮೂಡಿಬಂದಿದ್ದು, ‘ಕರ್ಕಿ’ ನೋಡುಗರಿಗೆ ಹೊಸ ಅನುಭವ ಕೊಡಲಿದೆ’ ಎಂದು ತಮ್ಮ ಅನಿಸಿಕೆ ಹಂಚಿಕೊಂಡರು.

ಈಗಾಗಲೇ ಸುಮಾರು 20ಕ್ಕೂ ಹೆಚ್ಚು ಸಿನೆಮಾಗಳನ್ನು ವಿತರಿಸಿರುವ ವಿತರಕ ಮತ್ತು ಉದ್ಯಮಿ ಪ್ರಕಾಶ್ ಪಳನಿ `ಕರ್ಕಿ` ಸಿನೆಮಾಕ್ಕೆ ಬಂಡವಾಳ ಹೂಡಿ ನಿರ್ಮಿಸಿದ್ದಾರೆ. ತಮ್ಮ ಚೊಚ್ಚಲ ನಿರ್ಮಾಣದ ಸಿನೆಮಾದ ಬಗ್ಗೆ ಮಾತನಾಡಿದ ಪ್ರಕಾಶ್ ಪಳನಿ, `ಸಿನೆಮಾದ ಕಥೆ ಇಷ್ಟವಾಗಿ ಈ ಸಿನೆಮಾವನ್ನು ನಿರ್ಮಿಸಲು ಮುಂದಾದೆ.  ಮೊದಲು ಈ ಸಿನೆಮಾವನ್ನು ಕನ್ನಡದ ದೊಡ್ಡ ನಿರ್ದೇಶಕರೊಬ್ಬರು ಮಾಡಬೇಕಿತ್ತು. ಆದರೆ ಕಾರಣಾಂತರಗಳಿಂದ ಅವರು ನಿರ್ದೇಶನ ಮಾಡಲಾಗಲಿಲ್ಲ. ಅವರ ಬದಲಾಗಿ ತಮಿಳು ನಿರ್ದೇಶಕ ಪವಿತ್ರನ್ ಈ ಸಿನೆಮಾವನ್ನು ನಿರ್ದೇಶಿಸಿದರು. ಅವರ ಅನುಭದಲ್ಲಿ `ಕರ್ಕಿ` ಸಿನೆಮಾ ತುಂಬ ಚೆನ್ನಾಗಿ ಮೂಡಿಬಂದಿದೆ. ಈಗಾಗಲೇ ಸಿನೆಮಾದ ಎಲ್ಲಾ ಕೆಲಸಗಳು ಮುಗಿದಿದ್ದು, ಇದೇ ಸೆಪ್ಟೆಂಬರ್ ಅಂತ್ಯದೊಳಗೆ ಸಿನೆಮಾವನ್ನು ಬಿಡುಗಡೆ ಮಾಡುವ ಯೋಚನೆಯಿದೆ. ಪ್ರೇಕ್ಷಕರಿಗೂ ‘ಕರ್ಕಿ’ ಸಿನೆಮಾ ಇಷ್ಟವಾಗಲಿದೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು. 

ಬಾಲನಟನಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದ್ದ, ಈಗಾಗಲೇ `ವಾಟ್ಸಾಪ್ ಲವ್`, `ರಾಜರಾಣಿ` ಸೇರಿದಂತೆ ಕೆಲ ಸಿನೆಮಾಗಳಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದ ಜಯಪ್ರಕಾಶ್ (ಜೆ.ಪಿ) ರೆಡ್ಡಿ`ಕರ್ಕಿ` ಸಿನೆಮಾದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಈ ಸಿನೆಮಾದಲ್ಲಿ ಕಾನೂನು ಪದವಿಧರನಾಗಬೇಕು ಎಂಬ ಕನಸು ಇಟ್ಟುಕೊಂಡ ಹಳ್ಳಿ ಹುಡುಗನ ಪಾತ್ರದಲ್ಲಿ ಜೆ. ಪಿ ಅಭಿನಯಿಸಿದ್ದಾರೆ. ತಮ್ಮ ಪಾತ್ರದ ಬಗ್ಗೆ ಮಾತನಾಡಿದ ನಾಯಕ ಜಯಪ್ರಕಾಶ್ (ಜೆ.ಪಿ) ರೆಡ್ಡಿ,  ಈ ಸಿನೆಮಾದಲ್ಲಿ ನನ್ನದು ಮುತ್ತುರಾಜ್ ಎಂಬ ಹಳ್ಳಿ ಹುಡುಗನ ಪಾತ್ರ. ಜಾತಿ ಮತ್ತು ಜನಾಂಗೀಯ ವಿಷಯವನ್ನು ಮನ ಮುಟ್ಟುವಂತೆ ಈ ಸಿನೆಮಾದಲ್ಲಿ ಹೇಳಲಾಗಿದೆ. ಸ್ನೇಹ, ಪ್ರೀತಿ, ಪ್ರೇಮ ಮತ್ತು ಮಾನವೀಯತೆಯ ಅಂಶಗಳ ಸುತ್ತ ಈ ಸಿನೆಮಾ ಸಾಗುತ್ತದೆ. ಆದಷ್ಟು ನೈಜವಾಗಿ ಸಿನೆಮಾದ ಕಥೆ, ಪಾತ್ರಗಳು ಮೂಡಿಬಂದಿದೆ. ಎಲ್ಲ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುವಂತೆ `ಕರ್ಕಿ` ಸಿನೆಮಾ ಮೂಡಿಬಂದಿದೆ’ ಎಂದರು

`ಕರ್ಕಿ` ಸಿನೆಮಾದಲ್ಲಿ ನಾಯಕ ನಟ ಜಯಪ್ರಕಾಶ್ (ಜೆ. ಪಿ) ರೆಡ್ಡಿ ಅವರಿಗೆ ಮಲೆಯಾಳಿ ಬೆಡಗಿ ಮೀನಾಕ್ಷಿ ನಾಯಕಿಯಾಗಿ ಜೋಡಿಯಾಗಿದ್ದಾರೆ. ಉಳಿದಂತೆ ಸಾಧುಕೋಕಿಲ, ಬಲರಾಜವಾಡಿ, ಯತಿರಾಜ್, ಮಿಮಿಕ್ರಿ ಗೋಪಿ, ಸ್ವಾತಿ, ಸವಿತಾ ಮೊದಲಾದವರು `ಕರ್ಕಿ` ಸಿನೆಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. 

`ಥರ್ಡ್ ಐ ಮೀಡಿಯಾ`ಬ್ಯಾನರಿನಲ್ಲಿ ಪ್ರಕಾಶ್ ಪಳನಿ ನಿರ್ಮಿಸಿರುವ `ಕರ್ಕಿ` ಸಿನೆಮಾಕ್ಕೆ ತಮಿಳಿನ ಖ್ಯಾತ ನಿರ್ದೇಶಕ ಪವಿತ್ರನ್ ಆ್ಯಕ್ಷನ್-ಕಟ್ ಹೇಳಿದ್ದಾರೆ. ‘ಕರ್ಕಿ’ ಸಿನೆಮಾಕ್ಕೆ ಹೃಷಿಕೇಶ ಛಾಯಾಗ್ರಹಣ, ಶ್ರೀ ಕ್ರೇಜಿಮೈಂಡ್ಸ್ ಸಂಕಲನವಿದೆ. `ಕರ್ಕಿ` ಸಿನೆಮಾದ ಆರು ಹಾಡುಗಳಿಗೆ ಕವಿರಾಜ್ ಸಾಹಿತ್ಯವಿದ್ದು, ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ. 

ಶಿವಮೊಗ್ಗ, ದಾವಣಗೆರೆ, ಬಂಗಾರಪೇಟೆ, ಕೋಲಾರ, ಬಾಗಲಕೋಟೆ ಸುತ್ತಮುತ್ತ `ಕರ್ಕಿ` ಸಿನೆಮಾದ ಬಹುತೇಕ ಚಿತ್ರೀಕರಣ ನಡೆಸಲಾಗಿದೆ. ಸದ್ಯ ‘ಕರ್ಕಿ’ ಸಿನೆಮಾದ ಟೀಸರ್ ಮತ್ತು ಟ್ರೇಲರ್ ಸೋಶಿಯಲ್ ಮೀಡಿಯಾಗಳಲ್ಲಿ ಒಂದಷ್ಟು ಸದ್ದು ಮಾಡುತ್ತಿದ್ದು, `ಕರ್ಕಿ` ಯ ಕಮಾಲ್ ಥಿಯೇಟರಿನಲ್ಲಿ ಹೇಗೆ ನಡೆಯಲಿದೆ ಎಂಬುದು ಸಿನೆಮಾ ಬಿಡುಗಡೆಯಾದ ಮೇಲಷ್ಟೇ ಗೊತ್ತಾಗಲಿದೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ತಮಿಳಿನ ಖ್ಯಾತ ನಿರ್ದೇಶಕ ಪವಿತ್ರನ್ ಸಾರಥ್ಯದಲ್ಲಿ ಮೂಡಿಬಂದ `ಕರ್ಕಿ`ಹೀರೋ ಜಯಪ್ರಕಾಶ್ (ಜೆ.ಪಿ) ಮಾಸ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ - Chitratara.com
Copyright 2009 chitratara.com Reproduction is forbidden unless authorized. All rights reserved.