ನಮ್ಮ ನೆಲದ , ಮೂಲ ಸೊಗಡನ್ನ ಬಿಂಬಿಸುವಂತಹ ಚಿತ್ರಗಳು ಬರುವುದು ಬಹಳ ಅಗತ್ಯ. `ಅನ್ನಂ ಪರಬ್ರಹ್ಮ ಸ್ವರೂಪಂ` ಹೌದು ಸಾಮಾನ್ಯವಾಗಿ ಒಂದು ಮಾತಿದೆ, ಅನ್ನ ದ ಮಹತ್ವ ಹಸಿದವನಿಗೆ ಮಾತ್ರ ಗೊತ್ತು ಎನ್ನುವುದು. ಅಂತಹದ್ದೇ ಒಂದು ಅನ್ನದ ವಿಚಾರವನ್ನು ಮೂಲವಾಗಿಟ್ಟುಕೊಂಡು ಗ್ರಾಮೀಣ ಭಾಗದ ಸುತ್ತ ನೈಜಕ್ಕೆ ಹತ್ತಿರವಾಗಿ ಸೆರೆಹಿಡಿದಿರುವಂತಹ "ಅನ್ನ" ಚಿತ್ರದ ಟೈಲರ್ ಹಾಗೂ ಹಾಡುಗಳ ಬಿಡುಗಡೆ ಕಾರ್ಯಕ್ರಮ ಇತ್ತೀಚಿಗೆ ನೆರವೇರಿತು. ಹಾಗೆಯೇ ಈ ಚಿತ್ರದ ಟೀಸರ್ ಬಿಡುಗಡೆಯನ್ನು ನಿರ್ದೇಶಕ ಯೋಗರಾಜ್ ಭಟ್ ಮೂಲಕ ಮಾಡಿಸಿದ ವಿಡಿಯೋವನ್ನು ಪ್ರದೇಶಿಸಲಾಯಿತ್ತು. ಈ ಚಿತ್ರದ ಕುರಿತು ಮಾಹಿತಿಯನ್ನು ನೀಡಲು ತಂಡ ಪತ್ರಿಕಾಗೋಷ್ಠಿಯನ್ನು ಆಯೋಜನೆ ಮಾಡಿತು.
ಈ ಚಿತ್ರದ ನಿರ್ದೇಶಕ ಎನ್. ಎಸ್. ಇಸ್ಲಾಹುದ್ದೀನ್ ಮಾತನಾಡುತ್ತಾ ನಾನು ಮೂಲತಃ ಮೈಸೂರುನವನು, ರಂಗಾಯಣದಲ್ಲಿ ತರಬೇತಿ ಪಡೆದು ಶಿಬಿರಗಳಲ್ಲಿ ಪಾಲ್ಗೊಳ್ಳುತ್ತಾ, ನಾಟಕಗಳನ್ನ ನಿರ್ದೇಶನ ಮಾಡಿದ್ದೇನೆ. ನಾಲ್ಕು ಗೋಲ್ಡ್ ಮೆಡಲ್ ಪಡ್ದಿದ್ದೀನಿ. ಇಂಗ್ಲೆಂಡ್ ನಲ್ಲಿ ಫಿಲಂ ಮೇಕಿಂಗ್ ತರಬೇತಿಯನ್ನು ಕೂಡ ಪಡೆದು ಬಂದೆ. ಟಿವಿ ಚಾನೆಲ್ ಗಳಲ್ಲಿ ಕೂಡ ಕೆಲಸ ಮಾಡಿದ್ದೇನೆ. ಒಂದಷ್ಟು ಜಾಹೀರಾತುಗಳ ನಿರ್ದೇಶನವನ್ನ ಮಾಡಿದೆ. 2009ರಲ್ಲಿ ಸಿನಿಮಾ ನಿರ್ದೇಶನ ಮಾಡುವ ಆಲೋಚನೆ ಮೂಡಿತು. ಈಗಿನ ಸ್ಟಾರ್ ನಟ ಧನಂಜಯ, ನಾಗಭೂಷಣ, ಪೂರ್ಣ ನನ್ನ ಗೆಳೆಯರು , ನಂತರ ನಾನು ಹಾಗೂ ಮತ್ತಷ್ಟು ಗೆಳೆಯರು ಸೇರಿ ನೋಡಿ ಸ್ವಾಮಿ ನಾವಿರೋದೆ ಹೀಗೆ ... ಎಂಬ ಸಿನಿಮಾ ಆರಂಭಿಸಿದ್ವಿ, ತದನಂತರ ಬೇರೆ ಬೇರೆ ಕೆಲಸದಲ್ಲಿ ನಿರತನಾದೆ. ಒಂದಷ್ಟು ಕಾರ್ಯಕ್ರಮಗಳ ರೂವಾರಿಯಾಗಿ ಕೆಲಸ ಮಾಡುತಿದ್ದೆ. ಒಮ್ಮೆ ನನ್ನ ಗೆಳೆಯ ಸಂಗೀತ ನಿರ್ದೇಶಕ ನಾಗೇಶ್ ಕಂದೀಗಾಲ ಈ ಕಥೆಯ ಬಗ್ಗೆ ಹೇಳಿದರು. ಇದು ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಂತ ಹನೂರು ಚೆನ್ನಪ್ಪನವರ ಕಥಾಸಂಕಲನದ ಅನ್ನ ಎಂಬ ಕಥೆಯ ಬಗ್ಗೆ ತಿಳಿದುಕೊಂಡು ಒಂದಷ್ಟು ಈ ಕಥೆಯ ಮೇಲೆ ಕೆಲಸವನ್ನು ಆರಂಭಿಸಿದ್ವಿ. 80ರ ಕಾಲಘಟ್ಟದಲ್ಲಿ ನಡೆಯುವ ಕಥೆ ಇದಾಗಿದೆ. ನನಗೂ ಕೂಡ ಅನ್ನದ ಬಗ್ಗೆ ಅರಿವಿದೆ , ಏಕೆಂದರೆ ನಾವು ಕೂಡ ರೇಷನ್ ಕಾರ್ಡ್ ಮೂಲಕ ಅಕ್ಕಿಯನ್ನು ಪಡೆದಿದ್ದೇವೆ. ಕೆಲವೊಂದು ಹಳ್ಳಿಗಾಡುಗಳಲ್ಲಿ ಅನ್ನ ಹಬ್ಬದ ದಿನ ಮಾತ್ರ ಮಾಡುವುದು ಅಂತ ತಿಳಿದಿತ್ತು. ಈ ಕಥೆಯು ಇದರ ಸುತ್ತವೇ ತಿರುಗಲಿದ್ದು, ಅನ್ನ ಎಷ್ಟು ಮುಖ್ಯ , ಅದರ ಮಹತ್ವ ಏನು, ಎಂಬುದರ ಜೊತೆಗೆ ಹಳ್ಳಿಯ ಬಡಕುಟುಂಬದಲ್ಲಿ ಬೆಳೆದ ಹುಡುಗನೊಬ್ಬ ಜಾತ್ರೆಯಲ್ಲಿ ನಾಪತ್ತೆಯಾಗಿ ತದನಂತರ ಅವನು ಹುಡುಕಾಟದಲ್ಲಿ ಎದುರಾಗುವ ಒಂದಷ್ಟು ಸಮಸ್ಯೆಗಳ ನಡುವೆ ಅನ್ನದ ಅರಿವು ಮೂಡಿಸುವ ಪ್ರಯತ್ನವಾಗಿ ಮಾಡಿರುವ ಚಿತ್ರ ಇದಾಗಿದೆ. ಈಗ ಚಿತ್ರ ಸಿದ್ದವಾಗಿದ್ದು, ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿತ್ತು , ಹಾಗೆಯೇ ವಿಧಾನಸಭೆ ಅಧಿವೇಶನದಲ್ಲಿ ನಮ್ಮ ಸಿನಿಮಾ ಬಗ್ಗೆ ಚರ್ಚೆ ನಡೆದು, ಯು.ಟಿ .ಖಾದರ್ ನೇತೃತ್ವದಲ್ಲಿ ಸಚಿವರಿಗೆ ಒಂದು ವಿಶೇಷ ಪ್ರದರ್ಶನವನ್ನು ಕೂಡ ಏರ್ಪಡಿಸಲಾಗಿತ್ತು. ಸಿನಿಮಾ ನೋಡಿದವರು ಹೆಚ್ಚು ಭಾವುಕರಾಗಿ ಚಿತ್ರದ ಕುರಿತು ಪ್ರಶಂಸೆಯ ಮಾತುಗಳನ್ನಾಡಿದರು. ಈಗ ನಮ್ಮ ಚಿತ್ರವನ್ನು ಪ್ರೇಕ್ಷಕರ ಮುಂದೆ ತರಲು ಸಿದ್ದರಾಗಿದ್ದು , ಸೆಪ್ಟೆಂಬರ್ 06ರಂದು ಬಿಡುಗಡೆ ಮಾಡುವ ನಿರೀಕ್ಷೆಯಿದೆ. ನಿಮ್ಮೆಲ್ಲರ ಸಹಕಾರ , ಪ್ರೋತ್ಸಾಹ ನಮ್ಮ ಹೊಸ ತಂಡದ ಮೇಲೆ ಇರಲಿ ಎಂದು ಕೇಳಿಕೊಂಡರು.
ಇನ್ನು ಈ ತಂಡಕ್ಕೆ ಕಥೆಯನ್ನ ನೀಡಿದಂತಹ ಹನೂರು ಚೆನ್ನಪ್ಪ ಮಾತನಾಡುತ್ತಾ ನಾನು ಈ ಕಥೆಯನ್ನು ಬರೆದಿದ್ದು 2004 ರಲ್ಲಿ. ನನ್ನ ಏಳು ಕಥೆಗಳ ಕಥಾಸಂಕನದ ಪುಸ್ತಕದಲ್ಲಿ ಈ ಅನ್ನ ಕಥೆ 22 ಪುಟಗಳು ಒಳಗೊಂಡಿತ್ತು. ನನ್ನದು ಚಾಮರಾಜನಗರ , ಒಮ್ಮೆ ನನ್ನ ಕಣ್ಣೆದುರೇ ಒಬ್ಬ ಹುಡುಗ ಆಟವಾಡುತ್ತ ಸಾಗಿದ , ನನ್ನ ಜೊತೆ ಇದ್ದವರು ಈ ಹುಡುಗ ಯಾರು ಎಂದು ಗೊತ್ತಾ ಎನ್ನುತ್ತಾ , ಸುಮಾರು ಆರು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಹುಡುಗ ಇವನೇ ಎಂದರು. ಕಾರಣ ಕೇಳಿದಾಗ ತಿಳಿಯಿತು , ಹಬ್ಬಗಳಲ್ಲಿ ಮಾತ್ರ ಅನ್ನವನ್ನು ನೋಡುತ್ತಿದ್ದವನ ಬದುಕಲ್ಲಿ ನಿತ್ಯ ಅನ್ನ ಕಾಣುವಂತದಾಗ ಏನಾಗಬಹುದು ಎಂಬ ವಿಚಾರ. ಅದೇ ನನ್ನ ಈ ಅನ್ನ ಕಥೆಗೆ ಸ್ಫೂರ್ತಿ. ಸಿನಿಮಾ ನೋಡಿದೆ ನನ್ನ ಕಥೆಗೆ ಪೂರಕವಾಗಿ ಮೂಡಿಬಂದಿದೆ. ಇನ್ನು ಹಲವಾರು ಕಥೆಗಳು ನನ್ನ ಬಳಿ ಇದೆ. ನಮ್ಮ ನೆಲದ , ಭಾಷೆ , ಸೊಗಡು ಪಸರಿಸಬೇಕು ತಂಡಕ್ಕೆ ಒಳ್ಳೆಯದಾಗಲಿ ಎಲ್ಲರೂ ಚಿತ್ರವನ್ನು ನೋಡಿ ಎಂದು ಕೇಳಿಕೊಂಡರು.
ಈ ಚಿತ್ರದ ನಿರ್ಮಾಪಕ ಬಸವರಾಜ್ ಮಾತನಾಡುತ್ತಾ ಅನ್ನದ ಮಹತ್ವದ ಕುರಿತು ಒಂದು ಚಿತ್ರ ಮಾಡೋಣ ಅಂದಿದ್ದರು. ಅದರಂತೆ 2021 ರಲ್ಲಿ ನಮ್ಮ ಬಳಿ ಇದ್ದ ಸೀಮಿತ ಬಜೆಟ್ ನಲ್ಲಿ ಚಿತ್ರವನ್ನು ಮಾಡಿದ್ದೇವೆ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಬೆಂಬಲ ಇರಲಿ ಎಂದು ಕೇಳಿಕೊಂಡರು.
ಇನ್ನು ಈ ಚಿತ್ರದ ಸಂಗೀತ ನಿರ್ದೇಶಕ ನಾಗೇಶ್ ಕಂದೇಗಾಲ ಮಾತನಾಡುತ್ತಾ ನಾನು ಈ ಕಥೆ ಓದಿ ಇಷ್ಟವಾಗಿ ನನ್ನ ತಂಡದ ಜೊತೆ ಮಾತನಾಡಿ ಆರಂಭಿಸಿದ ಚಿತ್ರ. ನಾನು ನಿರ್ದೇಶಕ ಸೇರಿದಂತೆ ಒಂದಷ್ಟು ಗೆಳೆಯರು ಎಲ್ಲರೂ ಈ ಚಿತ್ರಕ್ಕಾಗಿ ಬಹಳಷ್ಟು ಶ್ರಮಪಟ್ಟು ಮಾಡಿದ್ದೇವೆ. ಈ ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು , ಎಲ್ಲವೂ ಸಂದರ್ಭಕ್ಕೆ ಅನುಗುಣವಾಗಿ ಬಂದಿದೆ. ಅದರಲ್ಲೂ ಮಾದೇಶ್ವರ ಸ್ವಾಮಿ ಬಗ್ಗೆ ಇರುವ ಜನಪದ ಹಾಡು ಬಳಸಿಕೊಂಡಿದ್ದೇವೆ. ಇದೊಂದು ಚಾಮರಾಜನಗರದ ಸುತ್ತ ನಡೆಯುವ ಕಥೆಯಾಗಿದ್ದು , ಅನ್ನ ಎಷ್ಟು ಮುಖ್ಯ , ಅದನ್ನು ವೇಸ್ಟ್ ಮಾಡಬಾರದು ಅದನ್ನ ಯಾವ ರೀತಿ ಹೇಳಬೇಕು ಎಂಬುವ ಪ್ರಯತ್ನವಾಗಿ ಹೊರಬಂದಿರುವ ಚಿತ್ರ ಇದಾಗಿದೆ. ನಾನು ಈ ಚಿತ್ರಕ್ಕೆ ಎಕ್ಸಿಕ್ಯೂಟಿವ್ ನಿರ್ಮಾಪಕನಾಗಿ ಕೂಡ ಕಾರ್ಯ ನಿರ್ವಹಿಸಿದ್ದೇನೆ ಎಂದರು.
ಇನ್ನು ಮಾಸ್ಟರ್ ನಂದನ್ ಮಾತನಾಡುತ್ತಾ ನಾನು ಈ ಚಿತ್ರದಲ್ಲಿ ಮಹದೇವ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ನಾನು ಆಕ್ಟ್ ಮಾಡುವಾಗ ನಿರ್ದೇಶಕರು ಬಹಳಷ್ಟು ಹೇಳಿಕೊಟ್ಟಿದ್ದಾರೆ. ನಾನು ಈ ಚಿತ್ರದಲ್ಲಿ ಅಭಿನಯಿಸುವುದಕ್ಕೆ ನನ್ನ ಅಪ್ಪ ಕಾರಣ. ನಾನು ಮೊಬೈಲಲ್ಲಿ ಮಾಡುತ್ತಿದ್ದ ರೀಲ್ಸ್ ಮೂಲಕ ನನಗೆ ಈ ಅವಕಾಶ ಸಿಕ್ಕಿತ್ತು. ಅನ್ನ ಕ್ಕೆ ನಾವು ಗೌರವ ಕೊಡಬೇಕು, ವೆಸ್ಟ್ ಮಾಡಬಾರದು ಎಂಬುವುದರ ಬಗ್ಗೆ ಈ ಸಿನಿಮಾ ಇದೆ. ನನಗೆ ಇನ್ನೂ ಎರಡು ಮೂರು ಚಿತ್ರಗಳು ಅವಕಾಶ ಬಂದಿದೆ, ಸ್ಕೂಲ್ಗೆ ಹೋಗುತ್ತಾ ಎರಡು ನಿಭಾಯಿಸುತ್ತಿದ್ದೇನೆ ಎಂದರು.
ಇನ್ನು ರಂಗಭೂಮಿ ಪ್ರತಿಭೆ ಪದ್ಮಶ್ರೀ ಮಾತನಾಡುತ್ತಾ ಮೈಸೂರಿನ ರಂಗಾಯಣ ಹಾಗೂ ಎನ್.ಎಸ್.ಡಿ ಯಲ್ಲಿ ತರಬೇತಿ ಪಡೆದು ದೆಹಲಿಯಲ್ಲಿ ಸುಮಾರು ವರ್ಷಗಳ ಕಾಲ ರಂಗ ಚಟುವಟಿಕೆಗಳಲ್ಲಿ ತೊಡಗಿಕೊಂಡೆ, ನನ್ನ ಗೆಳೆಯರ ಆಹ್ವಾನದ ಮೇರೆಗೆ ಈ ಕಥೆಯನ್ನು ಒಪ್ಪಿ ಅಭಿನಯಿಸಿದೆ. ಭಾಷೆ , ಸೊಗಡು , ಕಥೆಯ ಮೂಲ ಉದ್ದೇಶ ಉತ್ತಮವಾಗಿದೆ. ಅಭಿನಯಿಸುವುದಕ್ಕೆ ಅವಕಾಶ ಇತ್ತು. ನಿರ್ದೇಶಕ ಸೇರಿದಂತೆ ಹಲವು ಗೆಳೆಯರ ಬಳಗ ಮಾಡುತ್ತಿರುವ ಚಿತ್ರವಿದು. ಇದೊಂದು ಒಳ್ಳೆಯ ಟ್ರೈನೆಡ್ ಟೀಮ್. ನಾನು ನಂದನ್ ತಾಯಿಯ ಪಾತ್ರ ಮಾಡಿದ್ದೇನೆ ಎಂದರು. ಇನ್ನು ಮತ್ತೊಬ್ಬ ನಟಿ ಡಾ. ಭುವನೇಶ್ವರಿ ಮಾತನಾಡುತ್ತ ನಾನು ಭರತನಾಟ್ಯ ಡ್ಯಾನ್ಸರ್. ಇದೊಂದು ಬಹಳ ವಿಭಿನ್ನವಾದ ಚಿತ್ರ. ಇದರಲ್ಲಿ ಅನ್ನ , ಹಸಿವು, ತಾಯಿ ಮಗನ ಮಮಕಾರದ ಬೆಸುಗೆ ಇದೆ. ನಾನು ಈ ತಂಡದಲ್ಲಿ ಭಾಗಿ ಆಗಿರುವುದಕ್ಕೆ ಬಹಳ ಸಂತೋಷವಿದೆ ಎಂದರು.
ಉಳಿದಂತೆ ಈ ಚಿತ್ರದಲ್ಲಿ
ಸಿದ್ದು ಪ್ರಸನ್ನ , ಸಂಪತ್ ಮೈತ್ರಿಯ , ಬಾಲ ರಾಜವಾಡಿ , ರಮೇಶ್ ಸಿದ್ದಯ್ಯನಪುರ , ನಾಗಶ್ರೀ ಸೇರಿದಂತೆ ಆ ಸುತ್ತಮುತ್ತ ಊರಿನ ಪ್ರತಿಭೆಗಳನ್ನು ಕೂಡ ಒಗ್ಗೂಡಿಸಿಕೊಂಡು ಒಂದಷ್ಟು ತರಬೇತಿ ನೀಡಿ ಚಿತ್ರದಲ್ಲಿ ಬಳಸಿಕೊಂಡಿದ್ದಾರಂತೆ. ಇನ್ನು ಈ ಚಿತ್ರಕ್ಕೆ ಮಧು ಸಗತ ಛಾಯಾಗ್ರಹಣ , ಟಿ. ಗುರುಸ್ವಾಮಿ ಸಂಕಲನ , ಎನ್. ಮಹೇಶ್ವರ ಕಲಾ ನಿರ್ದೇಶನ , ಬಿ .ಎನ್. ಸಿದ್ದು ಪ್ರಸನ್ನ ಸಂಭಾಷಣೆ ಮಾಡಿದ್ದು ಚಿತ್ರಿಕರಣದ ಅನುಭವಗಳನ್ನು ಹಂಚಿಕೊಂಡರು. ಗ್ರಾಮೀಣ ಭಾಗದ ಸೊಗಡಿನ ಜೊತೆಗೆ ಅನ್ನದ ಮಹತ್ವವನ್ನು ಸಾರಲು ಹೊರಟಿರುವ ಈ ಚಿತ್ರ ಅತಿ ಶೀಘ್ರದಲ್ಲಿ ಬೆಳ್ಳಿ ಪರದೆಯ ಮೇಲೆ ಬರಲಿದೆ.