ಪ್ರತಿಭೆ ಎನ್ನುವುದು ಯಾರೋಬ್ಬರ ಸ್ವತ್ತು ಅಲ್ಲ. ಅದು ಯಾರಿಗೂ ಬೇಕಾದರೂ ವಯಸ್ಸಿನ ಅಂತರ ಇಲ್ಲದೆ ಬರುತ್ತದೆ. ಅದೇ ರೀತಿಯಲ್ಲಿ ಋತುವರ್ಷ 10 ವರುಷದ ವಯಸ್ಸಿಗೆ ಎಂಟು ಪರೀಕ್ಷೆಗಳಲ್ಲಿ ಪಾಸ್ ಆಗಿ, ಟೇಕ್ವಾಂಡೋ ಬ್ಲ್ಯಾಕ್ ಬೆಲ್ಟ್ ಪಡೆದು ನಾಲ್ಕು ಅಂತರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಿರುವರ ಮೂಲಕ ಎಲ್ಲಾ ಕಡೆ ಗುರುತಿಸಿಕೊಂಡಿದ್ದಾರೆ. ಜತೆಗೆ ಡ್ಯಾನ್ಸ್‌ನ ಹಲವು ಪ್ರಕಾರಗಳಲ್ಲೂ ಪರಿಣಿತಿ ಹೊಂದಿದ್ದಾರೆ. ಈಕೆಯ ಟ್ಯಾಲೆಂಟ್‌ಗೆ ಪ್ರೋತ್ಸಾಹ ನೀಡುವ ಸಲುವಾಗಿ ಹಾಗೂ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಬೇಕೆಂದು ಪೋಷಕರಾದ ಪ್ರವೀಣ್‌ಬಾನು, ಡಾ.ಸುಮೀತಾಪ್ರವೀಣ್ ದಂಪತಿಗಳು ಟೇಕ್ವಾಂಡೋ ಗರ್ಲ್ ಎನ್ನುವ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಋತುವರ್ಷ ಟ್ಯಾಲೆಂಟ್‌ಗೆ ತಕ್ಕಂತೆ ನಿರ್ದೇಶಕ ರವೀಂದ್ರ ವಂಶಿ ಸಿನಿಮಾವನ್ನು ಚೆನ್ನಾಗಿ ನಿರೂಪಣೆ ಮಾಡಿದ್ದಾರೆ. ಇದರ ಪ್ರತಿಫಲವೇ ವಿಯಾಟ್ನಂದಲ್ಲಿ ನಡೆದ ಫಿಲಂ ಫೆಸ್ಟಿವಲ್‌ದಲ್ಲಿ ಅತ್ಯುತ್ತಮ ಬಾಲನಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕಥೆಯಲ್ಲಿ ಋತು ಆರ್.ಟಿ.ಇ ಮೂಲಕ ಸೀಟು ಪಡೆದುಕೊಂಡು ಪ್ರತಿಷ್ಟಿತ ಶಾಲೆ ಸೇರುತ್ತಾಳೆ. ಆದರೆ ಬಡತನ, ಸ್ಲಂನಿಂದ ಬಂದವಳು ಎಂದು ಶಾಲೆಯಲ್ಲಿ ಎಲ್ಲರು ಅವಮಾನ ಮಾಡುತ್ತಾರೆ. ಇದಕ್ಕೆ ಕುಗ್ಗದೆ ಗಟ್ಟಿತನದಿಂದ ಟೇಕ್ವಾಂಡೋ ಕಲೆಯಲ್ಲಿ ತರಭೇತಿ ಪಡೆದುಕೊಳ್ಳಲು ಮುಂದಾದಾಗ, ಸಾಕಷ್ಟು ಅಡೆತಡೆಗಳು ಬರುತ್ತವೆ. ಅದೆಲ್ಲಾವನ್ನು ಎದುರಿಸಿ ಹೇಗೆ ಸಾಧನೆ ಮಾಡಿ ರಾಜ್ಯಕ್ಕೆ ಕೀರ್ತಿ ತರುತ್ತಾಳೆ ಎಂಬುದು ಒನ್ ಲೈನ್ ಸ್ಟೋರಿಯಾಗಿದೆ. ಪಾತ್ರಕ್ಕೆ ವಯಸ್ಸಿನ ಭೇದ ಮರೆತು ಅಭಿನಯ, ಸಾಹಸದಲ್ಲಿ ಮಿಂಚಿದ್ದು ಭವಿಷ್ಯದ ನಟಿ ಅನಿಸಿಕೊಂಡಿದ್ದಾರೆ. ಇವರೊಂದಿಗೆ ರೇಖಾಕೂಡ್ಲಗಿ, ವಿಫಾರವಿ, ಸುವಿತಾ, ಸಹನಾ, ರವೀಂದ್ರ ತಮಗೆ ನೀಡಿದ ಕೆಲಸಕ್ಕೆ ನ್ಯಾಯ ಒದಗಿಸಿದ್ದಾರೆ. ಸ್ವಯಂರಕ್ಷಣೆ ಎಷ್ಟು ಮುಖ್ಯ ಎಂಬುದರ ಬಗ್ಗೆ ಬೆಳಕು ಚೆಲ್ಲುವ ಸಿನಿಮಾ ಇದಾಗಿದೆ. ಸಂಗೀತ ಎಂ.ಎಸ್.ತ್ಯಾಗರಾಜು ಅವರದಾಗಿದೆ.
****