Chief Editor
Manohar. R (Manu)
Photo Journalist
chitrataramanu@gmail.com
+91 9845549026
ಸಂಗೀತ ಕ್ಷೇತ್ರದಲ್ಲಿ ಅಜನೀಶ್‌ ಲೋಕನಾಥ್ ಹೊಸ ಹೆಜ್ಜೆ; 50 ಚಿತ್ರಗಳಿಗೆ ಸಂಗೀತ ನಿರ್ದೇಶನ
Posted date: 01 Sun, Sep 2024 07:00:44 PM
ಸ್ಯಾಂಡಲ್‌ವುಡ್‌ನ ಖ್ಯಾತ ಸಂಗೀತ ನಿರ್ದೇಶಕ, ಸಾಲು ಸಾಲು ಹಿಟ್‌ ಹಾಡುಗಳ ಮೂಲಕ ಸಂಗೀತ ಪ್ರಿಯರ ಗಮನ ಸೆಳೆದವರು ಕನ್ನಡದ ಅಜನೀಶ್‌ ಲೋಕನಾಥ್.‌ ಇದೀಗ ಇದೇ ಅಜನೀಶ್‌ ತಮ್ಮ ವೃತ್ತಿ ಜೀವನದ ಪ್ರಮುಖ ಘಟ್ಟ ತಲುಪಿದ್ದಾರೆ. ಚಿತ್ರೋದ್ಯಮಕ್ಕೆ ಬಂದು 21 ವರ್ಷಗಳಾದರೂ, ಸ್ವತಂತ್ರ ನಿರ್ದೇಶಕರಾಗಿ ಚಿತ್ರೋದ್ಯಮದಲ್ಲಿ ಸುದೀರ್ಘ ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಇದ್ದಾರೆ. ಇದೀಗ ಇದೇ ಸಂಗೀತ ನಿರ್ದೇಶಕರು ತಮ್ಮ ಕೆರಿಯರ್‌ನಲ್ಲಿ 50 ಸಿನಿಮಾಗಳಿಗೆ ಸಂಗೀತ ನೀಡಿದ ಗುರಿ ತಲುಪಿದ್ದಾರೆ.

ಹೀಗಿರುವಾಗಲೇ 2022ರಲ್ಲಿನ ಕಾಂತಾರ ಸಿನಿಮಾ ಅಜನೀಶ್‌ ಲೋಕನಾಥ್‌ ವೃತ್ತಿ ಬದುಕಿನಲ್ಲಿ ದೊಡ್ಡ ಮೈಲಿಗಲ್ಲಾಯಿತು. ಕರ್ನಾಟಕದ ಸಿನಿಮಾ ಪ್ರೇಮಿಗಳಷ್ಟೇ ಅಲ್ಲದೆ, ಪರಭಾಷಿಕರೂ ಈ ಸಿನಿಮಾವನ್ನು ಮೆಚ್ಚಿಕೊಂಡರು. ಇತ್ತೀಚೆಗಷ್ಟೇ ರಾಷ್ಟ್ರ ಪ್ರಶಸ್ತಿಯನ್ನೂ ಈ ಸಿನಿಮಾ ಪಡೆದುಕೊಂಡಿತು. ಇದೀಗ ಕನ್ನಡದ ಮುಂಬರುವ ಮ್ಯಾಕ್ಸ್‌, ಬಘೀರ, UI ಸಿನಿಮಾಗಳಿಗೂ ಅಜನೀಶ್‌ ಸಂಗೀತ ನೀಡಿದ್ದಾರೆ. ಈ ಸುದೀರ್ಘ ಪಯಣದ ಬಗ್ಗೆ ಅಜನೀಶ್‌ ತಮ್ಮ ಮನದಾಳವನ್ನು ಹಂಚಿಕೊಂಡಿದ್ದು ಹೀಗೆ.  

ಅಜನೀಶ್‌ ಲೋಕನಾಥ್ ಮನದಾಳ
 
"ಸಿನಿಮಾರಂಗದಲ್ಲಿದ್ದು ಕೆಲಸ  ಶುರುಮಾಡಿ 21 ವರ್ಷವಾಯ್ತು. 2003ರಲ್ಲಿ ಕೆಲಸ ಶುರುವಾಯ್ತು ಆರಂಭದಲ್ಲಿ ಕೀ ಬೋರ್ಡ್‌ ಪ್ಲೇಯರ್‌ ಆಗಿದ್ದೆ. ಆಮೇಲೆ 2005ರಿಂದ ಚಿಕ್ಕ ಪುಟ್ಟ ಸಿನಿಮಾಕ್ಕೆ ಮ್ಯೂಸಿಕ್‌ ಮಾಡಿದೆ. ಯಾವುದೂ ರಿಲೀಸ್‌ ಆಗಲಿಲ್ಲ. ಒಳ್ಳೆಯ ಸಿನಿಮಾ ಸಿಗುತ್ತಿರಲಿಲ್ಲ. 2010ರಲ್ಲಿ ಬಂದ ಶಿಶಿರ ಕೈ ಹಿಡಿಯಿತು. ಅದಾದ ಮೇಲೆ ಬಂದ ನನ್ನ ಲೈಫ್‌ನಲ್ಲಿ, ಉಳಿದವರು ಕಂಡಂತೆ ಚಿತ್ರಗಳು ಒಳ್ಳೆಯ ಹೆಸರು ತಂದುಕೊಟ್ಟವು. ಕನ್ನಡ ಮಾತ್ರವಲ್ಲದೆ, ಬೇರೆ ಭಾಷೆಗಳಿಂದಲೂ ಪ್ರಶಂಸೆ ಸಿಕ್ತು. ರಂಗಿತರಂಗ ಚಿತ್ರದಿಂದ ಕಮರ್ಷಿಯಲ್‌ ಸಕ್ಸಸ್‌ ಸಿಕ್ತು. ಕಿರಿಕ್‌ ಪಾರ್ಟಿ ಸಿನಿಮಾದಿಂದ ತೆಲುಗಿನಲ್ಲಿಯೂ ಅವಕಾಶ ಸಿಕ್ಕಿತು. ಹೀಗೆ ಇದೀಗ 50 ಅನ್ನೋ ನಂಬರ್‌ಗೆ ಬಂದಿದ್ದೇನೆ" ಎಂದಿದ್ದಾರೆ. 

"ನನ್ನ ಕನಸು ಏನೆಂದರೆ, ಸಿನಿಮಾಕ್ಕಾಗಿ ಕೆಲಸ ಮಾಡಬೇಕು. ನಾನು ಸಿನಿಮಾದವನು. ಸಂಗೀತದವನು ಎನ್ನುವ ಬದಲು ಸಿನಿಮಾದವನು ಅನ್ನೋ ಫೀಲ್‌ನಲ್ಲಿ ನಾನು ಕೆಲಸ ಮಾಡ್ತಿನಿ. ನನ್ನ ದೃಷ್ಟಿಕೋನದ ಜತೆಗೆ ನಿರ್ದೇಶಕ, ನಿರ್ಮಾಪಕ, ತಂತ್ರಜ್ಞರು ಮತ್ತು ಕಲಾವಿದರ ಪಾಯಿಂಟ್‌ ಆಫ್‌ ವ್ಯೂವ್‌ನಲ್ಲಿ ನಾನು ಕೆಲಸ ಮಾಡುತ್ತೇನೆ. ನನ್ನ ಮ್ಯೂಸಿಕ್‌ನಿಂದ, ಹಾಡಿನಿಂದ ಒಂದು ಸಿನಿಮಾ ಹಿಟ್‌ ಆಗಬಹುದು. ಹೇಗಾದ್ರೂ ಒಂದು ಸಿನಿಮಾದಿಂದ ಒಂದು ಇಲ್ಲ ಎರಡು ಹಾಡು ಹಿಟ್‌ ಆಗಬೇಕು ಅನ್ನೋ ದೃಷ್ಟಿಯಲ್ಲಿಯೇ ನಾನು ಕೆಲಸ ಮಾಡ್ತಿನಿ" ಎಂದಿದ್ದಾರೆ. 

"ವರ್ಷಕ್ಕೆ ಮೂರ್ನಾಲ್ಕು ಸಿನಿಮಾ ಮಾಡಿದ್ದೇನೆ ಎಂದರೂ, ಮೂರು ತಿಂಗಳಿಗೆ ಒಂದು ಸಿನಿಮಾ ಆಗುತ್ತೆ. ಇಲ್ಲಿ ಏನನ್ನು ಕೊಡಬೇಕು, ಹೇಗಿರಬೇಕು ಎಂಬ ಆ ಪ್ರೊಸೆಸ್‌ಗೆ ಹೆಚ್ಚು ಸಮಯ ಬೇಕೇ ಹೊರತು, ಮ್ಯೂಸಿಕ್‌ ಮಾಡಲು ಅಲ್ಲ. ಅದೇ ರೀತಿ ಮ್ಯಾಕ್ಸ್‌ ಸಿನಿಮಾ, UI ಸಿನಿಮಾಗಳನ್ನು ನೋಡಿದ ಮೇಲೆ ಮ್ಯೂಸಿಕ್‌ ಸಖತ್‌ ಸೂಟ್‌ ಆಗಿದೆ. ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಎಲ್ಲ ಅಂಶಗಳನ್ನೂ ಸಂಗೀತದ ಮೂಲಕ ನೀಡಿದ್ದೇನೆ. ನೋಡುಗನಿಗೆ ಒಂದೊಳ್ಳೆ ಟ್ರೀಟ್‌ ಈ ಸಿನಿಮಾಗಳ ಮೂಲಕ ಸಿಗಲಿದೆ. 

ಅಪ್ಪ ನನ್ನ ಮೊದಲ ಗುರು, ಕೆ ಕಲ್ಯಾಣ್‌ ಗಾಡ್‌ಫಾದರ್‌
 
ಸಂಗೀತದ ಮೊದಲ ಗುರು ನನ್ನ ತಂದೆ. ಅವರಿಂದಲೇ ನಾನು ಸಂಗೀತದ ಅ ಆ ಇ ಈ.. ಕಲಿತಿದ್ದು. ಸಿನಿಮಾರಂಗದ ಗಾಡ್‌ಫಾದರ್‌ ಆದವರು ಕೆ ಕಲ್ಯಾಣ್‌. ಮೊದಲಿಗೆ ನಾನು ಬೆಂಗಳೂರಿಗೆ ಬಂದಾಗ, ಸಿನಿಮಾ ಕ್ಷೇತ್ರದ ಅನುಭವ ಹೇಳಿ ಕೊಟ್ಟವರು ಗುರುಗಳಾದ ಕೆ. ಕಲ್ಯಾಣ್‌ ಸರ್.‌ ಒಂದು ವರ್ಷ ಅವರ ಮನೆಯಲ್ಲಿಯೇ ಇದ್ದೆ. ಮ್ಯೂಸಿಕ್‌ ಗೊತ್ತಿತ್ತು. ಆದರೆ, ಸಿನಿಮಾ ಮ್ಯೂಸಿಕ್‌ ಹೇಗೆ ವರ್ಕ್‌ ಆಗುತ್ತದೆ ಎಂಬುದು ಗೊತ್ತಿರಲಿಲ್ಲ. ಆ ಅನುಭವ ಸಿಕ್ಕಿದ್ದೇ ಅಲ್ಲಿ. ಅವರೇ ನನ್ನ ಗಾಡ್‌ ಫಾದರ್‌. 10 ವರ್ಷ ಸಾಕಷ್ಟು ಕಷ್ಟ ಪಟ್ಟಿದ್ದೆ. ಆದರೆ ನನ್ನ ಸಿನಿಮಾಗಳು ರಿಲೀಸ್‌ ಆಗಿರಲಿಲ್ಲ. ಜತೆಗೆ ಪರಭಾಷೆಯ ಸಿನಿಮಾಗಳಲ್ಲಾದ ಅನುಭವ ನನ್ನನ್ನು ಇಲ್ಲಿಯವರೆಗೂ ಕರೆತಂದಿದೆ"

ಬಾಬಿ ಬ್ಯಾಕ್‌ಬೋನ್‌
 
"ಕಮರ್ಷಿಯಲ್‌ ವಿಚಾರಕ್ಕೆ ನನ್ನ ಬೆನ್ನೆಲುಬಾಗಿ ನಿಂತವರು ಬಾಬಿ. 2006ರಿಂದಲೇ ಬಾಬಿ ನನ್ನ ಜತೆಗಿದ್ದಾರೆ. ಸಂಗೀತದಲ್ಲಿಯೂ ಸಹಾಯ ಮಾಡುತ್ತ, ನನ್ನ ಜತೆಗೆ ನಿಂತಿದ್ದಾರೆ. ವ್ಯಾವಹಾರಿಕವಾಗಿ ಎಲ್ಲವನ್ನೂ ಅವರೇ ನೋಡಿಕೊಳ್ಳುತ್ತಾರೆ. ಮುಂದಿನ ದಿನಗಳಲ್ಲಿಯೂ ಅವರೇ ನೋಡಿಕೊಳ್ಳಲಿದ್ದಾರೆ. ನನ್ನ ಈ ಸಕ್ಸಸ್‌ ರೇಷೋವನ್ನೂ ಹೇಗೆ ಕಾಪಾಡಿಕೊಂಡಿಕೊಂಡು ಹೋಗಬೇಕು ಎಂಬುದನ್ನು ಬಾಬಿ ಅವರೇ ನೋಡಿಕೊಳ್ಳುತ್ತಿದ್ದಾರೆ. ಅವರೂ ಒಬ್ಬ ಸಂಗೀತ ನಿರ್ದೇಶಕರಾದರೂ ನನ್ನ ಜತೆಗೆ ನಿಂತಿದ್ದಾರೆ" ಎಂದಿದ್ದಾರೆ ಅಜನೀಶ್‌.

ಚಿತ್ರ ನಿರ್ಮಾಣಕ್ಕೂ ಇಳಿದ ಅಜನೀಶ್‌- ಬಾಬಿ ಜೋಡಿ
 
ಸಂಗೀತ ಕ್ಷೇತ್ರದಲ್ಲಿ ಮೋಡಿ ಮಾಡಿರುವ ಅಜನೀಶ್‌ ಲೋಕನಾಥ್‌ ಮತ್ತು ಸಿ.ಆರ್‌. ಬಾಬಿ ಇದೀಗ ಸಿನಿಮಾ ನಿರ್ಮಾಣಕ್ಕೂ ಇಳಿದಿದ್ದಾರೆ. Abbs Studios ಬ್ಯಾನರ್‌ ತೆರೆದು, ಅದರ ಅಡಿಯಲ್ಲಿ ಮೊದಲ ಚಿತ್ರವಾಗಿ ಜಸ್ಟ್‌ ಮ್ಯಾರೀಡ್‌ ಸಿನಿಮಾ ನಿರ್ಮಾಣವಾಗುತ್ತಿದೆ. ಈ ಚಿತ್ರದಲ್ಲಿ ಶೈನ್‌ ಶೆಟ್ಟಿ ಮತ್ತು ಅಂಕಿತಾ ಅಮರ್‌ ಜೋಡಿಯಾಗಿ ನಟಿಸಿದ್ದಾರೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಸಂಗೀತ ಕ್ಷೇತ್ರದಲ್ಲಿ ಅಜನೀಶ್‌ ಲೋಕನಾಥ್ ಹೊಸ ಹೆಜ್ಜೆ; 50 ಚಿತ್ರಗಳಿಗೆ ಸಂಗೀತ ನಿರ್ದೇಶನ - Chitratara.com
Copyright 2009 chitratara.com Reproduction is forbidden unless authorized. All rights reserved.