ವೆನಿಸ್ ಚಿತ್ರೋತ್ಸವದಲ್ಲಿ ಪುನರುಜ್ಜೀವನ (ರೆಸ್ಟೋರೇಶನ್)ಪಡೆದ ತಮ್ಮ ಮೊದಲ ಚಿತ್ರ ‘ಘಟಶ್ರಾದ್ಧ’ ಚಿತ್ರದ ಪ್ರದರ್ಶನದಲ್ಲಿ ಚಿತ್ರಕ್ಕೆ ಸಿಕ್ಕ ಅಪಾರ ಮನ್ನಣೆ ಉತ್ತೇಜಕವಾಗಿತ್ತು. ಚಿತ್ರ ಕಥಾವಸ್ತು, ಅದರ ದೃಶ್ಯ ಸಂವಿಧಾನದ ಸುಭಗತೆ, ಸಂಗೀತ ಮತ್ತು ಚಿತ್ರದ ಲಯದ ಬಗ್ಗೆ ಅಪಾರ ಚರ್ಚೆಯಾಯಿತು ಎಂದು ನಿರ್ದೇಶಕ ಗಿರೀಶ ಕಾಸರವಳ್ಳಿ ತಿಳಿಸಿದ್ದಾರೆ. ಇದೀಗ ಗಿರೀಶ ಕಾಸರವಳ್ಳಿ ಯವರ ಸಾಧನೆಯ ಕಿರೀಟಕ್ಕೆ ಇನ್ನೊಂದು ಗರಿ ಮೂಡಿದೆ.
ಇದೇ 3 ರಿಂದ ಆರಂಭವಾದ ಜಾಫ್ನಾ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಗಿರೀಶ ಕಾಸರವಳ್ಳಿಯವರ ಜೀವಮಾನ ಸಾಧನೆಗಾಗಿ ಪ್ರಶಸ್ತಿ ನೀಡಲಾಗುತ್ತಿದೆ. ೫ ದಶಕಗಳ ಕಾಲ ನಿಷ್ಠೆಯಿಂದ ತಮ್ಮ ಚಿತ್ರಯಾನದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ತಮ್ಮ ನಿಲುವುಗೆ ಬಧ್ಧವಾಗಿ ಸದಭಿರುಚಿಯ ಗಂಭೀರ ಚಿತ್ರಗಳನ್ನು ಮಾಡುತ್ತಾ ಬಂದ ಕಾಸರವಳ್ಳಿಯವರ ಚಿತ್ರಗಳು ಸಿನಿಮಾ ಕ್ಷೇತ್ರಕ್ಕೆ ನೀಡಿದ ಕಾಣಿಕೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಅದೇ ವೇಳೆಗೆ ಆಯ್ದ ಅವರ ನಾಲ್ಕು ಚಿತ್ರಗಳ ಪ್ರದರ್ಶನವೂ ಇದೆ. ಹಾಗೆಯೇ ಜಾಫ್ನಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗಾಗಿ ಕಾಸರವಳ್ಳಿಯವರ ಒಂದು ಮಾಸ್ಟರ್ ಕ್ಲಾಸ್ ಅನ್ನೂ ಆಯೋಜಿಸಲಾಗಿದೆ. ಗೌಹಾಟಿಯ ವಿಶ್ವವಿದ್ಯಾಲದಲ್ಲಿ ಪ್ರೊಫೆಸರ್ ಆಗಿದ್ದು ಇದೀಗ ಶ್ರೀಲಂಕಾದ ಭಾರತೀಯ ಹೈ ಕಮಿಷನ್‌ನಲ್ಲಿ ವಿವೇಕಾನಂದ ಕಲ್ಚರ್ ಸೆಂಟರ್ ನ ನಿರ್ದೇಶಕರಾಗಿರುವ ಡಾ. ಅಂಕುರನ್ ದತ್ತ ಅವರು ಆ ಕಾರ್ಯಕ್ರಮವನ್ನು ನಡೆಸಿ ಕೊಡುತ್ತಾರೆ. ಸೆಪ್ಟೆಂಬರ್ ೯ ರಂದು ನಡೆಯಲಿರುವ ಚಿತ್ರೋತ್ಸವದ ಮುಕ್ತಾಯ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಿದ್ದು ಅದನ್ನು ಸ್ವೀಕರಿಸಲು ಕಾಸರವಳ್ಳಿಯವರು ಜಾಫ್ನಾಕ್ಕೆ ತೆರಳಿದ್ದಾರೆ.