ತಮ್ಮ ಅಭಿನಯದ ಮೂಲಕ ಅಭಿಮಾನಿಗಳ ಮನ ಗೆದ್ದಿರುವ ನಾಯಕ ಧನ್ವೀರ್ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಈ ಸಂಧರ್ಭದಲ್ಲಿ ಕೆ.ವಿ.ಸಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ, ರಘುಕುಮಾರ್ ಓ.ಆರ್ ನಿರ್ದೇಶನದಲ್ಲಿ ಧನ್ವೀರ್ ನಾಯಕರಾಗಿ ನಟಿಸುತ್ತಿರುವ "ಹಯಗ್ರೀವ" ಚಿತ್ರದ ಹೊಸ ಪೋಸ್ಟರ್ ಬಿಡುಗಡೆಯಾಗಿದೆ. ಈ ಮೂಲಕ ನಾಯಕ ಧನ್ವೀರ್ ಅವರಿಗೆ ಚಿತ್ರತಂಡ ಹುಟ್ಟುಹಬ್ಬದ ಶುಭಾಶಯ ತಿಳಿಸಿದೆ. ಧನ್ವೀರ್ ಅವರ "ಹಯಗ್ರೀವ" ಚಿತ್ರದ ಪಾತ್ರ ಏನಿರಬಹುದೆಂಬ ಕುತೂಹಲ ಅಭಿಮಾನಿಗಳಿಗಿತ್ತು. ಇಂದು ಬಿಡುಗಡೆಯಾಗಿರುವ ಪೋಸ್ಟರ್ ನಲ್ಲಿ ಧನ್ವೀರ್ ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಧನ್ವೀರ್ ಅವರ ಈ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಈ ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ. ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿಯಿದೆ. ಸದ್ಯ "ಹಯಗ್ರೀವ" ಚಿತ್ರಕ್ಕೆ ಮಾತಿನ ಜೋಡಣೆ ನಡೆಯುತ್ತಿದೆ.
ಧನ್ವೀರ್ ಅವರಿಗೆ ನಾಯಕಿಯಾಗಿ ಸಂಜನಾ ಆನಂದ್ ಅಭಿನಯಿಸಿದ್ದಾರೆ. ಸಾಧು ಕೋಕಿಲ, ರಮೇಶ್ ಭಟ್, ಶರತ್ ಲೋಹಿತಾಶ್ವ, ಶೋಭ್ ರಾಜ್ ಮುಂತಾದವರು ತಾರಾಬಳಗದಲ್ಲಿದ್ದಾರೆ.
ಚಿತ್ರದಲ್ಲಿ ಮೂರು ಹಾಡುಗಳಿದ್ದು, ಜೂಡಾ ಸ್ಯಾಂಡಿ ಸಂಗೀತ ಸಂಯೋಜಿಸುತ್ತಿದ್ದಾರೆ. ಗಿರೀಶ್ ಆರ್ ಗೌಡ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ರವಿವರ್ಮ, ಡಿಫರೆಂಟ್ ಡ್ಯಾನಿ, ಅರ್ಜುನ್ ರಾಜ್ ಸಾಹಸ ನಿರ್ದೇಶನವಿರುವ ಈ ಚಿತ್ರಕ್ಕೆ ಭೂಷಣ್ ಅವರ ನೃತ್ಯ ನಿರ್ದೇಶನವಿದೆ.