“ಕಾಂತಾರ”À ಚಿತ್ರದ ನಟನೆಗೆ ರಿಷಬ್ ಶೆಟ್ಟಿ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಮತ್ತು “ಕೆಜಿಎಫ್-2” ಚಿತ್ರಕ್ಕೆ ಅತ್ಯುತ್ತಮ ಪ್ರಾದೇಶಿಕ ಕನ್ನಡ ಚಿತ್ರ ರಾಷ್ಟ್ರೀಯ ಚಲನ ಚಿತ್ರ ಪ್ರಶಸ್ತಿ ಪಡೆದ ಹೊಂಬಾಳೆ ಸಂಸ್ಥೆ ಸಂಭ್ರಮದಲ್ಲಿರುವಾಗಲೇ ಭಘೀರ ಚಿತ್ರ ಬಿಡುಗಡೆ ದಿನಾಂಕ ಪ್ರಕಟಿಸಿದೆ.
ಪ್ರತಿಷ್ಠಿತ ಹೊಂಬಾಳೆ ಸಂಸ್ಥೆ ನಿರ್ಮಾಣ ಮಾಡಿರುವ ಚಿತ್ರದಲ್ಲಿ ಶ್ರೀಮುರುಳಿ, ರುಕ್ಮಿಣಿ ವಸಂತ್ ನಾಯಕ,ನಾಯಕಿಯರಾಗಿ ಕಾಣಿಸಿಕೊಂಡಿದ್ದು ಡಾ. ಸೂರಿ ಆಕ್ಷನ್ ಕಟ್ ಹೇಳಿದ್ದಾರೆ. ಲಕ್ಕಿ ಚಿತ್ರದ ಹಲವು ವರ್ಷದ ಬಳಿಕ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ ಇದು.
ಚಿತ್ರಕ್ಕೆ ಪ್ರಶಾಂತ್ ನೀಲ್ ಕತೆ ಬರೆದಿದ್ದಾರೆ. ಉಗ್ರಂ ಚಿತ್ರದ ಬಳಿಕ ನಟ ಶ್ರೀ ಮುರುಳಿ ಅವರೊಂದಿಗೆ ಕೆಲಸ ಮಾಡಿದ್ದಾರೆ. ಹೀಗಾಗಿ ಚಿತ್ರದ ಬಗ್ಗೆ ಮತ್ತಷ್ಟು ಕುತೂಹಲ ಮತ್ತು ನಿರೀಕ್ಷೆ ಹೆಚ್ಚಾಗಿದೆ.
ವಿಜಯ್ ಕಿರಂಗದೂರು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ನಟ ಶ್ರೀಮುರುಳಿ ಅವರ “ಭಘೀರ” ಚಿತ್ರ ಯಾವಾಗ ಬಿಡುಗಡೆಯಾಗಲಿದೆ ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದ ಘಳಿಗೆ ಕೊನೆಗೂ ಬಂದೇ ಬಿಟ್ಟಿದೆ. ಇದರಿಂದ ನಟ ಶ್ರೀಮುರುಳಿ ಅಭಿಮಾನಿಗಳು ಭಘೀರನನ್ನು ಸಂಭ್ರಮದಿಂದ ಬರಮಾಡಿಕೊಳ್ಳಲು ಸಜ್ಜಾಗಿದ್ದಾರೆ.
“ಭಘೀರ” ಚಿತ್ರ ಬಿಡುಗಡೆಯ ದಿನಾಂಕವನ್ನು ಹೊಂಬಾಳೆ ಫಿಲ್ಮ್ ತನ್ನ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದು “ನ್ಯಾಯಕ್ಕಾಗಿ ಬೇಟೆ ಆರಂಭ” ಎನ್ನುವ ಅಡಿ ಬರಹ ನೀಡಿದೆ.
“ಭಘೀರ” ಚಿತ್ರವನ್ನು ರಾಜ್ಯದ ಕರಾವಳಿ ಮತ್ತು ಗೋವಾ ಮತ್ತಿತರ ಕಡೆ ಚಿತ್ರೀಕರಣ ಮಾಡಿದೆ. ಚಿತ್ರದಲ್ಲಿ ಹಿರಿಯ ಕಲಾವಿದರಾದ ರಂಗಾಯಣ ರಘು, ಅಚ್ಯುತ್ ಕುಮಾರ್ ಸೇರಿದಂತೆ ಅನೇಕ ಕಲಾವಿದರ ದಂಡು ಚಿತ್ರದಲ್ಲಿದೆ.
ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದು ಎಜೆ ಶೆಟ್ಟಿ ಕ್ಯಾಮರ ಚಿತ್ರಕ್ಕಿದೆ. ಬಹಳ ದಿನಗಳ ನಂತರ ಶ್ರೀಮುರುಳಿ ಚಿತ್ರ ಬಿಡುಗಡೆಯಾಗುತ್ತಿದೆ.