ಕನ್ನಡದಲ್ಲಿ ಈಗಾಗಲೇ ಜಾತಿ ಅಸಮಾನತೆ ಮತ್ತು ಕೆಳ ವರ್ಗದವರ ಮೇಲೆ ಮೇಲ್ವರ್ಗದವರು ನಡೆಸುತ್ತಿರುವ ದಬ್ಬಾಳಿಕೆಯ ಕುರಿತಂತೆ ಸಾಕಷ್ಟು ಚಲನಚಿತ್ರಗಳು ನಿರ್ಮಾಣವಾಗಿ ತೆರೆಗೆ ಬಂದಿವೆ. ಇಂಥದೇ ವಿಷಯವನ್ನಿಟ್ಟುಕೊಂಡು ತಯಾರಾದ ಮತ್ತೊಂದು ಕನ್ನಡ ಚಿತ್ರ `ಕರ್ಕಿ` ಈ ವಾರ ತೆರೆಕಂಡಿದೆ. ಜಾತಿ ತಾರತಮ್ಯದ ವಿಷಯವನ್ನು ಪ್ರಧಾನವಾಗಿಟ್ಟುಕೊಂಡು ತಯಾರಾಗಿರುವ ಕರ್ಕಿ ಸಾಮಾಜಿಕ ಅಸಮತೋಲನದ ಕುರಿತು ಹೇಳುವ ಸಬ್ಜೆಕ್ಟ್ ಆಗಿದೆ. ಕೆಳಜಾತಿಯ ಜನರ ಮೇಲೆ ನಡೆಯುತ್ತಿರುವ ದೌರ್ಜನ್ಯ ದಬ್ಬಾಳಿಕೆಯ ವಿರುದ್ಧ ಹೋರಾಡಬೇಕಾದರೆ ತಾನೊಬ್ಬ ವಕೀಲನಾಗಬೇಕೆಂದು ಸಿಟಿಗೆ ಬರುವ ಮುತ್ತುರಾಜ್(ಜೆಪಿ) ಅಲ್ಲಿನ ಕಾಲೇಜೊಂದರಲ್ಲಿ ಕಾನೂನು ವಿದ್ಯಾರ್ಥಿಯಾಗಿ ಸೇರಿಕೊಳ್ಖುತ್ತಾನೆ. ಅಲ್ಲಿಂದ ಮುತ್ತತ್ತಿಯ ಮತ್ತೊಂದು ಭಾಗದ ಕಥೆ ಆರಂಭವಾಗುತ್ತದೆ.
ನಗರದ ಕಾಲೇಜಿನಲ್ಲಿ ಮೇಲ್ಜಾತಿಯ ಹುಡುಗಿ ಜೋತಿ ಮಹಾಲಕ್ಷ್ಮಿ( ಮೀನಾಕ್ಷಿ) ಮುತ್ತತ್ತಿಗೆ ಪರಿಚಯವಾಗಿ, ಆತನಿಗೆ ಇಂಗ್ಲಿಷ್ ಕಲಿಯಲು ಸಹಾಯ ಮಾಡುತ್ತಾಳೆ. ಬರುಬರುತ್ತ ಇಬ್ಬರ ನಡುವಿನ ಸ್ನೇಹ ಮತ್ತಷ್ಟು ಗಾಢವಾಗುತ್ತದೆ. ಅವರ ನಡುವಿನ ಸ್ನೇಹ ಯಾವುದೇ ಸಾಮಾಜಿಕ ಅಡೆತಡೆಗಳ ಅರಿವಿಲ್ಲದೆ ಸಾಗುತ್ತದೆ. ಒಮ್ಮೆ ಜೋತಿ ತನ್ನ ಸಹೋದರಿಯ ಮದುವೆಗೆ ಮುತ್ತುವನ್ನು ಇನ್ವೈಟ್ ಮಾಡುತ್ತಾಳೆ. ಮುತ್ತು ಆ ಮದುವೆಗೆ ಬಂದ ಮೇಲೆ ಏನೆಲ್ಲ ಎದುರಿಸುತ್ತಾನೆ. ಅಲ್ಲಿಂದ ಮುತ್ತು ಜೀವನ ಹೇಗೆಲ್ಲಾ ಬದಲಾಗುತ್ತದೆ ಎಂಬುದು ಈ ಚಿತ್ರದ ತಿರುಳು. ಇಡೀ ಚಿತ್ರದಲ್ಲಿ ಒಂದು ನಾಯಿ ಹೀರೋನಷ್ಟೇ ಪ್ರಮುಖ ಪಾತ್ರವಾಗಿ ಮೂಡಿಬಂದಿದೆ. ಅದು ಹೇಗೆ ಎಂಬುದನ್ನು ತೆರೆಯ ಮೇಲೇ ನೋಡಬೇಕು.
ಮಾರಿ ಸೆಲ್ವರಾಜ್ ಅವರ ನಿರ್ದೇಶನದ ತಮಿಳಿನ `ಪರಿಯೆರುಂ ಪೆರುಮಾಳ್` ಚಿತ್ರದ ರಿಮೇಕ್ ಕರ್ಕಿ. ತಮಿಳು ನಿರ್ದೇಶಕ ಪವಿತ್ರನ್ ಅವರು ಕೆಲವು ಬದಲಾವಣೆಗಳೊಂದಿಗೆ ಈ ಕಥೆಯನ್ನು ಕನ್ನಡದಲ್ಲಿ ಕರ್ಕಿ ಆಗಿ ನಿರೂಪಿಸಿದ್ದಾರೆ. ಜಾತಿ ತಾರತಮ್ಯ ಮತ್ತು ದಬ್ಬಾಳಿಕೆಯ ಕಟು ಸತ್ಯಗಳ ಅದ್ಭುತ ಚಿತ್ರಣ ಈ ಚಿತ್ರದಲ್ಲಿದೆ. ಈಗಲೂ ಗ್ರಾಮೀಣ ಪ್ರದೇಶಗಳಲ್ಲಿ ಕೆಳಜಾತಿಯವರನ್ನು ಹೇಗೆ ನಡೆಸಿಕೊಳ್ಳಲಾಗುತ್ತದೆ. ಹಾಗೂ ಮುತ್ತು ಈ ತಾರತಮ್ಯ ತೊಡೆದು ಹಾಕಲು ಹೇಗೆ ಹೋರಾಡುತ್ತಾನೆ ಎಂಬುದನ್ನು ಈ ಚಿತ್ರ ಹೇಳುತ್ತದೆ. ಚಿತ್ರದ ಮೂಲಕ ಮೆಸೇಜ್ ಹೇಳೋ ಪ್ರಯತ್ನ ಮಾಡಿಲ್ಲ. ಅಥವಾ ಜಾತಿ ತಾರತಮ್ಯದ ಬಗ್ಗೆ ನೈತಿಕ ಪಾಠಗಳನ್ನು ನೀಡುವುದಿಲ್ಲ, ಆದರೆ ಒಂದು ಕಥೆಯನ್ನು ಹೆಚ್ಚು ಸೂಕ್ಷ್ಮವಾಗಿ ಈ ಚಿತ್ರ ಹೇಳುತ್ತದೆ. ಚಿತ್ರದ ಕ್ಲೈಮ್ಯಾಕ್ಸ್ ಭಾಗದ ಸಂಭಾಷಣೆಯಲ್ಲಿ ಇಡೀ ಸಿನಿಮಾದ ಸಂಪೂರ್ಣ ತಿರುಳು ಅಡಗಿದ್ದು, ಚಿತ್ರದ ಹೈಲೈಟ್ಗಳಲ್ಲಿ ಒಂದಾಗಿದೆ.
ಉತ್ತಮ ಕಂಟೆಂಟ್ ಮತ್ತು ಪ್ರಬಲವಾದ ಸಂದೇಶ ಇರುವ ಕಾರಣ ಚಿತ್ರ ಹೆಚ್ಚು ಶಕ್ತಿಯಿತವಾಗಿದೆ. ಕಂಟೆಂಟ್ ಹಾಗೂ ನಿರೂಪಣೆಯಲ್ಲೇ ಚಿತ್ರ ಯಶಸ್ವಿಯಾಗುತ್ತದೆ. ಮುತ್ತು ಪಾತ್ರದಲ್ಲಿ ಜಯಪ್ರಕಾಶ್ ರೆಡ್ಡಿ (ಜೆಪಿ)ಗಮನಾರ್ಹ ಅಭಿನಯ ನೀಡಿದ್ದಾರೆ. ನಾಯಕಿ ಮೀನಾಕ್ಷಿ ತೆರೆಮೇಲೆ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಪಾತ್ರಕ್ಕೆ ತಮ್ಮ ಎಫರ್ಟ್ ಹಾಕಿದ್ದಾರೆ.
ಬಲ ರಾಜವಾಡಿ ಮತ್ತು ಸಾಧು ಕೋಕಿಲ ಅವರ ಪಾತ್ರಗಳು ನಾಯಕ ಮುತ್ತು ಪಾತ್ರಕ್ಕೆ ಸಪೋರ್ಟ್ ನೀಡಿವೆ. ಚಿತ್ರವನ್ನು ತಾಂತ್ರಿಕವಾಗಿ ಮತ್ತಷ್ಟು ಶ್ರೀಮಂತಗೊಳಿಸಲು ಅವಕಾಶವಿತ್ತು.