ಪತ್ರಕರ್ತನಾಗಿ, ನಟನಾಗಿ ಹಾಗೂ ಕಾರ್ಯಕಾರಿ ನಿರ್ಮಾಪಕರಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯವಿರುವ ಅಫ್ಜಲ್(ಸೂಪರ್ ಸ್ಟಾರ್ಸ್), "ಹೊಸತರ" ಚಿತ್ರದ ಮೂಲಕ ನಿರ್ದೇಶಕನಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದ್ದಾರೆ. ಈ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದರು.
"ಹೊಸತರ" ನನ್ನ ನಿರ್ದೇಶನದ ಮೊದಲ ಚಿತ್ರ. ಆರ್ ಜಿ ವಿ ಎಂಬ ಪ್ರಮುಖಪಾತ್ರದ ಸುತ್ತ ಈ ಚಿತ್ರದ ಕಥೆ ನಡೆಯುತ್ತದೆ. ಸಸ್ಪೆನ್ಸ್, ಥ್ರಿಲ್ಲರ್, ಕಾಮಿಡಿ ಮುಂತಾದ ನೋಡುಗರಿಗೆ ಬೇಕಾದ ಎಲ್ಲಾ ಅಂಶಗಳು ಚಿತ್ರದಲ್ಲಿದೆ. ಜೈವಿಜಯ್ ಪ್ರೊಡಕ್ಷನ್ ಲಾಂಛನದಲ್ಲಿ ಗುಲ್ಬರ್ಗ ಮೂಲದ ಶ್ರೀವಿಜಯ್ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಕಥೆ ಹಾಗೂ ಚಿತ್ರಕಥೆ ಸ್ವಲ್ಪ ವಿಭಿನ್ನವಾಗಿರುವುದರಿಂದ ಚಿತ್ರಕ್ಕೆ "ಹೊಸತರ" ಎಂದು ಹೆಸರಿಡಲಾಗಿದೆ.
ರಾಜೀವ್ ಗನೇಸನ್ ಛಾಯಾಗ್ರಹಣ, ರಾಜು ಎಮ್ಮಿಗಾನೂರು ಸಂಗೀತ ನಿರ್ದೇಶನ, ಆಂಥೋನಿ ಪಯಾನೋ(ಕೆನಡಾ) ಹಿನ್ನೆಲೆ ಸಂಗೀತ ಹಾಗೂ ಬಾಬು ಶಿವಪುರ ಅವರ ಸಂಕಲನವಿರುವ ಈ ಚಿತ್ರಕ್ಕೆ ಅಮೇರಿಕಾದ ಜೆ ಹೆಚ್ ಜೆ ಸ್ಟುಡಿಯೋ ವಿ ಎಫ್ ಎಕ್ಸ್ ಮಾಡಲಿದೆ. ಉತ್ತಮ ಗುಣಮಟ್ಟದಲ್ಲಿ ಚಿತ್ರ ಮೂಡಿ ಬರಲಿದೆ. "ಸಾರಿ" ಚಿತ್ರದ ನಿರ್ದೇಶಕ ಬ್ರಹ್ಮ, ಖುಷಿ ಕೊಠಾರಿ, ನವ್ಯಾ, ರಣವೀರ್, ನಾಗರಾಜ ಗುಬ್ಬಚ್ಚಿ, ಸೆವೆನ್ ರಾಜ್, ಸ್ವರ್ಣಚಂದ್ರ ಮುಂತಾದವರು ತಾರಾಬಳಗದಲ್ಲಿದ್ದಾರೆ. ನಾನು ಕೂಡ ಮುಖ್ಯಪಾತ್ರದಲ್ಲಿ ನಟಿಸಿದ್ದೇನೆ. ಡಿಸೆಂಬರ್ ವೇಳೆಗೆ "ಹೊಸತರ" ನಿಮ್ಮ ಮುಂದೆ ಬರಲಿದೆ ಎಂದು ನಿರ್ದೇಶಕ ಅಫ್ಜಲ್ ತಿಳಿಸಿದರು.
ಸಿನಿಮಾ ಆಸೆಗಾಗಿ ಹಳ್ಳಿಯಿಂದ ಸಿಟಿಗೆ ಬಂದ ಮುಗ್ದ ಹುಡುಗನ ಪಾತ್ರ ನನ್ನದು. ಆರ್ ಜಿ ವಿ ನನ್ನ ಪಾತ್ರದ ಹೆಸರು ಎಂದರು ನಟ ಬ್ರಹ್ಮ.
ನಾನು ಈ ಚಿತ್ರದಲ್ಲಿ ಸಾಫ್ಟ್‌ವೇರ್ ಉದ್ಯೋಗಿ. ನೇತ್ರ ನನ್ನ ಪಾತ್ರದ ಹೆಸರು ಎಂದರು ನಾಯಕಿ ಖುಷಿ ಕೊಠಾರಿ.
ಚಿತ್ರದಲ್ಲಿ ಅಭಿನಯಿಸಿರುವ ನಾಗರಾಜ ಗುಬ್ಬಚ್ಚಿ, ರಣವೀರ್ ಹಾಗೂ ಛಾಯಾಗ್ರಾಹಕ ರಾಜೀವ್ ಗಣೇಸನ್ "ಹೊಸತರ" ಚಿತ್ರದ ಬಗ್ಗೆ ಮಾತನಾಡಿದರು.