ಕನ್ನಡ ಕಿರುತೆರೆ ಲೋಕದಲ್ಲಿ ಹೊಸ ಸಂಚಲನ ಮತ್ತು ಹೆಚ್ಚು ವೀಕ್ಷಣೆಗೆ ಕಾರಣವಾಗಿರುವ ಕಿಚ್ಚು ಸುದೀಪ್ ನಿರೂಪಣೆಯ “ಬಿಗ್ ಬಾಸ್” 11ರ ಆವೃತ್ತಿ ಈ ಭಾರಿ ಹೊಸ ಅಧ್ಯಾಯದೊಂದಿದೆ, ಇದೇ ತಿಂಗಳ ಸೆಪ್ಟಂಬರ್ 29ರಿಂದ ಮತ್ತಷ್ಟು ಹೊಸ ರೂಪದಲ್ಲಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ.
ಈ ಭಾರಿ ಕಿಚ್ಚು ಸುದೀಪ್ ನಿರೂಪಣೆ ಮಾಡುವುದಿಲ್ಲ ಎನ್ನುವ ಅನುಮಾನಗಳಿಗೆ ಪೂರ್ಣ ವಿರಾಮ ಹಾಕಲಾಗಿದೆ. 11ನೇ ಆವೃತ್ತಿಯಲ್ಲಿಯೂ ಕಂಚಿನ ಕಂಠದ ನಟ, ನಿರ್ದೇಶಕ ಕಿಚ್ಚ ಸುದೀಪ್ ನಿರೂಪಣೆ ಮುಂದುವರಿಸುವ ಜವಾಬ್ದಾರಿ ಅವರ ಹೆಗಲ ಮೇಲೆ ಮುಂದುವರಿದಿದೆ.
11ರ ಸೀಸನ್‍ನಲ್ಲಿ ಕೆಲ ಬಿಗ್‍ಬಾಸ್ ಸ್ಪರ್ಧಿಗಳನ್ನು ಇದೇ ಶನಿವಾರ ಪ್ರಸಾರವಾಗಲಿರುವ ರಾಜರಾಣಿ ಫಿನಾಲೆಯಲ್ಲಿ ಪರಿಚಯಿಸಲು ಮುಂದಾಗಿದೆ. ಜೊತೆಗೆ ಸ್ವರ್ಗ ಮತ್ತು ನರಕ ಎನ್ನುವ ವಿಶೇಷ ಪರಿಕಲ್ಪನೆಯೊಂದಿಗೆ ಬಿಗ್ ಬಾಸ್ ಆವೃತ್ತಿ ಜನರ ಮುಂದೆ ಬರುತ್ತಿದೆ.
ಬಿಗ್‍ಬಾಸ್ ಹೊಸ ಆವೃತ್ತಿ ಆರಂಭದ ಕುರಿತು ಮಾಹಿತಿ ಹಂಚಿಕೊಂಡ ನಿರೂಪಕ ಕಿಚ್ಚ ಸುದೀಪ್, ಕಳೆದ 10 ಆವೃತ್ತಿಯ ಬಿಗ್‍ಬಾಸ್ ಶೋ ಯಶಸ್ವಿಯಾಗಿ ನಡೆಸಿದ್ದೇನೆ. ಈ ಭಾರಿ ಬಿಡುವು ಬೇಕು ಅಂದುಕೊಂಡಿದ್ದು ನಿಜ, ಆದರೆ ಅದು ಗಿಮಿಕ್ ಅಲ್ಲ, ಅಂತಹ ಗಿಮಿಕ್ ತಮಗಾಗಲಿ ಅಥವಾ ವಾಹಿನಿಗಾಗಲಿ ಅಗತ್ಯವಿಲ್ಲ. ಅದನ್ನು ಬಿಟ್ಟರೆ ಬೇರೆ ಉದ್ದೇಶ ಇರಲಿಲ್ಲ ಎಂದು ಆರಂಭದಲ್ಲಿ ಸ್ಪಷ್ಟಪಡಿಸಿದರು.
ಸಿನಿಮಾ ಮತ್ತು ಬಿಗ್‍ಬಾಸ್ ಶೋ ನಡುವೆ ಎಡಬಿಡದೆ ಕೆಲಸ ಮಾಡುತ್ತಿದ್ದರಿಂದ ಬಿಡುವು ತೆಗೆದುಕೊಳ್ಳುವ ಉದ್ದೇಶದಿಂದ ಯಾರನ್ನಾದರೂ ಬೇರೆಯನ್ನು ನೋಡಿಕೊಳ್ಳಿ ಎಂದು ಹೇಳಿದುಂಟು, ನಾನು ಯಾವಾಗ ಹಾಗೆ ಹೇಳಿದೆನೋ ವಾಹಿನಿ ಮತ್ತು ಬಿಗ್ ಬಾಸ್ ಶೋ ಕಡೆಯಿಂದ ಅನೇಕ ಮಂದಿ ಮನೆಗೆ ಬಂದು ನಿವೇ ನಡೆಸಿಕೊಡಬೇಕು ಎಂದು ಒತ್ತಾಯ ಮಾಡಿದರು ಎಂದು ಹೇಳಿದರು
`ಬಿಗ್ ಬಾಸ್`ಅದ್ಭುತ ವೇದಿಕೆ. ಶೋ ಆರಂಭವಾಗುತ್ತಿದ್ದಂತೆ ಬದುಕು ಬದಲಾಗುತ್ತದೆ. ನಾಲ್ಕು ದಿನಗಳ ಮಟ್ಟಿಗೆ ನಾನೆಲ್ಲಿಗಾದರೂ ಹೋಗಬಹುದು. ಶುಕ್ರವಾರ ಎಲ್ಲೇ ಇದ್ದರೂ ವಾಪಸ್ಸು ಬಂದು ಎಲ್ಲಾ ಎಪಿಸೋಡ್‍ಗಳನ್ನು ನೋಡಿ, ಶನಿವಾರ ತಡರಾರಾತ್ರಿಯವರೆಗೂ ಚಿತ್ರೀಕರಣ ಮಾಡಬೇಕು. ಬೇರೆ ಕೆಲಸಗಳು ಸಾಗುತ್ತಿರಲಿಲ್ಲ. ಅದು ಬಿಟ್ಟರೆ ಯಾವುದೇ ಸಮಸ್ಯೆ ಇಲ್ಲ ಎಂದರು
ಸಂಭಾವನೆ ಹೆಚ್ಚಿಸಿಕೊಳ್ಳುವುದಕ್ಕೆ ಈ ರೀತಿ ಹೇಳಿದ್ದೀರಾ ಎನ್ನುವ ಪ್ರಶ್ನೆಗೆ ನನ್ನ ತಟ್ಟೆ ಎಷ್ಟು ಅಗಲ ಇದೆಯೋ, ಅಷ್ಟೇ ಊಟ ಮಾಡೋಕೆ ಸಾಧ್ಯ. ಯೋಗ್ಯತೆ ಎಷ್ಟಿದೆಯೋ ಅಷ್ಟೇ ದುಡಿಯೋಕೆ ಸಾಧ್ಯ. ಯೋಗ್ಯತೆ ಏನು ಎಂಬುದನ್ನು ನೀವೇ ಹೇಳಬೇಕು. ಈ ಬಾರಿ ಕಾರ್ಯಕ್ರಮ ನಡೆಸಿಕೊಡುವುದಿಲ್ಲ ಎಂದು ಹೇಳಿದ್ದು ಸಂಭಾವನೆ ಏರಿಸಿಕೊಳ್ಳುವುದಕ್ಕಲ್ಲ. ನೈತಿಕತೆ ಇರುವ ಮನುಷ್ಯ. ನಿಜಕ್ಕೂ ನನಗೆ ಸುಸ್ತಾಗುತ್ತಿತ್ತು. ಅದನ್ನು ಹೊರತುಪಡಿಸಿದರೆ ಬೇರೆ ಯಾವ ವಿಷಯವೂ ಇಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು
ಉದ್ಘಾಟನಾ ಕಾರ್ಯಕ್ರಮದವರೆಗೂಸ್ಪರ್ಧಿಗಳ ಹೆಸರು ಹೇಳಬೇಡಿ ಎಂದು ಚಾನಲ್‍ನವರಿಗೆ ಹೇಳುತ್ತೇನೆ ಸ್ಪರ್ಧಿಗಳ ಹೆಸರುಗಳು ಲೀಕ್ ಆದರೆ, ನನ್ನಿಂದ ಆಗಿರಬಹುದು ಎಂದು ಅವರಿಗೆ ಅನ್ನಿಸಬಾರದು ಎನ್ನುವುದು ನನ್ನ ಉದ್ದೇಶ ಅಷ್ಟೇ. ಎಲ್ಲರಂತ ನಾನೂ ಮೊದಲ ದಿನವೇ ಯಾರೆಲ್ಲಾ ಸ್ಪರ್ಧಿಗಳು ಇರುತ್ತಾರೆ ಎನ್ನುವುದು ಗೊತ್ತಾಗುವುದು ಎಂದು ಹೇಳಿದರು
ರಾಜ-ರಾಣಿ ಫಿನಾಲೆಯಲ್ಲಿ ಸ್ಪರ್ಧಿಗಳ ಪರಿಚಯ:
ಕಲರ್ಸ್ ಕನ್ನಡದ ಬ್ಯುಸಿನೆಸ್ ಹೆಡ್ ಪ್ರಶಾಂತ್ ನಾಯಕ್ ಮಾತನಾಡಿ ಈ ಬಾರಿಯ `ಬಿಗ್ ಬಾಸ್` ಕಾರ್ಯಕ್ರಮದ 11ನೇ ಆವೃತ್ತಿ ಸೆಪ್ಟೆಂಬರ್ 29ರಂದು ಸಂಜೆ ಆರಕ್ಕೆ ಪ್ರಾರಂಭವಾಗಲಿದೆ. ಈ ಬಾರಿಯ ವಿಶೇಷತೆಯೆಂದರೆ, ಐವರು ಸ್ಪರ್ಧಿಗಳ ಹೆಸರನ್ನು ಸೆಪ್ಟಂಬರ್ 28 ರಂದು ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ `ರಾಜ ರಾಣಿ` ಗ್ರಾಂಡ್ ಫಿನಾಲೆ ಪ್ರಕಟಿಸಲಾಗುತ್ತಿದೆ. ಇನ್ನುಳಿದ ಅಭ್ಯರ್ಥಿಗಳನ್ನು ಕಿಚ್ಚು ಸುದೀಪ್ ಅವರು ಭಾನುವಾರ ಪರಿಚಯ ಮಾಡಿಕೊಡಲಿದ್ದಾರೆ ಎಂದರು
ಈ ಭಾರಿ ನಟ,ನಟಿಯರ ಜೊತೆ ಸಾಮಾನ್ಯ ಜನರು ಕೂಡ ಭಾಗಿಯಾಗಲಿದ್ದು ವಿಭಿನ್ನ ಮನಸ್ಥಿತಿಯವರನ್ನು ಹೊಂದಿದೆ. ಶೋ ಆರಂಭಕ್ಕೆ ಎಲ್ಲಾ ಸಿದ್ದತೆ ಮಾಡಿಕೊಳ್ಳಲಾಗಿದೆ ಎನ್ನುವ ಮಾಹಿತಿ ಹಂಚಿಕೊಂಡರು.
ಇದೇ ವೇಳೆ ಎಂಡಮೋಲ್ ಸಂಸ್ಥೆಯ ಮುಖ್ಯಸ್ಥರು ಇದ್ದರು.