Chief Editor
Manohar. R (Manu)
Photo Journalist
chitrataramanu@gmail.com
+91 9845549026
ಕೇದಾರನಾಥ್ ಕುರಿ ಫಾರಂನಲ್ಲಿ ಪೋಲಿ ಮಂಜನ ಲವ್ ಸ್ಟೋರಿ.....ರೇಟಿಂಗ್ : 3/5 ***
Posted date: 29 Sun, Sep 2024 10:39:45 AM
ಕೇದಾರನಾಥ ಕುರಿ ಫಾರಂ ಗ್ರಾಮೀಣ ಭಾಗದ ಯುವ ಜನರ ಪ್ರತಿನಿಧಿಯಾದ ಮಂಜ (ಮಡೇನೂರು ಮನು) ಎಂಬ ಕುರಿ ಕಾಯುವ ಯುವಕನ ಸುತ್ತ ನಡೆಯುವ ಕಥೆ. ಇದರಲ್ಲಿ ನೈಜತೆಗೆ ಹತ್ತಿರವಾಗುವಂಥ ಒಂದಷ್ಟು ಘಟನೆಗಳನ್ನು ನಿರ್ದೇಶಕರು ಅಷ್ಟೇ ಪರಿಣಾಮಕಾರಿಯಾಗಿ ತೆರೆಮೇಲೆ ಮೂಡಿಸಿದ್ದಾರೆ.
 
ಇಲ್ಲಿ ನಾಯಕ ಮಂಜ ಒಬ್ಬ ಪೋಲಿ ಹುಡುಗ. ಚಿತ್ರದ ಆರಂಭದಲ್ಲಿ ಗೆಳೆಯರೊಂದಿಗೆ ಮಂಜನ ಬೇಲಿ ಹಾರುವ ಕೆಲಸಗಳು ಅವ್ಯಾಹತವಾಗಿ ನಡೆಯುತ್ತವೆ. ಹೀಗಿರುವಾಗ ಅಲ್ಲಿ ಅನಿರೀಕ್ಷಿತ ಘಟನೆಯೊಂದು ಜರುಗುತ್ತದೆ.  ಆ ಕುರಿಫಾರಂಗೆ ಹೊಸ ಸಂಸಾರವೊಂದರ ಪ್ರವೇಶವಾಗುತ್ತದೆ. ಸಾಮಾನ್ ಸಣ್ಣಪ್ಪ (ಟೆನ್ನಿಸ್ ಕೃಷ್ಣ) ಎಂಬ ವ್ಯಕ್ತಿ ಹಾಗೂ ಆತನ ಪತ್ನಿ, ಮಗಳು ಬಂದಿಳಿಯುತ್ತಾಳೆ. ಸಣ್ಣಪ್ಪ ಒಬ್ಬ ಕುಡುಕ. ಆತನ ಹೆಂಡತಿಯ ನಡವಳಿಕೆಯೂ ಸರಿ ಇರುವುದಿಲ್ಲ, ಹೀಗಿರುವಾಗ  ಸಣ್ಣಪ್ಪನ  ಮಗಳು ವಾಸಂತಿಯ ಮೇಲೆ ಮಂಜನಿಗೆ ಲವ್ ಆಗುತ್ತದೆ. ಮಂಜ ತಾನು ಪ್ರೇಮಿಸುವ ಹುಡುಗಿಯ  ಸಲುವಾಗಿ ಎಂಥಹ ರಿಸ್ಕ್ ಗಳನ್ನಾದರೂ ಎದುರಿಸಲು  ಸಿದ್ಧನಾಗಿರುತ್ತಾನೆ.
 
ಇಂಥ ಸಮಯದಲ್ಲಿ ವಾಸಂತಿಯ ತಾಯಿ ಮತ್ತು ತೋಟದ ಮಾಲೀಕ ಕೇದಾರ್ ನಾಥ್ ಇಬ್ಬರ ನಡುವಿನ ಅನೈತಿಕ ವಿಷಯವೊಂದು ಬಿಚ್ಚಿಕೊಳ್ಳುತ್ತದೆ. ಇದು ಸಾಮಾನ್ ಸಣ್ಣಪ್ಪನಿಗೆ ತಿಳಿದಾಗ ಆತನ ಕೊಲೆಯಾಗುತ್ತದೆ. ಇದರಿಂದ ರೊಚ್ಚಿಗೆದ್ದ ವಾಸಂತಿ, ಮಂಜನಿಗೆ ಕೇದಾರನಾಥ್ ಎಂಥವನೆಂದು ಆತನ ಬಗ್ಗೆ ಹೇಳುತ್ತಾಳೆ. ವಾಸಂತಿಗಾಗಿ ಮಂಜ ತನಗೆ ಕೆಲಸ ಕೊಟ್ಟ ಕೇದಾರ್ ನಾಥ್ ನನ್ನೇ ಮುಗಿಸಲು ಸಂಚು ಹೂಡುತ್ತಾನೆ. ಮುಂದೆ ಆ ಕೆಲಸವೂ  ನಡೆದುಹೋಗುತ್ತದೆ. ಇದೇ ವೇಳೆ ಮಂಜನ ಸ್ನೇಹಿತರ ಎರಡು ಹುನ್ನಾರವೂ ಎದ್ದು ಕಾಣುತ್ತದೆ.  ಆದರೆ ಅದೆಲ್ಲವೂ ಗಾಂಜಾ ಮಾದರಿಯ ಸಿಗರೇಟ್ ಸೇದಿದಾಗ  ಮತ್ತಿನಲ್ಲಿ ಕಂಡ ಕನಸು ಎನ್ನುವುದು ಪ್ರೇಕ್ಷಕರಲ್ಲಿ  ಸ್ವಲ್ಪ ಗೊಂದಲ ಮೂಡಿಸುತ್ತದೆ.  ನಿರ್ದೇಶಕರು ಕನಸು, ಭ್ರಮೆಯ ನಡುವಿನ  ವ್ಯತ್ಯಾಸ ಕಾಣದಂತೆ ಒಂದು ಗಟ್ಟಿಯಾದ ಕಥೆಯನ್ನು ಹೊಸೆದಿರುವುದು ಇಡೀ ಚಿತ್ರದಲ್ಲಿ ಎದ್ದು ಕಾಣುತ್ತದೆ.
 
ಒಂದು ಕುರಿಫಾರಂ, ಅದರ ಕಾವಲುಗಾರ ಮಂಜ ಮತ್ತು‌ ಆತನ ಪೋಲಿ ಗೆಳೆಯರು ಇದಿಷ್ಟನ್ನು ಇಟ್ಟುಕೊಂಡು ನಿರ್ದೇಶಕರು ಗ್ರಾಮೀಣ ಭಾಗದ ಕಥೆಯೊಂದನ್ನು ಮನರಂಜನಾತ್ಮಕವಾಗಿ ಹೇಳೋ ಪ್ರಯತ್ನ ಮಾಡಿದ್ದಾರೆ. ಆದರೆ ಒಂದಷ್ಟು ಪೋಲಿ ಮಾತುಗಳು ಮತ್ತು ಸಂಕೇತಗಳು ಮಡಿವಂತರಿಗೆ ಇರಿಸು ಮುರುಸು ಉಂಟುಮಾಡುತ್ತವೆ.
 
ಕಾಮಿಡಿ ಕಿಲಾಡಿಗಳು ಮೂಲಕ ಹೆಸರಾದ  ಮಡೇನೂರು ಮನು ತನಗೆ ಕೊಟ್ಟ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ.
ಇನ್ನುಳಿದಂತೆ ಶಿವಾನಿ, ಕರಿಸುಬ್ಬು, ಟೆನ್ನಿಸ್ ಕೃಷ್ಣ ಇವರೆಲ್ಲರ ಪಾತ್ರಗಳು ಕಥೆಗೆ ಪೂರಕವಾಗಿ ಮೂಡಿಬಂದಿವೆ.
ರಾಜೇಶ್ ಸಾಲುಂಡಿ ಅವರು ಹೆಣೆದಿರುವ ಒಂದಷ್ಟು ಪೋಲಿ ಸಂಭಾಷಣೆಗಳು ಪಡ್ಡೆ ಹುಡುಗರಿಗೆ ಮಜಾ ಕೊಡುತ್ತವೆ. ರಾಕೇಶ್ ತಿಲಕ್ ಅವರ  ಛಾಯಾಗ್ರಹಣ, ಸನ್ನಿ ಅವರವಸಂಗೀತ ಚಿತ್ರಕ್ಕೆ ಪೂರಕವಾಗಿದೆ. ಕೇದಾರನಾಥ ಕುರಿಫಾರಂ ಈಗಿನ  ಕಾಲದ ಬಹುತೇಕ ಯೂಥ್ ಇಷ್ಟಪಡುವಂಥ ಚಿತ್ರ ಎನ್ನಬಹುದು.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಕೇದಾರನಾಥ್ ಕುರಿ ಫಾರಂನಲ್ಲಿ ಪೋಲಿ ಮಂಜನ ಲವ್ ಸ್ಟೋರಿ.....ರೇಟಿಂಗ್ : 3/5 *** - Chitratara.com
Copyright 2009 chitratara.com Reproduction is forbidden unless authorized. All rights reserved.