ನೈಸರ್ಗಿಕ ಕೃಷಿಯನ್ನೇ ನಂಬಿದ ತಂದೆ, ಸ್ತ್ರೀಲೋಲನಾಗಿದ್ದ ಮಗನ ಸಾಧನೆಯ ಕಥೆ ಹೇಳುವ ಚಿತ್ರ ಗೋಪಿಲೋಲ ಈವಾರ ತೆರೆಕಂಡಿದ್ದು ಪ್ರೇಕ್ಷಕರಿಂದ ಪ್ರಶಂಸೆ ಪಡೆಯುತ್ತಿದೆ. ಯಾವುದೇ ರಾಸಾಯನಿಕ ಗೊಬ್ಬರ ಉಪಯೋಗಿಸದೆ, ನೈಸರ್ಗಿಕ ಕೃಷಿ ಮಾಡಿಕೊಂಡು ಬಂದಿರುವ ಧರ್ಮೇಗೌಡ (ಎಸ್.ನಾರಾಯಣ್)ನ ಮೂಲಕ ಸಾವಯುವ ಕೃಷಿಯ ಪ್ರಾಮುಖ್ಯತೆ ಹೇಳಲಾಗಿದೆ.
ಅಪ್ಪ ಪ್ರಾಮಾಣಿಕ ರೈತನಾದರೆ ಮಗ ಗೋಪಿ(ಮಂಜುನಾಥ್ ಅರಸು) ಒಬ್ಬ ಸೋಮಾರಿ, ಕಾಲೇಜಲ್ಲಿ ಸದಾ ಹುಡುಗಿಯರ ಜೊತೆ ಸುತ್ತಾಡುತ್ತ ಅವರನ್ನು ಚುಡಾಯಿಸುತ್ತ ಓಡಾಡಿಕೊಂಡಿರುತ್ತಾನೆ, ಇದೇ ಕಾರಣಕ್ಕೆ ಮಾದೇಗೌಡನಿಗೆ ಮಗನ ಮೇಲೆ ಬೇಸರ. ಮಗನನ್ನು ಸದಾ ಬಯ್ಯುತ್ತಲೇ ಇರ್ತಾನೆ. ಆದರೆ ತಾಯಿ ಸುಶೀಲಾಗೆ(ಪದ್ಮಾವಾಸಂತಿ) ಮಗನ ಮೇಲೆ ಎಲ್ಲಿಲ್ಲದ ಪ್ರೀತಿ. ಆತನ ತಪ್ಪನ್ನೆಲ್ಲ ಮುಚ್ಚಿ ಹಾಕುತ್ತಲೇ ಬರುತ್ತಾಳೆ, ಗೋಪಿ ಒಬ್ಬ ಉಡಾಳನಾದರೂ ಬಡವರು, ಅಸಹಾಯಕರನ್ನು ಕಂಡರೆ ಸದಾ ಮರುಗುವ ಹೃದಯದವನು. ಅದೇ ಕಾರಣಕ್ಕೆ ಕಾಲೇಜಿನ ಸಹಪಾಠಿ ಲೀಲಾ(ನಿಮಿಷ) ಆತನಿಗೆ ಮಾರು ಹೋಗುತ್ತಾಳೆ. ಗೆಳತಿಯರು ಆತ ಒಳ್ಳೆಯವನಲ್ಲ ಎಂದು ಎಚ್ಚರಿಸಿದರೂ, ಲೀಲಾ ಆತ ಇನ್ನೊಬ್ಬರ ಕಷ್ಟಕ್ಕೆ ಮರುಗುವ ಗುಣ ಕಂಡು ಮರುಳಾಗುತ್ತಾಳೆ. ಇಬ್ಬರ ನಡುವೆ ಪ್ರೀತಿ ಬೆಳೆಯುತ್ತದೆ. ಇಬ್ಬರೂ ಒಮ್ಮೆ ಗೋಪಿಯ ತೋಟದ ಮನೆಗೆ ಹೋದಾಗ, ಅಲ್ಲಿ ಒಂದು ಆಕಸ್ಮಿಕ ಸಂದರ್ಭದಲ್ಲಿ ಅವರಿಬ್ಬರೂ ಒಂದಾಗುತ್ತಾರೆ, ನಂತರ ಗೋಪಿ ಲೀಲಾಗೆ ಕಾಲ್ ಮಾಡೋದನ್ನೇ ನಿಲ್ಲಿಸುತ್ತಾನೆ, ಆಕೆಯೇ ಕಾಲ್ ಮಾಡಿದರೂ ಎತ್ತದೆ ನಿರ್ಲಕ್ಷಿಸುತ್ತಾನೆ, ಇದನ್ನ ಪ್ರಶ್ನಿಸಿದ ಲೀಲಾಗೆ ಗದರಿದ ಗೋಪಿ, ಆಕೆಯನ್ನು ಮದುವೆಯಾಗಲು ನಿರಾಕರಿಸುತ್ತಾನೆ. ಆಗ ದಿಟ್ಟ ಮಹಿಳೆಯಾದ ಲೀಲಾ, ನೀನು ಬೇರೆ ಹುಡುಗಿಯರ ಜೊತೆ ಆಟವಾಡಿದಂಗಲ್ಲ, ಅದೇಗೆ ನನ್ನನ್ನು ಬಿಟ್ಟು ಬೇರೆ ಹುಡುಗಿಯನ್ನು ಮದುವೆಯಾಗ್ತೀಯೋ ನಾನೂ ನೋಡ್ತೇನೆ ಎಂದು ಚಾಲೆಂಜ್ ಮಾಡುತ್ತಾಳೆ, ಗೋಪಿ ಎಲ್ಲೇ ಹೋದರೂ ಫಾಲೋ ಮಾಡ್ತಿರ‍್ತಾಳೆ, ಒಮ್ಮೆ ಲೀಲಾ ಗೋಪಿಯ ಮನೆಗೇ ಬಂದು, ಮನೆಯವರೆಲ್ಲರ ಮುಂದೆ ನಿಮ್ಮಮಗ ತನ್ನನ್ನು ಪ್ರೀತಿಸಿ ಮೋಸ ಮಾಡಿದ ವಿಷಯ ಹೇಳುತ್ತಾಳೆ, ಅಲ್ಲದೆ ನೀವೇ ನಮ್ಮಿಬ್ಬರಿಗೆ ಮದುವೆ ಮಾಡಿಸಬೇಕು ಎಂದಾಗ, ಗೋಪಿಯ ತಾಯಿ ಮಗನನ್ನೇ ಸಮರ್ಥಿಸಿಕೊಂಡರೂ, ಮಾದೇಗೌಡ ಮಾತ್ರ ಸೊಸೆಯ ಧೈರ್ಯವನ್ನು ಮೆಚ್ಚಿಕೊಳ್ಳುತ್ತಾನೆ, ಹೀಗೆ ಸಾಗುವ ಕಥೆಯಲ್ಲಿ ಮಾದೇಗೌಡ ತಾನು ಕೆಲಸ ಮಾಡುತ್ತಿದ್ದ ಜಾಗದಲ್ಲಿ ಹೇಗೆ ಅಪವಾದ ಹೊತ್ತುಕೊಳ್ಳುತ್ತಾನೆ, ಯಾಕೆ ಆತ ಹಳ್ಳಿಗೆ ಬಂದು ನೆಲೆಸುತ್ತಾನೆ, ಮುಂದೆ ನಾಯಕ ಗೋಪಿ ಮತ್ತೆ ಲೀಲಾಳನ್ನು ಪತ್ನಿಯಾಗಿ ಸ್ವೀಕರಿಸುತ್ತಾನಾ, ತನ್ನ ಪ್ರಯತ್ನದಲ್ಲಿ ಲೀಲಾಗೆ ಗೆಲುವು ದೊರಕಿತೇ, ಆದರ್ಶಗಳನ್ನೇ ಮೈಗೂಡಿಸಿಕೊಂಡಿದ್ದ ಮಾದೇಗೌಡನ ಮೇಲೆ ಬಂದಿದ್ದ ಅಪವಾದವೇನು, ಅದರಿಂದ ಆತ ಹೇಗೆ ಹೊರಬರುತ್ತಾನೆ, ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಗೋಪಿಲೋಲ ಚಿತ್ರದಲ್ಲಿದೆ,
ನಿರ್ದೇಶಕ ಆರ್. ರವೀಂದ್ರ ಅವರು ತಮ್ಮ ಪ್ರತಿ ಚಿತ್ರದಲ್ಲೂ ಮೆಸೇಜ್ ಹೇಳುತ್ತಲೇ ಬಂದಿದ್ದಾರೆ, ಅದೇ ರೀತಿ ಈ ಚಿತ್ರದಲ್ಲೂ ಕೃಷಿ ಹಾಗೂ ಮಾನವೀಯತೆಯ ಮೌಲ್ಯಗಳನ್ನು ತೆರೆದಿಡುವ ಪ್ರಯತ್ನ ಮಾಡಿದ್ದಾರೆ, ಸುಕೃತಿ ಚಿತ್ರಾಲಯ ಲಾಂಛನದಲ್ಲಿ ಎಸ್.ಆರ್. ಸನತ್‌ಕುಮಾರ್ ಅವರು ಈ ಚಿತ್ರವನ್ನು ನಿರ್ಮಿಸಿದ್ದು, ಮಂಜುನಾಥ್ ಅರಸು ಸಹ ನಿರ್ಮಾಪಕರಾಗಿ ಕೈಜೋಡಿಸಿದ್ದಾರೆ.
ಕೇಶವಚಂದ್ರ ಚಿತ್ರಕಥೆ, ಸಂಭಾಷಣೆ ಬರೆದಿದ್ದು, ಮಿದುನ್ ಅಸೋಕನ್ ಮ್ಯೂಸಿಕ್ ಕಂಪೋಜ್ ಮಾಡಿದ್ದಾರೆ. ಚಿತ್ರದಲ್ಲಿರುವ ನಾಲ್ಕು ಹಾಡುಗಳೂ ಸುಂದರವಾಗಿ ಮೂಡಿಬಂದಿವೆ. ಸೂರ್ಯಕಾಂತ್ ಎಚ್. ಅವರ ಕ್ಯಾಮೆರಾ ವರ್ಕ್ ಚಿತ್ರದ ಮತ್ತೊಂದು ಹೈಲೈಟ್. ವೀಕೆಂಡ್‌ನಲ್ಲಿ ಒಮ್ಮೆ ಈ ಚಿತ್ರವನ್ನು ನೋಡಿಕೊಂಡು ಬನ್ನಿ, ಕೊಟ್ಟ ಕಾಸಿಗೆ ಮೋಸವಂತೂ ಇಲ್ಲ.