ಬಣ್ಣದ ಲೋಕ ಎಂಥವರನ್ನು ಸೆಳೆಯುತ್ತದೆ ಎಂಬುದಕ್ಕೆ ಡಾ.ಎಸ್.ಮಹೇಶ್ ಬಾಬು ಸಾಕ್ಷಿಯಾಗುತ್ತಾರೆ. ಇವರ ಕುರಿತು ಹೇಳುವುದಾದರೆ, ಊಟಿ ಮೂಲದವರಾಗಿದ್ದು ಚಿಕ್ಕಂದಿನಿಂದಲೇ ಸಿನಿಮಾದ ಮೇಲೆ ಆಸಕ್ತಿ ಒಲಿದಿದೆ. ಮುಂದೆ ಉನ್ನತ ಶಿಕ್ಷಣ ಮುಗಿಸಿ, ಸದ್ಯ ಬೆಂಗಳೂರಿನಲ್ಲಿ ರೆರ್ಕಾಡಿಂಗ್ ಸ್ಟುಡಿಯೋ, ಸಂಸ್ಥೆ ನಡೆಸುತ್ತಿದ್ದು, ವಿಜ್ಞಾನಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಹಿಂದೆ ಬಡಗ ಜಾತಿಯ ಬಗ್ಗೆ ಚಿತ್ರ ಮಾಡಿದ್ದರು. ಗ್ಯಾಪ್ ನಂತರ ಈಗ `ಪ್ರಾಪ್ತಿ` ಸಿನಿಮಾಕ್ಕೆ ಕಥೆ,ಚಿತ್ರಕಥೆ,ಸಂಭಾಷಣೆ,ಸಂಗೀತ, ಸಂಕಲನ, ನಿರ್ದೇಶನ ಜತೆಗೆ ಸಿಸಿ ಕ್ರಿಯೇಶನ್ಸ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. `ವಿಧಿ ನಿಗದಿಯಾಗಿದೆ` ಎಂಬ ಅಡಿಬರಹವಿದೆ.
ಸೆನ್ಸಾರ್‌ನವರು ಪ್ರಶಂಸೆ ವ್ಯಕ್ತಪಡಿಸಿ ಯುಎ ಪ್ರಮಾಣ ಪತ್ರ ನೀಡಿದ್ದಾರೆ. ಪ್ರಚಾರದ ಮೊದಲ ಹಂತವಾಗಿ ಟ್ರೇಲರ್, ಮೂರು ಹಾಡುಗಳ ಬಿಡುಗಡೆ ಸಮಾರಂಭ ರೇಣುಕಾಂಬ ಸ್ಟುಡಿಯೋದಲ್ಲಿ ನಡೆಯಿತು. ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಹಿರಿಯ ನಿರ್ದೇಶಕ ಸಾಯಿಪ್ರಕಾಶ್ ಮಾತನಾಡಿ ತುಣುಕುಗಳು ಕುತೂಹಲ ಮೂಡಿಸುತ್ತದೆ. ತಮಿಳು ಭಾಷೆಯವರಾಗಿದ್ದರೂ ಕನ್ನಡದ ಮೇಲಿನ ಅಭಿಮಾನದಿಂದ ಬಂಡವಾಳ ಹೂಡಿದ್ದಾರೆ. ನಿರ್ಮಾಪಕರು ಎಲ್ಲಿಂದ ಬಂದರು ಅಂತ ಮುಖ್ಯವಾಗಿರುವುದಿಲ್ಲ. ಯಾವ ಭಾಷೆಯ ಚಿತ್ರ ಮಾಡಿದ್ದಾರೆಂದು ನೋಡಬೇಕು. ಇಂತಹವರ ಅವಶ್ಯಕತೆ ಉದ್ಯಮಕ್ಕೆ ಬೇಕಾಗಿದೆ ಎಂದರು. ಇದೇ ಸಂದರ್ಭದಲ್ಲಿ ವಿಕ್ಟರಿವಾಸು, ಆಡುಗೋಡಿ ಶ್ರೀನಿವಾಸ್ ಉಪಸ್ತಿತರಿದ್ದರು.
ನಿರ್ದೇಶಕರು ಹೇಳುವಂತೆ ಈಗಿನ ಕಾಲಮಾನದಲ್ಲಿ ನಡೆಯುತ್ತಿರುವ ಮೂರು ಅಂಶಗಳನ್ನು ಬಳಸಿಕೊಂಡು, ಸಂದೇಶದ ಮೂಲಕ ತೋರಿಸುವ ಪ್ರಯತ್ನ ಮಾಡಲಾಗಿದೆ. ಮೊದಲನೆಯದಾಗಿ ಹೆಚ್ಚುವರಿ ವೈವಾಹಿಕ ಸಂಬಂಧಗಳು (Extra Marital Affairs). ಇದರಿಂದ ಪತಿ-ಪತ್ನಿ ನಡುವೆ ಬಿರುಕು ಬಂದು ವಿಚ್ಚೇದನಕ್ಕೆ ಅರ್ಜಿ ಹಾಕುತ್ತಿದ್ದಾರೆ. ಎರಡನೆಯದು ಆಕರ್ಷಣೆ (Infatuation). ಇಂತಹುದು ಹೆಚ್ಚಾಗಿ ಸಣ್ಣ ಹುಡುಗರು, ಹುಡುಗಿಯರಲ್ಲಿ ಕಂಡು ಬರುತ್ತದೆ. ಇವರುಗಳು ದೊಡ್ಡವರ ಮೇಲೆ ಆಸೆ ಪಡುವುದು. ಇದಕ್ಕೆ ಪೋಷಕರು, ಸ್ನೇಹಿತರು ಕಾರಣರಾಗಿರುವುದಿಲ್ಲ. ಮಾನಸಿಕವಾಗಿ ಕುಗ್ಗುತ್ತಾರೆ. ಕೊನೆಯದಾಗಿ ನಮ್ಮ ನಾಡಿನ ಸಂಸ್ಕ್ರತಿಯನ್ನು ಬಿಂಬಿಸುವುದು. ಅಂದರೆ ನೃತ್ಯ ಅದರಲ್ಲೂ ಭರತನಾಟ್ಯ ವಿಶ್ವದಲ್ಲೆಡೆ ಪ್ರಚಲಿತವಾಗಿದೆ. ಇವೆಲ್ಲವು ಸ್ಟೆಸ್ಪೆನ್ಸ್, ಥ್ರಿಲ್ಲರ್ ಹಾಗೂ ತಿರುವುಗಳೊಂದಿಗೆ ಸಾಗುತ್ತದೆ. ಪ್ರಸಕ್ತ ತಲೆಮಾರಿನವರು ಇದರಿಂದ ಬದಲಾವಣೆ ಆಗಬೇಕು ಎಂಬುದು ಸನ್ನಿವೇಶಗಳ ಮೂಲಕ ಬರುತ್ತದೆಂದು ಹೇಳಿದರು.
ಪೋಷಕ, ಖಳನಾಗಿ ಕಾಣಿಸಿಕೊಂಡಿದ್ದ ಜಯಸೂರ್ಯ ನಾಯಕ. ಖ್ಯಾತ ಗಾಯಕಿ ಮಂಜುಳಾಗುರುರಾಜ್ ಸೊಸೆ ಗೌರಿಸಾಗರ್ ವೃತ್ತಿಯಲ್ಲಿ ಡ್ಯಾನ್ಸರ್. ಸಿನಿಮಾದಲ್ಲೂ ಅದೇ ಪಾತ್ರದಲ್ಲಿ ನಟನೆ ಮಾಡಿರುವುದು ಪ್ರಥಮ ಅನುಭವ. ಗೃಹಿಣಿಯಾಗಿ ನಿಖಿತಾರಾಂ, ಮೈನೆರ್ ಹುಡುಗಿಯಾಗಿ ಮೋನಿಷಾಥಾಮಸ್ ಅಭಿನಯಿಸಿದ್ದಾರೆ. ಉಳಿದಂತೆ ಕಳಸಮಂಜುನಾಥ್, ವಿಲನ್ ಆಗಿ ಅಜಿತ್‌ಜೈನ್, ಮಂಜುಳಾರೆಡ್ಡಿ, ಕಮಲ್‌ಜಿಮಿರಾಯ್, ಅಲ್ಕಾನಂದ ಶ್ರೀನಿವಾಸ್, ಪ್ರಕೃತಿ, ಮೇಘರಾಜ ಕುಮಾರ್,ರಾಮಮೂರ್ತಿ, ನಿಹಾರಿಕ ಮುಂತಾದವರಿಗೆ ಅವಕಾಶ ಮಾಡಿಕೊಡಲಾಗಿದೆ. ಛಾಯಾಗ್ರಹಣ ಕುಮಾರ್‌ಗೌಡ, ನೃತ್ಯ ಗೌರಿ ಅವರದಾಗಿದೆ.