ಪರಿಚಯವೇ ಇಲ್ಲದ ನಾಲ್ವರು ಒಂದೇ ಕಾರಿನಲ್ಲಿ ಪಯಣಿಸುವಾಗ ನಡೆಯೋ ಕುತೂಹಲಕಾರಿ ಘಟನೆಗಳನ್ನುಟ್ಟುಕೊಂಡು ನಿರ್ದೇಶಕ ಕಿರಣ್
ಎಸ್. ಸೂರ್ಯ ಅವರು ರೋಮಾಂಚನಕಾರಿ ಥ್ರಿಲ್ಲರ್ ಕಥಯೊಂದನ್ನು ತೆರೆಮೇಲೆ ಮೂಡಿಸಿದ್ದಾರೆ.
ಕಾರಲ್ಲಿರೋ ಪ್ರತಿಯೊಬ್ಬರ ಮನದಲ್ಲಿ ಏನೇನೆಲ್ಲ ಕಲ್ಪನೆಗಳು ಉಂಟಾಗುತ್ತವೆ, ಅಷ್ಟಕ್ಕೂ ಅವರು ಆರಂಭಿಸಿದ ಪಯಣ ಯಾವರೀತಿ ಅಂತ್ಯವಾಯಿತು ಎಂದು ಎಲ್ಲಿಗೆ ಪಯಣ ಯಾವುದೋ ದಾರಿ ಚಿತ್ರದ ಮೂಲಕ ನಿರ್ದೇಶಕರು ರೋಚಕವಾಗಿ ನಿರೂಪಿಸಿದ್ದಾರೆ. ಚಿತ್ರದ ಕಥೆ ತೆರೆದುಕೊಳ್ಳುವುದೇ ಒಂದು ಆಸ್ಪತ್ರೆಯ ವಾರ್ಡ್ ನಿಂದ. ಬೆಡ್ ಮೇಲೆ ನಿಸ್ತೇಜಳಾಗಿ ಮಲಗಿದ್ದ ನಾಯಕಿ ಅಕ್ಷತಾ(ಸೂರ್ತಿ ಉಡಿಮನೆ)ಗೆ ಅಲ್ಲಿದ್ದ ವೈದ್ಯ ಪದೇ ಪದೇ ಚುಚ್ಚುಮದ್ದು ನೀಡಿ ಪ್ರಜ್ಞೆ ತಪ್ಪಿಸುತ್ತಾನೆ,
ನಂತರದ್ದೇ ನಾಯಕನ ಕಥೆ. ಅಮರ್ (ಅಭಿಮನ್ಯು ಕಾಶಿನಾಥ್) ಒಬ್ಬ ಚಿತ್ರಬರಹಗಾರ, ಪ್ರಕೃತಿ, ಹೆಣ್ಣಿನ ಸೌಂದರ್ಯವನ್ನು ತನ್ನ ಕುಂಚದ ಮೂಲಕ ಯಥಾವತ್ತಾಗಿ ಮರುಸೃಷ್ಟಿಸುವಂಥ ಅದ್ಭುತ ಕಲಾವಿದ. ಒಮ್ಮೆ ಹೆಣ್ಣೊಬ್ಬಳ ಸುಂದರ ದೇಹ ಸಿರಿಯನ್ನು ಚಿತ್ರಪಟದ ಮೇಲೆ ಮೂಡಿಸಲು ರೂಪದರ್ಶಿಯಾಗಿ ಅಕ್ಷತಾಳನ್ನು ಕರೆಸಿಕೊಳ್ಳುತ್ತಾನೆ, ತಮ್ಮನ ಚಿಕಿತ್ಸೆಗೆ ಹಣ ಹೊಂದಿಸಲು ಆಕೆ ಒಲ್ಲದ ಮನಸಿಂದ ಒಪ್ಪಿಕೊಂಡಿರುತ್ತಾಳೆ, ಆಕೆಯ ಪರಿಸ್ಥಿತಿ ಅರಿಯದ ಅಮರ್ ಚಿತ್ರ ಪೂರ್ಣಗೊಳ್ಳುವ ಮೊದಲೇ ಹೊರಟುಹೋಗಿದ್ದ ಅಕ್ಷತಾ ಮೇಲೆ ಸಿಡಿಮಿಡಿಗೊಳ್ಳುತ್ತಾನೆ, ನಂತರ ಆಕೆ ಮತ್ತೆ ಸಿಕ್ಕಾಗ ಪರಿಸ್ಥಿತಿ ಅರಿತಮೇಲೆ ಇಬ್ಬರ ನಡುವೆ ಸ್ನೇಹ, ಪ್ರೀತಿ ಚಿಗುರುತ್ತದೆ, ಎಲ್ಲವೂ ಸರಿಯಾಗೇ ಸಾಗುತ್ತಿರುವಾಗ ಕಥೆಗೊಂದು ರೋಚಕ ತಿರುವು ಎದುರಾಗುತ್ತದೆ, ಅಮರ್ ವಿರಾಜಪೇಟೆಯಲ್ಲಿ ಹೊಸದಾಗಿ ಮನೆಯೊಂದನ್ನು ಖರೀದಿಸಿ ಅಲ್ಲಿ ಪೇಂಟಿಂಗ್ ಎಕ್ಸಿಬಿಷನ್ ನಡೆಸಲು ಮುಂದಾಗುತ್ತಾನೆ, ಅಷ್ಟರಲ್ಲಿ ಒಂದುವಾರ ಬೇರೊಂದು ಕಡೆ ಹೋಗಬೇಕಾದ ಸಂದರ್ಭ ಎದುರಾಗುತ್ತದೆ. ಅಕ್ಷತಾ ತಾನೊಬ್ಬಳೇ ಆ ಮನೆಗೆ ಹೋಗಿ ಮನೆಯನ್ನು ಎಕ್ಸಿಬಿಷನ್‌ಗೆ ಸಜ್ಜುಗೊಳಿಸಲು ಮುಂದಾಗುತ್ತಾಳೆ. ಮನೆಯ ಪೇಂಟಿಂಗ್ ಮಾಡಲು ಬಂದ ಸಂಪತ್ ಆಕೆಯ ದೇಹಸೌಂದರ್ಯ ಕಂಡು ಬಲವಂತ ಮಾಡಲು ಮುಂದಾಗುತ್ತಾನೆ, ಆಕೆ ಒಪ್ಪದಿದ್ದಾಗ ಆಕೆ ಮನೆಯಲ್ಲಿ ವೇಶ್ಯಾವಾಟಿಕೆ ಮಾಡುತ್ತಿದ್ದಾಳೆಂದು ಸುಳ್ಳು ಸುದ್ದಿ ಹಬ್ಬಿಸುತ್ತಾನೆ. ಹೀಗೆ ಸಾಗುವ ಕಥೆಯಲ್ಲಿ ಮುಂದೆ ನಾಯಕ ಅಮರ್ ಕೆಲಸ ಮುಗಿಸಿಕೊಂಡು ವಿರಾಜಪೇಟೆಗೆ ಹೊರಟಿರುತ್ತಾನೆ, ಮಾರ್ಗ ಮಧ್ಯದಲ್ಲಿ ಆತನಿಗೆ ಲಿಫ್ಟ್ ಕೇಳುವ ಸುಂದರ ಯುವತಿ ನೀತು(ವಿಜಯಶ್ರೀ ಕಲಬುರ್ಗಿ) ಸೇರಿದಂತೆ ನಾಲ್ವರು ಅಪರಿಚಿತ ವ್ಯಕ್ತಿಗಳು ಈತನ ಕಾರನ್ನೇರುತ್ತಾರೆ. ಅವರೆಲ್ಲರೂ ವಿರಾಜಪೇಟೆಗೆ ಹೊರಟಿರುತ್ತಾರೆ. ಮಾರ್ಗ ಮಧ್ಯದಲ್ಲಿ ಏನೇನೆಲ್ಲ ಘಟನೆಗಳು ಸಂಭಸಿದವು, ಅವರೆಲ್ಲರೂ ವಿರಾಜಪೇಟೆಗೆ ತಲುಪುತ್ತಾರೆ, ಇಲ್ವಾ ? ಈ ಎಲ್ಲ ಪ್ರಶ್ನೆಗೆ ಚಿತ್ರದ ಕ್ಲೈ ಮ್ಯಾಕ್ಸ್ ನಲ್ಲಿ ಉತ್ತರವಿದೆ.
ನಟ ಕಾಶೀನಾಥ್ ಪುತ್ರ ಅಭಿಮನ್ಯು ನಾಯಕ ಅಮರ್ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ, ನಾಯಕಿ ಸ್ಪೂರ್ತಿ ಉಡಿಮನೆ ಮುದ್ದುಮುದ್ದಾಗಿ ಅಭಿನಯಿಸಿದ್ದಾರೆ. ಮತ್ತೊಬ್ಬ ನಾಯಕಿ ವಿಜಯಶ್ರೀ ಕಲಬುರ್ಗಿ ಲವಲವಿಕೆ ತುಂಬಿದ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ, ಅಚ್ಚರಿಯ ಪಾತ್ರದಲ್ಲಿ ನಟ ಬಲ ರಾಜವಾಡಿ ಗಮನ ಸೆಳೆಯುತ್ತಾರೆ, ವಿಶೇಷವಾಗಿ ಕಿಚ್ಚ ಸುದೀಪ್ ಕಂಥದಲ್ಲಿ ಮೂಡಿಬಂದಿರುವ ಹಾಡು ಇಷ್ಟವಾಗುತ್ತದೆ, ಸುದರ್ಶನ ಆರ್ಟ್ಸ್ ಬ್ಯಾನರ್ ಅಡಿ ಜತಿನ್ ಪಟೇಲ್ ಚಿತ್ರವನ್ನು ನಿರ್ಮಿಸಿದ್ದಾರೆ.