ಸತ್ಯ ಹರಿಶ್ಚಂದ್ರ ಚಿತ್ರದ ನಾಯಕ, ಸುಳ್ಳೇ ಆತನ ಮನೆದೇವರು. ಧರಣಿಮಂಡಲ ಎಂಬ ಊರಲ್ಲಿ ಈತನದೇ ರಾಜ್ಯಭಾರ. ಆ ಊರಲ್ಲಿ ನಡೆಯುವ ರಾಜಕೀಯ, ದೇವಸ್ಥಾನದ ವಿಷಯದಲ್ಲಿ ನಡೆಯೋ ರಾಜಕಾರಣ, ಸಾರ್ವಜನಿಕರ ಹಣ ಲಪಟಾಯಿಸಲು ಹೊಂಚು ಹಾಕೋ ಖದೀಮರು, ಅಂಥವರಿಗೆ ಗ್ರಾಮದೇವಿಯೇ ಕಲಿಸುವ ಪಾಠ ಇದನ್ನೆಲ್ಲ ಗ್ರಾಮೀಣ ಸೊಗಡಿನಲ್ಲಿ ನಡೆಯೋ ಕಥೆಯ ಮೂಲಕ ಯಲಾಕುನ್ನಿ ಚಿತ್ರದಲ್ಲಿ ನಿರೂಪಿಸಿದ್ದಾರೆ ಯುವ ನಿರ್ದೇಶಕ ಪ್ರದೀಪ್, ಚಿತ್ರದ ಕಾನ್ಸೆಪ್ಟ್ ಹೊಸದೇನಲ್ಲದಿದ್ದರೂ, ಅದನ್ನು ಈಗಿನ ಕಾಲದ ಪ್ರೇಕ್ಷಕರನ್ನು ದೃಷ್ಟಿಯಲ್ಲಿಟ್ಟುಕೊಂಡು ತೆರೆಯಮೇಲೆ ತಂದಿರುವ ಶೈಲಿ ಹೊಸದು, ತುಂಬಾ ದಿನಗಳ ನಂತರ ಹಳ್ಳಿ ಸೊಗಡಿನಲ್ಲಿ ನಡೆಯೋ ಹಾಸ್ಯಚಿತ್ರ ನೋಡಿದ ಅನುಭವವನ್ನು ಯಲಾಕುನ್ನಿ ನೀಡುತ್ತದೆ, ಸುಳ್ಳು ಹೇಳುವುದು ಯಾರಿಗೂ ಒಳ್ಳೆಯದಲ್ಲ. ಯಾವತ್ತಿದ್ದರೂ ಸತ್ಯವೇ ಗೆಲ್ಲುತ್ತದೆ ಎಂಬುದನ್ನು ಈ ಚಿತ್ರದಲ್ಲಿ ಹೇಳಲಾಗಿದೆ.
ಆತನ ಹೆಸರು ಸತ್ಯ(ಕೋಮಲ್‌ಕುಮಾರ್) ಆದರೆ ಆತ ಹೇಳೋದು ಮಾತ್ರ ಬರೀ ಸುಳ್ಳು. ಸುಳ್ಳನ್ನೇ ಬಂಡವಾಳ ಮಾಡಿಕೊಂಡು, ಊರ ಜನರನ್ನು ಯಾಮಾರಿಸಿ ಹಣ ಮಾಡುವುದೇ ಸತ್ಯನ ಕಾಯಕ. ಈತನ ಕೆಲಸಗಳಿಗೆ ಆ ಊರ ಗ್ರಾಮಪಂಚಾಯ್ತಿ ಅಧ್ಯಕ್ಷ ಸುಗಂಧರಾಜ(ಮಿತ್ರ)ನ ಸಹಕಾರವೂ ಇರುತ್ತದೆ. ಹಳ್ಳಿಯ ಅಭಿವೃದ್ಧಿಗೆಂದು ಸರ್ಕಾರದಿಂದ ಮಂಜೂರಾಗಿ ಬಂದ ಹಣದಿಂದ ಹಿಡಿದು ದೇವಸ್ಥಾನದ ಜೀರ್ಣೋಧ್ದಾರಕ್ಕೆ ಸಂಗ್ರಹಿಸಿದ ಹಣವನ್ನೂ ಸತ್ಯ ಎಗರಿಸುತ್ತಾನೆ,
ಒಮ್ಮೆ ಆ ಹಳ್ಳಿಗೆ ಬರುವ ಶಾಸಕ(ದತ್ತಣ್ಣ)ರ ಬಳಿ ಊರಿಗೆ ಪಶುವೈದ್ಯರೊಬ್ಬರನ್ನು ನೇಮಿಸಬೇಕೆಂಬ ಬೇಡಿಕೆ ಬರುತ್ತದೆ, ಅದರಂತೆ ಆ ಗ್ರಾಮಕ್ಕೆ ನೂತನ ಪಶುವೈದ್ಯೆಯಾಗಿ ಅಕ್ಷರಾ(ನಿಸರ್ಗ ಅಪ್ಪಣ್ಣ) ಬರುತ್ತಾಳೆ. ಊರನ್ನು ಪರಿಚಯಿಸೋ ನೆಪದಲ್ಲಿ ಸತ್ಯ, ಅಕ್ಷರಳಿಗೆ ಹತ್ತಿರವಾಗುತ್ತಾನೆ. ಹಳ್ಳಿಯ ಜನರಿಗೆ ಸತ್ಯ ಹೇಗೆಲ್ಲ ಯಾಮಾರಿಸುತ್ತಾ ಜೀವನ ನಡೆಸುತ್ತಿದ್ದಾನೆ ಎಂಬುದು ಗೊತ್ತಾಗುತ್ತದೆ, ಅಕ್ಷರ, ಸತ್ಯನಿಗೆ ಒಂದಷ್ಟು ಬುದ್ದಿ ಮಾತು ಹೇಳಿ ಬದಲಾಯಿಸಲು ಪ್ರಯತ್ನಿಸುತ್ತಾಳೆ. ಆಕೆಯ ಮಾತು ಕೇಳದ ಸತ್ಯನಿಗೆ ಒಮ್ಮೆ ಕನಸಿನಲ್ಲಿ ಗ್ರಾಮದೇವತೆಯೇ ಪ್ರತ್ಯಕ್ಷಳಾಗಿ ಇನ್ಮುಂದೆ ನೀನು ಸುಳ್ಳು ಹೇಳಿದರೆ, ನಿನ್ನ ಜೊತೆ ನೀವು ಪ್ರೀತಿಸುವವರೆಲ್ಲ ಸತ್ತು ಹೋಗುತ್ತಾರೆ ಎಂದು ಎಚ್ಚರಿಸುತ್ತಾಳೆ, ಆನಂತರವೂ ಸತ್ಯ ತನ್ನ ಕಾಯಕವನ್ನೇ ಮುಂದುವರೆಸಿದಾಗ ಆತನ ಸುಳ್ಳಿಗೆ ಬಲಿ ಎಂಬಂತೆ ಸತ್ಯಇಷ್ಟಪಡುವ ಆತನ ಸಾಕುತಾಯಿ ಸಣ್ಣಕ್ಕಿ ಸತ್ತು ಹೋಗುತ್ತಾಳೆ. ಸತ್ಯ ಆಡುವ ಸುಳ್ಳಿನಿಂದ ಊರಲ್ಲಿ ಮತ್ತು ಗೆಳೆಯರಲ್ಲಿ ಏನೆಲ್ಲಾ ಆಗುತ್ತದೆ ಎಂಬುದನ್ನು ಕಣ್ಣಿಗೆ ಕಟ್ಟುವ ಘಟನೆಗಳ ಮೂಲಕ ನಿರ್ದೇಶಕರು ಅಚ್ಚುಕಟ್ಟಾಗಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ಈ ನಡುವೆ ಸತ್ಯನ ತಂದೆ ಕೇಡಿ ನಾಗಪ್ಪ(ಕೋಮಲ್‌ಕುಮಾರ್)ನ ಕಥೆಯೂ ತೆರೆದುಕೊಳ್ಳುತ್ತದೆ, ಈತನ ಮತ್ತೊಂದು ಹೆಸರು ವಜ್ರಮುನಿ, ಊರ ಹೆಣೊಬ್ಬಳ ಮೇಲೆ ಅತ್ಯಾಚಾರ ನಡೆಸಿ. ನಂತರ ಆಕೆಯನ್ನೇ ಮದುವೆಯಾಗುವ ನಾಗಪ್ಪನಿಗ ಒಬ್ಬ ಮಗ ಹುಟ್ಟುತ್ತಾನೆ. ಆದರೆ ಆತ ಹುಟ್ಟುತ್ತಲೇ ತಾಯಿಯನ್ನು ಕಳೆದುಕೊಳುತ್ತಾನೆ. ಬೆಳೆದಂತೆಲ್ಲಾ ತಂದೆಯ ಗುಣಗಳನ್ನೇ ತನ್ನಲ್ಲೂ ಆವಾಹಿಸಿಕೊಳ್ಳುವ ಸತ್ಯನಿಗೆ ಹೇಗೆ ಜ್ಞಾನೋದಯವಾಯ್ತು ಅನ್ನೋದೆ ಯಲಾಕುನ್ನಿ ಚಿತ್ರದ ಕಥೆ.
ಸತ್ಯನ ತಂದೆಯೂ ತನ್ನ ದುರಾಚಾರದ ಕಾರಣದಿಂದ ಊರ ಜನರಿಂದಲೇ ಹೊಡೆಸಿಕೊಂಡು ಅನಾಥವಾಗಿ ಸತ್ತಿರುತ್ತಾನೆ, ಮುಂದೆ ಸತ್ಯ ಬದಲಾಗುತ್ತಾನಾ, ಅಥವಾ ಜನರಿಗೆ ಮೋಸ, ವಂಚನೆ ಮಾಡುತ್ತಾ ತಂದೆಯಂತೆಯೇ ಜನರ ಕೈಲಿ ಹೊಡೆಸಿಕೊಂಡು ಸಾಯುತ್ತಾನಾ ಎಂಬುದೇ ಚಿತ್ರದ ಕ್ಲೈಮ್ಯಾಕ್ಸ್. ಎಲ್ಲೂ ಬೋರಾಗದಂತೆ ಚಿತ್ರವನ್ನು ನಿರೂಪಿಸಿರುವ ಶೈಲಿ ನೋಡುಗನಿಗೆ ಇಷ್ಟವಾಗುತ್ತದೆ,
ಇಡೀ ಚಿತ್ರದಲ್ಲಿ ಕೋಮಲ್ ಅವರ ಪಳಗಿದ ಅದ್ಭುತ ಅಭಿನಯ ಸಿನಿಮಾದ ತೂಕ ಹೆಚ್ಚಿಸಿದೆ. ಚಿತ್ರದಲ್ಲಿ ಅದೆಷ್ಟೇ ಪಾತ್ರಗಳಿದ್ದರೂ, ನೋಡುಗರನ್ನು ಕಾಡುವುದು ಕೇಡಿ ನಾಗಪ್ಪನ ಅಟ್ಟಹಾಸದ ನಗು, ಆ ನಗುವನ್ನು ನೋಡಿದಾಗ, ವಜ್ರಮುನಿಯವರನ್ನು ಬಲ್ಲವರಿಗೆ ಒಂದು ಕ್ಷಣ ರೋಮಾಂಚನವಾಗುತ್ತದೆ, ಅವರದೇ ಹಾವ ಭಾವ, ವಜ್ರಮುನಿಯೇ ಮಾತಾಡುತ್ತಿದ್ದಾರೇನೋ ಎನಿಸುವಂಥ ಧ್ವನಿ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸುತ್ತವೆ, ಚಿತ್ರದ ಛಾಯಾಗ್ರಹಣ, ಹಿನ್ನೆಲೆ ಸಂಗೀತ ಕಥೆಯ ಓಟಕ್ಕೆ ಸಾಥ್ ನೀಡಿದೆ. ಸಿನಿಮಾದ ಅಂದವನ್ನು ಹೆಚ್ಚಿಸಿದೆ. ನಟ ಜಯಸಿಂಹ ಮುಸುರಿ ಕೂಡ ತಂದೆ ಮುಸುರಿ ಕೃಷ್ಣಮೂರ್ತಿ ಅವರನ್ನು ನೆನಪಿಸುತ್ತಾರೆ.
ಈ ಸಂದರ್ಭದಲ್ಲಿ ಇವರಿಬ್ಬರಿಗೂ ಮೇಕಪ್ ಮಾಡಿದ ಕಲಾವಿದರಿಗೆ ವಿಷ್ ಮಾಡಬೇಕು. ನಾಯಕಿ ನಿಸರ್ಗ ಅಪ್ಪಣ್ಣ ಪಶುವೈದ್ಯೆ ಹಾಗೂ ನಾಯಕನ ಮನ:ಪರಿವರ್ತನೆಗೆ ಕಾರಣಳಾಗುವ ಗೆಳತಿಯ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ವಜ್ರಮುನಿ ಅವರ ಮೊಮ್ಮಗ ಆಕರ್ಶ್ ಸತ್ಯನ ಬಾಲ್ಯದ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅಭಿನಯದಲ್ಲಿ ತಾತನ ಗತ್ತು, ಗಮ್ಮತ್ತನ್ನು ಮೈಗೂಡಿಸಿಕೊಂಡಿದ್ದಾರೆ.