Chief Editor
Manohar. R (Manu)
Photo Journalist
chitrataramanu@gmail.com
+91 9845549026
ಗಣೇಶ್‌ರಾವ್ ನಟನೆಯ``ತಾರಕೇಶ್ವರ`` ಟ್ರೇಲರ್ ಬಿಡುಗಡೆ
Posted date: 31 Thu, Oct 2024 02:23:06 PM
 ಭಕ್ತಿ ಪ್ರಧಾನ `ತಾರಕೇಶ್ವರ` ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭವು ರೇಣುಕಾಂಬ ಸ್ಟುಡಿಯೋದಲ್ಲಿ ಅದ್ದೂರಿಯಾಗಿ ನಡೆಯಿತು. ವೇದಾಂತ ಆಚಾರ್ಯ ಶ್ರೀ ಮಂಜುನಾಥ ಭಾರತಿ ಸ್ವಾಮಿಗಳು ಮೊದಲ ಟ್ರೇಲರ್, ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಎರಡನೇ ಟ್ರೇಲರನ್ನು ಬಿಡುಗಡೆ ಮಾಡಿ ತಂಡಕ್ಕೆ ಶುಭಹಾರೈಸಿದರು. ಇದೇ ಸಂದರ್ಭದಲ್ಲಿ ನಿರ್ದೇಶಕರ ಸಂಘದ ಅಧ್ಯಕ್ಷ ಎನ್ನಾರ‍್ಕೆ ವಿಶ್ವನಾಥ್, ಅಂಬೇಡ್ಕರ್ ಸೇನೆಯ ಅಧ್ಯಕ್ಷ ಮೂರ್ತಿ, ಕನ್ನಡ ಸಂಘದ ಅಧ್ಯಕ್ಷ ಬಸವರಾಜ ಪಡುಕೋಟೆ ಮುಂತಾದ ಗಣ್ಯರುಗಳು ಉಪಸ್ತಿತರಿದ್ದರು. `ಅಸುರ ಕುಲತಿಲಕ` ಅಂತ ಅಡಿಬರಹದಲ್ಲಿ ಹೇಳಲಾಗಿದೆ.
 
ಪಾತ್ರದ ಕುರಿತಂತೆ ಮಾತನಾಡಿದ ಗಣೇಶ್‌ರಾವ್ ಕೇಸರ್‌ಕರ್ ನಮ್ಮ ಸಿನಿಮಾ ತೆರೆಗೆ ಬರಲು ಸಿದ್ದವಾಗಿದೆ. ಸೆನ್ಸಾರ್‌ನವರು ಪ್ರಶಂಸೆ ವ್ಯಕ್ತಪಡಿಸಿ ಯಾವುದೇ ದೃಶ್ಯಕ್ಕೆ ಆಕ್ಷೇಪ ವ್ಯಕ್ತಪಡಿಸದೆ `ಯು` ಪ್ರಮಾಣ ಪತ್ರ ನೀಡಿದ್ದಾರೆ. ನಾನು ಯಾವತ್ತೂ ಹಣಕ್ಕೆ ಪ್ರಾಮುಖ್ಯತೆ ಕೊಟ್ಟಿಲ್ಲ. ಉತ್ತಮ ಚಿತ್ರವನ್ನು ಕನ್ನಡಿಗರಿಗೆ ಕೊಡಬೇಕೆಂಂದು ನಿರ್ಮಾಣ ಮಾಡಿದ್ದೇನೆ. ಇಲ್ಲಿ ಬಂದಿರುವ ಅತಿಥಿಗಳು ನನ್ನ ಮೇಲಿನ ಪ್ರೀತಿಯಿಂದ ಬಂದಿದ್ದಾರೆ. ಪೌರಾಣಿಕ ಚಿತ್ರ ಮಾಡುವುದು ಸುಲಭದ ಮಾತಲ್ಲ. ಸೆಟ್‌ನಲ್ಲಿ ಲೈಟಿನ ಕಂಬವು ಕಾಣುವಂತಿಲ್ಲ. ನಿರ್ಮಾಪಕರ ಕಷ್ಟ ಏನೆಂದು ಈಗ ಅರ್ಥವಾಗಿದೆ. ಹೊಸ ಆಲೋಚನೆ ಎನ್ನುವಂತೆ ಈಗಾಗಲೇ ಟಿಕೆಟ್‌ನ್ನು ಮುದ್ರಣ ಮಾಡಿಸಲಾಗಿ, ದರ ನೂರು ರೂಪಾಯಿ ಇರುತ್ತದೆ. ಇದನ್ನು ಖರೀದಿಸಿದವರಿಗೆ ಕರ್ನಾಟಕದ ಯಾವುದೇ ಜಿಲ್ಲೆ, ತಾಲ್ಲೋಕು ಕೇಂದ್ರದಲ್ಲಿ ಸಿನಿಮಾ ವೀಕ್ಷಿಸಬಹುದು. ನಿಮ್ಮೆಲ್ಲರ ಪ್ರೋತ್ಸಾಹದಿಂದ ಇಲ್ಲಿಯವರೆಗೂ 333 ಚಿತ್ರಗಳಲ್ಲಿ ನಟಿಸಿದ್ದೇನೆ ಎಂದರು.
 
ನಿರ್ಮಾಪಕರ ಕೋರಿಕೆಗೆ ಮನ್ನಣೆ ನೀಡಿದ ಆಹ್ವಾನಿತರು ಒಂದಷ್ಟು ಸಗಟು ಟಿಕೆಟ್‌ಗಳನ್ನು ಸ್ಥಳದಲ್ಲೇ ಖರೀದಿಸಿದರು. ಅಂದಾಜು ಟಿಕೆಟ್ ಮೌಲ್ಯ ಐವತ್ತು ಸಾವಿರ ಆಗಿತ್ತು. ಹಾಗೂ ಭಾರತೀಯ ಅಂಚೆ ಇಲಾಖೆಯವರು ಹೊರತಂದಿರುವ `ತಾರಕೇಶ್ವರ` ಚಿತ್ರ ಇರುವ ಅಂಚೆಚೀಟಿಯನ್ನು ಗಣ್ಯರುಗಳು ಅನಾವರಣಗೊಳಿಸಿದರು.
 
ಕಥೆ,ಚಿತ್ರಕಥೆ,ಸಂಭಾಷಣೆ, ಸಾಹಿತ್ಯ ಬರೆದು ನಿರ್ದೇಶನ ಮಾಡಿರುವ ಪುರುಷೋತ್ತಮ್ ಓಂಕಾರ್ ಹೇಳುವಂತೆ ಶಿವಪುರಾಣದ ಕಥೆಯಲ್ಲಿ ತಾರಕಾಸುರ ಅಸುರ ಆದರೂ ಕೂಡ, ತಂದೆ ಕೊಂದವನ ಮೇಲೆ ಸೇಡು ತೀರಿಸಿಕೊಳ್ಳಲು ತಪ್ಪಸ್ಸು ಮಾಡಿ ತನಗೆ ಸಾವು ಬರಬಾರದೆಂದು ಬ್ರಹ್ಮನಿಂದ ವರ ಪಡೆದುಕೊಳ್ಳುತ್ತಾನೆ. ಮುಂದೆ ಯಾವ ರೀತಿ ಹೋರಾಟ ಮಾಡುತ್ತಾನೆಂದು ಕುತೂಹಲದ ಸನ್ನಿವೇಶಗಳೊಂದಿಗೆ ತೋರಿಸಲಾಗಿದೆ. ಗಣೇಶ್‌ರಾವ್ ಕೇಸರ್‌ಕರ್‌ರವರು ಶಿವ, ಕುರುಡ, ತಾರಕೇಶ್ವರ ಮತ್ತು ಮಹಾರಾಜ ಹೀಗೆ ನಾಲ್ಕು ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಅವರ ಪುತ್ರ ಪ್ರಜ್ವಲ್ ಕೇಸರ್‌ಕರ್ ಇಂದ್ರನಾಗಿ ಕಾಣಿಸಿಕೊಂಡಿದ್ದಾರೆ. ಬೆಂಗಳೂರು, ಶ್ರೀರಂಗಪಟ್ಟಣ, ಮೈಸೂರು ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ ಎಂಬುದಾಗಿ ಮಾಹಿತಿ ಬಿಚ್ಚಿಟ್ಟರು.
 
ರಾಜನ ಮಗಳು, ಶಿವ ಭಕ್ತೆ, ಪಾರ್ವತಿಯಾಗಿ ರೂಪಾಲಿ ನಾಯಕಿ. ತಾರಾಕೇಶ್ವರನನ್ನು ಸಂಹಾರ ಮಾಡುವ ಬಾಲ ಸುಬ್ರಹ್ಮಣ್ಯನಾಗಿ ಬಾಲನಟಿ ಋತುಸ್ಪರ್ಶ ಕಾಣಿಸಿಕೊಂಡಿರುವುದು ವಿಶೇಷ. ಇವರೊಂದಿಗೆ ಸುಮಿತ ಪ್ರವೀಣ್, ಅನ್ನಪೂರ್ಣ, ರತಿಮನ್ಮಥರಾಗಿ ವಿಕ್ರಂಸೂರಿ-ನಮಿತಾರಾವ್, ಉಳಿದಂತೆ ಶಂಕರಭಟ್,ಶ್ರೀವಿಷ್ಣು, ಜಿಮ್‌ಶಿವು, ಎನ್.ಟಿ.ರಾಮಸ್ವಾಮಿ, ಗುರುರಾಜ್, ಹೆಜ್ಜಾಜಿ ಮಹಾದೇವ, ಬಸವರಾಜದೇಸಾಯಿ, ವೀರೇಂದ್ರ ಬೆಳ್ಳಿಚುಕ್ಕಿ, ಮಧು ಕಾರ್ತಿಕ್, ಗೀತಾ, ರಾಜೇಶ್ವರಿ ಪಾಂಡೆ, ರಕ್ಷಾಗೌಡ, ರಂಜಿತ, ಶ್ರೀರಾಮ್, ರೂಪ ಮುಂತಾದವರು ಅಭಿನಯಿಸಿದ್ದಾರೆ.
 
ತುಳಜಾಬಾಯಿ, ರೂಪ.ಎಸ್.ದೊಡ್ಮನಿ, ಡಾ.ಸುಮಿತ ಪ್ರವೀಣ್, ಬಸವರಾಜ್ ದೇಸಾಯಿ ಸಹ ನಿರ್ಮಾಪಕರುಗಳಾಗಿ ಗುರುತಿಸಿಕೊಂಡಿದ್ದಾರೆ. ಸಂಗೀತ ರಾಜ್‌ಭಾಸ್ಕರ್, ಛಾಯಾಗ್ರಹಣ ಮುತ್ತುರಾಜ್, ಸಂಕಲನ ಅನಿಲ್‌ಕುಮಾರ್, ನೃತ್ಯ ಕಪಿಲ್, ನಿರ್ಮಾಣ ನಿರ್ವಹಣೆ ದೀಪಕ್‌ಬಾಬು ನಿರ್ವಹಿಸಿದ್ದಾರೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಗಣೇಶ್‌ರಾವ್ ನಟನೆಯ``ತಾರಕೇಶ್ವರ`` ಟ್ರೇಲರ್ ಬಿಡುಗಡೆ - Chitratara.com
Copyright 2009 chitratara.com Reproduction is forbidden unless authorized. All rights reserved.