ಪವಿತ್ರ ಇಂಟರ್‌ನ್ಯಾಷನಲ್ ಮೂವೀಮೇಕರ್ಸ್ ಅಡಿಯಲ್ಲಿ ಛಲವಾದಿ ಕುಮಾರ್ ಅವರ ನಿರ್ಮಾಣದ, ನಾಗಶೇಖರ್ ಅವರ ನಿರ್ದೇಶನದ ಈ ವರ್ಷದ ಬಹುನಿರೀಕ್ಷಿತ ಚಿತ್ರ ಸಂಜು ವೆಡ್ಸ್ ಗೀತಾ-2. ನಾಗಶೇಖರ್ ಅವರ ಹುಟ್ಟುಹಬ್ಬದ ಪ್ರಯುಕ್ತ ಈ ಚಿತ್ರದ `ಅವನು ಸಂಜು ಅವಳು ಗೀತಾ ಅವರಿಬ್ಬರು ಸೇರಲು ಸಂಗೀತ` ಎಂಬ ಹಾಡಿನ ಬಿಡುಗಡೆ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು.ಅಲ್ಲಿ ನಟ ಉಪೇಂದ್ರ, ಫಿಲಂ ಚೇಂಬರ್ ಅಧ್ಯಕ್ಷ ಎನ್.ಎಂ.ಸುರೇಶ್, ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಕೂಡ ಹಾಜರಿದ್ದರು.
ಕವಿರಾಜ್ ಅವರ ಸಾಹಿತ್ಯ ರಚನೆಯ ಈ ಹಾಡಿಗೆ ಶ್ರೀಧರ್ ವಿ.ಸಂಭ್ರಮ್ ಅದ್ಭುತವಾದ ಟ್ಯೂನ್ ಹಾಕಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ನಾಗಶೇಖರ್ ನಾನು ಈ ಸಿನಿಮಾ ಮಾಡಬೇಕೆಂದು ನಿರ್ಧರಿಸಿದಾಗ ಮೊದಲು ಹಾಡುಗಳನ್ನು ರೆಡಿ ಮಾಡಿಕೊಳ್ಳಬೇಕಾಗಿತ್ತು. ಒಟ್ಟು 6 ಸುಂದರ ಹಾಡುಗಳು ಚಿತ್ರದಲ್ಲಿದ್ದು, ಈ ಹಾಡಿನಲ್ಲಿ ಒಬ್ಬ ಸೈನಿಕನ ಪ್ರೇಮಕಥೆಯನ್ನು ಹೇಳಿದ್ದೇನೆ. ಸ್ವಿಟ್ಜರ್ ಲ್ಯಾಂಡ್ ಸೈನಿಕನೊಬ್ಬ ತನ್ನ ರಾಣಿ ಸೆಲ್ವಿಕ್ ಳನ್ನು ತನ್ನ ಹೃದಯದಲ್ಲಿಟ್ಟುಕೊಂಡು ಪ್ರೀತಿ ಮಾಡ್ತಿರ್ತಾನೆ. ಆತನಿಗೆ ತನ್ನ ಪ್ರೀತಿಯನ್ನು ಹೇಳಿಕೊಳ್ಳಲಿಕ್ಕೆ ಆಗ್ತಿರಲಿಲ್ಲ, ಏಕೆಂದರೆ ಆಕೆ ಮಹಾರಾಣಿ. ಆತನದು ಒನ್ ವೇ ಲವ್, ಒಮ್ಮೆ ಜರ್ಮನ್ ಸೈನಿಕರು ಸ್ವಿಟ್ಜರ್ ಲ್ಯಾಂಡ್ ಮೇಲೆ ಅಟ್ಯಾಕ್ ಮಾಡ್ತಾರೆ. ಆಗ ವೀರಾವೇಶದಿಂದ ಹೋರಾಡಿದ ಆ ಸೈನಿಕ ಅವರನ್ನು ಸೋಲಿಸಿ ವೀರಮರಣವನ್ನಪ್ಪುತ್ತಾನೆ, ತನ್ನ ರಾಣಿಗೆ ಆಕೆಯ ಕಿರೀಟವನ್ನು ಮತ್ತೆ ತಂದುಕೊಡುತ್ತಾನೆ. ಸಾಯೋ ಸಮಯದಲ್ಲಿ ಆತ ರಾಣಿಗೆ ತನ್ನ ರಕ್ತದಲ್ಲಿ "ಐ ಲವ್ ಯು ಫಾರೆವರ್" ಅಂತ ಒಂದು ಪತ್ರ ಬರೆಯುತ್ತಾನೆ. ಈ ಹಾಡು ಚಿತ್ರಕಥೆಯಲ್ಲಿ ಬಹಳ ಮುಖ್ಯವಾದ ಭಾಗವಾಗಿರುತ್ತದೆ. ಈ ಸಾಂಗ್ ನಲ್ಲಿ ಮೊದಲಬಾರಿಗೆ ಆಕ್ಷನ್ ಇಟ್ಟಿದ್ದೇನೆ ಎಂದು ಹೇಳಿದರು.
ನಂತರ ಶ್ರೀಧರ್ ವಿ.ಸಂಭ್ರಮ್ ಮಾತನಾಡಿ ನಾಗಶೇಖರ್ ಅವರು ಈ ಥರದ ಕಥೆ ಇದೆ ಎಂದಾಗ ಖುಷಿಯಾಯ್ತು. ಅವರುಸುಲಭವಾಗಿ ಟ್ಯೂನ್ ಒಪ್ಪುವವರಲ್ಲ, ಆದರೆ ಈ ನಾನು ಈ ಟ್ಯೂನ್ ಕೊಟ್ಟ ಕೂಡಲೇ ಒಪ್ಪಿದರು. ಎಲ್ಲಾ ಹಾಡುಗಳು ಕಥೆಗೆ ಪೂರಕವಾಗಿ ಮೂಡಿಬಂದಿವೆ ಎಂದರು. ಸಾಹಿತಿ ಕವಿರಾಜ್ ಮಾತನಾಡಿ ಇದು ಸಿನಿಮಾ ಕೆಲಸ ಅನಿಸೋದೇ ಇಲ್ಲ. ನಮಗೆ ಅಷ್ಟು ಫ್ರೀಡಂ ಕೊಟ್ಟಿರ್ತಾರೆ. ನಾಗಶೇಖರ್ ಸಿನಿಮಾಗೆ ಹಾಡುಗಳನ್ನು ಬರೀಬೇಕಾದ್ರೆ ತಾನಾಗೇ ಒಳ್ಳೊಳ್ಳೆ ಪದಗಳು ಹುಟ್ಟಿಕೊಳ್ಳುತ್ತವೆ. ನಿರ್ದೇಶಕರು ನಮಗೆಲ್ಲ ಒಂದು ರೆಸಾರ್ಟ್ ಬುಕ್ ಮಾಡಿ ಲಿರಿಕ್ ಬರೆಯಲು ಹೇಳಿದ್ದರು, ಈ ಚಿತ್ರದ ಸಾಂಗ್ ಬರೆಯಲು ಹೋದಾಗ ಏನೋ ಹೊಸ ಸ್ಪೂರ್ತಿ ಬರುತ್ತದೆ ಎಂದು ಹೇಳಿದರು.
ನಟ ಉಪೇಂದ್ರ ಮಾತನಾಡಿ ನನಗೆ ಮೊದಲು ಈ ಚಿತ್ರದ ಕ್ಲೈಮ್ಯಾಕ್ಸ್ ಏನು ಅಂತ ಗೊತ್ತಾಯ್ತು.ನಾನು ಅವತ್ತೇ ಹೇಳಿದೆ ಈ ಸಿನಿಮಾ ಸೂಪರ್ ಸಕ್ಸಸ್ ಅಂತ. ಈಗ ಈ ಹಾಡನ್ನು ನೋಡಿದಾಗ ಡಿಸೈಡ್ ಮಾಡಿದೆ. 100% ಹಿಟ್ ಆಗುತ್ತೆ ಎಂದು ಕಾನ್ಫಿಡೆಂಟಾಗಿ ಹೇಳಿದರು.
ನಿರ್ಮಾಪಕ ಛಲವಾದಿ ಕುಮಾರ್, ಮಾತನಾಡುತ್ತ ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ. ಮುಂದಿನ ತಿಂಗಳು ಬಿಡುಗಡೆಯಾಗುತ್ತಿದೆ. ಖಂಡಿತ ಹಿಟ್ ಆಗುತ್ತೆ ಎಂಬ ಬಂಬಿಕೆಯಿದೆ ಎಂದರು. ನಾಯಕಿ ರಚಿತಾರಾಮ್ ಶೂಟಿಂಗ್ ನಲ್ಲಿದ್ದುದರಿಂದ ಬಂದಿರಲಿಲ್ಲ.
ವಿತರಕ ಗೋಕುಲರಾಜ್ ಮಾತನಾಡಿ ನನಗೆ ಚಿತ್ರದ ಸ್ಯಾಂಪಲ್ಸ್ ತೋರಿಸಿದರು. ತುಂಬಾ ಚೆನ್ನಾಗಿ ಬಂದಿದೆ. ಎಂದರು. ನಾಗಶೇಖರ್ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿರುವ ಈ ಚಿತ್ರದಲ್ಲಿ ಸಂಜು ಹಾಗೂ ಗೀತಾ ಪ್ರೇಮಕಥೆಯನ್ನು ರೇಶ್ಮೆ ಬೆಳೆಯುವ ರೈತರ ಹೋರಾಟದ ಹಿನ್ನೆಲೆ ಇಟ್ಟುಕೊಂಡು ನಿರೂಪಿಸಿದ್ದಾರೆ. ಈ ಚಿತ್ರದಲ್ಲಿ ಒಬ್ಬ ರೇಶ್ಮೆ ಬೆಳೆಗಾರನಾಗಿ ನಟ ಶ್ರೀನಗರ ಕಿಟ್ಟಿ ಅವರು ಕಾಣಿಸಿಕೊಂಡಿದ್ದು, ನಾಯಕಿಯಾಗಿ ರಚಿತಾರಾಮ್ ಅಭಿನಯಿಸಿದ್ದಾರೆ.
ಉಳಿದಂತೆ ರಂಗಾಯಣ ರಘು, ಸಾಧುಕೋಕಿಲ, ತಬಲಾನಾಣಿ ಸಂಪತ್ ಹೀಗೆ ಎಲ್ಲಾ ಹೆಸರಾಂತ ಕಲಾವಿದರೇ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಶಿಡ್ಲಘಟ್ಟದಿಂದ ಸ್ವಿಟ್ಜರ್ ಲ್ಯಾಂಡ್ ನ ಅದ್ಭುತವಾದ ಲೊಕೇಶನ್‌ಗಳಲ್ಲಿ 72 ದಿನಗಳ ಕಾಲ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಶಿಡ್ಲಘಟ್ಟದಲ್ಲಿ ರೈತರು ಎದುರಿಸುತ್ತಿರೋ ಸಮಸ್ಯೆ, ಅಲ್ಲಿನ ಕಪ್ಪುಮಣ್ಣಿನ ಕಥೆಯನ್ನು ಈ ಚಿತ್ರದ ಮೂಲಕ ನಾಗಶೇಖರ್ ಹೇಳ ಹೊರಟಿದ್ದಾರೆ. ಈಗಿನ ಕಾಲದ ಲವ್‌ಸ್ಟೋರಿ ಜೊತೆಗೆ ಒಂದು ಸರ್ ಪ್ರೈಸ್ ಕೂಡ ಈ ಚಿತ್ರದಲ್ಲಿದೆ.
ನಾಯಕ ಶ್ರೀನಗರ ಕಿಟ್ಟಿ ಮಾತನಾಡುತ್ತ ಮೊದಲಬಾರಿಗೆ ಒಬ್ಬ ರೇಶ್ಮೆ ಬೆಳೆಗಾರನಾಗಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದೇನೆ ಎಂದು ಹೇಳಿದರು. ಸತ್ಯ ಹೆಗಡೆ ಅವರ ಛಾಯಾಗ್ರಹಣ, ಶ್ರೀಧರ್ ವಿ. ಸಂಭ್ರಮ್ ಅವರ ಸಂಗೀತ ನಿರ್ದೇಶನ, ಡಿಫರೆಂಟ್ ಡ್ಯಾನಿ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.
ವಿಶೇಷ ಪಾತ್ರದಲ್ಲಿ ನಟ ಚೇತನ್ ಚಂದ್ರ, ರಾಗಿಣಿ ದ್ವಿವೇದಿ ಕಾಣಿಸಿಕೊಂಡಿದ್ದಾರೆ. ರಂಗಾಯಣ ರಘು, ಸಾಧು ಕೋಕಿಲ, ತಬಲಾನಾಣಿ, ಗಿಚ್ಚಿಗಿಲಿಗಿಲಿ ವಿನೋದ್ ಅಲ್ಲದೆ ಖಳನಟ ಸಂಪತ್‌ಕುಮಾರ್ ಸೇರಿದಂತೆ ಸಾಕಷ್ಟು ಕಲಾವಿದರು ಈ ಚಿತ್ರದ ಉಳಿದ ತಾರಾಗಣದಲ್ಲಿದ್ದಾರೆ.