ಮಫ್ತಿ ಚಿತ್ರದ ಪ್ರೀಕ್ವೇಲ್ ಆಗಿ ತೆರೆಕಂಡಿರುವ "ಭೈರತಿ ರಣಗಲ್" ಕನ್ನಡದ ಮಟ್ಟಿಗೆ ಹೊಸ ಪ್ರಯತ್ನ. ಬಹಳ ಹಿಂದೆ ಇಂಗ್ಲೀಷ್ ಭಾಷೆಯಲ್ಲಿ ಈ ಥರದ ಪ್ರಯೋಗ ನಡೆಸಲಾಗಿದೆ.
ಮುಂದಿನ ಕಥೆ ಹೆಣೆಯೋದು ಸುಲಭ, ಆದರೆ ಒಂದು ಸಿನಿಮಾ ರಿಲೀಸಾದ ನಂತರ, ಅದರ ಹಿಂದಿನ ಕಥೆ ಹೇಳುತ್ತ ಹೋಗುವುದು ಕಷ್ಟಸಾಧ್ಯ. ಅಂಥಾ ಪ್ರಯತ್ನ ನಿರ್ದೇಶಕ ನರ್ತನ್‌ರಿಂದ ನಡೆದಿದೆ.
ರೋಣಾಪುರದ ಮುಗ್ಧ ಜನರನ್ನು ಬಂಡವಾಳ ಶಾಹಿಗಳ ಹಿಡಿತದಿಂದ ರಕ್ಷಿಸುವುದು, ಅಲ್ಲಿನ ಕಾರ್ಮಿಕರಿಗೆ ಮೂಲಭೂತ ಸೌಲಭ್ಯಗಳನ್ನು ದೊರಕಿಸಿಕೊಡುವುದು, ಅವರ ರಕ್ಷಣೆಗಾಗಿ ಪ್ರಾಣ ತೆಗೆಯೋಕು ಸಿದ್ಧ, ಪ್ರಾಣ ಕೊಡುವುದಕ್ಕೂ ಸಿದ್ಧ ಎಂದು ವ್ಯವಸ್ಥೆಯ ವಿರುದ್ದ ಸಿಡಿದುನಿಂತ ಭೈರತಿ ರಣಗಲ್ ಆ ಹಾದಿಯಲ್ಲಿ ಏನೇನೆಲ್ಲ ಅಡ್ಡಿ, ಆತಂಕಗಳನ್ನು ಎದುರಿಸಬೇಕಾಯಿತು ಎಂಬುದನ್ನು ಬೈರತಿ ರಣಗಲ್ ಚಿತ್ರದ ಮೂಲಕ ನಿರ್ದೇಶಕ ನರ್ತನ್ ನಿರೂಪಿಸಿದ್ದಾರೆ. ರಣಗಲ್ ಲಾಂಗ್ ಹಿಡಿದು ಡಾನ್ ಆಗಿದ್ಹೇಗೆ ? ಅದಕ್ಕೆ ಕಾರಣವಾದ ಸಂದರ್ಭ ಏನಿರಬಹುದು ? ಈ ಎಲ್ಲ ಪ್ರಶ್ನೆಗಳನ್ನು ಮಫ್ತಿ ಹುಟ್ಟುಹಾಕಿತ್ತು. ಅದಕ್ಕೆಲ್ಲ ಭೈರತಿ ರಣಗಲ್ ಉತ್ತರವಾಗಿದೆ.
ರೋಣಾಪುರದ ಗ್ಯಾಂಗ್ ಸ್ಟರ್ ಭೈರತಿ ರಣಗಲ್ (ಶಿವರಾಜ್‌ಕುಮಾರ್) ಬಂಧನದೊಂದಿಗೆ ಮಫ್ತಿ ಚಿತ್ರ ಕೊನೆಗೊಂಡಿತ್ತು. ಈ ಚಿತ್ರದಲ್ಲಿ ರಣಗಲ್ ಬಾಲ್ಯದ ದಿನಗಳು, ಆತನ ತಂದೆ, ತಾಯಿ ಯಾರು ಎಂದು ಹೇಳುವುದರೊಂದಿಗೆ, 20 ವರ್ಷಗಳ ಹಿಂದಿನ ಚಿತ್ರಕಥೆ ತೆರೆದುಕೊಳ್ಳುತ್ತದೆ. ರೋಣಾಪುರ ಎಂಬ ಊರಿನಲ್ಲಿ ನೀರಿಗಾಗಿ ಜನರ ಹಾಹಾಕಾರ, ತಂದೆ ಊರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕೆಂದು ಸರ್ಕಾರಕ್ಕೆ ಎಷ್ಟೇ ಅರ್ಜಿ ಸಲ್ಲಿಸಿದರೂ ನಿರ್ಲಕ್ಷೆ ತೋರಿಸುವ ಸರ್ಕಾರಿ ಅಧಿಕಾರಿಗಳು, ಅವರ ಬೇಜವಾಬ್ದಾರಿ ವರ್ತನೆಗೆ ಬೇಸತ್ತ ಬಾಲಕ ರಣಗಲ್, ಒಮ್ಮೆ ಅದೇ ಸರ್ಕಾರಿ ಕಛೇರಿಯಲ್ಲಿ ಬಾಂಬ್ ಇಟ್ಟು ಆರು ಜನರ ಸಾವಿಗೆ ಕಾರಣನಾಗುತ್ತಾನೆ. ಬಾಲಾಪರಾಧಿಯಾಗಿ ಜೈಲು ಸೇರಿದ ರಣಗಲ್ 21 ವರ್ಷಗಳ ಸೆರೆವಾಸ ಅನುಭವಿಸಬೇಕಾಗುತ್ತದೆ. ಅವನ ಈ ಪ್ರಯತ್ನದಿದ ರೋಣಾಪುರಕ್ಕೆ ನೀರು ಬರುವಂತಾಗುತ್ತದೆ. ಈ ಸಂದರ್ಭದಲ್ಲಿ ಆ ಏರಿಯಾದಲ್ಲಿ ಅಪಾರ ಪ್ರಮಾಣದ ಕಬ್ಬಿಣದ ನಿಕ್ಷೇಪ ಇರುವುದು ಪತ್ತೆಯಾಗಿ ಪರಾಂಡೆ(ರಾಹುಲ್ ಬೋಸ್) ಗ್ರೂಪ್ ನಿಂದ ಅಲ್ಲಿ ಗಣಿಗಾರಿಕೆ ಆರಂಭವಾಗುತ್ತದೆ. ರೋಣಾಪುರದ ಸಾವಿರಾರು ಜನ ಆತನ ಕಾರ್ಖಾನೆಗಳಲ್ಲಿ ಕೆಲಸ ಮಾಡಿಕೊಂಡಿರುತ್ತಾರೆ.
ಇತ್ತ ಜೈಲಿನಲ್ಲಿದ್ದುಕೊಂಡೇ ಲಾ ಮುಗಿಸಿದ ರಣಗಲ್, ಬಿಡುಗಡೆಯಾದ ಮೇಲೆ ರೋಣಾಪುರದಲ್ಲೇ ಇದ್ದುಕೊಂಡು, ತನ್ನ ಜನರ ಕಷ್ಟ ಸುಖಗಳಿಗೆ ಹೆಗಲಾಗಿ ನಿಂತುಕೊಳ್ಳುತ್ತಾನೆ, ಪರಾಂಡೆ ಮಾಡೋ ಕುತಂತ್ರಗಳನ್ನು ಬಯಲಿಗೆಳೆಯುತ್ತ, ತನ್ನ ಬುದ್ದಿವಂತಿಕೆ ಉಪಯೋಗಿಸಿ ಕಾನೂನು ಪ್ರಕಾರ ಜನರಿಗೆ ನ್ಯಾಯ ದೊರಕಿಸಿಕೊಡಲು ಟೊಂಕಕಟ್ಟಿ ನಿಲ್ಲುತ್ತಾನೆ. ಇದು ಪರಾಂಡೆಗೆ ನುಂಗಲಾರದ ತುತ್ತಾಗುತ್ತದೆ, ಒಂದು ಹಂತದಲ್ಲಿ ಇಡೀ ಕಾನೂನು ವ್ಯವಸ್ಥೆಯನ್ನೇ ಪರಾಂಡೆ ತನ್ನ ಹಣ ಬಲದಿಂದ ಕೊಂಡುಕೊಳ್ಳುತ್ತಾನೆ, ಕಾನೂನಿನಡಿಯಲ್ಲಿ ತನ್ನ ಜನರಿಗೆ ನ್ಯಾಯ ಕೊಡಿಸಲು ಸಾಧ್ಯವಾಗದೇ ಇದ್ದಾಗ, ಅನಿವಾರ್ಯವಾಗಿ ಅದೇ ಕಾನೂನನ್ನು ಭೈರತಿ ರಣಗಲ್ ತನ್ನ ಕೈಗೆ ತೆಗೆದುಕೊಳ್ಳಬೇಕಾಗುತ್ತದೆ. ಮುಂದೆ ನಡೆಯುವ ಕಥೆ ರಣರೋಚಕ. ಚಿತ್ರದ ಮೊದಲ ಭಾಗದಲ್ಲಿ ರಣಗಲ್ ಪಾತ್ರಕ್ಕೆ ಮಾತು ಕಮ್ಮಿ. ಇಲ್ಲಿ ರೋಣಾಪುರದ ಜನರ ನೋವು, ಕಾರ್ಮಿಕರ ಸಂಕಷ್ಟಗಳ ಸುತ್ತಾ ಸಾಗುವ ಕಥೆಯಿದೆ. ವಕೀಲನಾಗಿ ಜನರಪರ ನಿಲ್ಲುವ ರಣಗಲ್ ವ್ಯಕ್ತಿತ್ವಕ್ಕೆ, ಸರ್ಕಾರಿ ಆಸ್ಪತ್ರೆ ವೈದ್ಯೆಯಾಗಿ ಬರುವ ವೈಶಾಲಿ(ರುಕ್ಮಿಣಿ ವಸಂತ್) ಮಾರು ಹೋಗುತ್ತಾಳೆ. ಕಾರ್ಮಿಕರು ತಮಗಾದ ಅನ್ಯಾಯವನ್ನು ಪ್ರಶ್ನಿಸಿದ್ದಕ್ಕೆ ತಮ್ಮ ಜೀವವನ್ನೇ ಕಳೆದುಕೊಳ್ಳುತ್ತಾರೆ. ಅಲ್ಲಿಗೆ ರಣಗಲ್ ಲಾಯರ್ ಕೋಟು ಕಳಚಿಟ್ಟು ಲಾಂಗ್ ಹಿಡಿಯಬೇಕಾಗುತ್ತದೆ.
ಪರಾಂಡೆ ವಿರುದ್ಧ ತೊಡೆತಟ್ಟಿ ನಿಂತ. ಭೈರತಿ ರಣಗಲ್ ತನ್ನದೇ ಮೈನಿಂಗ್ ಉದ್ಯಮ ಆರಂಭಿಸುತ್ತಾನೆ. ಅಲ್ಲಿಂದ ಮುಂದೆ ಪರಾಂಡೆ ಹಾಗೂ ರಣಗಲ್ ನಡುವೆ ಒಂದಲ್ಲ ಒಂದು ವಿಷಯಕ್ಕೆ ಘರ್ಷಣೆ ನಡೆಯುತ್ತ ಹೋಗುತ್ತದೆ, ತಮ್ಮ ಸಾಮ್ರಾಜ್ಯ ಉಳಿಸಿಕೊಳ್ಳಲು ಇವರಿಬ್ಬರೂ ಸರ್ಕಾರದ ಮೇಲೆ ಪ್ರಭಾವ ಬೀರುವ ಮಟ್ಟಕ್ಕೆ ಬೆಳೆಯುತ್ತಾರೆ. ಒಂದು ಹಂತದಲ್ಲಿ ರಣಗಲ್ ಸರ್ಕಾರವನ್ನೇ ಬದಲಿಸುವ ಕಿಂಗ್ ಪಿನ್ ಆಗುತ್ತಾನೆ, ಬದಲಾದ ರಾಜಕೀಯ ವ್ಯವಸ್ಥೆಯಲ್ಲಿ ರಣಗಲ್ ವಿರುದ್ದ ಸಂಚು ನಡೆಯುತ್ತದೆ,
ಚಿತ್ರದ ಪ್ರಥಮಾರ್ಧ ಕಾರ್ಮಿಕರ ಸಂಕಷ್ಟಗಳನ್ನು ಹೇಳುತ್ತ ಹೋಗಿರುವ ನರ್ತನ್, ನಂತರದಲ್ಲಿ ಗ್ಯಾಗ್ ವಾರ್ ತೋರಿಸಿದ್ದಾರೆ. ಪ್ರಥಮಾರ್ಧದಲ್ಲಿ ಶಿವಣ್ಣ ಕಾನೂನು ಪ್ರಕಾರ ನ್ಯಾಯಕ್ಕಾಗಿ ಹೋರಾಡುವ ಲಾಯರ್, ಆದರೆ ಇಂಟರ್‌ವೆಲ್ ಬಳಿಕ ಸಿನಿಮಾ ವೇಗ ಪಡೆದುಕೊಳ್ಳುತ್ತದೆ. ನರ್ತನ್ ಅವರ ಪಂಚಿಂಗ್ ಡೈಲಾಗ್ ಗಳು ಶಿವಣ್ಣ ಅಭಿಮಾನಿಗಳಿಗೆ ಮಜಾ ಕೊಡುತ್ತವೆ, ಲಾಯರ್, ಗ್ಯಾಂಗ್ ಸ್ಟರ್ ಎರಡೂ ಪಾತ್ರಗಳಲ್ಲಿ ಶಿವಣ್ಣ ಅಭಿನಯ ಅದ್ಭುತ, ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡಿದ್ದಾರೆ. ನಾಯಕಿ ರುಕ್ಮಿಣಿ ಪಾತ್ರಕ್ಕೆ ಹೆಚ್ಚು ಅವಕಾಶವಿಲ್ಲ. ಕಾರ್ಮಿಕ ನಾಯಕನಾಗಿ ಗೋಪಾಲಕೃಷ್ಣ ದೇಶಪಾಂಡೆ, ಕೈಗಾರಿಕೋದ್ಯಮಿ ಪರಾಂಡೆ ಆಗಿ ರಾಹುಲ್ ಬೋಸ್, ಶಿವಣ್ಣನ ಸಹೋದರಿಯಾಗಿ ಛಾಯಾಸಿಂಗ್ ತಂತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ರಮೇಶ್ ಅರವಿಂದ್ ಅವರ ನಿರೂಪಣೆ ಚಿತ್ರದ ಮತ್ತೊಂದು ಹೈಲೈಟ್. ಹಿನ್ನೆಲೆ ಧ್ವನಿಯ ಮೂಲಕ ರಣಗಲ್ ಚರಿತ್ರೆ ಹೇಳುತ್ತಾ ಸಾಗುತ್ತಾರೆ.
ನವೀನ್‌ಕುಮಾರ್ ಅವರ ಛಾಯಾಗ್ರಹಣ ಈ ಚಿತ್ರದ ಹೈಲೆಟ್. ರವಿ ಬಸ್ರೂರು ಅವರ ಬಿಜಿಎಂ ಸನ್ನಿವೇಶಕ್ಕೆ ಎಷ್ಟು ಬೇಕೋ ಅಷ್ಟು ಮಾತ್ರ ಇದೆ. ಭಾವನಾತ್ಮಕ ಸನ್ನಿವೇಶಗಳನ್ನು ಸಂಗೀತದಿಂದಲೇ ನೋಡುಗರಿಗೆ ಮತ್ತಷ್ಟು ಹತ್ತಿರವಾಗುವಂತೆ ಮಾಡಿದ್ದಾರೆ.