ಈಗಾಗಲೇ ಸಾಕಷ್ಟು ಪ್ರೇಮಕಥೆಗಳನ್ನು ಕನ್ನಡ ಪ್ರೇಕ್ಷಕರು ಬೆಳ್ಳಿತೆರೆ ಮೇಲೆ ನೋಡಿ ಮೆಚ್ಚಿಕೊಂಡಿದ್ದಾರೆ. ಇದೀಗ ಸಾಮಾನ್ಯ ಹುಡುಗನೊಬ್ಬನ ಲವ್ ಸ್ಟೋರಿಯನ್ನು ಹೇಳುವ ಸೂರಿ ಲವ್ಸ್ ಸಂಧ್ಯ ಚಿತ್ರ ತೆರೆಗೆ ಬರಲು ಸಿದ್ದವಾಗುತ್ತಿದೆ. ಯಾದವ್ ರಾಜ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರವನ್ನು ಕೆ.ಟಿ. ಮಂಜುನಾಥ್ ನಿರ್ಮಾಣ ಮಾಡಿದ್ದಾರೆ. ಅಭಿಮನ್ಯು ಕಾಶಿನಾಥ್, ಅಪೂರ್ವ ಜೋಡಿಯಾಗಿ ಅಭಿನಯಿಸಿರುವ ಈ ಚಿತ್ರವು ದುಬೈನಲ್ಲಿ ಪ್ರೀಮಿಯರ್ ಷೋ ಕಂಡ ಮೊದಲ ಕನ್ನಡ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಇತ್ತೀಚೆಗೆ ಈ ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ಚಿತ್ರತಂಡಕ್ಕೆ ಹೆಗಲಾಗಿ ನಿಂತಿರುವ ನಿರ್ಮಾಪಕ ಸಂಜಯಗೌಡ್ರು ಚಿತ್ರದ ಟೀಸರ್ ರಿಲೀಸ್‌ಮಾಡಿ ಮಾತನಾಡುತ್ತ ಚಿತ್ರದಲ್ಲಿ ಟ್ರೂ ಇನ್‌ಸಿಡೆಂಟ್ ಬೇಸ್ ಕಂಟೆಂಟ್‌ಗಳಿವೆ. ಲವ್ ಮಾಡೋದು ದೊಡ್ಡದಲ್ಲ, ಆದರೆ ತನ್ನ ಹುಡುಗಿಯನ್ನು ಹುಡುಗ ಹೇಗೆ ಕಾಪಾಡಿಕೊಳ್ಳಬೇಕು ಅನ್ನೋ ಒಂದು ಮೆಸೇಜ್ ಈ ಚಿತ್ರದಲ್ಲಿದೆ ಎಂದರು.
ನಿರ್ಮಾಪಕ ಮಂಜುನಾಥ್ ಮಾತನಾಡುತ್ತ ೨೦೧೬ರಲ್ಲೇ ನಾನೊಂದು ಬ್ಯಾನರ್ ಆರಂಭಿಸಿದ್ದೆ. ಇದು ನನ್ನ ಮೊದಲ ಪ್ರಯತ್ನ, ಆರಂಭದಲ್ಲಿ ನಿರ್ದೇಶಕ ಯುವರಾಜ್ ೨ ಗಂಟೆಯಲ್ಲಿ ಪೂರ್ತಿ ಕಥೆ ಹೇಳಿದ್ದರು. ನನಗೆ ತುಂಬಾ ಇಷ್ಟವಾಗಿ ನಿರ್ಮಿಸಿದ್ದೇನೆ. ಅಭಿಮನ್ಯು ಕನ್ನಡದ ಯಾವ ಹೀರೋಗೂ ಕಮ್ಮಿಯಿಲ್ಲದಂತೆ ಆಕ್ಟ್ ಮಾಡಿದ್ದಾರೆ. ಕೊನೆಯ ೨೦ ನಿಮಿಷ ಕಾಂತಾರ ಚಿತ್ರದ ಕ್ಲೈಮ್ಯಾಕ್ಸ್ ನೆನಪಿಸುತ್ತೆ. ದುಬೈನಲ್ಲಿ ಚಿತ್ರದ ಪ್ರೀಮಿಯರ್ ಷೋ ಮಾಡಿದೆವು ಎಂದು ಹೇಳಿದರು.
ನಾಯಕ ಅಭಿಮನ್ಯು ಕಾಶೀನಾಥ್ ಮಾತನಾಡುತ್ತ ಚಿತ್ರದಲ್ಲಿ ಒಬ್ಬ ದಿನಗೂಲಿ ನೌಕರನ ಪಾತ್ರ ಮಾಡಿದ್ದೇನೆ. ಮಿಡಲ್‌ಕ್ಲಾಸ್ ಹುಡುಗನ ಜೀವನದಲ್ಲಿ ಹುಡುಗಿಯೊಬ್ಬಳು ಬಂದಾಗ ಏನಾಗುತ್ತೆ, ಪ್ರೀತಿ, ಪ್ರೇಮ ಇದೆಲ್ಲಾ ಆತನ ಹೊಸದಾಗಿರುತ್ತೆ, ಹ
ಆ ಹುಡುಗ ಹಾಗೂ ಹುಡುಗಿಯ ಜೀವನದ ಸುತ್ತ ಸುತ್ತುವ ಕಥೆಯಿದು. ಆತ ತನ್ನ ಲವ್‌ಗೋಸ್ಕರ ಫೈಟ್ ಮಾಡ್ತಾನೆ, ಮೈಸೂರು, ಕೋಲಾರ ಮತ್ತು ಕಾಶಿಯಲ್ಲಿ ನಡೆದ 40 ದಿನಗಳ ಚಿತ್ರೀಕರಣದಲ್ಲಿ ಹತ್ತು ದಿನ ಸ್ಟಂಟ್ಸ್ ಶೂಟ್ ಮಾಡಿದ್ದೇವೆ, ವಿಶೇಷವಾಗಿ ಕಾಶಿಯಲ್ಲಿ ನಡೆದ ಶೂಟಿಂಗ್ ಸ್ವಲ್ಪಕಷ್ಟ ಅನಿಸಿತು ಎಂದು ಅನುಭವ ಹಂಚಿಕೊಂಡರು. ನಾಯಕಿ ಅಪೂರ್ವ ಮಾತನಾಡಿ ಈ ಥರದ ಸಿನಿಮಾದಲ್ಲಿ ನಾನೂ ನಟಿಸಲೇಬೇಕು ಅನಿಸುವಂಥ ಚಿತ್ರ. ಶೂಟಿಂಗ್ ನಡೆದ 30 ದಿನವೂ ಸಂಧ್ಯಾ ಪಾತ್ರವೇ ನಾನಾಗಿದ್ದೆ. ಇದೊಂದು ಟ್ರಾವೆಲಿಂಗ್ ಲವ್‌ಸ್ಟೋರಿ ಎನ್ನಬಹುದು ಎಂದರು. ಗಡ್ಡವಿಜಿ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟ ಪ್ರತಾಪ್ ನಾರಾಯಣ್ ಮಾತನಾಡುತ್ತ ಇಂದು ನನಗೆ ಡಬಲ್ ಧಮಾಕಾ ಎನ್ನಬಹುದು, ನಾನು ಅಭಿನಯಿಸಿದ ಭೈರತಿ ರಣಗಲ್ ರಿಲೀಸಾದ ದಿನವೇ ಮತ್ತೊಂದು ಚಿತ್ರದ ಟೀಸರ್ ಬಿಡುಗಡೆಯಾಗುತ್ತಿದೆ, ನಾಯಕ, ನಾಯಕಿ ಇಬ್ಬರಿಗೂ ಕಾಟ ಕೊಡುವ ಪಾತ್ರ ನನ್ನದು ಎಂದು ಹೇಳಿದರು.
ದುಬೈನಲ್ಲಿ ನಡೆದ ಪ್ರೀಮಿಯರ್ ಷೋನಲ್ಲಿ ಉಪೇಂದ್ರ, ಪ್ರಿಯಾಂಕ ಉಪೇಂದ್ರ, ವಿಧಾನ ಪರಿಷತ್ ಸದಸ್ಯ ಸರವಣ, ಸಂಜಯ್‌ಗೌಡ್ರು, ಜೇಡರಹಳ್ಳಿ ಕೃಷ್ಣ, ನಿರ್ಮಾಪಕ ಮಂಜುನಾಥ್ ಹಾಗೂ ಇತರರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಉಪೇಂದ್ರ ಈ ನಿರ್ಮಾಪಕರನ್ನು ನೋಡ್ತಾ ಇದ್ರೆ ನನಗೆ ದ್ವಾರಕೀಶ್ ನೆನಪಿಗೆ ಬರುತ್ತಾರೆ. ಅವರು 50ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಿಸಿದ್ದರು. ಅವರಂತೆ ನೀವೂ ಆಗಿರಿ. ಯೋಚನೆ ಮಾಡಿ ಟೈಟಲ್ ಇಟ್ಟಿದ್ದೀರಾ, ಅಂದರೆ ನೀವು ಅವರಿಗಿಂತ ಬುದ್ದಿವಂತರು. ಸಿನಿಮಾವನ್ನು ನೇರವಾಗಿ ಹೇಳದೆ ಸುತ್ತಿಬಳಸಿ ನೋಡುಗರಿಗೆ ಬೋರ್ ಆಗದಂತೆ ತೋರಿಸಿದ್ದಾರೆ. ಕೊನೆಯ ಹದಿನೈದು ನಿಮಿಷದಲ್ಲಿ ನಿರ್ದೇಶಕರ ಶ್ರಮ ಕಾಣುತ್ತದೆ, ನನ್ನ ಗುರುಗಳಾದ ಕಾಶಿನಾಥ್ ಅವರಮಗ ಅಭಿಮನ್ಯುಗೆ ಇಂಥ ಟ್ಯಾಲೆಂಟ್ ಇದೆ ಅಂತ ನನಗೆ ತಿಳಿದಿರಲಿಲ್ಲ. ಕ್ಲೈಮ್ಯಾಕ್ಸ್ ನಲ್ಲಿ ಅದ್ಬುತವಾಗಿ ಆಕ್ಟಿಂಗ್ ಮಾಡಿದ್ದಾರೆ ಎಂದು ಹೇಳಿದರು.
ಸೆವನ್ ಕ್ರೋರ್ ಎಂಟರ್ ಟೈನ್ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ಕೆ.ಟಿ.ಮಂಜುನಾಥ್ ಅವರ ನಿರ್ಮಾಣದ `ಸೂರಿ ಲವ್ಸ್ ಸಂಧ್ಯಾ` ಚಿತ್ರಕ್ಕೆ ಯಾದವ್‌ರಾಜ್ ಕಥೆ, ಚಿತ್ರಕತೆ, ಸಂಭಾಷಣೆ, ಸಾಹಿತ್ಯ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದ ನಾಯಕ, ನಾಯಕಿಯಾಗಿ ಅಭಿಮನ್ಯು ಕಾಶಿನಾಥ್, ಅಪೂರ್ವ ನಟಿಸಿದ್ದು, ವಿಲನ್ ಪಾತ್ರದಲ್ಲಿ ಪ್ರತಾಪ್ ನಾರಾಯಣ್ ನಟಿಸಿದ್ದಾರೆ. ಎಸ್.ಎನ್.ಅರುಣಗಿರಿ ಅವರ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ.