ಚಿತ್ರ: ಮರ್ಯಾದೆ ಪ್ರಶ್ನೆ
ನಿರ್ದೇಶನ: ನಾಗರಾಜ್ ಸೋಮಯಾಜಿ
ತಾರಾಗಣ: ಸುನೀಲ್ ರಾವ್, ಪೂರ್ಣಚಂದ್ರ ಮೈಸೂರು,ರಾಕೇಶ್ ಅಡಿಗ, ನಾಗಾಭರಣ, ಪ್ರಭು ಮಂಡಕೂರು, ಶೈನ್ ಶೆಟ್ಟಿ, ತೇಜು ಬೆಳವಾಡಿ, ನಾಗೇಂದ್ರ ಶಾ, ಶ್ವೇತಾ ಪ್ರಸಾದ್ ಮತ್ತಿತರರು
ರೇಟಿಂಗ್ : 3.5 / 5 ****
ಮದ್ಯಮ ವರ್ಗದ ಜನರ ಬದುಕು,ಬವಣೆ ಜೀವನ ಸಾಗಿಸಲು ಪರದಾಟ, ಮರ್ಯಾದೆ, ಸ್ವಾಭಿಮಾನವನ್ನೆ ಅಸ್ತ್ರವಾಗಿಸಿಕೊಂಡ ತಿರುಳು ಹೊಂದಿರುವ ಚಿತ್ರ “ ಮರ್ಯಾದೆ ಪ್ರಶ್ನೆ” ಈ ವಾರ ತೆರೆಗೆ ಬಂದಿದೆ.
ತಮ್ಮನ್ನು ನಂಬಿದ ಜನರಿಗಾಗಿ ಬದುಕುವುದು ಮುಖ್ಯ ಎನ್ನುವುದನ್ನು ಸಾಬೀತುಪಡಿಸುತ್ತಲೇ, ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನದಲ್ಲಿ ಪ್ರಯಾಣ ಮಾಡಬೇಡಿ, ಇರುವುದೇ ಒಂದೇ ಜೀವನ ಅದನ್ನು ಕಾಪಾಡಿಕೊಳ್ಳಿ ಎನ್ನುವ ಸಾಮಾಜಿಕ ಸಂದೇಶವನ್ನು ಚಿತ್ರದ ಮೂಲಕ ಹೇಳಲಾಗಿದೆ
ಮದ್ಯಮ ವರ್ಗದ ಜನರದ್ದು ಬದುಕು ಸಾಗಿಸಲು ಒಂದೊಂದು ವೃತ್ತಿ, ತಾವು ಮಾಡುತ್ತಿರುವ ಕೆಲಸದಲ್ಲಿ ಜೀವನ ಸಾಗಿಸುತ್ತಾ ಬದುಕಿನ ಬಂಡಿಯನ್ನು ಎಳೆಯುತ್ತಿರುವವರು. ಕಷ್ಟವೇ ಸುಖವೋ ಪಾಲಿಗೆ ಬಂದದ್ದು ಪಂಚಾಮೃತ ಎಂದು ನಂಬಿದವರು,. ಇಂತಹ ಸಮಯದಲ್ಲಿ ಬದುಕಿಗೆ ಆಸರೆಯಾಗಿದ್ದ ಕೊಂಡಿಯೇ ಕಳಚಿ ಬಿದ್ದರೆ ಅವರ ಪಾಡೇನು ಎನ್ನುವುದನ್ನು ಮನಮುಟ್ಟುವ ರೀತಿ ತೆರೆಗೆ ಕಟ್ಟಿಕೊಡಲಾಗಿದೆ.
ಸತೀಶ- ಸುನೀಲ್ ರಾವ್, ಅಪ್ಪ,ಅಮ್ಮ ತಂಗಿಯ ಮುದ್ದಾದ ಕುಟುಂಬ, ಜೀವನ ನಿರ್ವಹಣೆಗೆ ಆತ ಮಾಡದ ಕೆಲಸ ಇಲ್ಲ., ಕೊನೆಗೆ ಡಿಲವರಿ ಬಾಯ್ ಆಗಿ ಕೆಲಸ ಮಾಡುವಾತ. ಮತ್ತೊಬ್ಬ ಮಂಜ- ಪೂರ್ಣಚಂದ್ರ ಮೈಸೂರು ಕ್ಯಾಬ್ ಚಾಲಕ, ಶಾಸಕನ ಬಲಗೈ ಬಂಟ ಸೂರಿ ಕಾರ್ಪರೇಟ್ ಆಗುವ ಕನಸು ಕಂಡವ. ಈ ಮೂರು ಮಂದಿ ಆಪ್ತ ಸ್ನೇಹಿತರು. ಕಷ್ಟ,ಸುಖದಲ್ಲಿ ಒಬ್ಬರಿಗೊಬ್ಬರು ಹೆಗಲು ಕೊಟ್ಟವರು.
ಈ ನಡುವೆ ಸತೀಶನ ತಂಗಿ ಲಕ್ಷ್ಮಿ- ತೇಜು ಬೆಳವಾಡಿಯನ್ನು ಮಂಜ ಪ್ರೀತಿ ಮಾಡುತ್ತಾನೆ,ಇದು ಗೊತ್ತಿದ್ದರೂ ಏನೂ ಗೊತ್ತಿಲ್ಲದೆ ಇರುವ ಅಣ್ಣ. ಇಂತಹ ಸಮಯದಲ್ಲಿ ಕುಟುಂಬಕ್ಕೆ ಆಸರೆ ಆಗಿದ್ದ ಸತೀಶ ಅಪಘಾತದಲ್ಲಿ ಸಾವನಪ್ಪುತ್ತಾನೆ. ತಾನು ಮಾಡಿದ ಕೆಲಸದಿಂದ ಪಾರಾಗಲು ಹಣದ ಆಮಿಷವೊಡ್ಡುವ ರಾಕಿ- ಪ್ರಭುಮಂಡಕೂರು ಹಣ ಕೊಡದೆ ಮಂಜ ಮತ್ತು ಸೂರಿಯನ್ನು ನಿಂದಿಸುತ್ತಾನೆ, ಇಂತಹ ಸಮಯದಲ್ಲಿ ಅವರ ನಡೆ ಏನು ಎನ್ನುವುದು ಚಿತ್ರದ ಕಥನ ಕುತೂಹಲ.
ಪ್ರದೀಪಾ ಕಥೆಗೆ ನಿರ್ದೇಶಕ ನಾಗರಾಜ್ ಸೋಮಯಾಜಿ ಮನಮಿಡಿಯು ಸ್ಪರ್ಶ ನೀಡಿದ್ದಾರೆ. ಮಧ್ಯಮ ವರ್ಗದ ನೋವು, ನಲಿವು ಸೇರಿದಂತೆ ಮತ್ತಿತರ ವಿಷಯವನ್ನು ಕಣ್ಣಿಗೆ ಕಟ್ಟುವ ಹಾಗೆ ಚಿತ್ರಿಸಿಕೊಟ್ಟಿದ್ದಾರೆ. ಎಲ್ಲವನ್ನೂ ನ್ಯಾಯ ಕೊಡುಸುವ ಧಾವಂತದಲ್ಲಿ ಪ್ರೀತಿಸಿದ ಹುಡುಗ ಹುಡಗಿಯನ್ನು ಮರೆತ್ರಾ ನಿರ್ದೇಶಕರೇ ಉತ್ತರ ನೀಡಬೇಕು.
ಸುನೀಲ್ ರಾವ್, ಪೂರ್ಣಚಂದ್ರ ಮೈಸೂರು,ರಾಕೇಶ್ ಅಡಿಗ, ಪ್ರಭು ಮಂಡಕೂರು, ಶೈನ್ ಶೆಟ್ಟಿ, ತೇಜು ಬೆಳವಾಡಿ ತಮ್ಮ ಪಾತ್ರಕ್ಕೆ ಜೀವತುಂಬಿದ್ದಾರೆ.. ಜೊತೆಗೆ ಇನ್ನಿತರೆ ಪಾತ್ರಗಳು ಚಿತ್ರಕ್ಕೆ ಪೂರಕವಾಗಿವೆ.
ಮನೆಮಂದಿಯೆಲ್ಲಾ ಕುಳಿತು ನೋಡಬಹುದಾದ ಚಿತ್ರವನ್ನು ಮೊದಲ ಪ್ರಯತ್ನದಲ್ಲ ಆರ್ ಜೆ ಪ್ರದೀಪ ದಂಪತಿ ಜನರ ಮುಂದಿಟ್ಟಿದ್ದಾರೆ.