ಮೇಜರ್ ಮುಕುಂದ್ ವರದರಾಜನ್ ಜೀವನಾಧರಿತ `ಅಮರನ್` ಸಿನಿಮಾಗೆ ಪ್ರೇಕ್ಷರು ಫಿದಾ ಆಗಿದ್ದಾರೆ. ಶಿವ ಕಾರ್ತಿಕೇಯನ್ ಚಿತ್ರದಲ್ಲಿ ವರದರಾಜನ್ ಪಾತ್ರಕ್ಕೆ ಜೀವ ತುಂಬಿದ್ದಾರೆ. ಪತ್ನಿ ರೆಬೆಕಾ ಪಾತ್ರದಲ್ಲಿ ಸಾಯಿ ಪಲ್ಲವಿ ಮಿಂಚಿದ್ದಾರೆ. ಇವರಿಬ್ಬರ ನಟನೆ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಬಾಕ್ಸಾಫೀಸ್ ನಲ್ಲಿ 300 ಕೋಟಿ ರೂ.ಗೂ ಅಧಿಕ ಗಳಿಕೆ ಕಂಡು ಅಮರನ್ ದಾಖಲೆ ಬರೆದಿದೆ.
ರಾಜ್‌ಕುಮಾರ್ ಪೆರಿಯಸ್ವಾಮಿ ಎಂಬುವವರು `ಅಮರನ್` ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಕಮಲ್ ಹಾಸನ್ ಸಹ ಚಿತ್ರ ನಿರ್ಮಾಣಕ್ಕೆ ಕೈ ಜೋಡಿಸಿದ್ದಾರೆ. ಭುವನ್ ಅರೋರ, ರಾಹುಲ್ ಬೋಸ್, ಶ್ಯಾಮ್ ಪ್ರಸಾದ್ ಸೇರಿದಂತೆ ಘಟಾನುಘಟಿ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರಕ್ಕಾಗಿ ದೇಹ ದಂಡಿಸಿ ಬಹಳ ಖಡಕ್ ಲುಕ್‌ನಲ್ಲಿ ಶಿವಕಾರ್ತಿಕೇಯನ್ ನಟಿಸಿದ್ದಾರೆ.
ನೈಜ ಕಥೆಯಾಗಿರುವ `ಅಮರನ್` ಸಿನೆಮಾವನ್ನು ಅತ್ಯದ್ಭುತವಾಗಿ ನಿರ್ಮಿಸಲಾಗಿದೆ. ಒಬ್ಬ ಸೈನಿಕ ಹಾಗೂ ಸೈನ್ಯದ ಗೌರವಕ್ಕೆ ಕಿಂಚಿತ್ ಧಕ್ಕೆ ಬರೆದಂತೆ ಸಿನೆಮಾವನ್ನು ಕಟ್ಟಿಕೊಡಲಾಗಿದೆ. ಕಳೆದ ಅಕ್ಟೋಬರ್ ತಿಂಗಳ 31ರಂದು ಬಿಡುಗಡೆಯಾದ ಚಿತ್ರವೀಗ ಯಶಸ್ವಿಯಾಗಿ 25 ದಿನ ಪೂರೈಸಿದೆ. ಎಲ್ಲಾ ವರ್ಗದ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಶಿವಕಾರ್ತಿಕೇಯನ್ ಅವರ ವೃತ್ತಿಜೀವನದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರ ಇದಾಗಿದೆ. ಅಮರನ್ ಸಿನಿಮಾದಲ್ಲಿ ಭಾವನೆಗಳು ಮತ್ತು ಆಕ್ಷನ್ ಅಂಶಗಳೇ ಹೈಲೈಟ್. ಈ ಚಿತ್ರವು ಕಾಶ್ಮೀರದಲ್ಲಿ ಕರ್ತವ್ಯದಲ್ಲಿರುವ ಸೈನಿಕರ ಕುರಿತಾದ ಚಿತ್ರವಾಗಿದೆ. ವೃತ್ತಿಪರ ಜವಾಬ್ದಾರಿಗಳಿಂದಾಗಿ ತಮ್ಮ ಕುಟುಂಬಗಳಿಂದ ದೂರವಿರುವ ಸೈನಿಕರು ಕಾಶ್ಮೀರದಲ್ಲಿ ಕರ್ತವ್ಯದಲ್ಲಿರುವಾಗ, ಎದುರಿಸುತ್ತಿರುವ ಸವಾಲುಗಳನ್ನು ಈ ಸಿನಿಮಾದಲ್ಲಿ ತೋರಿಸಿದ್ದಾರೆ.
ಅಮರನ್ ಚಿತ್ರದ ಭಾರತೀಯ ಆವೃತ್ತಿಯ ಒಟಿಟಿ ಹಕ್ಕುಗಳನ್ನು ನೆಟ್‌ಫ್ಲಿಕ್ಸ್ ಪಡೆದುಕೊಂಡಿದೆ. ಅಮರನ್ ಡಿಸೆಂಬರ್ 5 ಅಥವಾ 10 ರಿಂದ ಸ್ಟ್ರೀಮ್ ಆಗುವ ಸಾಧ್ಯತೆಯಿದೆ ಎಂದು ಹೇಳಲಾಗಿತ್ತು. ಆದರೆ ಚಿತ್ರಮಂದಿರಗಳಲ್ಲಿ ಅಮರನ್ ಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿರುವ ಹಿನ್ನೆಲೆ ಇನ್ನೂ ತಡವಾಗಿ ಒಟಿಟಿಯಲ್ಲಿ ಬಿಡುಗಡೆ ಮಾಡುವಂತೆ ಥಿಯೇಟರ್ ಮಾಲೀಕರು ಬೇಡಿಕೆ ಇಡುತ್ತಿದ್ದಾರೆ.