ಚಿತ್ರ : ಜೀಬ್ರಾ
ನಿರ್ದೇಶಕ : ಈಶ್ವರ್ ಕಾರ್ತಿಕ್
ನಿರ್ಮಾಪಕ : ಎಸ್.ಎನ್.ರೆಡ್ಡಿ
ಸಂಗೀತ : ರವಿ ಬಸ್ರೂರು
ಛಾಯಾಗ್ರಹಣ : ಸತ್ಯ
ತಾರಾಗಣ : ಡಾಲಿ ಧನಂಜಯ್ ಸತ್ಯದೇವ, ಪ್ರಿಯಾ ಭವಾನಿ, ಅಮೃತಾ ಅಯ್ಯಂಗಾರ್, ಸುನಿಲ್, ಸತ್ಯರಾಜ್ ಹಾಗೂ ಇತರರು..
ಬ್ಯಾಂಕ್ ಗಳಲ್ಲಿ ನಾವು ನಡೆಸುವ ಹಣಕಾಸು ವ್ಯವಹಾರದಲ್ಲಿ ಸಣ್ಣ ಲೋಪದೋಷ ಉಂಟಾದರೆ, ಅದರಿಂದ ಏನೆಲ್ಲ ತೊಂದರೆಗಳನ್ನು ಎದುರಿಸಬೇಕಾಗುತ್ತದೆ ಎಂಬುದನ್ನು ಖಾಸಗಿ ಬ್ಯಾಂಕ್ ವೊಂದರಲ್ಲಿ ನಡೆಯುವ ಪ್ರಕರಣವೊಂದನ್ನು ಹಿನ್ನೆಲೆಯಾಗಿಟ್ಟುಕೊಂಡು ಜೀಬ್ರಾ ಚಿತ್ರದ ಮೂಲಕ ನಿರ್ದೇಶಕ ಈಶ್ವರ್ ಕಾರ್ತೀಕ್ ಅವರು ಹೇಳಲು ಪ್ರಯತ್ನಿಸಿದ್ದಾರೆ.
ಬ್ಯಾಂಕ್ ನಲ್ಲಿ ಹಣ ವರ್ಗಾವಣೆಯ ಸಂದರ್ಭದಲ್ಲಿ ಆಗುವ ಸಣ್ಣ ಎಡವಟ್ಟು ಒಂದಷ್ಟು ಗೊಂದಲಕ್ಕೆ ದಾರಿಯಾಗಿ ಅದು ದೊಡ್ಡಮಟ್ಟದ ಸ್ಕ್ಯಾಮ್ ಗೆ ಹೇಗೆ ನಾಂದಿಯಾಗುತ್ತದೆ ಎಂದು ಈ ಚಿತ್ರದಲ್ಲಿ ಹೇಳಲಾಗಿದೆ.
ಬ್ಯಾಂಕ್ ಆಫ್ ಟ್ರಸ್ಟ್ ನಲ್ಲಿ ರಿಲೇಶನ್ ಶಿಪ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಸೂರ್ಯ (ಸತ್ಯದೇವ್) ತಾಯಿಯ ಆಸೆಯಂತೆ ಫ್ಲಾಟ್ ಖರೀದಿಸಲು ಹೊರಟಿರುತ್ತಾನೆ. ಈತನ ಪ್ರೇಯಸಿ ಸ್ವಾತಿ(ಪ್ರಿಯಾ) ಕೂಡ ಅದೇ ಬ್ಯಾಂಕ್ ನಲ್ಲಿ ಉದ್ಯೋಗಿ. ಒಮ್ಮೆ ಕಂಪ್ಯೂಟರ್ ಎಂಟ್ರಿ ಸಮಯದಲ್ಲಿ ಮಾಡಿದ ತಪ್ಪಿನಿಂದ 5 ಕೋಟಿ ಹಣ ಬೇರೊಂದು ಅಕೌಂಟ್ ಗೆ ವರ್ಗಾವಣೆಯಾಗುತ್ರೆ. ಸ್ವಾತಿ ನಿಜಕ್ಕೂ ಇಕ್ಕಟ್ಟಿಗೆ ಸಿಲ್ಕುತ್ತಾಳೆ. ಅದನ್ನು ಸರಿಪಡಿಸಲು ಸೂರ್ಯ ಮಾಡುವ ತಂತ್ರಗಳು, ಟೆಕ್ನಿಕಲ್ ಫಾರ್ಮೆಟ್ ಮೂಲಕ ಹಣವನ್ನು ಹಿಂಪಡೆಯಲು ಹೋಗಿ, ದೊಡ್ಡ ಜಾಲಕ್ಕೆ ಸಿಲುಕುವಂತೆ ಮಾಡುತ್ತದೆ. ಡಿ ಅಕ್ಷರದ ಡೆವಿಲ್ ಟ್ಯಾಟೋ ದೇವರಾಜ್ (ಡಾಲಿ ಧನಂಜಯ) ತನ್ನದೇ ಸಾಮ್ರಾಜ್ಯ ಕಟ್ಟಿಕೊಂಡು ದೊಡ್ಡ ಮಟ್ಟದ ವ್ಯವಹಾರವೊಂದಕ್ಕೆ ಕೈಹಾಕಿರುತ್ತಾನೆ. ಈ ಸಂದರ್ಭದಲ್ಲಿ ಸೂರ್ಯನಿಗೂ, ದೇವರಾಜ್ ಗೂ ಯಾವರೀತಿ ಲಿಂಕ್ ಬೆಳೆಯುತ್ತದೆ. ಇಬ್ಬರ ನಡುವೆ ಕ್ಷಣಕ್ಷಣಕ್ಕೂ ನಡೆಯುವ ಥ್ರಿಲ್ಲಿಂಗ್ ಸಿಚುಯೇಶನ್ ಗಳು ವೀಕ್ಷಕರಲ್ಲಿ ಕುತೂಹಲ ಕೆರಳಿಸುತ್ತಲೇ ಸಾಗುತ್ತವೆ.
ಬ್ಯಾಂಕಿಂಗ್ ವ್ಯವಹಾರದಲ್ಲಿನ ಸೂಕ್ಷ್ಮ ಅಂಶಗಳು, ಕಣ್ತಪ್ಪಿನಿಂದ ಆಗುವ ಎಡವಟ್ಟುಗಳ ಸುತ್ತ ನಡೆಯುವ ಈ ಕಥಾನಕ ಕುತೂಹಲ ಹಾಗೂ ರೋಚಕ ಹಂತಕ್ಕೆ ಬಂದು ನಿಲ್ಲುತ್ತದೆ. ಅದು ಹೇಗೆ... ಏನು... ಎಂಬುದನ್ನು ನೋಡಬೇಕಾದರೆ ಖಂಡಿತ ನೀವು ಜೀಬ್ರಾ ಚಿತ್ರವನ್ನು ನೋಡಲೇಬೇಕು.
ಇಂಥ ಕಥೆಯನ್ನು ಆಯ್ಕೆ ಮಾಡಿಕೊಂಡಿರುವ ನಿರ್ದೇಶಕ ಈಶ್ವರ್ ಕಾರ್ತಿಕ್ ಅವರ ಬುದ್ಧಿವಂತಿಕೆಯನ್ನು ಮೆಚ್ಚಲೇಬೇಕು. ಅವರು ಹಿಂದೆ ಒಬ್ಬ ಬ್ಯಾಂಕ್ ಎಂಪ್ಲಾಯ್ ಆಗಿದ್ದುದು ಕೂಡ ಇದಕ್ಕೆ ಕಾರಣ ಎನ್ನಬಹುದು. ಬ್ಯಾಂಕಿಂಗ್ ಕ್ಷೇತ್ರದ ಆಗುಹೋಗುಗಳನ್ನ ಬಹಳ ಕೂಲಂಕುಷವಾಗಿ ಚಿತ್ರ ರೂಪಕ್ಕೆ ತರುವುದರಲ್ಲಿ ಯಶಸ್ವಿಯಾಗಿದ್ದಾರೆ. ರಾಜಕೀಯ , ಬಿಸಿನೆಸ್ ಮ್ಯಾನ್ ಗಳ ಗೇಮ್ ಪ್ಲಾನ್ , ಹಣದ ವಹಿವಾಟು , ಶೇರು ಮಾರುಕಟ್ಟೆಯಲ್ಲಾಗುವ ಏರಿಳಿತಗಳು ಹೀಗೆ ಸಮಾಜದ ವ್ಯವಸ್ಥೆ, ಕುಂದು ಕೊರತೆಗಳನ್ನೇ ಬಂಡವಾಳ ಮಾಡಿಕೊಂಡು ಹೇಗೆ ಕೋಟಿ ಕೋಟಿ ವಂಚನೆ ಮಾಡಬಹುದು ಎಂಬುದನ್ನ ಸೂಕ್ಷ್ಮವಾಗಿ ತೆರೆಯ ಮೇಲೆ ತೆರೆದಿಟ್ಟಿದ್ದಾರೆ. ಚಿತ್ರದ ಕ್ಯಾಮೆರಾ ವರ್ಕ್, ಸಂಗೀತ ಸೇರಿದಂತೆ ಟೆಕ್ನಿಕಲ್ ಇಲ್ಲಿ ಟೀಮ್ ಬಹಳ ಸ್ಟ್ರಾಂಗ್ ಆಗಿ ಕೆಲಸ ಮಾಡಿದೆ.
ನಟ ಡಾಲಿ ಧನಂಜಯ್, ತನ್ನ ಸ್ಮಾರ್ಟ್ ಲುಕ್ , ಬಾಡಿ ಲಾಂಗ್ವೇಜ್ , ವಾಕಿಂಗ್ ಸ್ಟೈಲ್ , ಸಂದರ್ಭಕ್ಕೆ ತಕ್ಕ ಖಡಕ್ ಮಾತುಗಳ ಮೂಲಕವೇ ಇಡೀ ಚಿತ್ರವನ್ನ ಆವರಿಸಿಕೊಂಡು ತಮ್ಮ ನಟನಾ ಸಾಮರ್ಥ್ಯವನ್ನು ತೆರೆದಿಟ್ಟಿದ್ದಾರೆ. ಇನ್ನು ನಟ ಸತ್ಯದೇವ್ ಬ್ಯಾಂಕ್ ಎಂಪ್ಲಾಯಿ ಆಗಿ ಲೀಲಾ ಜಾಲವಾಗಿ ತನ್ನ ಪಾತ್ರವನ್ನು ನಿರ್ವಹಿಸಿದ್ದಾರೆ. ಏನೋ ಮಾಡಲು ಹೋಗಿ, ಇನ್ನೇನು ಮಾಡಿ ಯಡವಟ್ಟು ಮಾಡಿಕೊಳ್ಳೋ ಸೂರ್ಯನ ಮಾತಿನ ಟೈಮಿಂಗ್ , ಹಾಸ್ಯದ ಮೂಲಕ ಗಮನ ಸೆಳೆಯುತ್ತಾರೆ. ನಾಯಕಿ ಪ್ರಿಯಾ ಭವಾನಿ ಶಂಕರ್ ಕೂಡ ಸೊಗಸಾಗಿ ಪಾತ್ರವನ್ನು ನಿರ್ವಹಿಸಿದ್ದಾರೆ. ವಿಲನ್ ಪಾತ್ರದಲ್ಲಿ ಸುನಿಲ್, ಶೇರ್ ಮಾರ್ಕೆಟ್ ಬಾಬಾ ಪಾತ್ರಧಾರಿ ಸತ್ಯರಾಜ್ , ಕಿಂಗ್ ಪಾತ್ರದಲ್ಲಿ ಗರುಡಾರಾಮ್ , ಗೆಳೆಯನಾಗಿ ಸತ್ಯ , ಅಮೃತಾ ಅಯ್ಯಂಗಾರ್, ಸುರೇಶ್ ಚಂದ್ರ ಸೇರಿದಂತೆ ಎಲ್ಲಾ ಪಾತ್ರಗಳು ಚಿತ್ರದ ಓಟಕ್ಕೆ ಉತ್ತಮ ಸಾತ್ ನೀಡಿವೆ.