ಚರಣ್ ನಿರ್ದೇಶನದ, ಕಿರಣ್ ರಾಜ್ - ಕಾಜಲ್ ಕುಂದರ್ ನಾಯಕ - ನಾಯಕಿಯಾಗಿ ನಟಿಸಿರುವ ಹಾಗೂ ಕೃಷಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಯತೀಶ್ ಹೆಚ್ ಆರ್ ನಿರ್ಮಿಸಿರುವ `ಮೇಘ`ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ತ್ರಿವಿಕ್ರಮ ಸಾಫಲ್ಯ ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಚಿತ್ರ ಯಶಸ್ವಿಯಾಗಲೆಂದು ಹಾರೈಸಿದರು. ಟ್ರೇಲರ್ ನಲ್ಲೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಈ ಚಿತ್ರ ನವೆಂಬರ್ 29 ರಂದು ಬಿಡುಗಡೆಯಾಗುತ್ತಿದೆ. ಟ್ರೇಲರ್ ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.
ನಮ್ಮ ಕೃಷಿ ಪ್ರೊಡಕ್ಷನ್ಸ್ ನ ಚೊಚ್ಚಲ ನಿರ್ಮಾಣದ ಚಿತ್ರ "ಮೇಘ". ಈ ಚಿತ್ರವನ್ನು ನೋಡಿದ ಕೆಲವರ ಜೀವನದಲ್ಲಿ ಕೆಲವು ಬದಲಾವಣೆ ಆಗಬಹುದು. ಪ್ರೀತಿಸುತ್ತಿಲ್ಲದವರು ಪ್ರೀತಿಸಲು ಆರಂಭಿಸಬಹುದು. ಸ್ನೇಹಿತರೊಂದಿಗೆ ಮಾತು ಬಿಟ್ಟವರು ಮಾತಾಡಲು ಶುರು ಮಾಡಬಹುದು. ಹೀಗೆ ಸ್ನೇಹ, ಪ್ರೀತಿ ಹಾಗೂ ಬಾಂಧವ್ಯಗಳ ಸಮ್ಮಿಲನದ ನಮ್ಮ ಚಿತ್ರ ಇದೇ ನವೆಂಬರ್ 29ರಂದು ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕ ಯತೀಶ್ ಹೆಚ್ ಆರ್.
" ಮೇಘ" ಚಿತ್ರ ಉತ್ತಮ ಮನೋರಂಜನೆಯೊಂದಿಗೆ ಕೂಡಿದ ಕೌಟುಂಬಿಕ ಚಿತ್ರ. ಈ ಪರಿಶುದ್ಧ ಪ್ರೇಮ ಕಥಾನಕದ ವಿಶೇಷವೆಂದರೆ ನಾಯಕನ ಹೆಸರು "ಮೇಘ". ನಾಯಕಿಯ ಹೆಸರು " ಮೇಘ". ಇಬ್ಬರ ಹೆಸರು "ಮೇಘ" ಏಕೆ? ಅಂತ ಚಿತ್ರ ನೋಡಿದಾಗ ತಿಳಿಯುವುದು. ನನ್ನ ಸ್ನೇಹಿತನ ಜೀವನದಲ್ಲಿ ನಡೆದ ಘಟನೆ ಈ ಕಥೆಗೆ ಸ್ಪೂರ್ತಿ. ಟೀಸರ್ ಹಾಗೂ ಹಾಡುಗಳ ಮೂಲಕ ಈಗಾಗಲೇ ಜನರ ಮನಸ್ಸಿಗೆ ಹತ್ತಿರವಾಗಿರುವ ಈ ಚಿತ್ರ ನವೆಂಬರ್ 29 ರಂದು ತೆರೆಗೆ ಬರಲಿದೆ. ಸಹಕಾರ ನೀಡಿದ ಚಿತ್ರತಂಡದ ಸದಸ್ಯರಿಗೆ ಧನ್ಯವಾದ ತಿಳಿಸಿದರು ನಿರ್ದೇಶಕ ಚರಣ್.
ನಾನು ಈ ಚಿತ್ರದ ಕಥೆಯನ್ನು ಎಂಟು ಸರಿ ಕೇಳಿದ್ದೆ. ಆನಂತರ ನಟಿಸಲು ಒಪ್ಪಿಕೊಂಡಿದ್ದು ಎಂದು ಮಾತು ಆರಂಭಿಸಿದ ನಾಯಕ ಕಿರಣ್ ರಾಜ್, ಪ್ರೀತಿಯಲ್ಲಿ ಜೋಶ್ ಗಿಂತ ಅನುಭವ ಮುಖ್ಯ. ತಂದೆ ತಾಯಿ ಹಾಗೂ ಮಕ್ಕಳಲ್ಲಿ ಉತ್ತಮ ಬಾಂಧವ್ಯ ಇದ್ದರೆ ಎಷ್ಟೋ ಅನಾಹುತಗಳನ್ನು ತಡೆಯಬಹುದು ಈ ರೀತಿ ಹಲವು ವಿಷಯಗಳನ್ನು "ಮೇಘ" ಚಿತ್ರದಲ್ಲಿ ನಿರ್ದೇಶಕರು ಸುಂದರವಾಗಿ ನಿರೂಪಿಸಿದ್ದಾರೆ. ಎಲ್ಲರೂ ತಪ್ಪದೇ ಚಿತ್ರಮಂದಿರದಲ್ಲೇ ನಮ್ಮ ಚಿತ್ರ ನೋಡಿ ಎಂದರು.
ನನ್ನದು ಈ ಚಿತ್ರದಲ್ಲಿ ಕಾಲೇಜು ಹುಡುಗಿಯ ಪಾತ್ರ. ನನ್ನ ಹೆಸರು "ಮೇಘ" ಎಂದರು ನಾಯಕಿ ಕಾಜಲ್ ಕುಂದರ್.
ಚಿತ್ರದ ಸಂಕಲನಕಾರ ಹಾಗೂ ಛಾಯಾಗ್ರಾಹಕ ಗೌತಮ್ ನಾಯಕ್, ವಿತರಕ ಮನೋಜ್, ನೃತ್ಯ ನಿರ್ದೇಶಕ ಬಾಲು, ಹಿನ್ನೆಲೆ ಸಂಗೀತ ನೀಡಿರುವ ಫ್ಲಾಂಕಿನ್ ರಾಕಿ ಮುಂತಾದವರು "ಮೇಘ" ಚಿತ್ರದ ಬಗ್ಗೆ ಮಾತನಾಡಿದರು.