ಚಿತ್ರ : ನಾ ನಿನ್ನ ಬಿಡಲಾರೆ
ನಿರ್ದೇಶಕ : ನವೀನ್.ಜಿ. ಎಸ್.
ಸಂಗೀತ : ಎಂ.ಎಸ್. ತ್ಯಾಗರಾಜ್
ಛಾಯಾಗ್ರಹಣ : ವೀರೇಶ್
ತಾರಾಗಣ : ಅಂಬಾಲಿ ಭಾರತಿ, ಪಂಚಾಕ್ಷರಿ, ಕೆ. ಎಸ್. ಶ್ರೀಧರ್, ಶ್ರೀನಿವಾಸ್ ಪ್ರಭು, ಮದನ್ ಹರಿಣಿ, ಸೀರುಂಡೆ ರಘು, ಮಹಾಂತೇಶ್ ಇತರರು...
ಈ ಹಿಂದೆ ಬಿಡುಗಡೆಯಾದ ನಾನಿನ್ನ ಬಿಡಲಾರೆ, ಜಸ್ಸಿ ಚಿತ್ರಗಳಲ್ಲಿ ವ್ಯಕ್ತಿ ಸತ್ತ ಮೇಲೂ ಆತ ತಾನು ಪ್ರೀತಿಸುವ ವ್ಯಕ್ತಿಯನ್ನು ಹೇಗೆ ಕಾಡುತ್ತಾನೆ, ಆಕೆಯ ಜೀವನದ ಮೇಲೆ ಯಾವರೀತಿ ಪ್ರಭಾವ ಬೀರುತ್ತಾನೆ ಎಂಬುದನ್ನು ಹೇಳಲಾಗಿತ್ತು. ಅದೇರೀತಿ ಈವಾರ ತೆರೆಕಂಡ ನಾನಿನ್ನ ಬಿಡಲಾರೆ ಚಿತ್ರದಲ್ಲೂ ಹುಡುಗನೊಬ್ಬ ತಾನು ತುಂಬಾ ಹಚ್ಚಿಕೊಂಡಿದ್ದ ಹುಡುಗಿಯ ಮೇಲೆ, ಆಕೆ ದೊಡ್ಡವಳಾದ ಮೇಲೂ ಯಾವರೀತಿ ಪ್ರಭಾವ ಬೀರುತ್ತಾನೆ ಎಂಬುದನ್ನು ತುಂಬಾ ರಿಯಲಿಸ್ಟಿಕ್ ಆಗಿ ತೆರೆಮೇಲೆ ತಂದಿದ್ದಾರೆ ನಿರ್ದೇಶಕ ನವೀನ್. ಹಾಗೆ ನೋಡಿದರೆ ಇಂಥ ಒಂದು ಕಾನ್ಸೆಪ್ಟನ್ನು ಕನ್ನಡದ ಮಟ್ಟಿಗೆ ಯಾರೂ ಟಚ್ ಮಾಡಿಲ್ಲವೆಂದೇ ಹೇಳಬಹುದು. ಇದು
ಹಾರರ್, ಥ್ರಿಲ್ಲರ್ ಕಥೆಗಳ ಅಪ್ ಡೇಟೆಡ್ ವರ್ಷನ್. ಇಂಥ ಕಥಾನಕಗಳು ಪ್ರೇಕ್ಷಕರನ್ನ ಸೆಳೆಯುವುದರಲ್ಲಿ ಒಂದು ಹೆಜ್ಜೆ ಮುಂದಿರುತ್ತವೆ. ಪ್ರೀತಿ, ದ್ವೇಷ, ಸ್ನೇಹ, ಸಂಬಂಧ, ಕಾಯಿಲೆ, ಅನುಕಂಪದ ಸುತ್ತ ರೋಚಕ ತಿರುವುಗಳನ್ನು ಹೊಂದಿರುವ ಚಿತ್ರ " ನಾ ನಿನ್ನ ಬಿಡಲಾರೆ"
ಮಡಿಕೇರಿಯ ಸಮೀಪದ ಕತ್ಲೆಕಾಡು ಎಂಬ ಊರಲ್ಲಿರೋ ಗೇರುದಢ ಎಸ್ಟೇಟ್ ಈ ಕಥೆಯ ಕೇಂದ್ರಸ್ಥಾನ. ನಾಯಕ ರಿಷಿ (ಪಚ್ಚಿ)
ಇವೆಂಟ್ ಮ್ಯಾನೇಜ್ಮೆಂಟ್ ನಡೆಸುವವನು. ಒಮ್ಮೆ ಕಾರ್ಯಕ್ರಮ ಮುಗಿಸಿಕೊಂಡು ಹಿಂದಿರುಗುವಾಗ ಮಾರ್ಗಮದ್ಯ ಗಾಯಗೊಂಡ ಸ್ಥಿತಿಯಲ್ಲಿ ಸಿಗುವ ಅಂಜಲಿ (ಅಂಬಾಲಿ ಭಾರತಿ)ಗೆ ಚಿಕಿತ್ಸೆ ಕೊಡಿಸುತ್ತಾನೆ, ಆಕೆಗೆ ತನ್ನ ಹಿಂದಿನ ವಿಚಾರಗಳೆಲ್ಲ ಮರೆತುಹೋಗಿ ಆಕೆಯ ಮೆಮೊರಿ ಲಾಸ್ ಆಗಿರುತ್ತದೆ. ಆಕೆಯನ್ನು ಮನೆಗೆ ಕರೆದುಕೊಂಡು ಬಂದು ನಂತರ ಆಕೆಯ ಹಿನ್ನಲೆ ಹುಡುಕುತ್ತ ಹೊರಟಾಗ ಅಲ್ಲಿ ಮತ್ತೊಂದು ಕಥೆ ಅನಾವರಣವಾಗುತ್ತದೆ. ಈ ಅಂಜಲಿ ಯಾರು... ಆಕೆಯ ಹಿನ್ನೆಲೆ ಏನು.. ಇದಕ್ಕೆಲ್ಲ ಉತ್ತರವೇ ಗೆರುಗಡ್ಡ ಎಸ್ಟೇಟ್. ಪೊಲೀಸ್ ಇನ್ಸ್ಪೆಕ್ಟರ್ ಸಹಾಯದಿಂದ ಅಂಜಲಿ ತಂದೆ ತಾಯಿಯೊಂದಿಗೆ ವಾಸವಿದ್ದ ಗೇರುದಢ ಎಸ್ಟೇಟ್ ಗೆ ಬರುತ್ತಾನೆ. ಅಲ್ಲಿ ಆತನಿಗೆ ಯಾವುದೇ ಸುಳಿವು ಸಿಗಲ್ಲ, ಆದರೆ ಅಲ್ಲಿದ್ದ ಅಗೋಚರ ಶಕ್ತಿಯೊಂದು ಈತನ ಕಾರ್ಯಕ್ಕೆ ಅಡ್ಡಿಪಡಿಸುತ್ತದೆ ಉಳಿದ ಕಥೆಗಾಗಿ ನೀವು ಚಲನಚಿತ್ರವನ್ನು ನೋಡಬೇಕು.
ಚಿತ್ರದ ಕ್ಲೈಮಾಕ್ಸ್, ಕನ್ನಡದ ಮಟ್ಟಿಗೆ ಇದೊಂದು ಒಳ್ಳೆ ಪ್ರಯತ್ನ. ಹಾರರ್ ಥ್ರಿಲ್ಲರ್ ಇಷ್ಟಪಡುವವರು ಒಮ್ಮೆ ಈ ಚಿತ್ರ ನೋಡಬಹುದು. ನಿರ್ದೇಶಕ ಆಯ್ಕೆ ಮಾಡಿಕೊಂಡಿರುವ ಕಥಾವಸ್ತು ವಿಶೆಷವಾಗಿದೆ.
ಚಿತ್ರಕಥೆ ಕುತೂಹಲಕಾರಿಯಾಗಿದ್ದು , ದ್ವಿತೀಯಾರ್ಧ ಗಮನ ಸೆಳೆಯುತ್ತದೆ. ತಾಂತ್ರಿಕವಾಗಿ ಎಫೆಕ್ಟ್ , ರೀ-ರೇಕಾರ್ಡಿಂಗ್ ಆಕರ್ಷಕವಾಗಿದೆ. ರಾಯರ ಹಾಡು ಸೊಗಸಾಗಿದ್ದು, ಉಳಿದಂತೆ ಮುದ್ದುಗೊಂಬೆ ಹಾಡು ಗಮನ ಸೆಳೆಯುತ್ತದೆ. ಛಾಯಾಗ್ರಾಹಕ ವೀರೇಶ್ ಕೈಚಳಕ ಚೆನ್ನಾಗಿದೆ. ಸಂಕಲನ, ಸಾಹಸ ಉತ್ತಮವಾಗಿದೆ.
ನಾಯಕಿ ಅಂಜಲಿಯಾಗಿ ಅಭಿನಯಿಸಿರುವ ಅಂಬಾಲಿ ಭಾರತಿ ಮುದ್ದಿನ ಮಗಳು, ಆತ್ಮ ಮೈಮೇಲೆ ಬಂದಾಗ ಅದ್ಭುತ ಅಭಿನಯ ನೀಡಿದ್ದಾರೆ. ಎರಡು ಶೇಡ್ ಪಾತಚರಕ್ಕಾಗಿ ತುಂಬಾ ಶ್ರಮಪಟ್ಟುದ್ದು , ಆಕ್ಷನ್ ದೃಶ್ಯಗಳಲ್ಲಿ ಸೈ ಎನಿಸಿಕೊಳ್ಳುತ್ತಾರೆ.
ನಾಯಕನಿಗೆ ಅಭಿನಯಿಸಿರುವ ಪಚ್ಚಿ ರಿಶಿ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ವಿಶೇಷವಾಗಿ ಗುರುವಿನ ಪಾತ್ರದಲ್ಲಿ ಕೆ. ಎಸ್. ಶ್ರೀಧರ್ ಗಮನ ಸೆಳೆದಿದ್ದು , ಸೀರುಂಡೆ ರಘು ನಾಯಕನ ಗೆಳೆಯನಾಗಿ ನಗಿಸುವ ಜೊತೆ ಪರದಾಡುವ ಸ್ಥಿತಿಯನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ಒಂದಷ್ಟು ಪಾತ್ರಗಳನ್ನ ಇನ್ನು ಹೆಚ್ಚು ಬಳಸಿಕೊಳ್ಳಬಹುದಿತ್ತು. ಉಳಿದಂತೆ ಬರುವ ಎಲ್ಲಾ ಪಾತ್ರಧಾರಿಗಳು ಚಿತ್ರದ ಓಟಕ್ಕೆ ಸಾತ್ ನೀಡಿದ್ದಾರೆ.